ನಮ್ಮಿಂದ ಅಗಲಿದ ಪ್ರಖರ, ನಿಷ್ಠುರ ನಾಯಕಿ ಕೆ.ಆರ್.‌ ಗೌರಿ ಅಮ್ಮ ಜೀವನದ ಇಣುಕು ನೋಟ

Update: 2021-05-11 14:46 GMT
Photo: Manorama

ಕೇರಳದ ಜನಮಾನಸದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದ ಹಿರಿಯ ಕಮ್ಯುನಿಸ್ಟ್ ನಾಯಕಿ ಕೆ.ಆರ್.ಗೌರಿ ಅಮ್ಮ ಮಂಗಳವಾರ ತನ್ನ 101ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕೇರಳದ ಮೊದಲ ಚುನಾಯಿತ ಸರಕಾರದಲ್ಲಿ ಸಚಿವೆಯಾಗಿದ್ದ ಗೌರಿ ಅಮ್ಮ ವಯೋಸಹಜ ಅನಾರೋಗ್ಯದಿಂದಾಗಿ ತಿರುವನಂತಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಪ್ರಖರ ಮತ್ತು ನಿಷ್ಠುರ;ಇವು ಗೌರಿ ಅಮ್ಮ ಹೆಸರು ಪ್ರಸ್ತಾಪಗೊಂಡಾಗೆಲ್ಲ ನಮ್ಮ ಮನಸಿನಲ್ಲಿ ಸುಳಿದಾಡುವ ಎರಡು ಶಬ್ದಗಳು. ಹೌದು,ಗೌರಿ ಅಮ್ಮ ಕೇರಳದ ರಾಜಕೀಯವು ಕಂಡ ಅತ್ಯಂತ ಪ್ರಖರ ಮತ್ತು ನಿಷ್ಠುರ ಮಹಿಳೆಯಾಗಿದ್ದರು.
 
ಸ್ವಭಾವದಲ್ಲಿ ಗಟ್ಟಿಗಿತ್ತಿಯಾಗಿದ್ದರೂ ಮುಕ್ತ ಮತ್ತು ಪ್ರಾಮಾಣಿಕ ವ್ಯಕ್ತಿತ್ವದ ಗೌರಿ ಅಮ್ಮ ಜನರಿಗೆ ಸೇರಿದ್ದ ನಾಯಕಿಯಾಗಿದ್ದರು. ಜನರ ನಡುವೆ ಬದುಕುವುದನ್ನು ಅವರು ಇಷ್ಟಪಡುತ್ತಿದ್ದರು. ತನ್ನ ಸ್ನೇಹಿತರಾಗಲಿ ಅಥವಾ ಕುಟುಂಬವಾಗಿರಲಿ,ಯಾರ ಮುಂದೆಯೂ ಅವರು ಎಂದೂ ತಲೆಯನ್ನು ಬಗ್ಗಿಸಿರಲಿಲ್ಲ. ಆತ್ಮವಿಶ್ವಾಸ ಮತ್ತು ತನ್ನ ಬಗ್ಗೆ ಹೆಮ್ಮೆಯನ್ನು ಹೊಂದಿದ್ದ ಅವರು ಸ್ವತಂತ್ರ ಮನಸ್ಸನ್ನು ಹೊಂದಿದ್ದ ಮಹಿಳೆಯಾಗಿದ್ದರು. 

ಮಹಿಳೆಯಲ್ಲಿಯ ಸಾಕಷ್ಟು ಗುಣಲಕ್ಷಣಗಳು ಆಕೆಗೇ ಹಾನಿಯನ್ನುಂಟು ಮಾಡುತ್ತವೆ. ಮಹಿಳೆ ಯಾರಿಗೂ ಬಗ್ಗದೆ ತನ್ನದೇ ಆದ ಸ್ವತಂತ್ರ ಮನಸ್ಸನ್ನು ಹೊಂದಿರುವುದೆಂದರೆ ಅದು ಕ್ಷಮಿಸಲಾಗದ ಪಾಪ ಎಂದು ಪುರುಷಪ್ರಧಾನ ಸಮಾಜವು ಪರಿಗಣಿಸಿದ್ದ ಕಾಲವದು. ಇಂದಿಗೂ ಇದು ಬದಲಾಗಿಲ್ಲ,ಕೇರಳ ಮಾತ್ರವಲ್ಲ,ಭಾರತ ಮತ್ತು ಇಡೀ ವಿಶ್ವದಲ್ಲಿ ಈ ಮನಃಸ್ಥಿತಿ ಉಳಿದುಕೊಂಡಿದೆ. ಇಂತಹ ಸ್ಥಿತಿಯಲ್ಲಿ ಗೌರಿ ಅಮ್ಮ ಪ್ರವಾಹದ ವಿರುದ್ಧ ಈಜುವುದರ ಮೂಲಕ ತನ್ನತನವನ್ನು ಉಳಿಸಿಕೊಂಡಿದ್ದರು.

1919ರಲ್ಲಿ ಚೆರ್ತಲದ ಕಳತಿಪರಂಬಿಲ್ ಹೌಸ್ನಲ್ಲಿ ಶ್ರೀಮಂತ ಈಳವ ಜಮೀನುದಾರ ಕುಟುಂಬದ ಕಳತಿಪರಂಬಿಲ್ ರಾಮನ್ ಮತ್ತು ಅರುಮುರಿಪರಂಬಿಲ್ ಪಾರ್ವತಿ ಅಮ್ಮ ದಂಪತಿಯ ಏಳನೇ ಪುತ್ರಿಯಾಗಿ ಜನಿಸಿದ್ದ ಗೌರಿಯ ಬಗ್ಗೆ ತಂದೆ ವಿಶೇಷ ಕಾಳಜಿಯನ್ನು ಹೊಂದಿದ್ದರು. ಎರ್ನಾಕುಳಮ್ನ ಸರಕಾರಿ ಮಹಾರಾಜಾಸ್ ಕಾಲೇಜು ಮತ್ತು ಸೈಂಟ್ ಥೆರೆಸಾ ಕಾಲೇಜುಗಳಲ್ಲಿ ವ್ಯಾಸಂಗದ ಬಳಿಕ ತಿರುವನಂತಪುರದ ಸರಕಾರಿ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆಯುವ ಮೂಲಕ ಆ ಸಾಧನೆಯನ್ನು ಮಾಡಿದ ಈಳವ ಸಮುದಾಯದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 

ಚೆರ್ತಳದಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದ್ದ ಅವರ ಬೆನ್ನ ಹಿಂದೆ ತಂದೆಯ ಪ್ರೋತ್ಸಾಹವಿತ್ತು. ಕಥೆ ಅಲ್ಲಿಗೇ ಮುಗಿಯಬಹುದಿತ್ತು. ಗೌರಿ ತನ್ನ ವಕೀಲಿ ವೃತ್ತಿಯನ್ನು ಮುಂದುವರಿಸಬಹುದಿತ್ತು. ತನ್ನ ಶ್ರೀಮಂತ ಕುಟುಂಬದ ಬೆಂಬಲದೊಂದಿಗೆ ಯಶಸ್ವಿ ವೃತ್ತಿಜೀವನವನ್ನು ತನ್ನದಾಗಿಸಿಕೊಳ್ಳಬಹುದಿತ್ತು ಮತ್ತು ತನ್ನದೇ ಆದ ಕುಟುಂಬವನ್ನು ಸೃಷ್ಟಿಸಿಕೊಳ್ಳಬಹುದಿತ್ತು. ಸಂಕ್ಷಿಪ್ತವಾಗಿ ಹೇಳುವುದಾದರೆ ತನ್ನ ಜೀವನದುದ್ದಕ್ಕೂ ಸುಖಸಂತೋಷದಿಂದ ಬದುಕಬಹುದಿತ್ತು. ಆದರೆ ಗೌರಿ ಆಯ್ಕೆ ಮಾಡಿಕೊಂಡಿದ್ದ ದಾರಿ ಬೇರೆಯೇ ಆಗಿತ್ತು. ಅದಾಗಲೇ ಕಮ್ಯುನಿಸ್ಟ್ ಪಕ್ಷದ ಸದಸ್ಯನಾಗಿದ್ದ ಹಿರಿಯ ಸೋದರ ಕೆ.ಆರ್.ಸುಕುಮಾರನ್ ಅವರು ತಂಗಿಗೆ ಈ ದಾರಿಯನ್ನು ತೋರಿಸಿದ್ದರು. ಹಲವಾರು ಕಾರ್ಮಿಕ ಒಕ್ಕೂಟಗಳ ನಾಯಕರಾಗಿದ್ದ ಅವರು ತನ್ನ ಸೋದರಿಗೆ ಮಾರ್ಕ್ಸ್ವಾದದ ಸಿದ್ಧಾಂತ ಮತ್ತು ಕಮ್ಯುನಿಸ್ಟ್ ಚಳುವಳಿಯನ್ನು ಪರಿಚಯಿಸಿದ್ದರು.

1938ರಲ್ಲಿ ಎ.ಕೆ.ಗೋಪಾಲನ್ ನೇತೃತ್ವದಲ್ಲಿ ವಿದ್ಯಾರ್ಥಿ ಜಾಥಾವೊಂದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಗೌರಿ ರಾಜಕೀಯ ರಂಗದಲ್ಲಿ ಮೊದಲ ಪ್ರವೇಶವನ್ನು ಮಾಡಿದ್ದರು. 1939ರಲ್ಲಿ ಕಮ್ಯುನಿಸ್ಟ್ ಪಕ್ಷದ ಮೊದಲ ಘಟಕವು ಕೇರಳದಲ್ಲಿ ಸ್ಥಾಪನೆಯಾಗಿತ್ತು. ಗೌರಿ 1948ರಲ್ಲಿ ಕಮ್ಯುನಿಸ್ಟ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಅದೇ ವರ್ಷ ಕಲಕತ್ತಾದಲ್ಲಿ ಕಮ್ಯುನಿಸ್ಟ್ ಪಕ್ಷದ ಎರಡನೇ ಸಮ್ಮೇಳನ ನಡೆದಿತ್ತು ಮತ್ತು ಈ ಸಮ್ಮೇಳನದಲ್ಲಿ ಸರಕಾರದ ವಿರುದ್ಧ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳಲು ಕರೆ ನೀಡಿದ್ದ ‘ಕಲಕತ್ತಾ ಥೀಸಿಸ್’ಎಂದೇ ಪ್ರಸಿದ್ಧವಾಗಿದ್ದ ನಿರ್ಣಯವನ್ನು ಅಂಗೀಕರಿಸಲಾಗಿತ್ತು. ಇದರ ಬಳಿಕ ಪಕ್ಷವನ್ನು ನಿಷೇಧಿಸಲಾಗಿತ್ತು ಮತ್ತು ಪಕ್ಷದ ನಾಯಕರು ಭೂಗತರಾಗಿದ್ದರು. ಬಂಧಿಸಲ್ಪಟ್ಟವರು ಪೊಲೀಸರಿಂದ ಭೀಕರ ಚಿತ್ರಹಿಂಸೆಗೆ ಗುರಿಯಾಗಿದ್ದರು.

ಚೆರ್ತಲ ಪೊಲೀಸರು ಗೌರಿ ಅಮ್ಮನನ್ನು ಬಂಧಿಸಿ ಆರು ತಿಂಗಳ ಕಾಲ ಲಾಕಪ್ನಲ್ಲಿ ಇರಿಸಿದ್ದರು. ಬಳಿಕ ಪೂಳಪ್ಪುರದ ಕೇಂದ್ರ ಕಾರಾಗೃಹಕ್ಕೆ ಅವರನ್ನು ರವಾನಿಸಲಾಗಿತ್ತು. ನಂತರ ತನ್ನ ಬದುಕಿನ ಒಂದು ಸಂದರ್ಭದಲ್ಲಿ ಗೌರಿ ಅಮ್ಮ ‘ಪೊಲೀಸ್ ಲಾಠಿಗಳಿಗೆ ಮಹಿಳೆಯನ್ನು ಗರ್ಭಿಣಿಯನ್ನಾಗಿಸುವ ಸಾಮರ್ಥ್ಯವಿದ್ದರೆ ನಾನು ಅಸಂಖ್ಯಾತ ಶಿಶು ಲಾಠಿಗಳಿಗೆ ಜನ್ಮ ನೀಡುತ್ತಿದ್ದೆ ’ ಎಂದು ಹೇಳುವ ಮೂಲಕ ಪೊಲೀಸರು ತನ್ನನ್ನು ಹೇಗೆ ಹಿಂಸಿಸಿದ್ದರು ಎನ್ನುವುದರ ಸುಳಿವು ನೀಡಿದ್ದರು. ಅವರ ಹಲವಾರು ಕಾಮ್ರೇಡ್ಗಳೂ ಇಂತಹುದೇ ಚಿತ್ರಹಿಂಸೆಗೆ ಗುರಿಯಾಗಿದ್ದರು ಮತ್ತು ಹೆಚ್ಚಿನವರು ಕೊಲ್ಲಲ್ಪಟ್ಟಿದ್ದರು.

1952 ಮತ್ತು 1954ರಲ್ಲಿ ತಿರುವಾಂಕೂರು-ಕೊಚ್ಚಿನ್ ಶಾಸಕಾಂಗ ಸಭೆಗೆ ಆಯ್ಕೆಯಾಗಿದ್ದ ಗೌರಿ ಅಮ್ಮ 1957ರಲ್ಲಿ ಕೇರಳದ ಮೊದಲ ಸಂಪುಟದಲ್ಲಿ ಸಚಿವೆಯಾಗಿದ್ದರು. ಅದು ಇಡೀ ವಿಶ್ವದಲ್ಲಿ ಮೊದಲ ಚುನಾಯಿತ ಕಮ್ಯುನಿಸ್ಟ್ ಸರಕಾರವೂ ಆಗಿತ್ತು. ಕೇರಳದ ಮೊದಲ ಮಹಿಳಾ ಸಚಿವೆಯಾಗಿದ್ದ ಗೌರಿ ಅಮ್ಮನವರಿಗೆ ಕಂದಾಯ ಸಚಿವಾಲಯದ ಹೊಣೆಯನ್ನು ನೀಡಲಾಗಿತ್ತು.

ಅದೇ ವರ್ಷ ಕಾರ್ಮಿಕ ಮತ್ತು ಸಾರಿಗೆ ಸಚಿವ ಟಿ.ವಿ.ಥಾಮಸ್ ಜೊತೆಗೆ ಅವರ ಮದುವೆ ಡೆದಿತ್ತು. ಭಾರತದಲ್ಲಿ ಅದೇ ಮೊದಲ ಬಾರಿಗೆ ಇಬ್ಬರು ಸಚಿವರು ಪರಸ್ಪರ ವಿವಾಹವಾಗಿದ್ದರು. ಆದರೆ ವೈವಾಹಿಕ ಜೀವನಕ್ಕೆ ಹೊಂದಿಕೊಳ್ಳುವುದು ತನಗೆ ಸಾಧ್ಯವಿಲ್ಲ ಎನ್ನುವುದನ್ನು ಗೌರಿ ಅಮ್ಮ ಬಹುಬೇಗನೆ ಅರ್ಥಮಾಡಿಕೊಂಡಿದ್ದರು. ಮಂದೆ ಕಮ್ಯುನಿಸ್ಟ್ ಪಕ್ಷವು ಇಬ್ಭಾಗವಾದಾಗ ಗೌರಿ ಅಮ್ಮ ಸಿಪಿಎಂ ಪಕ್ಷದಲ್ಲಿ ಉಳಿದುಕೊಂಡಿದ್ದರೆ ಥಾಮಸ್ ಸಿಪಿಐ ಮಡಿಲಿಗೆ ಸೇರಿದ್ದರು. ದಂಪತಿ ಅಧಿಕೃತವಾಗಿ ವಿಚ್ಛೇದನ ಪಡೆದಿರದಿದ್ದರೂ ಹೆಚ್ಚು ಕಾಲ ಒಂದಾಗಿ ಬಾಳಿರಲಿಲ್ಲ. ಥಾಮಸ್ 1977ರಲ್ಲಿ ಕ್ಯಾನ್ಸರ್ನಿಂದಾಗಿ ನಿಧನರಾಗಿದ್ದರು.
ಗೌರಿ ಅಮ್ಮ ಕೇರಳವು ಕಂಡಿರುವ ಅತ್ಯಂತ ಚಾಣಾಕ್ಷ ಆಡಳಿತಗಾರರಲ್ಲಿ ಒಬ್ಬರಾಗಿದ್ದರು. ಐತಿಹಾಸಿಕ ಭೂ ಸುಧಾರಣೆ ಕಾಯ್ದೆ ಅವರ ಮಹೋನ್ನತ ಸಾಧನೆಯಾಗಿತ್ತು. ಇತರ ಹಲವಾರು ಪ್ರಮುಖ ಕಾನೂನುಗಳನ್ನು ತರುವಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರು.

1987ರ ರಾಜ್ಯ ವಿಧಾನಸಭಾ ಚುನಾವಣೆಗಳ ಸಂದರ್ಭ ಗೌರಿ ಅಮ್ಮ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಜನರು ಸಂಭ್ರಮಿಸಿದ್ದರು. ಆದರೆ ಚುನಾವನೆಗಳ ಬಳಿಕ ಆ ಅದೃಷ್ಟ ಇ.ಕೆ.ನಯನಾರ್ ಅವರದಾಗಿತ್ತು.
 
1990ರ ದಶಕದ ಆರಂಭದಲ್ಲಿ ವಿ.ಎಸ್.ಅಚ್ಯುತಾನಂದನ್ ಅವರೊಂದಿಗಿನ ಭಿನ್ನಾಭಿಪ್ರಾಯ ತಾರಕಕ್ಕೇರಿದಾಗ ಅಂತಿಮವಾಗಿ 1994ರಲ್ಲಿ ಗೌರಿ ಅಮ್ಮನನ್ನು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಸಿಪಿಎಮ್ನಿಂದ ಉಚ್ಚಾಟಿಸಲಾಗಿತ್ತು. ಅದಾದ ಬಳಿಕ ಗೌರಿ ಅಮ್ಮ ತನ್ನದೇ ಆದ ‘ಜನಾಧಿಪತ್ಯ ಸಂರಕ್ಷಣ ಸಮಿತಿ(ಜೆಎಸ್ಎಸ್)’ ಎಂಬ ರಾಜಕೀಯ ಸಂಘಟನೆಯನ್ನು ಹುಟ್ಟುಹಾಕಿದ್ದರು. ಬಳಿಕ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡ ಅವರು 2001ರಿಂದ 2006ರವರೆಗೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರಕಾರದಲ್ಲಿ ಕೃಷಿ ಸಚಿವೆಯಾಗಿದ್ದರು. 2011ರಲ್ಲಿ ತನ್ನ 92ನೇ ವಯಸ್ಸಿನಲ್ಲಿ ಆರೂರ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿದಿದ್ದ ಅವರು ಸಿಪಿಐನ ಪಿ.ತಿಲೋತ್ತಮನ್ ಅವರೆದುರು ಪರಾಭವಗೊಂಡಿದ್ದರು.

ತನ್ನ ಬದುಕಿನ ಕೊನೆಯ ವರ್ಷಗಳಲ್ಲಿ ಸಿಪಿಎಮ್ಗೆ ಮರಳಲು ಅವರು ನಿರ್ಧರಿಸಿದ್ದರು. 2015ರಲ್ಲಿ ಆಗ ಸಿಪಿಎಂ ರಾಜ್ಯ ಕಾರ್ಯದರ್ಶಿಯಾಗಿದ್ದ ಪಿಣರಾಯಿ ವಿಜಯನ್ ಅವರನ್ನು ಪಕ್ಷಕ್ಕೆ ಮರಳಿ ತರುವ ಉಪಕ್ರಮವನ್ನು ಕೈಗೊಂಡಿದ್ದರು.ಆದರೆ ಪಕ್ಷದ ಆಸ್ತಿಗಳಿಗೆ ಸಂಬಂಧಿಸಿದ ಕೆಲವು ವಿವಾದಗಳಿಂದಾಗಿ ಸಿಪಿಎಂ ಮತ್ತು ಜೆಎಸ್ಎಸ್ ವಿಲೀನ ನಡೆಯಲಿಲ್ಲ. 2019ರಲ್ಲಿ ಗೌರಿ ಅಮ್ಮ ತನ್ನ ನೂರನೇ ಹುಟ್ಟುಹಬ್ಬವನ್ನು ಆಚರಿಸಿದ್ದರು ಮತ್ತು ಅತ್ಯಂತ ಅಪರೂಪದ ಬೆಳವಣಿಗೆಯಲ್ಲಿ ತನ್ನ ಸದಸ್ಯರು ಆ ಸಂಭ್ರಮದಲ್ಲಿ ಭಾಗಿಯಾಗಲು ಅನುಕೂಲವಾಗುವಂತೆ ಕೇರಳ ವಿಧಾನಸಭೆಯು ರಜೆಯನ್ನು ಘೋಷಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News