ಒಂದು ಡೋಸ್ ಕೋವಿಶೀಲ್ಡ್ ಪಡೆದು ಎರಡನೇ ಡೋಸ್‌ನಲ್ಲಿ ಕೋವ್ಯಾಕ್ಸಿನ್ ಪಡೆಯಬಹುದೇ?

Update: 2021-05-18 13:07 GMT

ಕೋವಿಡ್-19 ಲಸಿಕೆಗಳ ಕೊರತೆಯ ನಡುವೆ ದೇಶದಲ್ಲಿ ಲಸಿಕೆ ಅಭಿಯಾನ ಕುಂಟುತ್ತ ಸಾಗಿದೆ. ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 18 ವರ್ಷ ಮೇಲ್ಪಟ್ಟವರನ್ನೂ ಕೋವಿಡ್-19 ಲಸಿಕೆ ಪಡೆಯಲು ಅರ್ಹರನ್ನಾಗಿಸಲಾಗಿದೆ. ಈ ಎಲ್ಲದರ ಮಧ್ಯೆ ನಾವು ಮೊದಲ ಡೋಸ್ ಕೋವಿಶೀಲ್ಡ್ ತೆಗೆದುಕೊಂಡಿದ್ದು ಎರಡನೇ ಡೋಸ್‌ನಲ್ಲಿ ಕೋವ್ಯಾಕ್ಸಿನ್ ಪಡೆಯಬಹುದೇ ಅಥವಾ ಮೊದಲ ಡೋಸ್ ಕೋವ್ಯಾಕ್ಸಿನ್ ತೆಗೆದುಕೊಂಡಿದ್ದು ಎರಡನೇ ಡೋಸ್‌ನಲ್ಲಿ ಕೋವಿಶೀಲ್ಡ್ ಪಡೆಯಬಹುದೇ ಎನ್ನುವುದು ಸಾರ್ವಜನಿಕರಲ್ಲಿ ಮನೆ ಮಾಡಿರುವ ಪ್ರಶ್ನೆಯಾಗಿದೆ. ಇದಕ್ಕೆ ದಿಲ್ಲಿಯ ಎಚ್‌ಸಿಎಂಸಿಟಿ ಮಣಿಪಾಲ ಆಸ್ಪತ್ರೆಯ ಡಾ.ಪುನೀತ ಖನ್ನಾ ಉತ್ತರಿಸಿದ್ದಾರೆ.

ಯಾವುದೇ ವ್ಯಕ್ತಿಯು ಎರಡು ಬೇರೆ ಬೇರೆ ಲಸಿಕೆಗಳನ್ನು ಪಡೆಯಕೂಡದು. ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದ ವ್ಯಕ್ತಿಯು ಎರಡನೇ ಡೋಸ್ ಕೂಡ ಕೋವಿಶೀಲ್ಡ್ ಆಗಿರಬೇಕು. ಎರಡೂ ಡೋಸ್‌ಗಳು ಬೇರೆ ಬೇರೆ ಲಸಿಕೆಗಳಾಗಿದ್ದರೆ ನಂತರದ ಲಸಿಕೆಯು ಗಂಭೀರ ಮತ್ತು ಪ್ರತಿಕೂಲ ಅಡ್ಡಪರಿಣಾಮಗಳನ್ನುಂಟು ಮಾಡುತ್ತದೆ. ಈ ಲಸಿಕೆಗಳು ಪರಸ್ಪರ ಅಡ್ಡ ಪ್ರತಿವರ್ತನೆಯಲ್ಲಿ ತೊಡಗುತ್ತವೆ. ಒಂದು ಲಸಿಕೆಯಿಂದ ಅಭಿವೃದ್ಧಿಗೊಂಡ ಆ್ಯಂಟಿಜನ್‌ಗಳು ಇನ್ನೊಂದು ಲಸಿಕೆಯಿಂದ ಅಭಿವೃದ್ಧಿಗೊಂಡ ಆ್ಯಂಟಿಜನ್‌ಗಳೊಂದಿಗೆ ಪ್ರತಿವರ್ತಿಸುತ್ತವೆ. ಆದ್ದರಿಂದ ಮೊದಲ ಡೋಸ್‌ನಲ್ಲಿ ತೆಗೆದುಕೊಂಡ ನಿರ್ದಿಷ್ಟ ಲಸಿಕೆಯನ್ನೇ ಎರಡನೇ ಡೋಸ್‌ನಲ್ಲಿಯೂ ತೆಗೆದುಕೊಳ್ಳುವುದು ತುಂಬ ಮುಖ್ಯವಾಗಿದೆ.

ತನ್ಮಧ್ಯೆ ಮುಂದಿನ ವಾರದಿಂದ ಕೊರೋನವೈರಸ್ ವಿರುದ್ಧ ರಷ್ಯಾ ಅಭಿವೃದ್ಧಿಗೊಳಿಸಿರುವ ಸ್ಪುಟ್ನಿಕ್V ಲಸಿಕೆ ನೀಡಿಕೆಯು ಆರಂಭಗೊಳ್ಳಲಿದೆ. ಇದರೊಂದಿಗೆ ಭಾರತದಲ್ಲಿ ಒಟ್ಟು ಮೂರು ಕೋವಿಡ್ ಲಸಿಕೆಗಳು ಲಭ್ಯವಿರುತ್ತವೆ.

ಕೃಪೆ: onlymyhealth.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News