ಮರದ ಕೊಂಬೆಗಳಿಂದ ನೇತಾಡುವ ಗ್ಲುಕೋಸ್ ಡ್ರಿಪ್‌ಗಳು!

Update: 2021-05-18 14:24 GMT

ಹೊಸದಿಲ್ಲಿ,ಮೇ 18: ಕೋವಿಡ್-19 ಮೊದಲ ಅಲೆ ಹೆಚ್ಚಾಗಿ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದರೆ ಎರಡನೇ ಅಲೆಯು ಗ್ರಾಮಗಳಲ್ಲಿ ಹಾಹಾಕಾರವನ್ನು ಸೃಷ್ಟಿಸಿದೆ. ಆರೋಗ್ಯ ಮೂಲಸೌಕರ್ಯಗಳು ನಗಣ್ಯವಾಗಿರುವ ಈ ಗ್ರಾಮಗಳಲ್ಲಿಯ ಶಂಕಿತ ಕೋವಿಡ್ ರೋಗಿಗಳು ಸೂಕ್ತ ಚಿಕಿತ್ಸೆ ದೊರೆಯದೆ ಸಾಯುತ್ತಿದ್ದಾರೆ. ವಾಹನದಲ್ಲಿ ಸಾಗಿದರೆ ರಾಷ್ಟ್ರ ರಾಜಧಾನಿಯಿಂದ ಕೇವಲ 90 ನಿಮಿಷಗಳಲ್ಲಿ ತಲುಪಬಹುದಾದ ಉತ್ತರ ಪ್ರದೇಶದ ಮೇವ್ಲಾ ಗೋಪಾಲಗಡ ಗ್ರಾಮವು ಕೋವಿಡ್‌ನಿಂದಾಗಿ ಗ್ರಾಮೀಣ ಭಾರತವು ಎದುರಿಸುತ್ತಿರುವ ಸಂಕಷ್ಟದ ಸ್ಥಿತಿಯನ್ನು ಪ್ರತಿಬಿಂಬಿಸುತ್ತಿದೆ.

ಕೊರೋನವೈರಸ್ ತಾಂಡವವಾಡುತ್ತಿರುವ ಮೇವ್ಲಾ ಗೋಪಾಲಗಡದಲ್ಲಿ ಅನಾರೋಗ್ಯಪೀಡಿತ ಜನರು ಮರಗಳ ಬುಡದಲ್ಲಿ ಮಂಚಗಳಲ್ಲಿ ಮಲಗಿದ್ದರೆ ಮರದ ಕೊಂಬೆಗಳಿಂದ ಗ್ಲುಕೋಸ್ ಡ್ರಿಪ್‌ಗಳು ನೇತಾಡುತ್ತಿವೆ. ಸುತ್ತಮುತ್ತ ಜಾನುವಾರುಗಳು ಮೇಯುತ್ತಿದ್ದರೆ ಸಿರಿಂಜ್‌ಗಳು ಮತ್ತು ಖಾಲಿ ಔಷಧಿಗಳ ಪ್ಯಾಕೆಟ್‌ಗಳು ಅಲ್ಲಲ್ಲಿ ಬಿದ್ದುಕೊಂಡಿವೆ.

ಈ ಗ್ರಾಮದಲ್ಲಿ ವೈದ್ಯರಾಗಲೀ ಆರೋಗ್ಯ ಸೌಲಭ್ಯಗಳಾಗಲೀ ಇಲ್ಲ. ಸಮೀಪದ ಇನ್ನೊಂದು ಗ್ರಾಮದಲ್ಲಿ ಸರಕಾರಿ ಆಸ್ಪತ್ರೆ ಇದೆಯಾದರೂ ಅಲ್ಲಿ ಹಾಸಿಗೆಗಳು ಲಭ್ಯವಿಲ್ಲ. ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಲು ಈ ಜನರ ಬಳಿ ದುಡ್ಡೂ ಇಲ್ಲ.

ಗ್ರಾಮದಲ್ಲಿಯ ನಾಟಿವೈದ್ಯರು ಬಯಲು ಆಸ್ಪತ್ರೆಯೊಂದನ್ನು ಸ್ಥಾಪಿಸಿದ್ದು, ಕೋವಿಡ್-19 ಲಕ್ಷಣಗಳಿರುವ ರೋಗಿಗಳಿಗೆ ಗ್ಲುಕೋಸ್ ಮತ್ತು ಇತರ ಔಷಧಿಗಳನ್ನು ನೀಡುತ್ತಿದ್ದಾರೆ ಎಂದು telegraphindia.com ವರದಿ ಮಾಡಿದೆ.

ಔಷಧೀಯ ಗುಣಗಳಿರುವ ಬೇವಿನ ಮರದ ಕೆಳಗೆ ಮಲಗುವುದರಿಂದ ತಮ್ಮ ಶರೀರದಲ್ಲಿ ಆಮ್ಲಜನಕದ ಮಟ್ಟ ಹೆಚ್ಚುತ್ತದೆ ಎಂದು ಕೆಲವರು ನಂಬಿದ್ದಾರೆ. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ.

“ಮರಗಳ ಕೆಳಗೆ ಮಲಗಿಕೊಂಡಿರುವ ಈ ರೋಗಿಗಳನ್ನು ನೋಡಿಕೊಳ್ಳುವವರೂ ಯಾರೂ ಇಲ್ಲ ಮತ್ತು ಕೆಲವೇ ದಿನಗಳಲ್ಲಿ ಅವರು ಸಾಯುತ್ತಾರೆ” ಎಂದು ಕೆಲವು ದಿನಗಳ ಹಿಂದೆ ಕೋವಿಡ್ ನಿಂದ ತಂದೆಯನ್ನು ಕಳೆದುಕೊಂಡ ಸಂಜಯ್ ಸಿಂಗ್ ಎಂಬವರು ಆರೋಪಿಸಿದ್ದಾರೆ.

ಗ್ರಾಮಸ್ಥರು ತಮ್ಮನ್ನು ರಕ್ಷಿಸಿಕೊಳ್ಳಲು ತಮಗೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಕೆಲವು ರೋಗಿಗಳು ಆಮ್ಲಜನಕದ ಸಿಲಿಂಡರ್‌ಗಳನ್ನು ಇಟ್ಟುಕೊಂಡಿದ್ದು,ಅವರಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದ ನಂತರ ಇತರ ರೋಗಿಗಳು ಅವುಗಳನ್ನು ಬಳಸುತ್ತಿದ್ದಾರೆ ಎಂದು ಗ್ರಾಮಸ್ಥರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಎರಡನೇ ಅಲೆಯನ್ನು ಎದುರಿಸುವಲ್ಲಿ ಸನ್ನದ್ಧತೆಯಲ್ಲಿ ವೈಫಲ್ಯಕ್ಕಾಗಿ ಟೀಕೆಗಳಿಗೆ ಗುರಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಕಳೆದ ವಾರವಷ್ಟೇ ಸಾಂಕ್ರಾಮಿಕವು ಗ್ರಾಮಗಳಲ್ಲಿ ವೇಗವಾಗಿ ಹರಡುತ್ತಿದೆ ಎಂದು ಹೇಳಿದ್ದರು. ಲಕ್ಷಣಗಳನ್ನು ಕಡೆಗಣಿಸದಂತೆ ಮತ್ತು ಪರೀಕ್ಷೆ ಮಾಡಿಸಿಕೊಂಡು ಸಕಾಲದಲ್ಲಿ ಚಿಕಿತ್ಸೆ ಪಡೆಯುವಂತೆ ಜನರನ್ನು ಆಗ್ರಹಿಸಿದ್ದರು. ಆದರೆ ಗ್ರಾಮಸ್ಥರಿಗೆ ಇವೆಲ್ಲ ಮರೀಚಿಕೆಯಾಗಿವೆ.

‘ಇಲ್ಲಿ ಕೋವಿಡ್-19 ಪರೀಕ್ಷೆ ನಡೆಯುತ್ತಲೇ ಇಲ್ಲ. ನಾವು ಅದಕ್ಕಾಗಿ ಪ್ರಯತ್ನಗಳನ್ನೂ ಮಾಡಿದ್ದೇವೆ. ತಮ್ಮ ಬಳಿ ಸಾಕಷ್ಟು ಸಿಬ್ಬಂದಿಗಳಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಪ್ಪೆ ಸಾರಿಸುತ್ತಿದ್ದಾರೆ ’ಎಂದು ಗ್ರಾಮದ ಮಾಜಿ ಸರಪಂಚ ಯೋಗೇಶ್ ತಲನ್ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News