ನ್ಯಾಯಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಮಾತುಗಳು!

Update: 2021-05-17 19:30 GMT

ಸ್ವತಂತ್ರ ಭಾರತವಾದ ನಮ್ಮ ದೇಶದಲ್ಲಿ ಕೆಲ ವರ್ಷಗಳಿಂದ ಈ ನೆಲದ ಸಂವಿಧಾನ ಮತ್ತು ಕಾನೂನಿನ ಮೇಲೆ ಮತ್ತೆ ಮತ್ತೆ ಹಲ್ಲೆಗಳು ನಡೆಯುತ್ತಲೇ ಇವೆ. ಇದು ನಮ್ಮನ್ನಾಳುವ ಸರಕಾರಗಳು ಸೃಷ್ಟಿಸಿದ ಚಲನಶೀಲತೆಯೋ ಅಥವಾ ನಮ್ಮ ನಡುವೆ ಪ್ರಜಾಪ್ರಭುತ್ವ ವಿರೋಧಿಗಳು ಶ್ರೇಣೀಕೃತ ಜಾತಿ-ಧರ್ಮಗಳ ವೈಷಮ್ಯವನ್ನು ಗಟ್ಟಿಗೊಳಿಸುವ ಹುನ್ನಾರಗಳೋ!

ಏನೇ ಆಗಲಿ, ದೇಶದಲ್ಲಿ ಪ್ರಜೆಗಳ ಮೇಲೆ ಎರಗುವ ಭೀಕರತೆ, ತಾರತಮ್ಯ ಮತ್ತು ಅಸಮಾನತೆಗಳನ್ನು ಸರಿಪಡಿಸುವಲ್ಲಿ ನಮ್ಮನ್ನಾಳುವ ಸರಕಾರಗಳು ಕ್ರಮಕೈಗೊಂಡು ಅದನ್ನು ನಿಯಂತ್ರಣದಲ್ಲಿ ಇಡಬೇಕಾಗಿತ್ತು. ಸಂವಿಧಾನ ಭಾರತವನ್ನು ‘ಧರ್ಮನಿರಪೇಕ್ಷ ಮತ್ತು ಜಾತ್ಯತೀತ ರಾಷ್ಟ್ರ’ವೆಂದು ಹೇಳಿದೆ. ಅಂದರೆ ಧರ್ಮದಿಂದ ರಾಜಕಾರಣ ಬಹುದೂರದಲ್ಲಿ ಇರಬೇಕು ಎಂದು ಪ್ರತಿಪಾದಿಸಿದೆ. ಆದರೆ, ನಮ್ನನ್ನಾಳುವ ಸರಕಾರಗಳು ಧರ್ಮ ರಾಜಕಾರಣದಿಂದ ಹೊರತಲ್ಲವೆಂದು ಸಾಧಿಸುತ್ತಿವೆ. ಹಾಗೆಯೇ, ಬೇಲಿಯೇ ಎದ್ದು ಹೊಲ ಮೇಯ್ದ ಹಾಗೆ ಸರಕಾರದ ಪ್ರತಿನಿಧಿಗಳೇ ನಮ್ಮ ದೇಶದ ಪವಿತ್ರ ಸಂವಿಧಾನ ಮತ್ತು ಕಾನೂನುಗಳ ಬಗ್ಗೆ ತುಚ್ಛ ಭಾವನೆ ತಾಳುತ್ತಾರೆ ಮತ್ತು ಸಂವಿಧಾನ ಬದಲಾವಣೆಯಂತಹ ಮಾತುಗಳನ್ನು ಹೇಳುತ್ತಿದ್ದಾರೆ.

ಹಾಗೆ ನೋಡಿದರೆ, ಈಗಿನ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದ ದಿನಗಳಿಂದಲೇ ಸಂವಿಧಾನ ಮತ್ತು ಹಿಂದಿದ್ದ ಕಾನೂನುಗಳ ಮೇಲೆ ಒಂದಲ್ಲ ಒಂದು ರೀತಿಯ ದಾಳಿಗಳು ನಡೆಯುತ್ತಲೇ ಇವೆ. ಮೊದಲು ಸಂಸದರಾದ ಅನಂತ್‌ಕುಮಾರ್ ಹೆಗಡೆಯವರ ಸಂವಿಧಾನ ಬದಲಾವಣೆಯ ಮಾತುಗಳು, ನಂತರದಲ್ಲಿ 12/08/2018ರಂದು ದಿಲ್ಲಿಯ ಜಂತರ್‌ಮಂತರ್ ಬಳಿ ಸಂವಿಧಾನದ ಪ್ರತಿ ಸುಟ್ಟ ಘಟನೆ, ಒಕ್ಕೂಟ ವ್ಯವಸ್ಥೆಗೆ ಕೊಡಲಿ ಪೆಟ್ಟು ಕೊಡುವಂತಹ ಜಿಎಸ್‌ಟಿ ಸಂಬಂಧ ಕೇಂದ್ರ ಮತ್ತು ರಾಜ್ಯಗಳ ನಡುವೆ ಪಾಲುದಾರಿಕೆ ಹಂಚುವಲ್ಲಿ ತಾರತಮ್ಯ, ವಾಕ್ ಸ್ವಾತಂತ್ರ್ಯವನ್ನು ಹರಣ ಮಾಡುವ ನಿಟ್ಟಿನಲ್ಲಿ ಸರಕಾರವು ಅದರ ನಿಲುವನ್ನು ಪ್ರಶ್ನಿಸುವವರನ್ನು ದೇಶದ್ರೋಹ ಮತ್ತು ಇನ್ನಿತರ ಪ್ರಕರಣದಲ್ಲಿ ಪೊಲೀಸರನ್ನು ಬಳಿಸಿಕೊಂಡು ಬಂಧಿಸುವುದು, ತನ್ನ ರಾಜಕೀಯದ ಅಶ್ವಮೇಧ ಕುದುರೆಯನ್ನು ತಡೆಯುವವರನ್ನು ಈ.ಡಿ., ಆದಾಯ ತೆರಿಗೆ ಇಲಾಖೆಗಳನ್ನು ಬಳಸಿ ಕಟ್ಟಿ ಹಾಕುವುದು. ಹೀಗೆ, ಸರಕಾರದ ಅಡಿಯಲ್ಲಿ ಇರುವ ಎಲ್ಲಾ ಇಲಾಖೆಗಳನ್ನು ತನ್ನ ಹತೋಟಿಗೆ ತೆಗೆದುಕೊಂಡು ಒಂದು ರೀತಿಯ ಆಡಳಿತದ ಸರ್ವಾಧಿಕಾರತನದತ್ತ ಸರಕಾರ ನಡೆಯುತ್ತಿದೆಯೇನೋ ಎಂದು ಭಾಸವಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಸಂವಿಧಾನ ಅಡಿಯಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗಕ್ಕೆ ತನ್ನದೇ ಆದ ವಿವೇಚನೆಯನ್ನು ಸಂವಿಧಾನ ಕಲ್ಪಿಸಿದೆ. ಆ ವಿವೇಚನೆಗಳು ಪ್ರಜೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದಾಗ ಅಥವಾ ವಿಫಲವಾದಾಗ ನ್ಯಾಯಾಂಗವು 'JUDICIAL ACTIVISM' ‘ನ್ಯಾಯಾಂಗ ಕ್ರಿಯಾಶೀಲತೆ’ಯನ್ನು ತನ್ನ ಪರಮಾಧಿಕಾರವನ್ನು ಬಳಸಿ ಚಲಾಯಿಸಬಹುದು, ಈ ನ್ಯಾಯಾಂಗ ಕ್ರಿಯಾಶೀಲತೆ ಎಂದರೆ ಒಂದು ದೇಶದಲ್ಲಿ ನಾಗರಿಕರ ಹಕ್ಕುಗಳನ್ನು ಎತ್ತಿಹಿಡಿಯುವಲ್ಲಿ ಮತ್ತು ಉತ್ತೇಜಿಸುವಲ್ಲಿ ನ್ಯಾಯಾಂಗವು ಪ್ರಮುಖ ಪಾತ್ರ ವಹಿಸುವುದು. ಈ ನ್ಯಾಯಾಂಗ ಕ್ರಿಯಾಶೀಲತೆಯು 1947ರಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಹುಟ್ಟಿಕೊಂಡಂತಹ ಒಂದು ಪರಿಕಲ್ಪನೆ.ಇದು ತುರ್ತು ಪರಿಸ್ಥಿತಿಯ ದಿನಗಳಲ್ಲಿ ಭಾರತದಲ್ಲೂ ಸಹ ಕಂಡುಬಂದಿತ್ತು.

ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ವಿಫಲವಾದಾಗ ನಾಗರಿಕರ ಹಕ್ಕುಗಳನ್ನು ಎತ್ತಿಹಿಡಿಯಲು ಮತ್ತು ಸಾಂವಿಧಾನಿಕ ತತ್ವಗಳನ್ನು ಅನುಷ್ಠಾನಗೊಳಿಸಲು ಇದು ಪರಿಣಾಮಕಾರಿಯಾಗಿದೆ. ಇತರ ಎಲ್ಲಾ ಬಾಗಿಲುಗಳು ಮುಚ್ಚಿದಾಗ ನಾಗರಿಕರು ತಮ್ಮ ಹಕ್ಕುಗಳನ್ನು ರಕ್ಷಿಸುವ ಕೊನೆಯ ಭರವಸೆಯಾಗಿ ನ್ಯಾಯಾಂಗದ ಕದ ತೆರೆದಿರುತ್ತದೆ. ಏಕೆಂದರೆ, ಭಾರತೀಯ ನ್ಯಾಯಾಂಗವನ್ನು ಭಾರತೀಯ ಸಂವಿಧಾನ ರಕ್ಷಕ ಎಂದು ಪರಿಗಣಿಸಲಾಗಿದೆ. ಸಂವಿಧಾನದ ವಿಧಿ 32 (ಈ ವಿಧಿಯನ್ನು ಡಾ. ಬಿ.ಆರ್. ಅಂಬೇಡ್ಕರ್‌ರವರು ಸಂವಿಧಾನದ ಹೃದಯ ಮತ್ತು ಆತ್ಮ ಎಂದು ಕರೆದಿದ್ದಾರೆ) ಮತ್ತು 226ಗಳೊಂದಿಗೆ ನ್ಯಾಯಾಂಗಕ್ಕೆ ಶಾಸಕಾಂಗ ಮತ್ತು ಕಾರ್ಯಾಂಗದ ಯಾವುದೇ ಆಡಳಿತಾತ್ಮಕ ಕಾರ್ಯವು ಸಂವಿಧಾನಕ್ಕೆ ವಿರುದ್ಧವಾದರೆ ಅದನ್ನು ಪರಿಶೀಲಿಸಿ ಅನೂರ್ಜಿತಗೊಳಿಸಲು ಅಧಿಕಾರವಿರುತ್ತದೆ. ಹಾಗೆಯೇ, ಸಾರ್ವಜನಿಕ ಹಿತಾಸಕ್ತಿಯಿಂದಾಗಿ ನ್ಯಾಯಾಂಗ ಪ್ರಕ್ರಿಯೆಯು ಕ್ರಿಯಾಶೀಲವಾಗಿ ಪ್ರಜಾಪ್ರಭುತ್ವದಲ್ಲಿ ಜನರ ಪರವಾಗಿ ನಿಂತಿರುವುದನ್ನು ನಾವು ನೋಡಿದ್ದೇವೆ.

ಉದಾಹರಣೆಗೆ, ಐತಿಹಾಸಿಕ ಕೇಶವಾನಂದ ಪ್ರಕರಣದಲ್ಲಿ ಸಂವಿಧಾನದ ಯಾವುದೇ ಭಾಗವನ್ನು ತಿದ್ದುಪಡಿ ಮಾಡುವಾಗ ಅದರ ಮೂಲತತ್ವಕ್ಕೆ ಧಕ್ಕೆಯಾಗದಂತೆ ತಿದ್ದುಪಡಿ ಮಾಡಬಹುದು ಎಂಬ ತೀರ್ಪು ನೀಡಿದೆ. ಇನ್ನೊಂದೆಡೆ, 2ಜಿ ಹಗರಣದಲ್ಲಿ ಹಂಚಿಕೆಯ ಪ್ರಕ್ರಿಯೆಯಲ್ಲಿ ದೋಷವಿದೆ ಎಂಬ ಕಾರಣಕ್ಕೆ ಸುಪ್ರೀಂಕೋರ್ಟ್ 8 ಟೆಲಿಕಾಂ ಕಂಪೆನಿಗಳಿಗೆ ಹಂಚಿಕೆ ಮಾಡಿದ 122 ಟೆಲಿಕಾಂ ಪರವಾನಿಗೆ ಮತ್ತು ಸ್ಪೆಕ್ಟ್ರಮ್‌ಗಳನ್ನು ರದ್ದುಗೊಳಿಸಿತು. ಇಂತಹ ಇನ್ನು ಹಲವು ಪ್ರಕರಣಗಳಲ್ಲಿ ನ್ಯಾಯಾಂಗವು ತನ್ನ ಕ್ರಿಯಾಶೀಲತೆಯಿಂದ ಸಾರ್ವಜನಿಕ ಪರವಾದ ತೀರ್ಪುಗಳನ್ನು ನೀಡಿದೆ. ಇತ್ತೀಚೆಗೆ ಎದುರಾಗಿರುವ ಕೊರೋನದ ಭೀಕರತೆಯ ನಿಯಂತ್ರಣದ ನಿಟ್ಟಿನಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ಪ್ರಜೆಗಳ ರಕ್ಷಣೆಯಲ್ಲಿ ಎಡವುತ್ತಿರುವುದನ್ನು ನೋಡಿಯೂ ಸಹ ನ್ಯಾಯಾಂಗ ಕಣ್ಣು ಮುಚ್ಚಿ ಕುಳಿತರೆ, ಜನರ ರಕ್ಷಣೆಗೆ ಇನ್ಯಾರು ಬರಬೇಕು?. ಈ ಭೀಕರತೆಯಲ್ಲಿ ನ್ಯಾಯಾಂಗ ತನ್ನ ಅಧಿಕಾರ ವ್ಯಾಪ್ತಿಯನ್ನು ಬಳಸಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಪ್ರಜೆಗಳ ಪರವಾದ ಹಲವು ರೀತಿಯ ನಿರ್ದೇಶನಗಳನ್ನು ನೀಡುತ್ತಿದೆ. ಆದರೆ, ಒಂದು ಕಡೆ ಎದುರಾಗಿರುವ ಈ ಭೀಕರತೆಯನ್ನು ಪರಿಹರಿಸುವ ನಿಟ್ಟಿನಲ್ಲಿ ವಿಫಲವಾಗಿರುವ ಶಾಸಕಾಂಗ ಮತ್ತು ಆಡಳಿತ ರಂಗಕ್ಕೆ, ನ್ಯಾಯಾಂಗ ವ್ಯವಸ್ಥೆಯು ತನ್ನ ಕ್ರಿಯಾಶೀಲತೆಯನ್ನು ಬಳಸಿ ನಿರ್ದೇಶನ ನೀಡಿದಾಗ ಕೇಂದ್ರ ಸರಕಾರದ ಕಣ್ಣು ನ್ಯಾಯಾಂಗದ ಮೇಲೆ ಕೆಂಪಾಗಿದೆ. ಈ ಪರಿಣಾಮವಾಗಿ, ಕೇಂದ್ರ ಸರಕಾರವು ‘‘ಕೋವಿಡ್-19ರ ನಿರ್ವಹಣೆಯ ವಿಚಾರದಲ್ಲಿ ನ್ಯಾಯಾಂಗದ ಮಧ್ಯಪ್ರವೇಶಕ್ಕೆ ಇರುವ ಅವಕಾಶ ಅತ್ಯಲ್ಪ’’ ಎಂದು ಸುಪ್ರೀಂಕೋರ್ಟ್ ಗೆ ಹೇಳಿದೆ.

ಕೋವಿಡ್ ನಿರ್ವಹಣೆಗೆ ಸಂಬಂಧಿಸಿ ಸುಪ್ರೀಂಕೋರ್ಟ್ ಎತ್ತಿದ ಪ್ರಶ್ನೆಗಳಿಗೆ ಉತ್ತರವಾಗಿ ಕೇಂದ್ರ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದೆ. ಕೋವಿಡ್ ನಿರ್ವಹಣೆಗಾಗಿ 12 ಸದಸ್ಯರ ರಾಷ್ಟ್ರೀಯ ಕಾರ್ಯಪಡೆ ರಚಿಸಲು ಸುಪ್ರೀಂಕೋರ್ಟ್‌ನಲ್ಲಿ ಕೇಂದ್ರ ಸರಕಾರ ಒಪ್ಪಿದ ನಂತರ ಎರಡು ದಿನಗಳ ಬಳಿಕ ಪ್ರಮಾಣಪತ್ರ ಸಲ್ಲಿಸಿದೆ. ಕೇಂದ್ರ ಸರಕಾರದ ಈ ನಡೆಯ ಬಳಿಕ ಸರಕಾರದ ಸಚಿವರಾದ ಸದಾನಂದ ಗೌಡರು ‘‘ನಾಳೆಯೇ ಲಸಿಕೆ ಕೊಡಿ ಎಂದು ಹೈಕೋರ್ಟ್ ಹೇಳಿದರೆ ಹೇಗೆ ಸಾಧ್ಯ? ಲಸಿಕೆ ಸಿಗದಿದ್ದರೆ ನಾವು ನೇಣು ಹಾಕಿಕೊಳ್ಳಬೇಕಾ?’’ ಎಂದಿದ್ದಾರೆ. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋದ ಶಾಸಕರು ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿಯವರು ‘‘ನ್ಯಾಯಾಧೀಶರೇನು ಸರ್ವಜ್ಞರೇ?’’ ಎಂದು ಕಿಡಿಕಾರಿದ್ದಾರೆ. ಇವರ ಈ ಹೇಳಿಕೆಗಳನ್ನು ವಿರೋಧ ಪಕ್ಷದವರು ಮತ್ತು ನ್ಯಾಯ ಶಾಸ್ತ್ರಜ್ಞರು ನ್ಯಾಯಾಂಗ ನಿಂದನೆ ಎಂದು ವಿರೋಧ ವ್ಯಕ್ತಪಡಿಸಿದಾಗಲೂ ಕೂಡ ಸಿ. ಟಿ. ರವಿಯವರು ತನ್ನ ಹೇಳಿಕೆಯಲ್ಲಿ ತಪ್ಪಿಲ್ಲ. ವಿಷಾದ ವ್ಯಕ್ತಪಡಿಸುವ ಅಗತ್ಯವೂ ಇಲ್ಲ ಎಂದು ಉದ್ಧಟತನ ಮೆರೆದಿದ್ದಾರೆ. ಈ ರೀತಿಯ ಹೇಳಿಕೆಯು ಬಹುದೊಡ್ಡ ಪ್ರಜಾಪ್ರಭುತ್ವದ ನ್ಯಾಯಾಂಗದ ಮೇಲೆ ಇಟ್ಟಿರುವ ನಂಬಿಕೆ ಮತ್ತು ಗೌರವಕ್ಕೆ ಧಕ್ಕೆ ತರುವಂತಾಗಿದೆ. ಇಂತಹ ಹೇಳಿಕೆಗಳು ನ್ಯಾಯಾಂಗ ನಿಂದನೆಯಾಗಿದ್ದು, ಯಾವುದೇ ವ್ಯಕ್ತಿಯು ನ್ಯಾಯಾಲಯದ ಅಧಿಕಾರ ಮತ್ತು ನ್ಯಾಯ ಹಾಗೂ ಘನತೆಯನ್ನು ವಿರೋಧಿಸುವ ಅಥವಾ ಧಿಕ್ಕರಿಸುವ, ನ್ಯಾಯಾಲಯ ಮತ್ತು ಅದರ ಅಧಿಕಾರಿಗಳಿಗೆ ಅವಿಧೇಯತೆ ಅಥವಾ ಅಗೌರವ ತೋರುವ ಅಪರಾಧವಾಗಿದೆ.

ಈ ಹಿಂದೆ, ಇದೇ ರೀತಿ ಜಸ್ಟಿಸ್ ಸಿ. ಎಸ್. ಕರ್ಣನ್‌ರವರು ನ್ಯಾಯಾಂಗದ ವಿರುದ್ಧ ಅಗೌರವ ತೋರಿಸಿದಾಗ ಅವರನ್ನು ಜೈಲಿಗೆ ಕಳುಹಿಸಲಾಗಿತ್ತು. ಹಾಗೆಯೇ ಇತ್ತೀಚೆಗೆ, ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್‌ರವರಿಗೂ ಸಹ ದಂಡವನ್ನು ವಿಧಿಸಲಾಗಿತ್ತ್ತು. ಈಗ ಸದಾನಂದಗೌಡರು ಮತ್ತು ಸಿ.ಟಿ. ರವಿ ಅವರ ವಿಚಾರದಲ್ಲೂ ನ್ಯಾಯಾಂಗ ಯಾವ ಕ್ರಮಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಏಕೆಂದರೆ, ಇವರ ಈ ಹೇಳಿಕೆಯು ನ್ಯಾಯಾಂಗದ ಮೇಲೆ ಸಾರ್ವಜನಿಕರು ಇಟ್ಟಿರುವ ನಂಬಿಕೆ, ವಿಶ್ವಾಸವು ಎಲ್ಲೋ ಒಂದು ಕಡೆ ಕಳೆಗುಂದಲು ದಾರಿ ಮಾಡಿಕೊಡುತ್ತದೆ ಎಂದರೆ ತಪ್ಪಾಗಲಾರದು. ನಮ್ಮ ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗ ವ್ಯವಸ್ಥೆಯು ಅತ್ಯಂತ ಉನ್ನತ ಮಟ್ಟದಲ್ಲಿ ಇರುವಂತಹದ್ದು ಮತ್ತು ಸ್ವತಂತ್ರವಾದದ್ದು.

ನ್ಯಾಯಾಂಗವು ಜನರ ಸ್ವಾತಂತ್ರ್ಯ, ಮೂಲಭೂತ ಹಕ್ಕು, ಮೂಲಭೂತ ಕರ್ತವ್ಯಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕೊರೋನ ವಿಚಾರದಲ್ಲೂ ನ್ಯಾಯಾಂಗವು ಸರಿಯಾದ ಸೂಚನೆ ಮತ್ತು ನಿರ್ದೇಶನಗಳನ್ನು ನೀಡುತ್ತಿದೆ. ನ್ಯಾಯಾಂಗ, ಸಂವಿಧಾನ ಹಾಗೂ ಕಾನೂನುಗಳು ದುರ್ಬಲ ಅಥವಾ ಧ್ವಂಸಗೊಂಡರೆ ಪ್ರಜಾಪ್ರಭುತ್ವದಲ್ಲಿ ಅರಾಜಕತೆ ಸೃಷ್ಟಿಯಾಗಿ ನಾಗರಿಕರ ಮಧ್ಯೆ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿ ಪ್ರಜಾಪ್ರಭುತ್ವದ ಸ್ತಂಭಗಳು ತನ್ನಷ್ಟಕ್ಕೆ ತಾನೇ ಉರುಳಿ ಹೋಗುವುದಂತೂ ಸತ್ಯ. ಇಂತಹದರ ಬಗ್ಗೆ ದೂರದೃಷ್ಟಿಯನ್ನು ಹೊಂದಿದ್ದ ಸಂವಿಧಾನ ಶಿಲ್ಪಿಡಾ. ಅಂಬೇಡ್ಕರ್‌ರವರು ‘‘ಸಂವಿಧಾನ ಎಷ್ಟೇ ಉತ್ತಮವಾಗಿರಲಿ, ಅದನ್ನು ನಿರ್ವಹಿಸುವವರು ಕೆಟ್ಟವರಾಗಿದ್ದರೆ, ಅದು ಕೆಟ್ಟದಾಗಿ ಬಿಡುವುದು ಖಂಡಿತ’’ ಎಂದು ಹೇಳಿದ್ದಾರೆ. ಇದರ ಪರಿಣಾಮವಾಗಿ ಇಂದು ಪವಿತ್ರವಾದ ನ್ಯಾಯಾಂಗ ಮತ್ತು ನ್ಯಾಯಾಧೀಶರನ್ನು ಸಾರ್ವಜನಿಕವಾಗಿ ಅತೀ ತುಚ್ಛವಾಗಿ ಮಾತನಾಡಿ ಅಗೌರವ ತೋರಿಸಲಾಗುತ್ತಿದೆ. ಸಂವಿಧಾನ ಮತ್ತು ಕಾನೂನನ್ನು ದುರ್ಬಲ ಅಥವಾ ಧ್ವಂಸಕ್ಕೆ ನಾಂದಿ ಹಾಡುವ ಅತ್ಯಂತ ಹೆಚ್ಚಿನ ಪ್ರಯತ್ನ ಇದಾಗಿದೆ.

Writer - ಪುನೀತ್ ಎನ್., ಮೈಸೂರು

contributor

Editor - ಪುನೀತ್ ಎನ್., ಮೈಸೂರು

contributor

Similar News