ಕೋವಿಡ್ ವಿಚಾರದಲ್ಲಿ ತಾರತಮ್ಯ ಎಸಗಿದರೆ ಸಿಎಂ ಮನೆ ಮುಂದೆ ಧರಣಿ: ಶಾಸಕ ಆರ್.ಮಂಜುನಾಥ್ ಎಚ್ಚರಿಕೆ

Update: 2021-05-16 17:15 GMT

ಬೆಂಗಳೂರು, ಮೇ 16: ಕೊರೋನ ಸೋಂಕು ಬಂದು ಅಪಾರ ಸಾವು ನೋವುಗಳು ಸಂಭವಿಸುತ್ತಿವೆ. ಇಂತಹ ಸಂದರ್ಭದಲ್ಲೂ ರಾಜ್ಯ ಸರಕಾರ, ಬಿಜೆಪಿ ಶಾಸಕರ ಕ್ಷೇತ್ರಕ್ಕೊಂದು ರೀತಿ, ಇತರೆ ಪಕ್ಷಗಳ ಶಾಸಕರ ಕ್ಷೇತ್ರಗಳಿಗೊಂದು ರೀತಿಯಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಇದು ಹೀಗೇ ಮುಂದುವರಿದರೆ ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ಕೂರುತ್ತೇನೆ ಎಂದು ದಾಸರಹಳ್ಳಿ ಕಾಂಗ್ರೆಸ್ ಶಾಸಕ ಆರ್.ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿ ದಿನಕ್ಕೆ 3 ರಿಂದ 4 ಸಾವಿರ ಜನರಿಗೆ ಕೋವಿಡ್ ಲಸಿಕೆ ಹಾಕಲಾಗುತ್ತಿದೆ. ಅದೇ ದಾಸರಹಳ್ಳಿ ಕ್ಷೇತ್ರದಲ್ಲಿ ಕೇವಲ 700 ರಿಂದ 800 ಜನರಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ. ಇದು ಯಾವ ನ್ಯಾಯ, ಇವರೇನು ಮನುಷ್ಯರಾ? ಈ ವಿಷಯದಲ್ಲೂ ರಾಜಕೀಯ ಮಾಡುತ್ತರಲ್ಲಾ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.

ಎರಡು ದಿನದ ಹಿಂದೆ ಗಲಾಟೆ ಮಾಡಿದ್ದಕ್ಕೆ 650 ಲಸಿಕೆ ಹೆಚ್ಚು ಕಳುಹಿಸುತ್ತಿದ್ದಾರೆ. ದೇವರು ವರ ಕೊಟ್ಟರೂ ಪೂಜಾರಿ ಕೊಡುವುದಿಲ್ಲ ಎಂಬಂತೆ, ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ, ಬೇಜವಾಬ್ದಾರಿತನದಿಂದ ನಗರದಲ್ಲಿ ಕೋವಿಡ್ ಹೆಚ್ಚಿದೆ. ಸದ್ಯಕ್ಕೆ ದಾಸರಹಳ್ಳಿ ಕ್ಷೇತ್ರದಲ್ಲಿ  ಸುಮಾರು  3 ಸಾವಿರಕ್ಕೂ ಅಧಿಕ ಕೊರೋನ ಸೋಂಕಿತರು ಮನೆಗಳಲ್ಲಿ ಐಸೋಲೇಷನ್‍ಗೆ ಒಳಗಾಗಿದ್ದಾರೆ. ಯಾವ ಒಬ್ಬ ಸೋಂಕಿತರ ಮನೆಗೂ ಔಷಧಿ ಕಿಟ್ ತಲುಪಿಸಿಲ್ಲ. ಅಧಿಕಾರಿಗಳ ಪ್ರಕಾರ ಹೋಂ ಕ್ವಾರಂಟೈನ್ ಆಗಿರುವ ರೋಗಿಗಳ ಮನೆಗೆ ಔಷಧಿ ತಲುಪಿಲಾಗಿದೆ. ಯಾರಿಗೆ ಕೊಟ್ಟರೋ ಯಾವುದೇ ಮಾಹಿತಿ ಇಲ್ಲ ಎಂದು ಶಾಸಕ ಮಂಜುನಾಥ್ ಹರಿಹಾಯ್ದರು.

ಆರ್‍ಟಿಪಿಸಿಆರ್ ಪರೀಕ್ಷೆ ವರದಿ ಬರೋದು 4 ದಿನ ಆಗುತ್ತದೆ. ಅಷ್ಟರಲ್ಲಿ ಸೋಂಕಿತ ಅರ್ಧ ಸತ್ತು ಹೋಗಿರುತ್ತಾನೆ. ಆರ್‍ಟಿಪಿಸಿಆರ್ ರಿಪೋರ್ಟ್ ಒಂದೇ ದಿನದಲ್ಲಿ ಸಿಗುವಂತಾಗಬೇಕು. ಇಲ್ಲದಿದ್ದರೆ ರ್‍ಯಾಪಿಡ್ ಪರೀಕ್ಷೆ ಆರಂಭ ಮಾಡಬೇಕು. ರ್‍ಯಾಪಿಡ್ ಟೆಸ್ಟ್ ನಿಲ್ಲಿಸಿದ ಮೇಲೆ ನಗರದಲ್ಲಿ ಸೋಂಕು ಹೆಚ್ಚಳವಾಯಿತು ಎಂದು ಹೇಳಿದರು.

ಬಿಜೆಪಿ ಶಾಸಕರ ಕ್ಷೇತ್ರಗಳಿಗೆ 20 ಸಾವಿರ ಫುಡ್ ಕಿಟ್ ಕೊಡುತ್ತಾರೆ, ನಮ್ಮ ಕ್ಷೇತ್ರಕ್ಕೆ 650 ಕಿಟ್ ಕೊಡುತ್ತಾರೆ. ಅದೂ ಸಚಿವ ಎಸ್.ಟಿ.ಸೋಮಶೇಖರ್ ಕೊಡಿಸಿದ್ದು. ಇಂತಹ ಕೆಟ್ಟ ರಾಜಕಾರಣ ಮಾಡುತ್ತಿದ್ದಾರೆ. ಆಹಾರ ಕಿಟ್‍ಗಳಲ್ಲಿ ಕೇವಲ ಅಕ್ಕಿ ಕೊಡಲಾಗುತ್ತಿದೆ. ಮನುಷತ್ವವೇ ಇಲ್ಲದ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಶಾಸಕರು ಆರೋಪಿಸಿದರು.

ದಾಸರಹಳ್ಳಿ ಬಿಬಿಎಂಪಿ ಕೋವಿಡ್ ಕೇರ್ ಸೆಂಟರ್‍ಗೆ ಐಸಿಯು ಬೆಡ್ ಸೌಲಭ್ಯ ಒದಗಿಸಿ ಎಂದು ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನ ಆಗಿಲ್ಲ. ಆರೋಗ್ಯ ಸಚಿವ ಸುಧಾಕರ್ ಫೋನ್ ತೆಗೆಯುವುದೇ ಇಲ್ಲ ಎಂದು ಮಂಜುನಾಥ್ ನೇರವಾಗಿ ಆರೋಪ ಮಾಡಿದರು.

ಕೋವಿಡ್ ವಾರ್ ರೂಂಗೆ ಫೋನ್ ಮಾಡಿದರೆ ಯಾರೂ ಯಾರಿಗೂ ಸ್ಪಂದಿಸುವುದಿಲ್ಲ. ಸಭೆಗಳ ಮೇಲೆ ಸಭೆ ಮಾಡುತ್ತಾರೆ. ಆದರೆ ಕಾರ್ಯಗತದಲ್ಲಿ ಶೂನ್ಯ. ಅಧಿಕಾರಿಗಳಿಂದಲೇ ವ್ಯವಸ್ಥೆ ಹದಗೆಟ್ಟಿರುವುದು ಎಂದು ಅವರು ಕಿಡಿಕಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News