ಮಧ್ಯಪ್ರದೇಶ: ಕೊರೋನ ಲಸಿಕೆ ಜಾಗೃತಿ ಮೂಡಿಸಲು ತೆರಳಿದ ಅಧಿಕಾರಿಗಳಿಗೆ ಗ್ರಾಮಸ್ಥರಿಂದ ಹಲ್ಲೆ

Update: 2021-05-25 17:00 GMT

ಭೋಪಾಲ, ಮೇ 25: ಕೊರೋನ ಲಸಿಕೆ ತೆಗೆದುಕೊಳ್ಳುವಂತೆ ಜನರನ್ನು ಆಗ್ರಹಿಸಲು ಮಧ್ಯಪ್ರದೇಶದ ಉಜ್ಜೈನಿ ಜಿಲ್ಲೆಯ ಮಾಲಿಖೇಡಿ ಗ್ರಾಮಕ್ಕೆ ಸೋಮವಾರ ಬೆಳಗ್ಗೆ ಭೇಟಿ ನೀಡಿದ ವೈದ್ಯರು ಹಾಗೂ ಸ್ಥಳೀಯ ಅಧಿಕಾರಿಗಳನ್ನು ಒಳಗೊಂಡ ತಂಡದ ಮೇಲೆ ಸ್ಥಳೀಯ ನಿವಾಸಿಗಳು ಹಲ್ಲೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಘಟನೆಯಲ್ಲಿ ಅಧಿಕಾರಿಗಳಲ್ಲಿ ಓರ್ವರಾದ ಶಕೀಲ್ ಖುರೇಷಿ ಅವರ ತಲೆಗೆ ಗಾಯಗಳಾಗಿವೆ. ಅವರನ್ನು ಚಿಕಿತ್ಸೆಗಾಗಿ ಉಜ್ಜೈನಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ಸ್ಥಳೀಯ ನಿವಾಸಿಗಳ ದಾಳಿಗೆ ಹೆದರಿ ತಂಡ ಓಡುತ್ತಿರುವುದು ದಾಖಲಾಗಿದೆ.

ತಹಶೀಲ್ದಾರ್ (ಕಂದಾಯ ಅಧಿಕಾರಿ) ಅವರು ಲಸಿಕೆ ತೆಗೆದುಕೊಳ್ಳುವಂತೆ ಗ್ರಾಮ ನಿವಾಸಿಗಳಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು. ಈ ಸಂದರ್ಭ ಕೆಲವು ಮಹಿಳೆಯರು ಬೈಯಲು ಆರಂಭಿಸಿದರು. ಆಗ ನಾನು ಅವರೊಂದಿಗೆ ಮಾತನಾಡಲು ಮುಂದೆ ಬಂದೆ. ಇದ್ದಕ್ಕಿದ್ದಂತೆ ಸುಮಾರು 25 ಜನರಿದ್ದ ಪುರುಷರ ತಂಡ ಆಗಮಿಸಿತು. ಅವರಲ್ಲಿ ಓರ್ವ ತನ್ನ ತಲೆಗೆ ಲಾಠಿಯಿಂದ ಹೊಡೆದೆ ಎಂದು ಖುರೇಷಿ ಹೇಳಿದ್ದಾರೆ. ‌

ಲಸಿಕೆ ತೆಗೆದುಕೊಳ್ಳಲು ಯಾರೂ ಉತ್ಸಾಹ ತೋರಿಸುತ್ತಿರಲಿಲ್ಲ. ಆದುದರಿಂದ ನಾನು ತಂಡದೊಂದಿಗೆ ಗ್ರಾಮಕ್ಕೆ ಭೇಟಿ ನೀಡಿದೆ. ಜನರನ್ನು ಭೇಟಿಯಾಗುವುದು ಹಾಗೂ ಅವರಲ್ಲಿ ಅರಿವು ಮೂಡಿಸುವುದು ನಮ್ಮ ಉದ್ದೇಶವಾಗಿತ್ತು ಎಂದು ಕಂದಾಯ ಅಧಿಕಾರಿ ಅನು ಜೈನ್ ಹೇಳಿದ್ದಾರೆ. ಗ್ರಾಮ ನಿವಾಸಿಗಳು ಹಲ್ಲೆ ನಡೆಸಲು ಪ್ರಯತ್ನಿಸಿದ ಕೂಡಲೇ ತಾನು ಕಂಟ್ರೋಲ್ ರೂಮ್ಗೆ ಕರೆ ಮಾಡಿದೆ. ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದರು. ಚಂದು ಲಾಲ್ ಹಾಗೂ ಮ್ಯಾಕ್ಸಿ ಮರೇಥ್ನನ್ನು ಬಂಧಿಸಿದ್ದಾರೆ. ಇನ್ನೋರ್ವ ತಲೆಮರೆಸಿಕೊಂಡಿದ್ದಾನೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News