×
Ad

ಹೂ ಬೆಳೆಗಾರರಿಗೆ ಮುಳ್ಳಾದ ಲಾಕ್‍ಡೌನ್: ರಾಜ ಕಾಲುವೆಗೆ ಹೂವು ಸುರಿದು ಆಕ್ರೋಶ

Update: 2021-05-19 23:38 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 19: ಮದುವೆ, ಶುಭ ಸಮಾರಂಭ, ಕಾರ್ಯಕ್ರಮಗಳ ಸಮಯ, ಹಬ್ಬಗಳ ವಾತಾವರಣವೆಂದು ನಂಬಿ ಭರ್ಜರಿ ಹೂವಿನ ಮಾರಾಟ ನಡೆಯುತ್ತದೆ ಎಂದುಕೊಂಡಿದ್ದ ಬೆಳೆಗಾರರ ನಿರೀಕ್ಷೆ ಹುಸಿಯಾಗಿದೆ.

ಲಾಕ್‍ಡೌನ್ ಹಿನ್ನೆಲೆ ಮದುವೆ ಸಮಾರಂಭಗಳು ತೀರಾ ಸರಳವಾಗಿ ನಡೆಯುತ್ತಿರುವ ಕಾರಣ ಹೂವುಗಳ ವ್ಯಾಪಾರವಾಗುತ್ತಿಲ್ಲ. ಇದರಿಂದ ಬೇಸತ್ತ ಬೆಳೆಗಾರರು, ವ್ಯಾಪಾರಿಗಳು ಬುಧವಾರ ನಗರದ ರಾಜ ಕಾಲುವೆಗೆ ಹೂವು ಸುರಿದು ಆಕ್ರೋಶ ಹೊರಹಾಕಿದರು.

ಇಲ್ಲಿನ ಸುಮನಹಳ್ಳಿ ಮೇಲ್ಸುತುವೆ ಬಳಿ ಹೂವಿನ ವ್ಯಾಪಾರಕ್ಕೆ ಬೆಳಗ್ಗೆ 5 ರಿಂದ 7 ಗಂಟೆಯವರೆಗೆ ಅವಕಾಶ ನೀಡಲಾಗಿದೆ. 7 ಗಂಟೆಯಾಗುತ್ತಿದ್ದಂತೆ ಹೊಯ್ಸಳದಲ್ಲಿ ಸ್ಥಳಕ್ಕೆ ಬಂದು ಪೊಲೀಸರು ಸ್ಥಳದಿಂದ ಹೊರಡುವಂತೆ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಒಂದೆಡೆ ನಾವು ಬೆಳೆದ ಹೂವಿಗೆ ಸರಿಯಾದ ಬೆಲೆ ದೊರೆಯುತ್ತಿಲ್ಲ ಎಂದು ಬೆಳೆಗಾರರು ಚೀಲ ತುಂಬಾ ಇದ್ದ ಹೂವನ್ನು ರಾಜಕಾಲುವೆಗೆ ಸುರಿದು ರೈತರು ಅಳಲು ತೋಡಿಕೊಂಡರು.

ಅಲ್ಲದೆ, ಈ ಜನತಾ ಕರ್ಫ್ಯೂ, ಲಾಕ್‍ಡೌನ್‍ನಿಂದಾಗಿ ಈ ಬಾರಿ ಹೂವಿಗೆ ಉತ್ತಮ ದರ ಸಿಗದ ಕಾರಣ ರೈತರಿಗೂ ನಷ್ಟವುಂಟಾಗಿದೆ. ಜತೆಗೆ ನಮ್ಮನ್ನೂ ಹೂವು ಕೈ ಹಿಡಿಯಲಿಲ್ಲ ಎಂಬುದು ಹೂವಿನ ವ್ಯಾಪಾರಿಗಳ ಒಕ್ಕೊರಲ ಅಭಿಪ್ರಾಯವಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News