ಅಂತ್ಯೋದಯ, ಬಿಪಿಎಲ್ ಕಾರ್ಡ್ ಎಪಿಎಲ್‌ಗೆ ಪರಿವರ್ತನೆ

Update: 2021-05-21 04:17 GMT

► ಆದಾಯ ತೆರಿಗೆ ಪಾವತಿಯ ನೆಪ


ಬೆಂಗಳೂರು : ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಎರಡನೇ ಅಲೆ ಮತ್ತು ಕಠಿಣ ಲಾಕ್‌ಡೌನ್‌ನಿಂದ ಬಡವರು ಮತ್ತು ಮಧ್ಯಮ ವರ್ಗದ ಜನರ ಜೀವನ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಈ ಮಧ್ಯೆ ರಾಜ್ಯ ಸರಕಾರ ಸದ್ದಿಲ್ಲದೆ ಸಾವಿರಾರು ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿಗಳನ್ನು 'ಆದಾಯ ತೆರಿಗೆ ಪಾವತಿ' ನೆಪದಲ್ಲಿ ಎಪಿಎಲ್‌ಗೆ ಪರಿವರ್ತಿಸುವ ಮೂಲಕ ಲಕ್ಷಾಂತರ ಜನರ ಅನ್ನವನ್ನು ತಡೆ ಹಿಡಿಯಲು ಮುಂದಾಗಿದೆ.

ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬ ಅಥವಾ ಕುಟುಂಬದ ಯಾವುದಾದರೂ ಒಬ್ಬ ಸದಸ್ಯ ಆದಾಯ ತೆರಿಗೆ ಇಲಾಖೆಯಲ್ಲಿ ನೋಂದಣಿಯಾಗಿದ್ದರೆ ಅಥವಾ ಆದಾಯ ತೆರಿಗೆ ಪಾವತಿಸುತ್ತಿದ್ದರೆ ಅವರ ಪಡಿತರ ಚೀಟಿಯನ್ನು ಎಪಿಎಲ್ ಪಡಿತರ ಚೀಟಿಗೆ ಪರಿವರ್ತಿಸುವ ಕೆಲಸವನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಮಾಡುತ್ತಿದೆ.

ಈ ಪ್ರಕ್ರಿಯೆಯಂತೆ ಈಗಾಗಲೇ ರಾಜ್ಯಾದ್ಯಂತ 3,490 ಅಂತ್ಯೋದಯ (10,643 ಸದಸ್ಯರು) ಹಾಗೂ 46,570 ಬಿಪಿಎಲ್ (1,18,083 ಸದಸ್ಯರು) ಪಡಿತರ ಚೀಟಿಗಳನ್ನು ಎಪಿಎಲ್ ಪಡಿತರ ಚೀಟಿಯಾಗಿ ಪರಿವರ್ತಿಸಲಾಗಿದೆ. ಇದರಿಂದ 50,060 ಕುಟುಂಬಗಳಿಗೆ (1,28,726 ಸದಸ್ಯರು) ಎಪ್ರಿಲ್ ತಿಂಗಳ ಪಡಿತರ ರದ್ದುಗೊಂಡಿದೆ.

ಅಲ್ಲದೆ, ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿಗಳನ್ನು ಪರಿವರ್ತಿಸುವ ಪ್ರಕ್ರಿಯೆ ಮುಂದುವರಿದಿದ್ದು, ಒಟ್ಟು 5 ಸಾವಿರ ಅಂತ್ಯೋದಯ ಮತ್ತು 80,204 ಬಿಪಿಎಲ್ ಪಡಿತರ ಚೀಟಿಗಳು ಎಪಿಎಲ್ ಆಗಿ ಪರಿವರ್ತನೆ ಆಗುವುದು ನಿಶ್ಚಿತವಾಗಿದೆ. ಈ ಸಂಬಂಧ ಆದಾಯ ತೆರಿಗೆ ಇಲಾಖೆ ನೀಡಿದ ಡೆಟಾವನ್ನು ಆಧರಿಸಿ ಆಹಾರ ನಾಗರಿಕ ಪೂರೈಕೆ ಇಲಾಖೆ ಮೇಲ್ಕಂಡ ಕ್ರಮಕ್ಕೆ ಮುಂದಾಗಿದೆ.

ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿಗಳನ್ನು ಎಪಿಎಲ್‌ಗೆ ಪರಿವರ್ತಿಸುವ ಬಗ್ಗೆ ಆಹಾರ, ನಾಗರಿಕ ಸರಬರಾಜು ತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ 2021, ಫೆ.17ರಂದು ನಡೆದ ಸಭೆಯಲ್ಲಿ ತೀರ್ಮಾನ ಮಾಡಲಾಗಿತ್ತು. ಸಭೆಯ ತೀರ್ಮಾನದಂತೆ ಆಹಾರ ಇಲಾಖೆ ಅಂತ್ಯೋದಯ, ಬಿಪಿಎಲ್ ಪಡಿತರ ಚೀಟಿ ಹೊಂದಿರುವವರ ಆಧಾರ್ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆ ಜೊತೆ ವಿನಿಮಯ ಮಾಡಿಕೊಂಡಿತ್ತು. ಇದರ ಆಧಾರದಲ್ಲಿ ಪರಿಶೀಲನೆ ಮಾಡಿದ ಆದಾಯ ತೆರಿಗೆ ಇಲಾಖೆ ಆದಾಯ ತೆರಿಗೆ ಪಾವತಿ ಮಾಡುತ್ತಿರುವ ಪಡಿತರ ಚೀಟಿದಾರರ ವರದಿ ಯನ್ನು ಆಹಾರ ಇಲಾಖೆಗೆ ನೀಡಿದೆ. ಅದರಂತೆ ಸಾವಿರಾರು ಪಡಿತರ ಚೀಟಿಗಳನ್ನು ಪರಿವರ್ತಿಸಲಾಗಿದೆ. ಈ ಕ್ರಮಕ್ಕೆ ಆಕ್ಷೇಪ ವ್ಯಕ್ತವಾಗಿದೆ.

'ಕುಟುಂಬದ ಸದಸ್ಯನೊಬ್ಬ ಆದಾಯ ತೆರಿಗೆ ಪಾವತಿಸಿದರೆ ಅಥವಾ ಕೇವಲ 'ದಾಖಲೆ'ಗಾಗಿ ಅಥವಾ ಬ್ಯಾಂಕ್ ಸಾಲಕ್ಕೆ ಆದಾಯ ತೆರಿಗೆ ಪಾವತಿಯ ಬಗ್ಗೆ ದಾಖಲೆ ಸೃಷ್ಟಿಸಿದರೂ ಆಹಾರ ಇಲಾಖೆ ಸ್ಥಳೀಯ ಅಧಿಕಾರಿಗಳು 'ನೀವು ಆದಾಯ ತೆರಿಗೆ ಪಾವತಿ ಮಾಡುತ್ತಿದ್ದೀರಿ' ಎಂದು ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಆಗಿ ಪರಿವರ್ತನೆ ಮಾಡಲು ಮುಂದಾಗಿರುವುದು ಅಕ್ಷಮ್ಯ. ಕೂಡಲೇ ಈ ಗೊಂದಲವನ್ನು ಅಧಿಕಾರಿಗಳು ಸರಿಪಡಿಸಬೇಕು' ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪಡಿತರ ಚೀಟಿ ಪರಿವರ್ತನೆ: ಜಿಲ್ಲಾವಾರು ಸಂಖ್ಯೆ

ಬಾಗಲಕೋಟೆ 1,295, ಬಳ್ಳಾರಿ 2,584, ಬೆಂಗಳೂರು ಪೂರ್ವ 1,423, ಬೆಂಗಳೂರು ಉತ್ತರ 1,950, ಬೆಂಗಳೂರು ದಕ್ಷಿಣ 2,777, ಬೆಂಗಳೂರು ಪಶ್ಚಿಮ 4,232, ಬೆಳಗಾವಿ 3,273, ಬೆಂಗಳೂರು 14,372, ಬೆಂಗಳೂರು ಗ್ರಾಮಾಂತರ 3,237, ಬೀದರ್ 1,456, ಚಾಮರಾಜನಗರ 797, ಚಿಕ್ಕಬಳ್ಳಾಪುರ 2,465, ಚಿಕ್ಕಮಗಳೂರು 1,676, ಚಿತ್ರದುರ್ಗ 1,641, ದಕ್ಷಿಣ ಕನ್ನಡ 1,595, ದಾವಣಗೆರೆ 2,048, ಧಾರವಾಡ 1,945, ಗದಗ 668, ಹಾಸನ 3,492, ಹಾವೇರಿ 1,052, ಕಲಬುರಗಿ 2,071, ಕೊಡಗು 541, ಕೋಲಾರ 3,344, ಕೊಪ್ಪಳ 1,099, ಮಂಡ್ಯ 3,396, ಮೈಸೂರು 3,693, ರಾಯಚೂರು 1,856, ರಾಮನಗರ 3,081, ಶಿವಮೊಗ್ಗ 2,156, ತುಮಕೂರು 4,117, ಉಡುಪಿ 2,671, ಉತ್ತರ ಕನ್ನಡ 1,170, ವಿಜಯಪುರ 1,317, ಯಾದಗಿರಿ 714.

ಆದಾಯ ತೆರಿಗೆ ಪಾವತಿಸಿದವರಿಗೆ ಮಾತ್ರ

ಆದಾಯ ತೆರಿಗೆ ಇಲಾಖೆ ನೀಡಿರುವ ಮಾಹಿತಿಯನ್ನು ಆಧರಿಸಿ ರಾಜ್ಯದಲ್ಲಿ 5 ಸಾವಿರ ಅಂತ್ಯೋದಯ 80,204 ಆದ್ಯತಾ ಪಡಿತರ ಚೀಟಿಗಳಲ್ಲಿರುವ ಸದಸ್ಯರು ಆದಾಯ ತೆರಿಗೆ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡು ಆದಾಯ ತೆರಿಗೆ ಪಾವತಿ ಮಾಡುತ್ತಿರುವುದು ಪತ್ತೆಯಾಗಿದೆ. ಹೀಗಾಗಿ ಆದಾಯ ತೆರಿಗೆ ಪಾವತಿಸುತ್ತಿರುವವರ ಕಾರ್ಡ್‌ಗಳನ್ನು ಪರಿವರ್ತನೆ ಮಾಡಲಾಗುತ್ತಿದೆ. ಆದಾಯ ತೆರಿಗೆ ಪಾವತಿಸದ ಯಾರೊಬ್ಬರ ಪಡಿತರ ಚೀಟಿಯನ್ನು ಯಾವುದೇ ಕಾರಣಕ್ಕೂ ಪರಿವರ್ತನೆ ಮಾಡುವುದಿಲ್ಲ. ಆದರೂ, ಈ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸಲಾಗುವುದು.

ಶಮ್ಲಾ ಇಕ್ಬಾಲ್,
ಆಯುಕ್ತೆ, ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಹಕ ವ್ಯವಹಾರಗಳ ಇಲಾಖೆ

-  ಅನ್ನದ ತಟ್ಟೆಗೆ ಕನ್ನ

ವಾಹನ ಖರೀದಿ, ಮನೆ ದುರಸ್ತಿಗೆ ಸಾಲ ಮಾಡಬೇಕಾದರೆ ಬ್ಯಾಂಕಿನವರು ಆದಾಯ ತೆರಿಗೆ ಪಾವತಿ ದಾಖಲೆ ಕೇಳುತ್ತಾರೆ. 1 ಸಾವಿರ ರೂ.ಕೊಟ್ಟು ಈ ದಾಖಲೆ ಮಾಡಿದ ಕೂಡಲೇ ಬಡವರು ಶ್ರೀಮಂತರಾಗುವುದಿಲ್ಲ. ಅಂತ್ಯೋದಯ, ಬಿಪಿಎಲ್ ಪಡಿತರ ಚೀಟಿಯನ್ನು ಸರಕಾರ ಅವೈಜ್ಞಾನಿಕವಾಗಿ ಎಪಿಎಲ್ ಪಡಿತರ ಚೀಟಿಯಾಗಿ ಪರಿವರ್ತನೆ ಮಾಡುವುದು ಸರಿಯಲ್ಲ. ಕೋವಿಡ್ ಲಾಕ್‌ಡೌನ್‌ನ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಸರಕಾರದ ಈ ಕ್ರಮ ಬಡವರ ಅನ್ನದ ತಟ್ಟೆಯನ್ನು ಕಸಿದಿರುವುದಕ್ಕೆ ಸಮಾನ ಎಂದು ಪರಿವರ್ತನೆಯಾದ ಪಡಿತರ ಚೀಟಿದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

ನಮ್ಮ ಸಣ್ಣದಾದ ಅಂಗಡಿಯ ದುರಸ್ತಿಗೆ ಸ್ಥಳೀಯ ಸಹಕಾರ ಸಂಘದಿಂದ ಸಾಲಕ್ಕೆ ಅರ್ಜಿ ಹಾಕಿದ್ದೆ. ಅವರು ಆದಾಯ ತೆರಿಗೆ ಪಾವತಿಯ ರಶೀದಿ ಬೇಕು ಎಂದು ಕೆಲವು ಫಾರಂ ನೀಡಿ ವಕೀಲರ ಬಳಿ ಕಳುಹಿಸಿದ್ದರು. ಬಳಿಕ ನನ್ನಿಂದ 1 ಸಾವಿರ ರೂಪಾಯಿ ಆದಾಯ ತೆರಿಗೆ ಪಾವತಿಸಲಾಗಿದೆ. ಆದರೆ ಜಾಗದ ಪಟ್ಟ ಸರಿ ಇಲ್ಲ ಎಂದು ಸಾಲವೂ ಸಿಕ್ಕಿಲ್ಲ. ಎಪ್ರಿಲ್ ತಿಂಗಳ ಪಡಿತರ ಪಡೆಯಲು ಹೋದಾಗ ನಮ್ಮ ಬಿಪಿಎಲ್ ಪಡಿತರ ಚೀಟಿಯನ್ನು ಎಪಿಎಲ್‌ಗೆ ಪರಿವರ್ತಿಸಲಾಗಿದೆ ಎಂಬುದು ತಿಳಿದು ಬಂತು. ಆದಾಯ ತೆರಿಗೆ ಪಾವತಿಸಿದ ಕಾರಣಕ್ಕೆ ಈ ಕ್ರಮ ಆಗಿದೆ ಎಂದು ಅಂಗಡಿಯವರು ತಿಳಿಸಿದ್ದಾರೆ. ಒಂದೆಡೆ ಸಾಲವೂ ಸಿಕ್ಕಿಲ್ಲ. ಇನ್ನೊಂದೆಡೆ ಬಿಪಿಎಲ್ ಪಡಿತರ ಚೀಟಿಯೂ ರದ್ದಾಗಿದೆ. ಸರಕಾರ ಬಡವರಿಗೆ ಈ ರೀತಿ ಅನ್ಯಾಯ ಮಾಡಬಾರದು.

ಪ್ರಮೀಳಾ, ಪುದು ಗ್ರಾಮ, ದ.ಕ. ಜಿಲ್ಲೆ

ಬೇರೆಯವರ ಆಟೊ ರಿಕ್ಷಾವನ್ನು ದಿನಕ್ಕೆ 150 ರೂಪಾಯಿಯಂತೆ ಬಾಡಿಗೆಗೆ ಪಡೆದು ಅದರಲ್ಲಿ ದುಡಿಯುತ್ತಿರುವ ನಾನು ಹೊಸ ಆಟೊ ರಿಕ್ಷಾ ಖರೀದಿಸುವ ಕನಸಿನೊಂದಿಗೆ ಸಾಲ ಕೇಳಲು ಬ್ಯಾಂಕ್‌ಗೆ ತೆರಳಿದ್ದೆ. ಬ್ಯಾಂಕ್‌ನವರು ಸಾಲ ನೀಡಬೇಕಾದರೆ ಆದಾಯ ತೆರಿಗೆ ಪಾವತಿಸಿರಬೇಕು ಎಂದರು. ಪರಿಚಯಸ್ಥರೊಬ್ಬರ ಬಳಿ 2,000 ರೂಪಾಯಿ ನೀಡಿ ಆದಾಯ ತೆರಿಗೆ ಪಾವತಿ ಮಾಡಿದರೂ ಸಾಲ ಸಿಕ್ಕಿಲ್ಲ. ಇಂದಿಗೂ ಅದೇ ಬಾಡಿಗೆ ರಿಕ್ಷಾದಲ್ಲಿ ದುಡಿಯುತ್ತಿದ್ದೇನೆ. ಬಿಪಿಎಲ್ ಪಡಿತರ ಚೀಟಿ ಹೊಂದಿದ್ದ ನಮ್ಮ ಕುಟುಂಬ ಮೊನ್ನೆ ಪಡಿತರ ತರಲು ಹೋದಾಗ ನಮ್ಮ ಬಿಪಿಎಲ್ ಕಾರ್ಡ್ ಎಪಿಎಲ್ ಆಗಿರುವ ವಿಷಯ ತಿಳಿಯಿತು. ನಾವು ಆದಾಯ ತೆರಿಗೆ ಪಾವತಿದಾರರು ಎಂದು ಕಾರ್ಡ್ ಅನ್ನು ಎಪಿಎಲ್‌ಗೆ ಮಾಡಲಾಗಿದೆ ಎಂದು ಅಂಗಡಿಯವರು ತಿಳಿಸಿದ್ದಾರೆ. ನಾವು ಬಾಡಿಗೆ ಮನೆಯಲ್ಲಿ ವಾಸವಿದ್ದೇವೆ. ಲಾಕ್‌ಡೌನ್‌ನಿಂದ ಜನರು ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಅದರ ಮಧ್ಯೆಯೂ ಇಂತಹ ಕ್ರಮ ಸರಿಯಲ್ಲ.

ಸಹದುದ್ದೀನ್, ಮಂಗಳೂರಿನ ಮಾರಿಪಳ್ಳ ನಿವಾಸಿ

Writer - ಇಮ್ತಿಯಾಝ್ ಶಾ, ತುಂಬೆ

contributor

Editor - ಇಮ್ತಿಯಾಝ್ ಶಾ, ತುಂಬೆ

contributor

Similar News