ಬಸವಣ್ಣನವರ ಚಿಂತನೆಗಳ ಸಮಕಾಲೀನತೆ

Update: 2021-05-12 19:30 GMT

ಬಸವಣ್ಣ, ಗಾಂಧೀಜಿ ಹಾಗೂ ಅಂಬೇಡ್ಕರರ ಹೆಸರುಗಳ ಪ್ರಸ್ತಾಪವೇ ಅನೇಕರಲ್ಲಿ ರೋಮಾಂಚನವನ್ನು ಸೃಷ್ಟಿಸುತ್ತದೆ. ಆ ಶಕ್ತಿ ಈ ಸಾಧಕರಲ್ಲಿ ತಳೆದದ್ದು ಅವರ ಕಾರ್ಯ ಮತ್ತು ಚಿಂತನಾಲಹರಿಯ ಮೂಲಕವೇ ವಿನಹ ಆಕಸ್ಮಿಕವಾದುದಲ್ಲ. ಪ್ರಜ್ಞಾವಂತ ಚಿಂತಕರು, ಬರಹಗಾರರು ಹಾಗೂ ಹೋರಾಟಗಾರರು ನಿರಂತರವಾಗಿ ಇವರ ಅಧ್ಯಯನ ಹಾಗೂ ಸಂಶೋಧನೆಯಲ್ಲಿ ತೊಡಗಿರುವುದನ್ನು ನಾವು ನೋಡುತ್ತಿದ್ದೇವೆ. ಬಸವಣ್ಣನವರ ಕಾಲ ಹನ್ನೆರಡನೇ ಶತಮಾನ, ವೈದಿಕ ಪರಂಪರೆ ಹುಟ್ಟುಹಾಕಿದ ಶ್ರೇಣೀಕೃತ ಸಮಾಜ, ಅಸ್ಪೃಶ್ಯತೆ ಹಾಗೂ ಕರ್ಮಸಿದ್ಧಾಂತದ ಆಚರಣೆಯ ಮೂಲಕ ಜನರನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು, ಈ ಆಚರಣೆಗಳ ಬಗ್ಗೆ ಪ್ರಶ್ನಿಸಲಾರದಂತಹ ಸ್ಥಿತಿಯನ್ನು ನಿರ್ಮಾಣ ಮಾಡಿದ ಕಾಲ. ಬಸವಣ್ಣನವರಿಗೆ ಈ ಶೋಷಣಾ ವ್ಯವಸ್ಥೆಯು, ಪರ್ಯಾಯ ವ್ಯವಸ್ಥೆಯ ಬಗ್ಗೆ ಚಿಂತನೆ ಹಾಗೂ ಕ್ರಿಯಾಶೀಲನಾಗಲು ಪ್ರೇರೇಪಿಸಿತು.

ಎಲ್ಲ ಮನುಷ್ಯರನ್ನು ಸಮಾನವಾಗಿ ಕಾಣುವ, ಜಾತಿ, ಲಿಂಗ ಹಾಗೂ ವರ್ಗ ಭೇದವಿಲ್ಲದ ಸಮಾಜದ ನಿರ್ಮಾಣ. ಶ್ರಮಕ್ಕೆ ಸೂಕ್ತ ಮನ್ನಣೆ, ನೀತಿಯುತ ಮಾರ್ಗದಲ್ಲಿ ಗಳಿಕೆ ಮತ್ತು ಗಳಿಕೆಯ ಭಾಗವನ್ನು ಸಮಾಜಕ್ಕಾಗಿ ವಿನಿಯೋಗ. ನಿಸರ್ಗದ ಭಾಗವಾದ ಕಲ್ಲು, ಮಣ್ಣು, ಗಿಡ ಮರಗಳಲ್ಲಿ ದೇವರನ್ನು ಕಾಣದೆ ಮನುಷ್ಯರಲ್ಲಿಯೇ ದೇವರನ್ನು ಕಾಣುವುದು, ದೇಹವನ್ನೇ ದೇಗುಲವನ್ನಾಗಿ ಮಾಡುವುದು ಬಸವಣ್ಣನವರ ಆಶಯವಾಗಿತ್ತು. ಈ ಎಲ್ಲ ಚಿಂತನೆಗಳನ್ನು ಕಾರ್ಯಗತಗೊಳಿಸಲು ಬಸವಣ್ಣನವರು ಸೂಕ್ತ ಮಾರ್ಗೋಪಾಯಗಳನ್ನು ಆಯ್ದುಕೊಂಡರು. ಜಾತಿ, ಧರ್ಮ ಹಾಗೂ ದೇವರ ಬಗ್ಗೆ ವೈದಿಕಶಾಹಿಗಳು ಸೃಷ್ಟಿಸಿದ ಮಿಥ್ಯ ಕಲ್ಪನೆಗಳನ್ನು ಶಿಥಿಲಗೊಳಿಸಿ ಸಮಾನತೆಯ ಸಮಾಜದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಬಸವಣ್ಣನವರು ಭಕ್ತಿಮಾರ್ಗವನ್ನೇ ಆಯ್ದುಕೊಂಡು ಇಷ್ಟಲಿಂಗದ ಕಲ್ಪನೆಗೆ ಪ್ರಾತಿನಿಧ್ಯವನ್ನು ನೀಡಿ ಅದನ್ನು ವರ್ಗ, ಜಾತಿ ಹಾಗೂ ಲಿಂಗಭೇದವನ್ನಳಿದು ಸಮಾನತೆಯ ಬಗ್ಗೆ ಅರಿವನ್ನು ಮೂಡಿಸುವ ಸಾಧನವನ್ನಾಗಿ ಮಾಡಿಕೊಂಡರು. ಇಷ್ಟಲಿಂಗ ಒಂದರ್ಥದಲ್ಲಿ ದೇವರ ಸಾಮಾಜಿಕರಣವೇ ಆಗಿದೆ. ಇದರಿಂದ ದೇವರು ವ್ಯಕ್ತಿಗತ ಉಪಾಸನೆಯ ಮಾಧ್ಯಮವೂ ಹಾಗೂ ಸಾಮಾಜಿಕ ಸಮತೆಯ ಸಮರ್ಥ ಸಾಧನವೂ ಆಗಿ ಪರಿಣಮಿಸಿತು. ಇಷ್ಟಲಿಂಗದ ಅನುಷ್ಠಾನ ದೇವರು ಹಾಗೂ ಭಕ್ತನ ನಡುವೆ ನೇರ ಸಂಪರ್ಕವನ್ನು ಕಲ್ಪಿಸಿ, ಉಪಾಸನೆಗೆ ಮಧ್ಯವರ್ತಿಯ ಅವಶ್ಯಕತೆಯನ್ನು ಕೊನೆಗಾಣಿಸಿತು. ಲಿಂಗಪೂಜೆಯ ಸಾರ್ಥಕತೆಗೊಳಿಸುವಲ್ಲಿ ಇರಬೇಕಾದ ಅರಿವಿನ ಬಗ್ಗೆ ಬಸವಣ್ಣನವರು ಹೀಗೆ ಹೇಳಿದ್ದಾರೆ. ‘‘ಲಿಂಗವ ಪೂಜಿಸಿ ಫಲವೇನಯ್ಯೆ,

ಸಮರತಿ ಸಮಕಳೆ ಸಮಸುಖವನರಿಯದನ್ನಕ್ಕ? ಲಿಂಗವ ಪೂಜಿಸಿ ಫಲವೇನಯ್ಯ,

ಕೂಡಲಸಂಗಮದೇವರ ಪೂಜಿಸಿ ನದಿಯೊಳಗೆ ನದಿ ಬೆರಸಿದಂತಾಗದನ್ನಕ್ಕ?’’ 

ಕರ್ಮ ಸಿದ್ಧಾಂತಕ್ಕೆ ಪರ್ಯಾಯವಾಗಿ ಬಸವಣ್ಣನವರು ಕಾಯಕ ಸಿದ್ಧಾಂತವನ್ನು ಅನುಷ್ಠಾನಗೊಳಿಸಿದರು. ಮನುಷ್ಯನಿಗೆ ಬದುಕಲು ಕಾಯಕ ಮುಖ್ಯ, ಕಾಯಕದಿಂದ ಬಂದ ಆದಾಯವೇ ಪ್ರಸಾದಕ್ಕೆ ಮೂಲವಾಗಬೇಕು. ಕಾಯಕದಲ್ಲಿಯೇ ಕೈಲಾಸ ಕಾಣಬೇಕು. ನಮ್ಮ ಏಳ್ಗೆ ದೈಹಿಕ ಹಾಗೂ ಮನೋಬಲ ದಿಂದ ಮಾತ್ರವೇ ಹೊರತು ತಾರಾಬಲದಿಂದಲ್ಲ ಎಂದು ಪ್ರತಿಪಾದಿಸಿದರು. ಈ ಕಾಯಕ ಸಿದ್ಧಾಂತ ಬಸವಣ್ಣನವರ ಮುಂದಾಳತ್ವದಲ್ಲಿ ಕಾಯಕ ಜೀವಿಗಳ ಒಗ್ಗೂಡಿಕೆಗೂ ಪ್ರೇರಣೆಯಾಗಿರಲು ಸಾಕು. ಈ ಚಿಂತನೆ ಬಸವಣ್ಣನವರ ಸಮಕಾಲೀನ ವಚನಕಾರ ಆಯ್ದಕ್ಕಿ ಮಾರಯ್ಯನವರ ಮೇಲೆ ಎಷ್ಟು ಪ್ರಭಾವ ಬೀರಿತ್ತೆಂದರೆ ಅವರು ಕಾಯಕದ ಬಗ್ಗೆ ಹೀಗೆ ಹೇಳಿದ್ದಾರೆ. ‘‘ಕಾಯಕದಲ್ಲಿ ನಿರತನಾದಡೆ ಗುರುದರ್ಶನ ವಾದಡೂ ಮರೆಯಬೇಕು., ಲಿಂಗ ಪೂಜೆಯಾದಡೂ ಮರೆಯಬೇಕು. ಜಂಗಮ ಮುಂದೆ ನಿಂತಿದ್ದರೂ ಹಂಗುಹರಿಯಬೇಕು ಕಾಯಕವೇ ಕೈಲಾಸವಾದ ಕಾರಣ.’’

ಎಲ್ಲ ತರಹದ ಭೇದಗಳನ್ನು ತೊರೆದು ಎಲ್ಲರನ್ನು ಒಳಗೊಳ್ಳುವ ಸಮಾಜ ನಿರ್ಮಾಣದ ಬಗ್ಗೆ ಬಸವಣ್ಣ ಚಿಂತಿಸಿದರು. ಶ್ರೇಣೀಕೃತ ಸಮಾಜದ ಆಚರಣೆಯಿಂದ ತಳಸಮುದಾಯದವರಿಗಾದ ಹಿಂಸೆಯನ್ನರಿತ ಬಸವಣ್ಣನವರು ಎಲ್ಲರನ್ನೂ ವೈಚಾರಿಕ ಕ್ರಾಂತಿಯಲ್ಲಿ ಪಾಲ್ಗೊಳ್ಳುವಂತೆ ಮಾಡಿ, ಒಳಗೊಳ್ಳುವಿಕೆ ಸಿದ್ಧಾಂತಕ್ಕೆ ನಾಂದಿ ಹಾಡಿದರು. ಈ ವೈಚಾರಿಕ ಕ್ರಾಂತಿಯಲ್ಲಿ ಇತರರೊಂದಿಗೆ ತಳ ಸಮುದಾಯದಿಂದ ಬಂದವರನ್ನು ಹಾಗೂ ಮಹಿಳೆಯರನ್ನೂ ಕಾಣುತ್ತೇವೆ. ಕೆಳಗಿನ ಎರಡು ವಚನಗಳಲ್ಲಿ ಈ ಸಿದ್ಧಾಂತಕ್ಕೆ ಅವರಲ್ಲಿದ್ದ ಬದ್ಧತೆಯನ್ನು ಕಾಣಬಹುದು. ‘‘ಅಪ್ಪನು ನಮ್ಮ ಮಾದಾರ ಚನ್ನಯ್ಯ ಬೊಪ್ಪನು ನಮ್ಮ ಡೋಹರ ಕಕ್ಕಯ್ಯ ಚಿಕ್ಕಯ್ಯನು ಎಮ್ಮಯ್ಯ ಕಾಣಯ್ಯ ಅಣ್ಣನು ನಮ್ಮ ಕಿನ್ನರಿ ಬೊಮ್ಮಯ್ಯ ಎನ್ನನೇತಕ್ಕರಿಯಿರಿ, ಕೂಡಲ ಸಂಗಯ್ಯೆ.’’ 

‘‘ಇವನಾರವ, ಇವನಾರವ, ಇವನಾರವ ನೆಂದೆನಿಸದಿರಯ್ಯ ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯ ಕೂಡಲ ಸಂಗಮದೇವಾ, ನಿಮ್ಮ ಮನೆಯ ಮಗನೆಂದೆನಿಸಯ್ಯ.’’
                                                                              
ವೇದ, ಶಾಸ್ತ್ರ ಹಾಗೂ ಮೂಢನಂಬಿಕೆಗಳನ್ನು ತಿರಸ್ಕರಿಸಿದ ಬಸವಣ್ಣನವರು ನೈತಿಕ ಶ್ರದ್ಧೆಯ ಪ್ರಾಮುಖ್ಯತೆಗೆ ಆದ್ಯತೆಯನ್ನು ನೀಡಿದರು, ಅವರ ಕೆಳಗಿನ ವಚನದಲ್ಲಿ ಇದನ್ನು ಕಾಣಬಹುದು. ‘‘ಕಳಬೇಡ, ಕೊಲಬೇಡ; ಹುಸಿಯ ನುಡಿಯಲುಬೇಡ;
ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ;

ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ, ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ,
ಇದೇ ನಮ್ಮ ಕೂಡಲಸಂಗಮದೇವನೊಲಿಸುವ ಪರಿ.’’ 

ಬಸವಪೂರ್ವ ಕಾಲದಲ್ಲಿ ಜನರಲ್ಲಿ ಪಾಪ, ಪುಣ್ಯ, ಸ್ವರ್ಗ ಹಾಗೂ ನರಕಗಳೆಂಬ ಅವೈಜ್ಞಾನಿಕ ವಿಚಾರಗಳು ವ್ಯಾಪಕವಾಗಿ ಬೇರೂರಲು ಕರ್ಮ ಸಿದ್ಧಾಂತವೂ ಕಾರಣವಾಗಿತ್ತು. ಈ ವಿಚಾರಗಳ ಬಗ್ಗೆ ಜನರಲ್ಲಿ ಭೀತಿಯನ್ನು ಸೃಷ್ಟಿಸಲಾಗಿತ್ತು. ಜನರು ತಾವು ಮಾಡುವ ಪಾಪಗಳಿಂದ ಪರಿಹಾರಹೊಂದಲು ದಾನ ಎಂಬ ಕ್ರಿಯೆಯನ್ನು ಜನರ ಮಧ್ಯ ಜೀವಂತವಾಗಿ ಇಡಲ್ಪಟ್ಟಿತ್ತು. ಈ ದಾನ ಕ್ರಿಯೆ ಪುರೋಹಿತಶಾಹಿಗಳಿಗೆ ಒಂದು ಆದಾಯದ ಮೂಲವೂ ಆಗಿತ್ತು. ಈ ದಾನ ಎಂಬ ಶೋಷಣಾ ವ್ಯವಸ್ಥೆಯನ್ನು ಕೊನೆಗೊಳಿಸಲು ಬಸವಣ್ಣನವರು ದಾಸೋಹ ತತ್ವವನ್ನು ಅನುಷ್ಠಾನಕ್ಕೆ ತಂದರು. ಕಾಯಕ ತತ್ವವು ಉತ್ಪಾದನೆಯನ್ನು ಸೂಚಿಸಿದರೆ, ದಾಸೋಹ ವಿತರಣೆಯನ್ನು ಸೂಚಿಸುತ್ತದೆ. ಶುದ್ಧ ಕಾಯಕದಿಂದ ಬಂದ ಆದಾಯ ಮಾತ್ರ ದಾಸೋಹಕ್ಕೆ ಸಲ್ಲುವುದು. ದುರ್ಮಾರ್ಗದಿಂದ ಗಳಿಸಿದ ಆದಾಯ ದಾಸೋಹಕ್ಕೆ ಸಲ್ಲುವದಲ್ಲ ಎಂಬುದು ದಾಸೋಹ ತತ್ವದಲ್ಲಿ ಅಡಕವಾಗಿರುವ ಅಂಶ. ಬಸವಣ್ಣನವರು ಪ್ರಾರಂಭಿಸಿದ ವೈಚಾರಿಕ ಕ್ರಾಂತಿಯಲ್ಲಿ ವಚನ ಸಾಹಿತ್ಯ ಪ್ರಕಾರವನ್ನು ಸಂವಹನ ಮಾಧ್ಯಮವನ್ನಾಗಿ ಬಳಸಿದ್ದು ಒಂದು ಪ್ರಮುಖ ಅಂಶ. ತಮ್ಮ ವಿಚಾರಗಳನ್ನು ವಚನಗಳ ಮುಖಾಂತರವೇ ವ್ಯಕ್ತ ಪಡಿಸಿದ್ದಾರೆ. ಇದೊಂದು ಸರಳ ಹಾಗೂ ಓದುಗರನ್ನು ಪ್ರಭಾವಿಸಬಲ್ಲ ಶಕ್ತಿಶಾಲಿ ಮಾಧ್ಯಮವಾಗಿ ಹೊರಹೊಮ್ಮಿತು.

ಬಸವಣ್ಣನವರೊಂದಿಗೆ ವೈಚಾರಿಕ ಕ್ರಾಂತಿಯಲ್ಲಿ ಭಾಗಿಯಾಗಿದ್ದ ಅನೇಕರು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಲು ಇದನ್ನೇ ಬಳಸಿರುವುದನ್ನು ಕಾಣುತ್ತೇವೆ, ಇವರಲ್ಲಿ ಅಕ್ಕಮಹಾದೇವಿ, ಅಕ್ಕನಾಗಮ್ಮ, ಮುಕ್ತಾಯಕ್ಕ, ಸತ್ಯಕ್ಕರಂತಹ ಮಹಿಳಾ ವಚನಕಾರ್ತಿಯರನ್ನು ಮತ್ತು ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಉರಿಲಿಂಗ ಪೆದ್ದಿಯವರಂತಹ ದಲಿತ ವಚನಕಾರರನ್ನು ಕಾಣಬಹುದು. ಮುಂದೆ ಈ ವಚನ ಸಾಹಿತ್ಯವೇ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟವಾದ ಸ್ಥಾನವನ್ನು ಪಡೆಯಿತು. ಬಸವಣ್ಣನವರು ಪ್ರಾರಂಭಿಸಿದ ಅನುಭವಮಂಟಪ ಸಮಾನ ಮನಸ್ಕರು ಒಂದೆಡೆ ಕುಳಿತು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಲು ಹಾಗೂ ಅವುಗಳನ್ನು ಚರ್ಚೆಗೆ ಒಳಪಡಿಸಲು ವೇದಿಕೆಯಾಯಿತು. ಮಹಾಜ್ಞಾನಿ, ನಿಷ್ಠುರವಾದಿ ಅಲ್ಲಮಪ್ರಭುಗಳ ಹಿರಿಯತನದಲ್ಲಿ ಅನುಭವಮಂಟಪದ ಮೌಲ್ಯ ಹೆಚ್ಚುವಂತಾಯಿತು. ಈ ವೇದಿಕೆಯಲ್ಲಿ ಅನೇಕ ಚಿಂತಕರು ಅನುಭಾವಕ್ಕೆ ಸಂಬಂಧಿಸಿದ ಹಲವಾರು ವಿಷಯಗಳನ್ನು ಚರ್ಚಿಸಿ ಸೈದ್ಧಾಂತಿಕ ನೆಲೆಗೆ ಬರುತ್ತಿದ್ದರು.

ಈ ವೇದಿಕೆ ವೈಚಾರಿಕ ಮನೋಭಾವವನ್ನು ಹೊಂದಿದಂತಹ ಮರುಳಶಂಕರದೇವರು, ಮಡಿವಾಳ ಮಾಚಿದೇವರಂತಹ ಅನೇಕರನ್ನು ಗುರುತಿಸಿ ಅವರ ಪ್ರತಿಭೆಯನ್ನು ಅನಾವರಣಗೊಳಿಸುವ ಕಾರ್ಯವನ್ನೂ ಮಾಡಿದೆ. ಅನುಭವ ಮಂಟಪದ ಇನ್ನೊಂದು ವಿಶೇಷತೆ, ಇಲ್ಲಿ ಅನೇಕ ಮಹಿಳೆಯರು ಪುರುಷರ ಸರಿಸಮಾನವಾಗಿ ತಾತ್ವಿಕ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದುದು. ಪ್ರಸಕ್ತ ಸನ್ನಿವೇಶದಲ್ಲಿಯೂ ಕೂಡಾ ಬಸವಣ್ಣನವರ ವೈಚಾರಿಕ ಚಿಂತನೆಗಳ ಅನುಷ್ಠಾನದ ಮೂಲಕ ಸಮಾಜದಲ್ಲಿ ಜಾತಿ, ಲಿಂಗ, ವರ್ಗ ಭೇದದ ನಂಬಿಕೆಗಳನ್ನು ತೊರೆದು, ಎಲ್ಲರನ್ನೂ ಸಮಾನವಾಗಿ ಕಾಣುವುದರಿಂದ ಸುಖಿ ರಾಜ್ಯದ ಕನಸನ್ನು ನನಸುಮಾಡಲು ಸಾಧ್ಯ. ಜನರಲ್ಲಿ ನಿಷ್ಕಳಂಕ ಕಾಯಕದ ಬಗ್ಗೆ ನಿಷ್ಠೆ ಮತ್ತು ಅದೊಂದು ದೇವರನ್ನು ಕಾಣುವ ಮಾರ್ಗ ಎಂಬ ಅರಿವನ್ನು ಮೂಡಿಸುವುದರಿಂದ, ನಾವು ಎದುರಿಸುತ್ತಿರುವ ಭ್ರಷ್ಟಾಚಾರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಶ್ರೇಣೀಕೃತ ಸಮಾಜ ಹಾಗೂ ಕರ್ಮ ಸಿದ್ಧಾಂತಗಳಿಗೆ ಹೊಸ ಆಯಾಮ ನೀಡಬಹುದು. ಇಂದಿನ ಸಂಸತ್ತಿನ ಕಲ್ಪನೆಯನ್ನು, ಅಂದು ಬಸವಣ್ಣನವರು ಅನುಭವ ಮಂಟಪವನ್ನು ಸ್ಥಾಪಿಸುವುದರೊಂದಿಗೆ ಸಾಕಾರಗೊಳಿಸಿದ್ದರೆಂದು ಹೆಮ್ಮೆಪಡುವುದ ರೊಂದಿಗೆ ಅವರ ವೈಚಾರಿಕ ಚಿಂತನೆಗಳ ಅನುಷ್ಠಾನ ಮತ್ತು ಅರ್ಥಪೂರ್ಣ ಚರ್ಚೆಯ ಮೂಲಕ ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಬಗ್ಗೆ ಆದ್ಯತೆ ನೀಡುವುದು ಇಂದಿನ ಅಗತ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News