ಬೆಂಗಳೂರು ಆರೋಗ್ಯ ವ್ಯವಸ್ಥೆ ಉಸ್ತುವಾರಿ ಬಿಬಿಎಂಪಿಯಿಂದ ಆರೋಗ್ಯ ಇಲಾಖೆಗೆ: ಡಾ.ಅಶ್ವತ್ಥ ನಾರಾಯಣ

Update: 2021-05-15 15:16 GMT

ಬೆಂಗಳೂರು, ಮೇ 15: ಸುಮಾರು ಒಂದೂವರೆ ಕೋಟಿಗೂ ಹೆಚ್ಚು ಜನಬಾಹುಳ್ಯವಿರುವ ರಾಜಧಾನಿ ಬೆಂಗಳೂರಿನಲ್ಲಿ ಕಟ್ಟಕಡೆಯ ವ್ಯಕ್ತಿಗೂ ಉತ್ತಮ ಆರೋಗ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಇರುವ ವ್ಯವಸ್ಥೆಯನ್ನೇ ಆಮೂಲಾಗ್ರವಾಗಿ ಸುಧಾರಿಸಲು ರಾಜ್ಯ ಕೋವಿಡ್ ಕಾರ್ಯಪಡೆಯು ತಜ್ಞರ ವರದಿ ಪಡೆಯಲು ನಿರ್ಧರಿಸಿದೆ.

ಶನಿವಾರ ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ನೇತೃತ್ವದಲ್ಲಿ ನಡೆದ ಕಾರ್ಯಪಡೆ ಸಭೆಯ ಬಳಿಕ ಮಾತನಾಡಿದ ಅವರು, ಬೆಂಗಳೂರು ನಗರ ಆರೋಗ್ಯ ವ್ಯವಸ್ಥೆಯನ್ನು ಬಿಬಿಎಂಪಿ ವ್ಯಾಪ್ತಿಯಿಂದ ತೆಗೆದು ಆರೋಗ್ಯ ಇಲಾಖೆಗೆ ವಹಿಸುವುದು. ನಗರದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 100 ಹಾಸಿಗೆಗಳ ಸುಸಜ್ಜಿತ, ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳುಳ್ಳ ಸೆಕೆಂಡರಿ ಆಸ್ಪತ್ರೆ ಸ್ಥಾಪನೆ, ನಾಲ್ಕು ವಿಧಾನಸಭೆ ಕ್ಷೇತ್ರಗಳಿಗೊಂದು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಬೇಕಿದೆ ಎಂದರು.

ಮಧ್ಯಮ ವರ್ಗ ಹಾಗೂ ಬಡವರಿಗೆ ಚಿಕಿತ್ಸೆ ಬಹಳ ದುಬಾರಿಯಾಗಿದೆ. ಇರುವ ಬೌರಿಂಗ್, ವಿಕ್ಟೋರಿಯಾ, ಕೆ.ಸಿ.ಜನರಲ್‍ನಂತಹ ಆಸ್ಪತ್ರೆಯಲ್ಲಿ ಒತ್ತಡ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಈ ಆಸ್ಪತ್ರೆಗಳಲ್ಲಿ ನಗರದಲ್ಲಿ ವಾಸ ಮಾಡುವ ಕಟ್ಟಕಡೆಯ ವ್ಯಕ್ತಿಗೂ ಅತ್ಯುತ್ತಮ ಚಿಕಿತ್ಸೆ ಕೊಡಬೇಕಿದೆ. ನಗರದಲ್ಲಿ ಸರಕಾರದ ಉಸ್ತುವಾರಿಯಲ್ಲಿ ಅನೇಕ ಆಸ್ಪತ್ರೆಗಳಿವೆ. ಈ ಪೈಕಿ ಕೆಲವು ವೈದ್ಯ ಶಿಕ್ಷಣ ಇಲಾಖೆ, ಇನ್ನು ಕೆಲವು ಆರೋಗ್ಯ ಇಲಾಖೆ, ಮತ್ತೆ ಇನ್ನು ಕೆಲವು ಬಿಬಿಎಂಪಿ ಅಧೀನದಲ್ಲಿವೆ. ಹೀಗಾಗಿ ಸರಿಯಾದ ಸಮನ್ವಯತೆ ಇಲ್ಲ, ಹೊಂದಾಣಿಕೆ ಕಾಣುತ್ತಿಲ್ಲ. ಪರಿಣಾಮ ಜನರು ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಹೀಗಾಗಿ ಈ ಎಲ್ಲ ಆಸ್ಪತ್ರೆಗಳನ್ನು ಒಟ್ಟಾರೆಯಾಗಿ ಆರೋಗ್ಯ ಇಲಾಖೆಯ ಅಧೀನಕ್ಕೆ ತಂದು ಅದಕ್ಕೊಂದು ಪ್ರತ್ಯೇಕ ವ್ಯವಸ್ಥೆ ಮಾಡುವುದು ಒಳ್ಳೆಯದು ಎಂದು ಡಾ.ಅಶ್ವತ್ಥ ನಾರಾಯಣ ಪ್ರಸ್ತಾವನೆ ಸಲ್ಲಿಸಿದರು.

ಇಡೀ ಬೆಂಗಳೂರಿನ ಆರೋಗ್ಯ ವ್ಯವಸ್ಥೆಯ ಉಸ್ತುವಾರಿ ನೋಡಿಕೊಳ್ಳಲು ಪ್ರತ್ಯೇಕ ನಿರ್ದೇಶನಾಲಯ ಸ್ಥಾಪಿಸಬೇಕು. ಬೆಂಗಳೂರು ನಗರದಲ್ಲಿ ಇಂತಹ ವ್ಯವಸ್ಥೆ ಆಗಲೇಬೇಕು. ಶೀಘ್ರದಲ್ಲಿಯೇ ಈ ಬಗ್ಗೆ ತಜ್ಞರ ವರದಿ ಸ್ವೀಕರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಉತ್ತಮ. ಬೆಂಗಳೂರು ನಗರದಲ್ಲಿ ಬಿಬಿಎಂಪಿಗೆ ಇತರೆ ಕ್ಷೇತ್ರಗಳಲ್ಲಿ ಮಾಡಲು ಸಾಕಷ್ಟು ಕೆಲಸವಿದೆ. ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಗಮನ ಕೊಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ತಾಂತ್ರಿಕ, ಆಡಳಿತಾತ್ಮಕ ಸೇರಿದಂತೆ ಎಲ್ಲ ಅಂಶಗಳ ಬಗ್ಗೆ ಅಧ್ಯಯನ ಮಾಡಿ ವರದಿ ಕೊಡುವಂತೆ ತಜ್ಞರನ್ನು ಕೋರಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಡಾ.ಅಶ್ವತ್ಥ ನಾರಾಯಣ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News