ಕೋವಿಡ್-19 ಚಿಕಿತ್ಸೆ ಅಷ್ಟೊಂದು ಕಷ್ಟವೇಕೆ....?

Update: 2021-05-12 16:03 GMT

ನೀವು ಇದನ್ನು ಓದುತ್ತಿರುವಾಗ ಕೊರೋನವೈರಸ್ ನಿಮ್ಮ ಸುತ್ತಲಿನ ಗಾಳಿಯಲ್ಲಿ ಹರಿದಾಡುತ್ತಿರಬಹುದು. ಹೆದರಿಕೊಂಡಿರಾ? ಈ ದಿನಗಳಲ್ಲಿ ಇಂತಹ ಭೀತಿ ನಮ್ಮೆಲ್ಲರನ್ನೂ ಕಾಡುತ್ತಿದೆ. ವೈರಸ್ ದಾಳಿಯು ನಾವು ಹೆದರಿಕೆಯಿಂದ,ಇತರರಿಂದ ಪ್ರತ್ಯೇಕವಾಗಿ ಬದುಕುವುಂತೆ ಮಾಡಿದೆ. ಕೋವಿಡ್-19ರ ಬಗ್ಗೆ ತಿಳಿದಿದ್ದರೂ,ಜನರು ಕೋವಿಡ್ ಶಿಷ್ಟಾಚಾರಗಳನ್ನು ಪಾಲಿಸುತ್ತಿದ್ದರೂ,ಲಸಿಕೆ ಅಭಿಯಾನ ನಡೆಯುತ್ತಿದ್ದರೂ ಕೊರೋನವೈರಸ್ ಬೆದರಿಕೆ ಸದ್ಯೋಭವಿಷ್ಯದಲ್ಲಿ ದೂರವಾಗುವ ಸಾಧ್ಯತೆ ಕಂಡುಬರುತ್ತಿಲ್ಲ. 

ಯಾವಾಗ ಈ ವೈರಸ್ ಅನ್ನು ಕೊನೆಗಾಣಿಸಲಾಗುತ್ತದೆ ಮತ್ತು ನಾವು ಸಹಜ ಬದುಕಿಗೆ ಯಾವಾಗ ಮರಳುತ್ತೇವೆ ಎನ್ನುವುದನ್ನು ತಿಳಿಯಲು ಪ್ರತಿಯೊಬ್ಬರೂ ಬಯಸಿದ್ದಾರೆ. ಈ ಮಾರಣಾಂತಿಕ ವೈರಸ್ ಸೋಂಕನ್ನು ಗುಣಪಡಿಸಲು ವಿಳಂಬವೇಕೆ ಆಗುತ್ತದೆ ಎಂಬ ಪ್ರಶ್ನೆಗೆ ಅಯರ್ಲಂಡ್ನ ಡಬ್ಲಿನ್ ನ ಟ್ರಿನಿಟಿ ಕಾಲೇಜು ನಡೆಸಿದ ಸಂಶೋಧನೆಯು ಉತ್ತರ ನೀಡಿದೆ.
  
ಯಾವುದೇ ಸೋಂಕು ಅಥವಾ ಕಾಯಿಲೆಗೆ ಚಿಕಿತ್ಸೆಯಲ್ಲಿ ಅದನ್ನು ಉಂಟು ಮಾಡಿರುವ ಕಾರಣವು ಮುಖ್ಯ ಅಂಶವಾಗಿರುತ್ತದೆ. ಕೋವಿಡ್-19 ಪ್ರಕರಣದಲ್ಲಿ ಸೋಂಕಿಗೆ ವೈರಸ್ ಕಾರಣವಾಗಿದೆ. ಸಂಶೋಧಕರು ಹೇಳುವಂತೆ ಈ ವೈರಸ್ ವಿಶಿಷ್ಟ ಸೋಂಕು ಗುಣವನ್ನು ಹೊಂದಿದೆ ಮತ್ತು ಇದೇ ಕಾರಣದಿಂದ ಅದನ್ನು ಭೇದಿಸಲು ವಿಜ್ಞಾನಿಗಳು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತಿದ್ದಾರೆ. ಕೋವಿಡ್ ರೋಗಿಗಳು ಚೇತರಿಸಿಕೊಂಡರೂ ಕೆಲವರಲ್ಲಿ ದೀರ್ಘಕಾಲ ರೋಗದ ಲಕ್ಷಣಗಳು ಇರುತ್ತವೆ ಮತ್ತು ಇದು ಕೊರೋನವೈರಸ್ನ ವೈಶಿಷ್ಟವಾಗಿದೆ. 

ಎರಡನೇ ಮುಖ್ಯ ಅಂಶವೆಂದರೆ ಯಾವ ಜಾಗದಲ್ಲಿ ಸೋಂಕು ಉಂಟಾಗಿದೆ ಎನ್ನುವುದು. ಸಾಮಾನ್ಯವಾಗಿ ರೋಗಕಾರಕ ಗಳು ಶ್ವಾಸಕೋಶದ ಮೇಲಿನ ಭಾಗ ಅಥವಾ ಕೆಳಗಿನ ಭಾಗದಲ್ಲಿ ನೆಲೆಗೊಳ್ಳುತ್ತವೆ. ಆದರೆ ಕೊರೋನವೈರಸ್ ಇವೆರಡೂ ಜಾಗಗಳನ್ನು ಬಾಧಿಸುತ್ತದೆ,ಹೀಗಾಗಿ ಸೋಂಕು ಹರಡುವವರೆಗೆ ಅದನ್ನು ಪತ್ತೆ ಹಚ್ಚುವುದು ಕಠಿಣವಾಗುತ್ತದೆ.

ಈ ವಿಶಿಷ್ಟ ವೈರಸ್ ಹಲವಾರು ಗುಣಲಕ್ಷಣಗಳನ್ನು ಹೊಂದಿದ್ದು,ಇವು ಅನಿರ್ದಿಷ್ಟ ಮತ್ತು ಸವಾಲಿನದಾಗಿವೆ. ರೋಗ ನಿರೋಧಕ ವ್ಯವಸ್ಥೆಯಲ್ಲಿ ಉರಿಯೂತ,ರಕ್ತ ಹೆಪ್ಪುಗಟ್ಟುವಿಕೆ,ಬಹು ಅಂಗಾಂಗಗಳ ಮೇಲೆ ವ್ಯತಿರಿಕ್ತ ಪರಿಣಾಮ ಇತ್ಯಾದಿಗಳೆಲ್ಲ ಇತರ ವೈರಸ್ ಸೋಂಕುಗಳಲ್ಲಿ ಸಾಮಾನ್ಯವಾಗಿ ಕಂಡು ಬರುವುದಿಲ್ಲ. ಅಲ್ಲದೆ ಮಾನವರಲ್ಲಿ ಮತ್ತು ಪ್ರಾಣಿಗಳಲ್ಲಿ ಸೋಂಕಿಗೆ ಕಾರಣಗಳು ವಿಭಿನ್ನವಾಗಿರುತ್ತವೆ. ಇದೇ ಕಾರಣದಿಂದ ಪ್ರಯೋಗಗಳಿಂದ ಕಂಡುಕೊಂಡ ಅಂಶಗಳು ಮತ್ತು ವಾಸ್ತವಗಳ ನಡುವೆ ಅಗಾಧ ವ್ಯತ್ಯಾಸವಿರುತ್ತದೆ. ಈ ಅಧ್ಯಯನದ ವರದಿಯು ದಿ ಲ್ಯಾನ್ಸೆಟ್ ಮೆಡಿಕಲ್ ಜರ್ನಲ್ನಲ್ಲಿ ಪ್ರಕಟಗೊಂಡಿದೆ.

ವಿಶಿಷ್ಟ ರೋಗಕಾರಕ ಗುಣಲಕ್ಷಣಗಳಿಂದಾಗಿ ಕೋವಿಡ್ ಹೆಚ್ಚಿನ ಚಿಕಿತ್ಸೆ ಬೇಡುವ ಕಾಯಿಲೆಯಾಗಿದೆ. ಕೆಲವು ಜನರಲ್ಲಿ ಕೋವಿಡ್ ಸೋಂಕಿನ ಲಕ್ಷಣಗಳು ಸಾಮಾನ್ಯಕ್ಕಿಂತ ಹೆಚ್ಚಿನ ಅವಧಿಗೆ ಉಳಿದುಕೊಳ್ಳುತ್ತವೆ. ಜೊತೆಗೆ ಕೆಲವರಲ್ಲಿ ಈ ವೈರಸ್ನಿಂದಾಗಿ ಶ್ವಾಸಕೋಶಗಳಿಗೆ ಹಾನಿಯುಂಟಾಗುತ್ತದೆ. ಜಾಗತಿಕ ಮಟ್ಟದಲ್ಲಿ ವಿಜ್ಞಾನಿಗಳು ಕೊರೋನವೈರಸ್ನ ಮೇಲೆ ಗಮನವನ್ನು ಕೇಂದ್ರೀಕರಿಸಿದ್ದರೂ ಅದರ ಜಟಿಲತೆಗಳನ್ನು ತಿಳಿದುಕೊಳ್ಳಲು ನಾವು ಈಗಷ್ಟೇ ಆರಂಭಿಸಿದ್ದೇವೆ ಎಂದಿದ್ದಾರೆ ಸಂಶೋಧಕರು. ಕೊರೋನ ಹೊಸ ವೈರಸ್ ಆಗಿದ್ದು, ಹಿಂದೆಂದೂ ಅದರ ಸೋಂಕಿನ ಇತಿಹಾಸವಿಲ್ಲ. ಅದು ತನ್ನದೇ ಆದ ಗುಣಲಕ್ಷಣಗಳು ಮತ್ತು ಪ್ರತ್ಯೇಕ ರೋಗಶಾಸ್ತ್ರವನ್ನು ಹೊಂದಿದೆ ಮತ್ತು ನಾವು ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಇದು ನಮಗೆ ಗೊತ್ತಿರಬೇಕು ಎಂದು ಅಧ್ಯಯನ ವರದಿಯು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News