ದಲಿತರಿಗೆ ಕೋವಿಡ್ ಪರಿಹಾರ ಪ್ಯಾಕೇಜ್ ಘೋಷಿಸಲು ದಲಿತ ಹಕ್ಕುಗಳ ಸಮಿತಿ ಆಗ್ರಹ

Update: 2021-05-15 14:06 GMT

ಬೆಂಗಳೂರು, ಮೇ 15: `ಕೋವಿಡ್ ಸೋಂಕಿನ ಎರಡನೆ, ಮೂರನೆ ಅಲೆ ಮುಂದುವರಿದಿದೆ. ಆದುದರಿಂದ ದಲಿತ ಸಮುದಾಯಕ್ಕೆ ಆಹಾರ, ಆರೋಗ್ಯ ಕಲ್ಪಿಸುವ ನಿಟ್ಟಿನಲ್ಲಿ ದಲಿತರಿಗೆ ಪರಿಹಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು' ಎಂದು ದಲಿತ ಹಕ್ಕುಗಳ ಸಮಿತಿ(ಡಿಎಚ್‍ಎಸ್) ಆಗ್ರಹಿಸಿದೆ.

ಶನಿವಾರ ಸಮಿತಿವತಿಯಿಂದ ರಾಜ್ಯಾದ್ಯಂತ ಮನೆಗಳಲ್ಲೇ ಧರಣಿ ಸತ್ಯಾಗ್ರಹ ನಡೆಸಿದ್ದು ಪ್ಯಾಕೇಜ್ ನೀಡುವಂತೆ ಆಗ್ರಹಿಸಲಾಗಿದೆ.

ಬಿಪಿಎಲ್ ಕಾರ್ಡ್ ಇರುವ ದಲಿತರಿಗೆ ಮತ್ತು ಇತರೆ ಬಡವರಿಗೆ 10 ಸಾವಿರ ರೂ.ಪರಿಹಾರವನ್ನು ತಕ್ಷಣ ನೀಡಬೇಕು. 10 ಕೆ.ಜಿ.ಅಕ್ಕಿ ಜೊತೆ ಅಗತ್ಯ ವಸ್ತುಗಳನ್ನು ತಕ್ಷಣ ಒದಗಿಸಿ ಅವರ ಜೀವ ಉಳಿಸಬೇಕು. ದಲಿತ ವಿದ್ಯಾರ್ಥಿಗಳಿಗೆ ನೀಡಬೇಕಾದ ವಿದ್ಯಾರ್ಥಿ ವೇತನ(ಸ್ಕಾಲರ್‍ಶಿಫ್) ಮತ್ತು ಹಾಸ್ಟೆಲ್ ವಿದ್ಯಾರ್ಥಿಗಳ ಊಟಕ್ಕೆ ನೀಡುತ್ತಿದ್ದ ಹಣವನ್ನು ಲೆಕ್ಕಹಾಕಿ ಕೂಡಲೇ ನೀಡಬೇಕು.

ಪರಿಶಿಷ್ಟ ಜಾತಿ/ಪಂಗಡದ ಅಭಿವೃದ್ಧಿ ಯೋಜನೆ ಎಸ್‍ಸಿಪಿ/ಟಿಎಸ್‍ಪಿ ಹಣವನ್ನು ನಿಗಮಗಳ ಮೂಲಕ ತ್ವರಿತವಾಗಿ ಜಾರಿ ಮಾಡಬೇಕು. ಜಾರಿ ಮಾಡದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಗಂಗೂರಿನಲ್ಲಿ ದಲಿತರ ಮೇಲೆ ದೌರ್ಜನ್ಯ ಎಸಗಿರುವ ಅರಣ್ಯ ಅಧಿಕಾರಿಗಳ ಮೇಲೆ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಕೇಸು ದಾಖಲುಮಾಡಿ ಅವರನ್ನು ಬಂಧಿಸಬೇಕು. ಕೋವಿಡ್ ಲಸಿಕೆಯನ್ನು ದಲಿತರು ವಾಸಿಸುವ ಕಾಲನಿ, ಪ್ರದೇಶಗಳಿಗೆ ತೆರಳಿ ಲಸಿಕೆ ಹಾಕಬೇಕು.

ದೇವದಾಸಿ ಮಹಿಳೆಯರಿಗೆ ಪುನರ್‍ವಸತಿ ಕಲ್ಪಿಸಬೇಕು. ಮಸಣ ಕಾರ್ಮಿಕರನ್ನು ಗಣತಿ ನಡೆಸಿ ನೌಕರರೆಂದು ಪರಿಗಣಿಸಬೇಕು.ಪೌರ ಕಾರ್ಮಿಕರು ಗುತ್ತಿಗೆ ಮತ್ತು ಹೊರಗುತ್ತಿಗೆ ಕಾರ್ಮಿಕರನ್ನ ಕಾಯಂಗೊಳಿಸಬೇಕು. ನರೇಗಾ ಯೋಜನೆಯನ್ನು 200 ದಿನಗಳಿಗೆ ಹೆಚ್ಚಿಸಿ, 600ರೂ.ಗಳಿಗೆ ಕೂಲಿ ನಿಗದಿ ಮಾಡಬೇಕು. ಆ ಮೂಲಕ ಸಂಕಷ್ಟಕ್ಕೆ ಸಿಲುಕಿರುವ ದಲಿತ ಸಮುದಾಯಕ್ಕೆ ನೆರವು ಘೋಷಿಸಬೇಕು ಎಂದು ಸಮಿತಿ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News