ಕೋವಿಡ್ ಲಸಿಕೆ ಖರೀದಿಗೆ ಜಾಗತಿಕ ಟೆಂಡರ್: ಮುಖ್ಯಮಂತ್ರಿ ಯಡಿಯೂರಪ್ಪ

Update: 2021-05-14 15:55 GMT

ಬೆಂಗಳೂರು, ಮೇ 14: ಕೋವಿಡ್ ಲಸಿಕೆ ಖರೀದಿಗೆ ಜಾಗತಿಕ ಟೆಂಡರ್ ಮೂಲಕ ಖರೀದಿ ಪ್ರಕ್ರಿಯೆ ಆರಂಭಿಸಿದ್ದು, ಶೀಘ್ರದಲ್ಲೆ ಲಸಿಕೆ ರಾಜ್ಯಕ್ಕೆ ಬರಲಿದ್ದು, ಘೋಷಿಸಿದಂತೆ ಎಲ್ಲ ನಾಗರಿಕರಿಗೂ ಲಸಿಕೆ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ಪ್ರಕಟಿಸಿದ್ದಾರೆ.

ಶುಕ್ರವಾರ ಸಮಾಜ ಸುಧಾರಕ ಬಸವಣ್ಣನವರ ಜಯಂತಿ ಅಂಗವಾಗಿ ಇಲ್ಲಿನ ಬಸವೇಶ್ವರ ವೃತ್ತದಲ್ಲಿನ ಬಸವಣ್ಣನವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ಕೋವಿಡ್ ನೆರವು ನೀಡುವುದರಲ್ಲಿ ಸರಕಾರ ಯಾವುದೇ ತಾರತಮ್ಯ ಮಾಡಿಲ್ಲ. ಕೋವಿಡ್‍ನ ಈ ಸಂಕಷ್ಟ ಸಂದರ್ಭದಲ್ಲಿ ಆರೋಪ-ಪ್ರತ್ಯಾರೋಪಗಳನ್ನು ಮಾಡದೆ ಎಲ್ಲರೂ ಒಗ್ಗಟ್ಟಾಗಿ ಸೋಂಕನ್ನು ಎದುರಿಸಬೇಕಿದೆ ಎಂದು ಹೇಳಿದರು.

ಈ ಸಂಕಷ್ಟ ಸಮಯದಲ್ಲಿ ಆರೋಪಗಳನ್ನು ಮಾಡುತ್ತ ಕೂರುವ ಬದಲು ಎಲ್ಲರೂ ಒಗ್ಗಟ್ಟಾಗಿ ಪರಿಸ್ಥಿತಿಯನ್ನು ಎದುರಿಸೋಣ. ಕೋವಿಡ್ ನಿರ್ವಹಣೆಯಲ್ಲೂ ಸರಕಾರ ರಾಜಕಾರಣ ಮಾಡುತ್ತಿದೆ. ಬಿಜೆಪಿ ಶಾಸಕರಿರುವ ಕ್ಷೇತ್ರಕ್ಕೆ ಒಂದು ರೀತಿ, ವಿರೋಧ ಪಕ್ಷದ ಶಾಸಕರಿರುವ ಕ್ಷೇತ್ರಕ್ಕೆ ಮತ್ತೊಂದು ರೀತಿ ಮಾಡುತ್ತಿದೆ ಎಂದು ಆರೋಪಗಳು ನಿರಾಧಾರ. ಇವೆಲ್ಲ ಸುಳ್ಳು ಎಂದು ಯಡಿಯೂರಪ್ಪ ಅಲ್ಲಗಳೆದರು.

ರಾಜ್ಯ ಸರಕಾರ ಪರಿಸ್ಥಿತಿಯನ್ನು ಸುಧಾರಿಸಲು ಎಲ್ಲ ರೀತಿಯಲ್ಲೂ ಪ್ರಯತ್ನ ನಡೆಸಿದೆ. ಅಲ್ಲದೆ, ರಾಜ್ಯಕ್ಕೆ ಬೇಕಾದ ಕೊರೋನ ಲಸಿಕೆಯನ್ನು ಪಡೆಯಲು ಪ್ರಯತ್ನ ನಡೆಸಿದ್ದೇವೆ. ಆದಷ್ಟು ಶೀಘ್ರ ಸಾಕಷ್ಟು ಲಸಿಕೆ ಲಭ್ಯವಾಗಲಿದೆ. ಲಸಿಕೆ ಬಂದಂತೆ ಎಲ್ಲರಿಗೂ ಲಸಿಕೆ ನೀಡುತ್ತೇವೆ. ಈ ಬಗ್ಗೆ ನಾಗರಿಕರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಕನ್ನಡ ಸಾಹಿತ್ಯಕ್ಕೆ ಕೊಡುಗೆ: ಮನವತಾವಾದಿ ಬಸವಣ್ಣನವರು ಕನ್ನಡ ಸಾಹಿತ್ಯಕ್ಕೆ 1,500ಕ್ಕೂ ಅಧಿಕ ವಚನಗಳನ್ನು ನೀಡುವ ಮೂಲಕ ವಿಶಿಷ್ಟ ಕೊಡುಗೆಯನ್ನು ನೀಡಿದ್ದಾರೆ. ಅವರ ತತ್ವಗಳನ್ನು ಅನುಸರಿಸುವ ಮೂಲಕ ಅವರ ಆಶಯಗಳನ್ನು ನಾವೆಲ್ಲರೂ ಸಾಕಾರಗೊಳಿಸಬೇಕು. ಹನ್ನೆರಡನೆ ಶತಮಾನದಲ್ಲಿ ಆಧುನಿಕ ಸಂಸತ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ಅನುಭವ ಮಂಟಪವನ್ನು ಸ್ಥಾಪಿಸಿದರು ಎಂದು ಯಡಿಯೂರಪ್ಪ ಸ್ಮರಿಸಿದರು.

ಬಸವಣ್ಣನವರ ಜಯಂತಿ ಮತ್ತು ರಮಝಾನ್ ಹಬ್ಬ ಎರಡೂ ಒಟ್ಟಿಗೆ ಬಂದಿದ್ದು, ಮುಸ್ಲಿಮ್ ಬಾಂಧವರಿಗೆ ರಮಝಾನ್ ಹಬ್ಬದ ಶುಭಾಶಯಗಳು. ರಾಜ್ಯದಲ್ಲಿ ಹಿಂದೂ, ಮುಸ್ಲಿಮ್, ಕ್ರೈಸ್ತರು ಒಂದೇ ತಾಯಿಯ ಮಕ್ಕಳಂತೆ ಬಾಳೋಣ ಎಂದು ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಕರೆ ನೀಡಿದರು.

ಈ ಸಂದರ್ಭದಲ್ಲಿ ಬೇಲಿಮಠದ ಶಿವರುದ್ರ ಸ್ವಾಮಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಸಂಸದ ಪಿ.ಸಿ.ಮೋಹನ್, ಬಿಬಿಎಂಪಿ ಆಯುಕ್ತ ಗೌರವ್‍ಗುಪ್ತ, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News