ಪ್ರೀಮಿಯರ್ ಲೀಗ್ ಚಾಂಪಿಯನ್ ಶಿಪ್ ಗೆದ್ದ ಮ್ಯಾಂಚೆಸ್ಟರ್ ಸಿಟಿ

Update: 2021-05-12 05:08 GMT
Photo credit: Twitter @ManCity

ಲಂಡನ್, ಮೇ 12: ವಿಶ್ವದ ಅತ್ಯಂತ ಜನಪ್ರಿಯ ಫುಟ್ಬಾಲ್ ಟೂರ್ನಿಗಳಲ್ಲೊಂದಾದ ಪ್ರೀಮಿಯರ್ ಲೀಗ್ ಚಾಂಪಿಯನ್‌ಶಿಪ್‌ನಲ್ಲಿ ಮ್ಯಾಂಚೆಸ್ಟರ್ ಸಿಟಿ ತಂಡ ಪ್ರಶಸ್ತಿ ಗೆದ್ದುಕೊಂಡಿದೆ.

ಮಂಗಳವಾರ ನಡೆದ ಪಂದ್ಯದಲ್ಲಿ ಲೂಸ್ಟರ್ ವಿರುದ್ಧ 2-1 ಗೋಲುಗಳಿಂದ ಮ್ಯಾಂಚೆಸ್ಟರ್ ಯುನೈಟೆಡ್ ಸೋಲುವ ಮೂಲಕ ಇನ್ನೂ ಮೂರು ಪಂದ್ಯ ಬಾಕಿ ಉಳಿದಿರುವಂತೆಯೇ ಎರಡನೇ ಸ್ಥಾನದಲ್ಲಿರುವ ಯುನೈಟೆಡ್ ಕ್ಲಬ್‌ಗಿಂತ 10 ಪಾಯಿಂಟ್‌ಗಳನ್ನು ಹೆಚ್ಚುವರಿಯಾಗಿ ಹೊಂದಿ, ಟ್ರೋಫಿ ಗೆದ್ದುಕೊಂಡಿತು.

ಐದು ದಿನಗಳಲ್ಲಿ ಮೂರು ಪಂದ್ಯಗಳನ್ನಾಡುವ ಒತ್ತಡಕ್ಕೆ ಸಿಲುಕಿದ ಯುನೈಟೆಡ್ ಮ್ಯಾನೇಜರ್ ಗುನ್ನೆರ್ ಸೊಸ್ಕಜಾರ್, ತಂಡದಲ್ಲಿ 10 ಬದಲಾವಣೆಗಳನ್ನು ಮಾಡಿ ದುರ್ಬಲ ತಂಡವನ್ನು ಕಣಕ್ಕೆ ಇಳಿಸುವ ಮೂಲಕ ಕಟ್ಟಾ ಎದುರಾಳಿ ಎನಿಸಿದ ಮ್ಯಾಂಚೆಸ್ಟರ್ ಸಿಟಿ ಪ್ರಶಸ್ತಿ ಹಾದಿಯನ್ನು ಸುಗಮಗೊಳಿಸಿದರು.

ಲ್ಯೂಕ್ ಥಾಮಸ್ 10ನೇ ನಿಮಿಷದಲ್ಲೇ ತಂಡಕ್ಕೆ ಮುನ್ನಡೆ ದೊರಕಿಸಿಕೊಟ್ಟರು. ಮ್ಯಾಸನ್ ಗ್ರೀನ್‌ವುಡ್ ಐದು ನಿಮಿಷಗಳ ಬಳಿಕ ಗೋಲು ಹೊಡೆದು ಸಮಬಲ ಸಾಧಿಸಲು ನೆರವಾದರು. 66ನೇ ನಿಮಿಷದಲ್ಲಿ ಕ್ಯಾಗ್ಲರ್ ಸೊಂಚು ಅವರ ಹೆಡ್ಡರ್ ಲ್ಯೂಸಿಸ್ಟರ್ ಗೆಲುವನ್ನು ಖಾತರಿಪಡಿಸಿತು ಹಾಗೂ ಈ ಗೆಲುವು ಮ್ಯಾಂಚೆಸ್ಟರ್ ಸಿಟಿ ತಂಡದ ಚಾಂಪಿಯನ್‌ಶಿಪ್ ಗೆಲುವನ್ನೂ ಖಾತರಿಪಡಿಸಿತು.

ಚೆಲ್ಸಿಯಾ ತಂಡ, ಎಥಿಹಾದ್ ಸ್ಟೇಡಿಯಂನಲ್ಲಿ 2-1 ಅಂತರದಿಂದ ಗೆದ್ದಾಗಲೇ ಮ್ಯಾಂಚೆಸ್ಟರ್ ಸಿಟಿ ತಂಡ ಟ್ರೋಫಿ ಗೆಲ್ಲುವುದು ಬಹುತೇಕ ಖಚಿತವಾಗಿತ್ತು. ಆದರೆ ಭಾನುವಾರ ಆಸ್ಟನ್ ವಿಲ್ಲಾದಲ್ಲಿ ಗೆಲುವು ಸಾಧಿಸುವ ಮೂಲಕ ಯುನೈಟೆಡ್ ತಂಡ ಕೂಡಾ ಪ್ರಶಸ್ತಿ ಗೆಲ್ಲುವ ಆಸೆ ಜೀವಂತವಾಗಿಸಿಕೊಂಡಿತ್ತು. ಆದರೆ ಈ ವಿಳಂಬ ತಾತ್ಕಾಲಿಕವಾಗಿದ್ದು, ಮ್ಯಾಂಚೆಸ್ಟರ್ ಯುನೈಟೆಡ್ ಮಂಗಳವಾರ ಸೋಲುವ ಮೂಲಕ ಮ್ಯಾಂಚೆಸ್ಟರ್ ಸಿಟಿ ನಾಲ್ಕು ಸೀಸನ್‌ಗಳಲ್ಲಿ ಮೂರನೇ ಬಾರಿಗೆ ಪ್ರಶಸ್ತಿ ಎತಿಹಿಡಿಯಿತು. ಕಳೆದ ಎಪ್ರಿಲ್‌ನಲ್ಲಿ ಮ್ಯಾಂಚೆಸ್ಟರ್ ಸಿಟಿ ಲೀಗ್ ಕಪ್ ಗೆದ್ದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News