ಸಮಾಜಕಲ್ಯಾಣ ಕಾರ್ಯಕ್ರಮಗಳು ಸಾರ್ವತ್ರಿಕವಾಗಲಿ

Update: 2021-05-17 19:30 GMT

ಈಗ ಇರುವ ಸಮಾಜ ಕಲ್ಯಾಣ ಯೋಜನೆಗಳು ಸಾಮಾಜಿಕ ಭದ್ರತೆಗಳ ಹಲವು ರೀತಿಯವುಗಳಾಗಿವೆ. ಆದರೆ ಅವುಗಳು ಸರಕಾರದ ಅನೇಕ ವಿಭಾಗಗಳಾಗಿ ಹಾಗೂ ಉಪಯೋಜನೆಗಳಾಗಿ ಹರಿದುಹಂಚಿ ಹೋಗಿವೆ. ಇದರಿಂದಾಗಿ ದತ್ತಾಂಶ ಸಂಗ್ರಹದಿಂದ ಆರಂಭಿಸಿ ಕೊನೆಯ ಹಂತದ ಪೂರೈಕೆಯವರೆಗೆ ಹಲವು ರೀತಿಯ ಸಮಸ್ಯೆಗಳು ಉದ್ಭವಿಸುತ್ತವೆ. ಇದಕ್ಕೆ ಬದಲಾಗಿ ಒಂದು ಸಾರ್ವತ್ರಿಕ (ಯೂನಿವರ್ಸಲ್) ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿದಲ್ಲಿ ಎಲ್ಲಾ ಅರ್ಹ ಫಲಾನುಭವಿಗಳ ದತ್ತಾಂಶಗಳನ್ನು ಒಂದು ಡಾಟಾಬೇಸ್‌ನ ಅಡಿಯಲ್ಲಿ ಕ್ರೋಡೀಕರಿಸುವುದು ಸಾಧ್ಯವಾಗುತ್ತದೆ. ಹೀಗೆ ಮಾಡಿದಾಗ ಹಲವಾರು ಫಲಾನುಭವಿಗಳಿಗೆ ಯೋಜನೆಯ ಲಾಭ ತಪ್ಪಿಹೋಗುವುದನ್ನು ತಡೆಯಬಹುದು.


ಭಾರತ ವಿಶ್ವದಲ್ಲೇ ಅತ್ಯಂತ ದೊಡ್ಡ ಕಲ್ಯಾಣ ರಾಷ್ಟ್ರಗಳಲ್ಲಿ ಒಂದೆಂದು ಬಿಂಬಿತವಾಗಿದೆ. ಆದರೂ ಕೂಡ 2020ರಲ್ಲಿ ಕೋವಿಡ್-19 ನಮ್ಮ ದೇಶಕ್ಕೆ ಅಪ್ಪಳಿಸಿದ ಬಳಿಕ ಸರಕಾರವು ದೇಶದ ಅತ್ಯಂತ ದುರ್ಬಲ ಅಸಹಾಯಕ ನಾಗರಿಕರಿಗೆ ಅವರ ಅವಶ್ಯಕತೆಗಳನ್ನು ಪೂರೈಸಲು ಸಮರ್ಥವಾಗಲಿಲ್ಲ.

ದೇಶವು ಹಲವು ರೀತಿಯ ಬಿಕ್ಕಟ್ಟುಗಳನ್ನು ಎದುರಿಸಿತು: ಬೃಹತ್‌ಸಂಖ್ಯೆಯಲ್ಲಿ ರಾಜ್ಯಗಳ ಒಳಗೆ ಹಾಗೂ ಅಂತರ್‌ರಾಜ್ಯ ವಲಸೆಗಳು, ಆಹಾರ ಅಭದ್ರತೆ ಹಾಗೂ ಕುಸಿದ ಆರೋಗ್ಯ ಮೂಲಚೌಕಟ್ಟು. ಸಾಂಕ್ರಾಮಿಕದಿಂದಾಗಿ ಅಂದಾಜು 75 ಮಿಲಿಯ ಜನ ಬಡತನಕ್ಕೆ ತಳ್ಳಲ್ಪಟ್ಟರು. ಈಗ ಕೊರೋನದ ಎರಡನೇ ಅಲೆ ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದ ನಾಗರಿಕರನ್ನು ಕೂಡಾ ಸುಸ್ತಾಗಿಸಿದೆ.

ದೇಶದಲ್ಲಿ ಈಗ ಐನೂರಕ್ಕೂ ಹೆಚ್ಚು ನೇರ ಫಲ/ಸವಲತ್ತು ವರ್ಗಾವಣೆ ಯೋಜನೆಗಳಿವೆ. ಆದರೂ ಈ ಯೋಜನೆಗಳು ಅಗತ್ಯವುಳ್ಳವರನ್ನು ತಲುಪಿಲ್ಲ. ಆದ್ದರಿಂದ ಸಾರ್ವತ್ರಿಕ ಸಾಮಾಜಿಕ ಭದ್ರತೆ ಒದಗಿಸುವುದು ಇಂದು ಅತ್ಯಂತ ಮುಖ್ಯವಾಗಿದೆ. ಇದರಿಂದಾಗಿ ಜನ ಸಮುದಾಯದ ದುರ್ಬಲ ವರ್ಗಗಳು ಬಾಹ್ಯ ಆಘಾತಗಳ ಹೊಡೆತವನ್ನು ತಡೆದುಕೊಳ್ಳಲು ಸಾಧ್ಯವಾಗುತ್ತದೆ. ಇಂತಹ ಒಂದು ಸಾಮಾಜಿಕ ರಕ್ಷಣಾ ಯೋಜನೆಗೆ ಐರ್‌ಲ್ಯಾಂಡ್‌ನಲ್ಲಿರುವ ಪುವರ್ ಲಾ ಸಿಸ್ಟಮ್ ಒಂದು ಉತ್ತಮ ಉದಾಹರಣೆ. 19ನೇ ಶತಮಾನದಲ್ಲಿ ತೀವ್ರ ಬಡತನ ಹಾಗೂ ಕ್ಷಾಮದಿಂದ ಜನರನ್ನು ಪಾರು ಮಾಡಲು ಸ್ಥಳೀಯ ತೆರಿಗೆಗಳ ಹಣದಿಂದ ಅಲ್ಲಿ ಪುವರ್ ಲಾ ವ್ಯವಸ್ಥೆಯನ್ನು ಕಾರ್ಯಗತಗೊಳಿಸಲಾಯಿತು. ಪರಿಣಾಮವಾಗಿ ಅಲ್ಲಿ ಈಗ ಸಾಮಾಜಿಕ ವಿಮೆ, ಸಾಮಾಜಿಕ ನೆರವು, ಸಾರ್ವತ್ರಿಕ ಯೋಜನೆಗಳ ಸಮಾಜಕಲ್ಯಾಣ ಯಶಸ್ವಿಯಾಗಿದೆ.

ಭಾರತದಲ್ಲಿ ಕೂಡ ಇಂತಹ ಒಂದು ಯೋಜನೆ ಅಸಾಧ್ಯವೇನಲ್ಲ. ಇಲ್ಲಿ ‘ಪಲ್ಸ್ ಪೋಲಿಯೊ’ ಸಾರ್ವತ್ರಿಕ ರೋಗ ನಿರೋಧಕ ಕಾರ್ಯಕ್ರಮ ಯಶಸ್ವಿಯಾಗಿದೆ. 2014ರಲ್ಲಿ ಭಾರತವನ್ನು ಪೋಲಿಯೊ ಮುಕ್ತ ದೇಶವೆಂದು ಘೋಷಿಸಲಾಯಿತು.

ಈಗ ಇರುವ ಸಮಾಜ ಕಲ್ಯಾಣ ಯೋಜನೆಗಳು ಸಾಮಾಜಿಕ ಭದ್ರತೆಗಳ ಹಲವು ರೀತಿಯವುಗಳಾಗಿವೆ. ಆದರೆ ಅವುಗಳು ಸರಕಾರದ ಅನೇಕ ವಿಭಾಗಗಳಾಗಿ ಹಾಗೂ ಉಪಯೋಜನೆಗಳಾಗಿ ಹರಿದುಹಂಚಿ ಹೋಗಿವೆ. ಇದರಿಂದಾಗಿ ದತ್ತಾಂಶ ಸಂಗ್ರಹದಿಂದ ಆರಂಭಿಸಿ ಕೊನೆಯ ಹಂತದ ಪೂರೈಕೆಯವರೆಗೆ ಹಲವು ರೀತಿಯ ಸಮಸ್ಯೆಗಳು ಉದ್ಭವಿಸುತ್ತವೆ. ಇದಕ್ಕೆ ಬದಲಾಗಿ ಒಂದು ಸಾರ್ವತ್ರಿಕ (ಯೂನಿವರ್ಸಲ್) ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿದಲ್ಲಿ ಎಲ್ಲಾ ಅರ್ಹ ಫಲಾನುಭವಿಗಳ ದತ್ತಾಂಶಗಳನ್ನು ಒಂದು ಡಾಟಾಬೇಸ್‌ನ ಅಡಿಯಲ್ಲಿ ಕ್ರೋಡೀಕರಿಸುವುದು ಸಾಧ್ಯವಾಗುತ್ತದೆ. ಹೀಗೆ ಮಾಡಿದಾಗ ಹಲವಾರು ಫಲಾನುಭವಿಗಳಿಗೆ ಯೋಜನೆಯ ಲಾಭ ತಪ್ಪಿಹೋಗುವುದನ್ನು ತಡೆಯಬಹುದು.

ಉದಾಹರಣೆಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ-ಈ ಯೋಜನೆಯನ್ನು ಒಂದು ಸಾರ್ವತ್ರಿಕ ಸಾಮಾಜಿಕ ಭದ್ರತಾ ಯೋಜನೆಯಾಗಿ ಬಲಪಡಿಸಬಹುದು. ಹೀಗಾದಾಗ ಯೋಜನೆಯ ಒಳಗೆ ಸಾರ್ವಜನಿಕ ವಿತರಣಾ ವ್ಯವಸ್ಥೆ, ಗ್ಯಾಸ್ ಸಿಲಿಂಡರ್‌ಗಳ ಪೂರೈಕೆ ಹಾಗೂ ಎಂಜಿಎನ್‌ಆರ್‌ಇಜಿಎಸ್ ದಿನಕೂಲಿ ಯೋಜನೆಗಳನ್ನು ಒಂದೇ ಯೋಜನೆಯಡಿ ಕ್ರೋಡೀಕರಿಸಬಹುದು. ಪ್ರತಿಯೊಂದಕ್ಕೂ ಪ್ರತ್ಯೇಕ ಅರ್ಜಿ ಸಲ್ಲಿಸುವ ಬದಲು ಪಿಡಿಎಸ್ ಯೋಜನೆಯನ್ನು ಒಂದು ಸಾರ್ವತ್ರಿಕ ಗುರುತು ಚೀಟಿಯೊಂದಿಗೆ (ಆಧಾರ್) ಜೋಡಿಸಿದಾಗ ಆಹಾರ ಧಾನ್ಯಗಳ ಅವಶ್ಯಕತೆ ಇರುವ ಯಾರು ಬೇಕಾದರೂ ಈ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗುತ್ತದೆ. ಶಿಕ್ಷಣ, ಹೆರಿಗೆ ಸವಲತ್ತುಗಳು, ವಿಕಲಾಂಗರಿಗೆ ಸಿಗುವ ಸವಲತ್ತುಗಳಂತಹ ಇತರ ಸ್ಕೀಮ್/ಸಮಾಜಕಲ್ಯಾಣ ಸವಲತ್ತುಗಳನ್ನು ಕೂಡ ಸಾರ್ವತ್ರಿಕಗೊಳಿಸುವಲ್ಲಿ ಜನರ ಜೀವನಮಟ್ಟವನ್ನು ಇನ್ನಷ್ಟು ಉತ್ತಮಗೊಳಿಸಬಹುದು.

ಈ ಎಲ್ಲಾ ಪ್ರಸ್ತಾವಗಳಲ್ಲಿ ಯಾವುದನ್ನೇ ಆದರೂ ಕಾರ್ಯಗತಗೊಳಿಸಲು ದತ್ತಾಂಶ ಡಿಜಿಟಲೀಕರಣ, ದತ್ತಾಂಶ ಆಧಾರಿತ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಸರಕಾರದ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಹಯೋಗ ಅನಿವಾರ್ಯ.

ಕೃಪೆ: TheHindu
(ಲೇಖಕರು ಆರ್ಗನೈಜೇಷನ್ ಡೆವಲಪ್‌ಮೆಂಟ್, ಇಂಡಸ್ ಆ್ಯಕ್ಷನ್‌ನಲ್ಲಿ ಸೀನಿಯರ್ ಲೀಡ್ ಆಗಿದ್ದಾರೆ.)

Writer - ಮಾಧುರಿ ಧರಿವಾಲ್

contributor

Editor - ಮಾಧುರಿ ಧರಿವಾಲ್

contributor

Similar News