ನ್ಯಾಯಾಧೀಶರೇನು ಸರ್ವಜ್ಞರಲ್ಲ: ಸಿ.ಟಿ. ರವಿ

Update: 2021-05-13 17:23 GMT

ಬೆಂಗಳೂರು, ಮೇ 13: ಕೋವಿಡ್ ಲಸಿಕೆಯೇ ತಯಾರಾಗದಿದ್ದರೆ ನಾವು ನೇಣು ಹಾಕಿಕೊಳ್ಳಲು ಆಗುತ್ತದೆಯೇ ಎಂಬ ಸದಾನಂದಗೌಡರ ಮಾತಿಗೆ ಧ್ವನಿಗೂಡಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ನ್ಯಾಯಾಧೀಶರೇನು ಸರ್ವಜ್ಞರಲ್ಲ. ಕೇಂದ್ರ ಹಾಗೂ ರಾಜ್ಯ ಸರಕಾರವಿರಲಿ ತಜ್ಞರ ಸಮಿತಿ ನೀಡುವ ವರದಿಯನ್ನು ಆಧರಿಸಿಯೇ ಕೆಲಸ ಮಾಡುತ್ತವೆ. ಸುಪ್ರೀಂಕೋರ್ಟ್ ಗೂ ಕೇಂದ್ರ ಸರಕಾರ ಈ ವಿಚಾರವನ್ನು ಹೇಳಿದೆ. ಕೇಂದ್ರದ ವಾದವನ್ನು ಸುಪ್ರೀಂಕೋರ್ಟ್ ಕೂಡಾ ಒಪ್ಪಿದೆ ಎಂದು ಹೇಳಿದರು.

ಕೊರೋನ ಲಸಿಕೆ ವಿಚಾರದಲ್ಲಿ ಹೈಕೋರ್ಟ್ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ವಿಧಾನಸೌಧದಲ್ಲಿ ಡಿವಿಎಸ್ ಹಾಗೂ ಸಿ.ಟಿ.ರವಿ ಸುದ್ದಿಗೋಷ್ಠಿಯನ್ನು ನಡೆಸಿದರು. ಸಿ.ಟಿ.ರವಿ ಮಾತನಾಡಿ, ಕೊರೋನ ಮೊದಲ ಅಲೆಗಿಂತ ಎರಡನೆ ಅಲೆ ಹೆಚ್ಚು ಪ್ರಬಲವಾಗಿದೆ. ವೈರಾಣು ಸೋಂಕು ದಿನಂಪ್ರತಿ ಹೆಚ್ಚುತ್ತಿದೆ. ಇದಕ್ಕಾಗಿ ನಮ್ಮ ಸಿದ್ಧತೆ ಸಾಕಾಗಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ, ಸೋಂಕು ಮತ್ತು ಸಾವನ್ನು ಮುಂದಿಟ್ಟುಕೊಂಡು ಕೆಲವರು ವಿಕೃತ ಆನಂದ ಪಡೆಯುತ್ತಿರುವುದು ದುರಂತ ಎಂದು ತಿಳಿಸಿದರು. 

ಸಾಂಕ್ರಾಮಿಕ ಮತ್ತು ಸಾವಿನಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಈಗಿನ ಸಾವು ನೋವಿಗೆ ಚೀನಾ ವೈರಸ್ ಕಾರಣ. ಈ ವೈರಸ್ ಅನ್ನು ದೂರಬೇಕೆ ಹೊರತು ಪ್ರಧಾನಿ ನರೇಂದ್ರ ಮೋದಿಯವರನ್ನಲ್ಲ. ವಿದೇಶಗಳಲ್ಲಿ ಸೋಂಕಿನ ಪ್ರಮಾಣ ಮತ್ತು ಸಾವಿನ ಪ್ರಮಾಣವನ್ನು ಹೋಲಿಸಿ ನೋಡಲಿ. ಇಟಲಿಯಲ್ಲಿ ಎಷ್ಟು ಸೋಂಕು–ಸಾವು ಆಗಿದೆ ನೋಡಿ. ಅಲ್ಲಿ ನರೇಂದ್ರ ಮೋದಿ ಪ್ರಧಾನಿ ಆಗಿಲ್ಲವಲ್ಲ ಎಂದು ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News