ಉಚಿತ ಹಾಸಿಗೆ, ಆಮ್ಲಜನಕ, ಆರ್ಥಿಕ ನೆರವಿಗೆ ಒತ್ತಾಯಿಸಿ ಜನಾಗ್ರಹ ಆಂದೋಲನದಿಂದ ಧರಣಿ

Update: 2021-05-15 15:17 GMT

ಬೆಂಗಳೂರು, ಮೇ 15: ಕೋವಿಡ್ ಎರಡನೇ ಅಲೆಯಿಂದಾಗಿ ಕೋವಿಡ್ ಸೋಂಕು ಹಾಗೂ ಆರ್ಥಿಕ ಸಂಕಷ್ಟಕ್ಕೆ ಈಡಾಗಿರುವ ರಾಜ್ಯದ ಜನತೆಗೆ ರಾಜ್ಯ ಸರಕಾರ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ ಜನಾಗ್ರಹ ಆಂದೋಲನದ ವತಿಯಿಂದ ಇಂದು ರಾಜ್ಯಾದ್ಯಂತ ಮನೆ ಮುಂದೆ ಪ್ರತಿಭಟನೆ ನಡೆಸಲಾಯಿತು.

ಜನಾಗ್ರಹ ಆಂದೋಲನದ ವತಿಯಿಂದ ಕೋವಿಡ್ ಸೋಂಕಿತರಿಗೆ ಹಾಸಿಗೆ, ಆಕ್ಸಿಜನ್, ವ್ಯಾಕ್ಸಿನ್, ಸಮಗ್ರ ಪಡಿತರ ಮತ್ತು ಆರ್ಥಿಕ ನೆರವು ನೀಡಿ ಎಂದು ವಾರದ ಹಿಂದೆ 40ಕ್ಕೂ ಹೆಚ್ಚು ಸಾಮಾಜಿಕ ಕಾರ್ಯಕರ್ತರು ಮತ್ತು ಹೋರಾಟಗಾರರು ರಾಜ್ಯ ಸರಕಾರಕ್ಕೆ ತುರ್ತು ಪತ್ರ ಬರೆದಿದ್ದರು. ಸಣ್ಣ ಸಂಖ್ಯೆಯ ಬೆಡ್‍ಗಳನ್ನು ಹೆಚ್ಚಿಸಿರುವುದನ್ನು ಬಿಟ್ಟರೆ ಸರಕಾರ ಉಳಿದ ಯಾವ ಕೆಲಸಗಳನ್ನು ಮಾಡಿಲ್ಲ ಮತ್ತು ಕನಿಷ್ಠ ಸ್ಪಂದಿಸಿಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ.

ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಆಕ್ಸಿಜನ್ ಬೆಡ್ ಹೆಚ್ಚಿಸಿ, ಕೂಡಲೇ ಎಲ್ಲರಿಗೂ ಉಚಿತ ಲಸಿಕೆ ನೀಡಬೇಕು. ಬಡ ಕುಟುಂಬಗಳಿಗೆ ಸಮಗ್ರ ಪಡಿತರ ವಿತರಿಸಿ, ಕೆಲಸವಿಲ್ಲದ ಕುಟುಂಬಗಳಿಗೆ ಕೋವಿಡ್ ನೆರವು ಧನ ನೀಡಿ, ಮಡಿದವರ ಕುಟುಂಬಕ್ಕೆ ಪರಿಹಾರ ಕೊಡಿ ಎಂಬುದು ನಮ್ಮ ಹಕ್ಕೊತ್ತಾಯಗಳಾಗಿವೆ ಎಂದು ಜನಾಗ್ರಹ ಆಂದೋಲನದ ವಕ್ತಾರರಾದ ಹೋರಾಟಗಾರ ಕೆ.ಎಲ್.ಅಶೋಕ್ ತಿಳಿಸಿದ್ದಾರೆ.

ಜನರ ಆರೋಗ್ಯ ಹಾಗೂ ಆರ್ಥಿಕ ಸುಧಾರಣೆಯ ದೃಷ್ಟಿಯಿಂದ ಸರಕಾರದ ಮೇಲೆ ಒತ್ತಡ ತರುವ ಭಾಗವಾಗಿ ಇಂದು ರಾಜ್ಯದ ಬಹುತೇಕ ಜಿಲ್ಲಾ, ತಾಲೂಕುಗಳಲ್ಲಿ ಜನರು ತಮ್ಮ ತಮ್ಮ ಮನೆಗಳ ಮುಂದೆಯೇ ಪ್ರತಿಭಟನೆಯನ್ನು ದಾಖಲಿಸಿದ್ದಾರೆ. ಸರಕಾರ ಈಗಲೂ ನಮ್ಮ ಪಂಚ ಹಕ್ಕೊತ್ತಾಯಗಳನ್ನು ಈಡೇರಿಸಲು ಮುಂದಾಗದಿದ್ದರೆ ಗಂಭೀರ ಸ್ವರೂಪದ ಹೋರಾಟಕ್ಕೆ ಮುಂದಾಗುವುದು ಅನಿವಾರ್ಯವಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಹಕ್ಕೊತ್ತಾಯಗಳು

-ಕೂಡಲೇ ಆಕ್ಸಿಜನ್ ಸಮಸ್ಯೆಯನ್ನು ನಿವಾರಿಸಬೇಕು. ಕೊರೋನ ಸೋಂಕು ಸೇರಿದಂತೆ ಇನ್ನಿತರೆ ಖಾಯಿಲೆಗಳಿಂದ ಬಳಲುತ್ತಿರುವವರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ವ್ಯವಸ್ಥೆ ಕಲ್ಪಿಸಬೇಕು.

-ಅಗತ್ಯವಿರುವ ಎಲ್ಲರಿಗೂ ಉಚಿತವಾಗಿ ಕೋವಿಡ್ ಲಸಿಕೆ ನೀಡಬೇಕು.

-ಎಲ್ಲ ಬಡವರಿಗೂ ಅಗತ್ಯ ಆಹಾರ ಸಾಮಗ್ರಿ ವಿತರಿಸಬೇಕು.

-ಶ್ರಮಿಕ ಕುಟುಂಬಗಳಿಗೆ ಕನಿಷ್ಠ 5 ಸಾವಿರ ರೂ. ಆರ್ಥಿಕ ನೆರವನ್ನು ನೀಡಬೇಕು.

-ಕೊರೋನದಿಂದ ಮೃತಪಟ್ಟ ಆರ್ಥಿಕ ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ 5ಲಕ್ಷ ಪರಿಹಾರ ನೀಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News