ಬೆಂಗಳೂರು: ಮೊದಲ ಬಾರಿಗೆ ಶಾಲೆ ತಾತ್ಕಾಲಿಕ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆ

Update: 2021-05-15 16:40 GMT

ಬೆಂಗಳೂರು, ಮೇ 15: ನಗರದಲ್ಲಿ ಇದೇ ಮೊದಲ ಬಾರಿಗೆ ಶಾಲೆಯೊಂದನ್ನು ತಾತ್ಕಾಲಿಕ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ಯಲಹಂಕ ಶಾಸಕರೂ ಆಗಿರುವ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರ ಕರೆಗೆ ಓಗೊಟ್ಟು ಕೆನಡಿಯನ್ ವಸತಿ ಶಾಲೆಯ ಆಡಳಿತ ಮಂಡಳಿ 120 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಾಣ ಮಾಡಿದೆ.

ಶನಿವಾರ ಈ ಸುಸಜ್ಜಿತ ಆಸ್ಪತ್ರೆಯನ್ನು ಎಸ್.ಆರ್.ವಿಶ್ವನಾಥ್ ಅವರ ಮೂಲಕ ಶಾಲೆಯ ಮುಖ್ಯಸ್ಥ ರಮಣಿ ಶಾಸ್ತ್ರಿ, ಜಿಲ್ಲಾಧಿಕಾರಿ ಮಂಜುನಾಥ್ ಅವರಿಗೆ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಆರ್.ವಿಶ್ವನಾಥ್, ಇಡೀ ಪ್ರಪಂಚವೇ ಸಂಕಷ್ಟದಲ್ಲಿ ಸಿಲುಕಿರುವ ಈ ಸಂದರ್ಭದಲ್ಲಿ ಕೆನಡಿಯನ್ ಶಾಲೆಯ ರೀತಿಯಲ್ಲಿ ಇನ್ನೂ ಹಲವಾರು ಖಾಸಗಿ ಸಂಘ ಸಂಸ್ಥೆಗಳು ಸರಕಾರದೊಂದಿಗೆ ಕೈಜೋಡಿಸಿ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾಗಿಯಾಗಬೇಕೆಂದು ಕರೆ ನೀಡಿದರು.

ಈ ಆಸ್ಪತ್ರೆಯು 60 ಕೊಠಡಿಗಳನ್ನು ಹೊಂದಿದ್ದು, ಪ್ರತಿ ಕೊಠಡಿಯಲ್ಲಿ ಎರಡು ಹಾಸಿಗೆಗಳು ಇದ್ದು, ಪ್ರತಿಯೊಂದಕ್ಕೂ ಆಮ್ಲಜನಕ ಪೂರೈಸುವ ಸಾಧನಗಳನ್ನು ಅಳವಡಿಸಲಾಗಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳಿಂದ ಸಂಕಷ್ಟಕ್ಕೆ ಒಳಗಾಗುವ ಸೋಂಕಿತರಿಗೆ ಇಲ್ಲಿ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತದೆ. ಸಾರ್ವಜನಿಕರು ಇದರ ಉಪಯೋಗ ಪಡೆಯಬೇಕು ಎಂದು ಅವರು ಕರೆ ನೀಡಿದರು.

ಶಾಲೆಯ ಮುಖ್ಯಸ್ಥ ರಮಣಿ ಶಾಸ್ತ್ರಿ ಮಾತನಾಡಿ, ಸಾಮಾಜಿಕ ಕಳಕಳಿಯ ಉದ್ದೇಶದಿಂದ ನಾವು ನಮ್ಮ ಶಾಲೆಯನ್ನು ತಾತ್ಕಾಲಿಕ ಆಸ್ಪತ್ರೆಯನ್ನಾಗಿ ಕೇವಲ 15 ದಿನಗಳಲ್ಲಿ ಪರಿವರ್ತಿಸಿದ್ದೇವೆ. ಇಲ್ಲಿ ಸೈಟ್ ಕೇರ್ ಆಸ್ಪತ್ರೆಯ ವೈದ್ಯರು, ದಾದಿಯರು ದಿನದ 24 ಗಂಟೆಯೂ ಸೋಂಕಿತರಿಗೆ ಚಿಕಿತ್ಸೆ ನೀಡಿ ಆರೈಕೆ ಮಾಡಲಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News