ಜಲಮಾಲಿನ್ಯದ ಭೀತಿಯನ್ನು ಸೃಷ್ಟಿಸಿರುವ ಗಂಗಾನದಿಯಲ್ಲಿ ತೇಲುತ್ತಿರುವ ಶಂಕಿತ ಕೋವಿಡ್-19 ರೋಗಿಗಳ ಶವಗಳು

Update: 2021-05-17 14:20 GMT

 ಹೊಸದಿಲ್ಲಿ,ಮೇ 17: ಉತ್ತರ ಭಾರತದಲ್ಲಿ ಗಂಗಾ ನದಿಯಲ್ಲಿ ತೇಲುತ್ತಿರುವ ಶಂಕಿತ ಕೋವಿಡ್-19 ರೋಗಿಗಳ ಶವಗಳು ಜಲಮಾಲಿನ್ಯದ ಭೀತಿಯನ್ನು ಸೃಷ್ಟಿಸಿವೆ,ಆದರೆ ನದಿಯ ನೀರಿಗಿಂತ ಕೋವಿಡ್ ರೋಗಿಯ ನಿಕಟ ಸಂಪರ್ಕದಿಂದ ಸಾಂಕ್ರಾಮಿಕವು ಹರಡುವ ಸಾಧ್ಯತೆಯೇ ಹೆಚ್ಚು ಎನ್ನುತ್ತಾರೆ ವೈದ್ಯಕೀಯ ತಜ್ಞರು.

 
ಕೋವಿಡ್-19 ರೋಗಿಗಳ ಶವಗಳನ್ನು ನದಿಗಳಲ್ಲಿ ಎಸೆಯುವುದರಿಂದ ನೀರಿನಲ್ಲಿ ವೈರಸ್ ಕಣಗಳು ಬಿಡುಗಡೆಗೊಳ್ಳುತ್ತವೆಯಾದರೂ ನೀರು ಅಥವಾ ಆಹಾರದಿಂದ ಸಾಂಕ್ರಾಮಿಕವು ಹರಡುತ್ತದೆ ಎನ್ನುವುದಕ್ಕೆ ಯಾವುದೇ ಪುರಾವೆಯಿಲ್ಲ ಎನ್ನುವುದು ವಿಜ್ಞಾನಿಗಳ ಅಭಿಮತವಾಗಿದೆ.

ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ಕಳೆದ ವಾರ ಸ್ಥಳೀಯ ಅಧಿಕಾರಿಗಳು ನದಿಯಲ್ಲಿ ತೇಲುತ್ತಿದ್ದ ಶಂಕಿತ ಕೋವಿಡ್ ರೋಗಿಗಳ ನೂರಾರು ಶವಗಳನ್ನು ಹೊರಕ್ಕೆ ತೆಗೆದಿದ್ದಾರೆ. ಈ ರಾಜ್ಯಗಳಿಂದ ಗಂಗಾನದಿಯು ಪಶ್ಚಿಮ ಬಂಗಾಳಕ್ಕೆ ಸಾಗುತ್ತದೆ ಮತ್ತು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ನದಿಯಲ್ಲಿ ಶವಗಳು ತೇಲುತ್ತಿರುವ ಚಿತ್ರಗಳಿಂದಾಗಿ ಅಲ್ಲಿ ಮೀನಿಗೆ ಬೇಡಿಕೆ ಕುಸಿದಿದೆ. ಆದರೆ ಇದಕ್ಕೆ ಸೋಂಕಿನ ಭೀತಿಗಿಂತ ಹೆಚ್ಚಾಗಿ ಮೀನುಗಳು ಶವಗಳನ್ನು ತಿಂದಿರಬಹುದು ಎಂಬ ಅಸಹ್ಯವು ಕಾರಣವಾಗಿರುವ ಸಾಧ್ಯತೆಯಿದೆ ಎಂದು ವೈದ್ಯರೋರ್ವರು ಹೇಳಿದರು.

ವೈರಸ್ಗಳು ಅಭಿವೃದ್ಧಿಗೊಳ್ಳಲು ಜೀವಂತ ಕೋಶಗಳು ಅಗತ್ಯವಾಗಿವೆ ಮತ್ತು ಅವು ಮೃತದೇಹದಲ್ಲಿ ಅಭಿವೃದ್ಧಿಗೊಳ್ಳುವುದಿಲ್ಲ,ಆದರೆ ವಿಜ್ಞಾನಿಗಳು ಹೇಳುವಂತೆ ಮೃತ ಅಂಗಾಂಶಗಳಲ್ಲಿಯ ವೈರಸ್ಗಳು ಕೆಲವು ಸಮಯ ಸೋಂಕನ್ನು ಹರಡುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಹೀಗಾಗಿ ಕೋವಿಡ್-19 ರೋಗಿಗಳ ಶವಗಳು ಸೋಂಕಿನ ಸಂಭಾವ್ಯ ಮೂಲಗಳಾಗಿರುತ್ತವೆ ಮತ್ತು ಶವವನ್ನು ದಫನ ಮಾಡುವಾಗ ಅಥವಾ ಚಿತೆಯಲ್ಲಿ ಸುಡುವಾಗಿ ವಿಶೇಷ ಎಚ್ಚರಿಕೆಗಳು ಅಗತ್ಯವಾಗುತ್ತವೆ.

ನದಿಗಳಲ್ಲಿಯ ಶವಗಳು ಬ್ಯಾಕ್ಟೀರಿಯಾ ರೋಗಗಳಂತಹ ಹಲವಾರು ಸೋಂಕುಗಳನ್ನು ಸುಲಭವಾಗಿ ಹರಡುತ್ತವೆಯಾದರೂ ನೀರಿನಿಂದ ಕೋವಿಡ್ ಸೋಂಕು ಹರಡುವ ಸಾಧ್ಯತೆಯು ಕನಿಷ್ಠ ವಾಗಿದೆ ಎನ್ನುತ್ತಾರೆ ವಿಜ್ಞಾನಿಗಳು.

ಕೋವಿಡ್-19 ರೋಗಿಯಾಗಿರಲಿ ಅಥವಾ ಅಲ್ಲದಿರಲಿ, ನದಿಗಳಲ್ಲಿ ತೇಲುವ ಯಾವುದೇ ಮಾನವ ಅಥವಾ ಪ್ರಾಣಿಗಳ ಶವಗಳು ಸೋಂಕನ್ನು ಹರಡುವ ಸಂಭಾವ್ಯತೆಯಿರುತ್ತದೆ ಎಂದು ಹೇಳಿದ ಕಲಕತ್ತಾ ಸ್ಕೂಲ್ ಆಫ್ ಟ್ರಾಪಿಕಲ್ ಮೆಡಿಸಿನ್ನ ಮಾಜಿ ಫಾರ್ಮಕಾಲಜಿ ಪ್ರೊಫೆಸರ್ ಶಂತನು ತ್ರಿಪಾಠಿ,ಆದರೆ ಇಂತಹ ಘಟನೆ ನಡೆಯಬಾರದು. ಯಾವುದೇ ನಾಗರಿಕ ದೇಶದಲ್ಲಿ ನದಿಗಳಲ್ಲಿ ಶವಗಳು ತೇಲುತ್ತಿರಬಾರದು ಎಂದರು.

ನದಿಯಲ್ಲಿ ತೇಲುತ್ತಿರುವ ಶವವು ಕೋವಿಡ್-19 ಸೋಂಕನ್ನು ಹರಡುವ ಯಾವುದೇ ಅಪಾಯವು ಶರೀರದಲ್ಲಿಯ ವೈರಸ್ಗಳ ಪ್ರಮಾಣ,ಮೃತ ಅಂಗಾಂಶಗಳಲ್ಲಿ ಅದು ಬದುಕಿರಬಹುದಾದ ಸಮಯ,ನೀರಿನಲ್ಲಿ ಬದುಕುಳಿಯುವ ವೈರಸ್ನ ಸಾಮರ್ಥ್ಯ ಹಾಗೂ ಸ್ಥಳದಲ್ಲಿ ಪ್ರಮಾಣಾತ್ಮಕ ನೀರಿನ ಹರಿವು ಇತ್ಯಾದಿ ಅಂಶಗಳನ್ನು ಅವಲಂಬಿಸಿರುತ್ತದೆ ಎಂದು ತ್ರಿಪಾಠಿ ತಿಳಿಸಿದರು.

ಮೃತ ಅಂಗಾಂಶಗಳಲ್ಲಿ ಎಚ್1ಎನ್1 ಇನ್ಫ್ಲುಯೆಂಜಾ ವೈರಸ್ (ಉಸಿರಾಟ ಸಮಸ್ಯೆಯನ್ನುಂಟು ಮಾಡುವ ಇನ್ನೊಂದು ವೈರಸ್)ನ ಕಾರ್ಯಸಾಧ್ಯತೆಯು ತಾಪಮಾನ ಮತ್ತು ಅಂಗಾಂಶದ ವಿಧವನ್ನು ಅವಲಂಬಿಸಿರುತ್ತದೆ ಎನ್ನುವುದನ್ನು ನಾಲ್ಕು ವರ್ಷಗಳ ಹಿಂದೆ ಜಪಾನಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅನಿಮಲ್ ಹೆಲ್ತ್ ನ ವಿಜ್ಞಾನಿಗಳು ಕಂಡುಹಿಡಿದಿದ್ದರು. ವೈರಸ್ 20 ಡಿ.ಸೆಂ. ತಾಪಮಾನದಲ್ಲಿ ಯಕೃತ್ತಿನಲ್ಲಿ ಮೂರು ದಿನ,ಸ್ನಾಯುಗಳಲ್ಲಿ 20 ದಿನ ಮತ್ತು ಗರಿಗಳಲ್ಲಿಯ ಅಂಗಾಂಶಗಳಲ್ಲಿ 30 ದಿನಗಳ ಕಾಲ ಬದುಕಿದ್ದವು,ಆದರೆ 4 ಡಿ.ಸೆಂ(ಫ್ರಿಝ್ನ ಒಳಗಿನ ತಾಪಮಾನ) ಉಷ್ಣತೆಯಲ್ಲಿ ಈ ವೈರಸ್ಗಳು ಅನುಕ್ರಮವಾಗಿ 20,160 ಮತ್ತು 240 ದಿನಗಳ ಕಾಲ ಬದುಕಿದ್ದವು.

ಕೊರೋನವೈರಸ್ ಮೃತದೇಹಗಳಲ್ಲಿ ಅಥವಾ ನೀರಿನಲ್ಲಿ ಎಷ್ಟು ಸಮಯ ಬದುಕಿರುತ್ತದೆ ಎನ್ನುವುದನ್ನು ತಿಳಿಯಲು ನಮ್ಮ ಬಳಿ ಇಂತಹ ದತ್ತಾಂಶಗಳಿಲ್ಲ ಎಂದು ತ್ರಿಪಾಠಿ ಹೇಳಿದರು. ದೇಶಾದ್ಯಂತ ಈಗಿನ ಬೇಸಿಗೆ ದಿನಗಳಲ್ಲಿ ವೈರಸ್ಗಳು ಕೆಲವೇ ಗಂಟೆಗಳಲ್ಲಿ ಅಥವಾ ದಿನಗಳಲ್ಲಿ ತಮ್ಮ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ ಎಂದು ನಿರೀಕ್ಷಿಸಲಾಗಿದೆ ಎಂದರು.

ಕೋವಿಡ್-19 ರೋಗಿಯು ಸೀನಿದಾಗ ಅಥವಾ ಕೆಮ್ಮಿದಾಗ ಹೊರಸೂಸುವ ತುಂತುರು ಹನಿಗಳು ಮತ್ತು ನಿಕಟ ಸಂಪರ್ಕ ಸಾಂಕ್ರಾಮಿಕವು ಹರಡಲು ಮುಖ್ಯ ಮಾರ್ಗಗಳಾಗಿದ್ದರೆ,ಈ ವೈರಸ್ ಕರುಳಿನಲ್ಲಿಯೂ ಸೋಂಕನ್ನುಂಟು ಮಾಡುತ್ತದೆ ಎನ್ನುವುದಕ್ಕೆ ಹಲವಾರು ಅಧ್ಯಯನಗಳು ಬಲವಾದ ಪುರಾವೆಗಳನ್ನು ಒದಗಿಸಿವೆ. ಆದರೆ ಕರುಳಿನ ಸೋಂಕುಗಳು ವೈರಸ್ ಆಹಾರ ಅಥವಾ ನೀರಿನಿಂದ ಹರಡುತ್ತದೆ ಎನ್ನುವುದನ್ನು ಸೂಚಿಸುವುದಿಲ್ಲ ಎನ್ನುತ್ತಾರೆ ವಿಜ್ಞಾನಿಗಳು.

ರೋಗಿಗಳ ಮಲದಲ್ಲಿ ಮತ್ತು ಜೀರ್ಣಾಂಗವ್ಯೂಹದಲ್ಲಿ ವೈರಸ್ಗಳಿರುವುದು ಹಲವಾರು ಸಂಶೋಧನೆಗಳಲ್ಲಿ ಕಂಡು ಬಂದಿವೆ ಎಂದು ಹೇಳಿರುವ ಯೇಲ್ ಸ್ಕೂಲ್ ಆಫ್ ಮೆಡಿಸಿನ್ನ ಪ್ರೊ.ರಿಚರ್ಡ್ ಫ್ಲಾವೆಲ್,ಆದರೆ ಈ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಯಬೇಕಿವೆ ಎಂದಿದ್ದಾರೆ.

ಕೃಪೆ: Telegraphindia

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News