ವೈದ್ಯಕೀಯ ಶಿಕ್ಷಣದ ಸುಧಾರಣೆಯಾಗಲಿ

Update: 2021-05-22 19:30 GMT

ಸಾರ್ವಜನಿಕ ಹಣದಿಂದ ನಡೆಯುವ ವೈದ್ಯಕೀಯ ಕಾಲೇಜುಗಳನ್ನು ಖಾಸಗಿ ರಂಗಕ್ಕೆ ನಿರ್ವಹಿಸಲು ಬಿಟ್ಟುಕೊಡುವುದು ಆರೋಗ್ಯ ಸಿಬ್ಬಂದಿ ಬಿಕ್ಕಟ್ಟಿಗೆ ಪರಿಹಾರವಲ್ಲ. ಜನರ ಆರೋಗ್ಯವನ್ನು ಸುಧಾರಿಸುವುದು, ಉತ್ತಮ ಪಡಿಸುವುದು ಹಾಗೂ ಕಾಯಿಲೆಯ ಹೊರೆಯನ್ನು ತಗ್ಗಿಸುವುದು ವೈದ್ಯಕೀಯ ಶಿಕ್ಷಣದ ಉದ್ದೇಶವಾಗಿರುವುದರಿಂದ ಈ ಶಿಕ್ಷಣವು ಸರ್ವ ಸಾರ್ವಜನಿಕರ ಒಳಿತಿಗಾಗಿ ಸಂಬಂಧಪಟ್ಟ ವಿಷಯವಾಗಿದೆ.


ಭಾರತದ ಆರೋಗ್ಯ ವ್ಯವಸ್ಥೆ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಈ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ನಮ್ಮ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲೇಬೇಕಾಗಿದೆ. ಈ ವ್ಯವಸ್ಥೆಗಳು ಎದುರಿಸುತ್ತಿರುವ ಒಂದು ದೊಡ್ಡ ಸಮಸ್ಯೆಯೆಂದರೆ ಮಾನವ ಸಂಪನ್ಮೂಲಗಳು: ಉತ್ತರದ ರಾಜ್ಯಗಳಲ್ಲಿ ಆರೋಗ್ಯ ಕಾರ್ಯಕರ್ತರ, ವಿಶೇಷವಾಗಿ ವೈದ್ಯರ ಗಂಭೀರ ಸ್ವರೂಪದ ಕೊರತೆ ಒಂದು ದೊಡ್ಡ ಸಮಸ್ಯೆಯಾಗಿದೆ. ಆರೋಗ್ಯ ಕಾರ್ಯಕರ್ತರು ಆರೋಗ್ಯ ವ್ಯವಸ್ಥೆಗಳ ಸುಸೂತ್ರ ಕಾರ್ಯನಿರ್ವಹಣೆಯಷ್ಟೇ ಅಲ್ಲ, ಬದಲಾಗಿ ಕೋವಿಡ್-19ರಂತಹ ಕಾಯಿಲೆಗಳನ್ನು ಪತ್ತೆಹಚ್ಚಲು, ತಡೆಗಟ್ಟಲು ಬೇಕಾದ ಪೂರ್ವಸಿದ್ಧತೆಗೂ ಅತ್ಯಗತ್ಯ.

ಈ ವೈದ್ಯಕೀಯ ಮಾನವ ಸಂಪನ್ಮೂಲ ಬಿಕ್ಕಟ್ಟು ದೇಶದಲ್ಲಿರುವ ಅಸಮತೋಲನಗಳಿಂದಾಗಿ ಇನ್ನಷ್ಟು ತೀವ್ರವಾಗಿದೆ. ಉದಾಹರಣೆಗೆ ಉತ್ತರದ ರಾಜ್ಯಗಳಲ್ಲಿ ವೈದ್ಯರು ಹಾಗೂ ಜನಸಂಖ್ಯೆಯ ದಾಮಾಶಯ ದಕ್ಷಿಣ ರಾಜ್ಯಗಳಿಗಿಂತ ತೀರಾ ಕಡಿಮೆ ಇದೆ.

ವೈದ್ಯಕೀಯ ಶಿಕ್ಷಣದ ಬಗ್ಗೆ ಸರಕಾರದ ಮಾರುಕಟ್ಟೆ ಕೇಂದ್ರಿತ ಧೋರಣೆ ಬದಲಾಗುವವರೆಗೆ ಸದ್ಯದ ವೈದ್ಯಕೀಯ ಪರಿಸ್ಥಿತಿ ಬದಲಾಗಲಾರದು. ಉತ್ತರದ ರಾಜ್ಯಗಳಲ್ಲಿ ಇರುವ ವೈದ್ಯರ ಕೊರತೆ ನೀಗಬೇಕಾದರೆ ವೈದ್ಯಕೀಯ ಶಿಕ್ಷಣ ಕ್ಷೇತ್ರ ಇನ್ನಷ್ಟು ವಿಸ್ತಾರವಾಗಬೇಕು. ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳ ಸ್ಥಾಪನೆಯಾಗಬೇಕು. ಆದರೆ ಜಿಲ್ಲಾಸ್ಪತ್ರೆಗಳನ್ನು ಕನಿಷ್ಠ 150 ಎಂಬಿಬಿಎಸ್ ಸೀಟ್‌ಗಳಿರುವ ಬೋಧಕ ಆಸ್ಪತ್ರೆಗಳಾಗಿ ಪರಿವರ್ತಿಸಬೇಕೆನ್ನುವ ನೀತಿ ಆಯೋಗದ ಪ್ರಸ್ತಾವಗಳಿಂದ ಹೆಚ್ಚು ಪ್ರಯೋಜನವಾಗಲಾರದು. ಯಾಕೆಂದರೆ ಇಂತಹ ಪ್ರಸ್ತಾವದಿಂದ ಖಾಸಗಿ ವೈದ್ಯಕೀಯ ರಂಗಕ್ಕೆ ಹೊಸ ಲಾಭವಾಗಬಹುದೇ ಹೊರತು ಬಡವರಿಗೆ ಆಸರೆಯಾಗುವ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಲಾಭ ಅವರಿಗೆ ಸಿಗಲಾರದು.

ಜಿಲ್ಲಾ ಆಸ್ಪತ್ರೆಗಳು ಬಡವರಿಗೆ ಇರುವ ಕಟ್ಟಕಡೆಯ ಆಸರೆಯೆಂದು ಪರಿಗಣಿಸಲಾಗುತ್ತದೆ. ಆದರೆ ಆಸ್ಪತ್ರೆಗಳು ಖಾಸಗಿ ರಂಗದ ಕೈಗೆ ಹೋದಲ್ಲಿ ಬಡವರಿಗೆ ಈ ಆಸರೆ ದುರ್ಲಭವಾಗುತ್ತದೆ. ಯಾಕೆಂದರೆ ಖಾಸಗಿ ರಂಗದ ಹೂಡಿಕೆದಾರರು ವೈದ್ಯಕೀಯ ಶಿಕ್ಷಣವನ್ನು ಒಂದು ವ್ಯಾಪಾರ ಉದ್ದಿಮೆ ಎಂದು ಪರಿಗಣಿಸುತ್ತಾರೆ. ಇಷ್ಟೇ ಅಲ್ಲದೆ ಇಂತಹ ಖಾಸಗಿ ರಂಗದಿಂದ ನಡೆಸಲ್ಪಡುವ ವೈದ್ಯಕೀಯ ಕಾಲೇಜುಗಳಲ್ಲಿ ತರಬೇತಾದ ವೈದ್ಯಕೀಯ ಪದವೀಧರರು ತಾವು ಶಿಕ್ಷಣಕ್ಕಾಗಿ ಮಾಡಿದ ಹೂಡಿಕೆಯನ್ನು ಮರಳಿ ಪಡೆಯಲು ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಉದ್ಯೋಗ ಮಾಡಲು ಬಯಸುತ್ತಾರೆಯೇ ಹೊರತು ಗ್ರಾಮೀಣ ಪ್ರದೇಶದಲ್ಲಿ ಅಲ್ಲ.

ಆದ್ದರಿಂದ, ವೈದ್ಯರ ಕೊರತೆಯ ಸಮಸ್ಯೆಯನ್ನು ಪರಿಹರಿಸಲು ರಾಜಕೀಯ ನಾಯಕರಲ್ಲಿ ದೂರಗಾಮಿ ಚಿಂತನೆ ಹಾಗೂ ಬದ್ಧತೆ ಬೇಕಾಗುತ್ತದೆ. ಸರಕಾರ ಈ ಹಿಂದೆ ವೈದ್ಯಕೀಯ ರಂಗದಲ್ಲಿ ಮಾಡಿದ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಪ್ರಯೋಗಗಳಿಂದ ಪಾಠ ಕಲಿಯಬೇಕಾಗಿದೆ. ಇಂತಹ ಹಲವು ಸಹಭಾಗಿತ್ವಗಳಲ್ಲಿ ಖಾಸಗಿರಂಗ ತಾನು ಒಪ್ಪಿದ್ದ ಷರತ್ತುಗಳನ್ನು ಪಾಲಿಸದೆ ಹಣ ನೀಡದ ರೋಗಿಗಳಿಗೆ ವೈದ್ಯಕೀಯ ಸೇವೆಗಳಲ್ಲಿ ತಾರತಮ್ಯ ಮಾಡಿದ್ದು ಸಂಬಂಧಿಸಿದವರಿಗೆ ತಿಳಿಯದ ವಿಷಯವೇನಲ್ಲ. ಸಾರ್ವಜನಿಕ ಹಣದಿಂದ ನಡೆಯುವ ವೈದ್ಯಕೀಯ ಕಾಲೇಜುಗಳನ್ನು ಖಾಸಗಿ ರಂಗಕ್ಕೆ ನಿರ್ವಹಿಸಲು ಬಿಟ್ಟುಕೊಡುವುದು ಆರೋಗ್ಯ ಸಿಬ್ಬಂದಿ ಬಿಕ್ಕಟ್ಟಿಗೆ ಪರಿಹಾರವಲ್ಲ. ಜನರ ಆರೋಗ್ಯವನ್ನು ಸುಧಾರಿಸುವುದು, ಉತ್ತಮ ಪಡಿಸುವುದು ಹಾಗೂ ಕಾಯಿಲೆಯ ಹೊರೆಯನ್ನು ತಗ್ಗಿಸುವುದು ವೈದ್ಯಕೀಯ ಶಿಕ್ಷಣದ ಉದ್ದೇಶವಾಗಿರುವುದರಿಂದ ಈ ಶಿಕ್ಷಣವು ಸರ್ವ ಸಾರ್ವಜನಿಕರ ಒಳಿತಿಗಾಗಿ ಸಂಬಂಧಪಟ್ಟ ವಿಷಯವಾಗಿದೆ.

ಇಂತಹ ಒಳಿತನ್ನು, ಎಲ್ಲರ ಕಲ್ಯಾಣವನ್ನೂ ಸಾಧಿಸಲು ಕೊರೋನ ಸಾಂಕ್ರಾಮಿಕವೂ ನಮಗೆ ಮತ್ತೊಮ್ಮೆ ಒಂದು ಅವಕಾಶವನ್ನು ನೀಡಿದೆ. ಆದ್ದರಿಂದ ವೈದ್ಯಕೀಯ ಶಿಕ್ಷಣದಲ್ಲಿ ಮಾಡುವ ಹೂಡಿಕೆಯನ್ನು ಹಂತಹಂತವಾಗಿ ಹೆಚ್ಚಿಸಲೇಬೇಕು. ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಮೂಲಕ ಸರಕಾರ ಹೆಚ್ಚು ಹೆಚ್ಚು ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣವನ್ನು ನೀಡುವುದಲ್ಲದೆ ಬಡವರಿಗೂ ವೈದ್ಯಕೀಯ ಶಿಕ್ಷಣದ ಅವಕಾಶ ಲಭಿಸುವಂತೆ ಮಾಡಬಹುದು. ಹಾಗೆಯೇ ಈಗ ಅಸ್ತಿತ್ವದಲ್ಲಿರುವ ವೈದ್ಯಕೀಯ ಕಾಲೇಜುಗಳಲ್ಲಿ ಇನ್ನಷ್ಟು ಸೀಟುಗಳು ಲಭ್ಯವಾಗುವಂತೆ ಮಾಡಲು ಸರಕಾರ ಸಾಕಷ್ಟು ಹಣಕಾಸು ಸಂಪನ್ಮೂಲಗಳನ್ನು ಪೂರೈಸಬೇಕು.

ಕೃಪೆ: TheHindu

(ಲೇಖಕರು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್‌ನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದಾರೆ.)

Writer - ಸುಮಿತ್ರ ಘೋಷ್

contributor

Editor - ಸುಮಿತ್ರ ಘೋಷ್

contributor

Similar News