"ಒಂದೇ ಒಂದು ದಿನ ನೆಮ್ಮದಿಯಿಂದ ಕಳೆದಿಲ್ಲ": ತಿಹಾರ್ ಜೈಲಿನಿಂದ ಉಮರ್ ಖಾಲಿದ್

Update: 2021-05-26 10:52 GMT

ನಾನು ಕೋವಿಡ್ ಸೋಂಕಿತನಾಗಿ ಕ್ವಾರಂಟೈನ್ ಮುಗಿಸಿದ ಎರಡು ದಿನಗಳ ಬಳಿಕ ನನ್ನ ಸಹ ಆರೋಪಿ ನತಾಶಾ ಅವರ ತಂದೆ ಮಹಾವೀರ್ ನರ್ವಾಲ್ ಅವರು ಕೊರೋನದಿಂದ ನಿಧನರಾದ ಆಘಾತಕಾರಿ ಸುದ್ದಿ ತಿಳಿಯಿತು. 

ನನಗೆ ಮಹಾವೀರ್ ಅವರ ಪರಿಚಯವಿರಲಿಲ್ಲ. ಕಳೆದ ಬೇಸಿಗೆಯಲ್ಲಿ ನತಾಶಾ ಅವರ ಬಂಧನದ ಬಳಿಕ ಅವರು ನೀಡಿದ ಕೆಲವು ಸಂದರ್ಶನಗಳನ್ನು ನೋಡಿದ್ದೆ. ಅವರ ಕುಟುಂಬ ಎದುರಿಸುತ್ತಿದ್ದ ಅತ್ಯಂತ ವಿಷಮ ಗಳಿಗೆಯಲ್ಲಿ ಅವರು ನೀಡಿದ ಆ ಸಂದರ್ಶನಗಳಲ್ಲಿ ಅವರ ಸ್ಥಿತಪ್ರಜ್ಞತೆ ಹಾಗು ಘನತೆ ಎದ್ದು ಕಾಣುತ್ತಿತ್ತು. ಗಲಭೆಗೆ ಪಿತೂರಿ ನಡೆಸಿದ ಹಾಸ್ಯಾಸ್ಪದ ಆರೋಪದಿಂದ ಒಂದಿಷ್ಟೂ ವಿಚಲಿತರಾಗದ ಅವರು ತನ್ನ ಮಗಳು ಅಮಾಯಕೆ ಹಾಗು ಆಕೆಯ ಆಕ್ಟಿವಿಸಂ ಬಗ್ಗೆ ತನಗೆ ಹೆಮ್ಮೆಯಿದೆ ಎಂದು ಒತ್ತಿ ಹೇಳಿದ್ದರು. ಈ ಭಾರೀ ಸಂಕಟದ ಸಂದರ್ಭದಲ್ಲಿ ನತಾಶಾ ಅವರಿಗಾಗಿ ನನ್ನ ಮನಸ್ಸು ಮಿಡಿಯುತ್ತಿದೆ. ಆಕೆ ಅನುಭವಿಸುತ್ತಿರುವ ದುಃಖವನ್ನು ಊಹಿಸಲೂ ಅಸಾಧ್ಯ. 

ಸಾಮಾನ್ಯ ಸಂದರ್ಭಗಳಲ್ಲೇ ಜೈಲಿನ ಬದುಕು ಬಹಳ ಕಷ್ಟಕರ. ನಾನು ಕಳೆದ ಎಂಟು ತಿಂಗಳುಗಳಿಂದ ಜೈಲಿನಲ್ಲಿ ಏಕಾಂಗಿಯಾಗಿ ಕಳೆದಿದ್ದೇನೆ. ಬಹಳಷ್ಟು ಬಾರಿ ದಿನಕ್ಕೆ 20 ಗಂಟೆಗಳಿಗೂ ಅಧಿಕ ಸಮಯ ಸೆಲ್ ನ ಒಳಗೇ ಇರಬೇಕು. ಈಗ ಈ ಅರೋಗ್ಯ ತುರ್ತುಪರಿಸ್ಥಿತಿಯಲ್ಲಿ ಜೈಲುವಾಸದ ಕಷ್ಟ ಹಲವು ಪಟ್ಟು ಹೆಚ್ಚಾಗಿ ಅತ್ಯಂತ ಭೀಕರವಾಗಿ ಮಾರ್ಪಟ್ಟಿದೆ. 

ಕೋವಿಡ್ ಎರಡನೇ ಅಲೆ ಇಡೀ ದೇಶವನ್ನು ಕಂಗಾಲು ಮಾಡಿದ ಕಳೆದ ಒಂದು ತಿಂಗಳಲ್ಲಿ ಒಂದೇ ಒಂದು ಹಗಲು ಅಥವಾ ರಾತ್ರಿ ನಾನು ನೆಮ್ಮದಿಯಿಂದ ಕಳೆದಿಲ್ಲ. ನನ್ನ ಕುಟುಂಬ, ಆತ್ಮೀಯರ ಕುರಿತ ಕಳವಳ ನನ್ನನ್ನು ತೀವ್ರವಾಗಿ ಕಾಡುತ್ತಿದೆ. ಬೇರೆ ಏನಾದರೂ ಯೋಚಿಸಿ ಗಮನ ಬೇರೆಡೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಿದರೂ ಪ್ರತಿದಿನ ಬೆಳಗ್ಗೆ ಪತ್ರಿಕೆಗಳಲ್ಲಿ ಬರುವ ಸಾವು ನೋವುಗಳ ಸುದ್ದಿಗಳನ್ನು ನೋಡಿ ತಲ್ಲಣಿಸುತ್ತೇನೆ. ಕೆಟ್ಟ ಯೋಚನೆಗಳೆಲ್ಲವೂ ಬೇಡ ಬೇಡ ಎಂದರೂ ನನ್ನನ್ನು ಆವರಿಸಿಕೊಳ್ಳುತ್ತವೆ. ಈ ಜೈಲಿನ ಕೊನೆಯೇ ಕಿರಿದಾಗುತ್ತಾ ಬಂದು ನನ್ನ ದೇಹವನ್ನು ಮತ್ತು ಮನಸ್ಸನ್ನು ಉಸಿರುಗಟ್ಟಿಸಿ ಬಿಡುತ್ತವೆ ಎಂಬಂತೆ ಭಾಸವಾಗುತ್ತದೆ. 

ಮನೆಯವರ ಜೊತೆ ವಾರಕ್ಕೊಮ್ಮೆ ಫೋನ್ ಕಾಲ್ ಮತ್ತು ವಾರಕ್ಕೆ ಎರಡು ಬಾರಿಯ ಹತ್ತು ನಿಮಿಷದ ವಿಡಿಯೋ ಕಾಲ್ ಗಾಗಿ ಕಾತರದಿಂದ ಕಾಯುತ್ತೇನೆ. ಆದರೆ ನಾವು ಮಾತು ಪ್ರಾರಂಭಿಸುತ್ತಿರುವಾಗಲೇ ಟೈಮರ್ ಬಾರಿಸಲಾರಂಭಿಸಿ ಕಾಲ್ ಕಟ್ ಆಗುತ್ತದೆ. ಈ ಹಿಂದೆಂದೂ ಮನದಟ್ಟಾಗದ ಪ್ರತಿ ಸೆಕೆಂಡಿನ ಮೌಲ್ಯ ಈಗ ಮನೆಯವರೊಂದಿಗೆ ಮಾತಾಡುವಾಗ ನನಗಾಗುತ್ತಿದೆ. 

ಎಪ್ರಿಲ್ ಮಧ್ಯದಲ್ಲಿ ನನ್ನ ತಾಯಿ ಮತ್ತು ಇತರ ಹಲವು ಸಂಬಂಧಿಕರು ಕೋವಿಡ್ ಪಾಸಿಟಿವ್ ಆಗಿದ್ದಾರೆಂದು ಗೊತ್ತಾಯಿತು. ನನ್ನ ಚಿಕ್ಕಪ್ಪನವರ ಪರಿಸ್ಥಿತಿ ಗಂಭೀರವಾಗಿತ್ತು. ಅವರ ಆಕ್ಸಿಜನ್ ಮಟ್ಟ ಕುಸಿಯುತ್ತಿತ್ತು. ಅವರನ್ನು ಕೊನೆಗೆ ಐಸಿಯುಗೆ ದಾಖಲಿಸಲಾಗಿತ್ತು. ಮನೆಯವರ ಈ ಸಂಕಷ್ಟದ ನಡುವೆಯೇ ಒಂದು ದಿನ ಬೆಳಗ್ಗೆ ಏಳುವಾಗ ನನಗೆ ಜ್ವರ ಮತ್ತು ತೀವ್ರ ಮೈಕೈ ನೋವು ಕಾಡುತ್ತಿತ್ತು. ಜೈಲಿನ ಓಪಿಡಿಗೆ ಪರೀಕ್ಷೆಗಾಗಿ ಹೋದರೆ ಅವರು ಕೆಲವು ಔಷಧಿ ಕೊಟ್ಟು ವಾಪಸ್ ಕಳಿಸಿಬಿಟ್ಟರು. ಆರು ದಿನ ಹಾಗೆಯೇ ರೋಗಲಕ್ಷಣಗಳೊಂದಿಗೆ ಕಳೆದು ಕೊನೆಗೆ ಕೋರ್ಟ್ ಆದೇಶ ಪಡೆದ ಬಳಿಕ ಟೆಸ್ಟ್ ಮಾಡಿದರು. ನನಗೆ ಪಾಸಿಟಿವ್ ಬಂತು.

ಪಾಸಿಟಿವ್ ಆದ ಬಳಿಕ ನನಗೆ ಎಲ್ಲ ಅಗತ್ಯ ವೈದ್ಯಕೀಯ ಚಿಕಿತ್ಸೆ ಸಿಕ್ಕಿತು. ನನ್ನನ್ನು ಕ್ವಾರಂಟೈನ್ ಮಾಡಿಸಿದರು. ಸಹಜವಾಗಿ ಕ್ವಾರಂಟೈನ್ ನಿಂದಾಗಿ ವಾರದ ಮನೆಯವರ ಜೊತೆಗಿನ ಫೋನ್ ಕಾಲ್, ವಿಡಿಯೋ ಕಾಲ್ ಬಂದ್ ಆಯಿತು. ಸೆಲ್ ನೊಳಗೆ ಅಸಹಾಯಕನಾಗಿ ಬಿದ್ದುಕೊಂಡು ಮನೆಯವರ ಪರಿಸ್ಥಿತಿ ಏನಾಗಿದೆಯೋ ಎಂಬ ಆತಂಕದಲ್ಲೇ ಕೊರೊನದಿಂದ ಗುಣಮುಖನಾಗುತ್ತಾ ಬಂದೆ. 

ಪ್ರಕ್ರಿಯೆಯೇ ಶಿಕ್ಷೆ 

ದಿಲ್ಲಿ ಹೈಕೋರ್ಟ್ ಉನ್ನತ ಮಟ್ಟದ ಸಮಿತಿ ರಚಿಸಿ ಕಳೆದ ವರ್ಷದಂತೆ ಈ ಬಾರಿಯೂ ಕೋವಿಡ್ ಕಾರಣಕ್ಕಾಗಿ ಬಂಧಿತರನ್ನು ತುರ್ತು ಪೆರೋಲ್ ಅಥವಾ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ನೋಡಲು ಹೇಳಿದ್ದನ್ನು ಕ್ವಾರಂಟೈನ್ ನಡುವೆಯೇ ಓದಿದ್ದೆ. ಆದರೆ ಕಳೆದ ವರ್ಷದ ಅನುಭವದಿಂದ ಯುಎಪಿಎ ಕಾಯ್ದೆಯಡಿ ಬಂಧಿತರಿಗೆ ಅಂತಹ ರಿಯಾಯಿತಿ ಸಿಗುವುದಿಲ್ಲ ಎಂದು ಗೊತ್ತಿತ್ತು. ಕೊನೆಗೆ ಅದೇ ಖಚಿತವಾಯಿತು. 

ನಮಗೆ ಸಾಮಾನ್ಯ ಜಾಮೀನಿನ ಮೂಲಕ ಮಾತ್ರ ಬಿಡುಗಡೆ ಸಾಧ್ಯ. ಆದರೆ ಯುಎಪಿಎ ಅಡಿಯಲ್ಲಿ ಅದು ಹೆಚ್ಚು ಕಡಿಮೆ ಅಸಾಧ್ಯ ಅಥವಾ ತೀರಾ ಕಷ್ಟ.  

bail is the rule and jail an exception ( ಜಾಮೀನು ಕೊಡಬೇಕು, ತೀರಾ ಅನಿವಾರ್ಯವಾದರೆ ಮಾತ್ರ  ಜೈಲು) ಎಂಬ ಸುಪ್ರೀಂ ಕೋರ್ಟ್ ಹೇಳಿಕೆಯನ್ನೇ ಯುಎಪಿಎ ಕಾನೂನು ಉಲ್ಲಂಘಿಸುತ್ತದೆ. ಯುಎಪಿಎ ಪ್ರಕಾರ ಆರೋಪಿಯೇ ತನ್ನ ನಿರಪರಾಧಿತ್ವ ಸಾಬೀತುಪಡಿಸಬೇಕು. ಅಲ್ಲಿಯವರೆಗೆ ಆತ ಅಪರಾಧಿಯೇ. ಜಾಮೀನು ಕೊಡುವಾಗಲೂ ಇದೇ ನೀತಿ. ವಿಚಾರಣೆ ಮುಗಿಯುವವರೆಗೂ ಆರೋಪಿ ಇಲ್ಲಿ ಅಪರಾಧಿ.  ಇದು ದೇಶದ ಕಾನೂನಿಗೇ ವಿರುದ್ಧವಾದುದು. 

ಹಾಗಾಗಿ ಸುದೀರ್ಘ ಕಾಲ ವಿಚಾರಣೆ ನಡೆದ ಬಳಿಕವೇ ನಾವು ಬಿಡುಗಡೆಯಾಗುವ ಬಗ್ಗೆ ಕನಿಷ್ಠ ನಿರೀಕ್ಷೆ ಇಡಬೇಕಷ್ಟೆ. ನಮ್ಮ ಪ್ರಕರಣದಲ್ಲಿ ಮೊದಲ ಬಂಧನವಾಗಿ 14 ತಿಂಗಳು ಕಳೆದ ಮೇಲೂ ಇನ್ನೂ ವಿಚಾರಣೆ ಆರಂಭವಾಗಿಲ್ಲ. ನಮಗೆ ನಾವು ನಿರಪರಾಧಿಗಳು ಎಂದು ಸಾಬೀತುಪಡಿಸುವ ಅವಕಾಶವೇ ಸಿಕ್ಕಿಲ್ಲ. ಈ ಷಡ್ಯಂತ್ರದ ಪ್ರಕರಣದಲ್ಲಿ ಬಂಧಿತ ಎಲ್ಲ 16 ಮಂದಿ ವಿಚಾರಣಾ ಪೂರ್ವ ಬಂಧನದಲ್ಲಿದ್ದೇವೆ. ಈಗ ಕೊರೊನದಿಂದ ನ್ಯಾಯಾಧೀಶರು, ವಕೀಲರು, ಕೋರ್ಟ್ ಸಿಬ್ಬಂದಿಗಳು ಅನಾರೋಗ್ಯಕ್ಕೀಡಾಗಿ ಈ ಪ್ರಕರಣದ ವಿಚಾರಣೆ ಇನ್ನಷ್ಟು ವಿಳಂಬವಾಗುವುದು ಖಚಿತ.  

ಇಲ್ಲಿ ಪ್ರಕ್ರಿಯೆಯೇ ಶಿಕ್ಷೆ. ಇನ್ನು ಸಾಮಾನ್ಯ ಸಮಯದಲ್ಲೇ ಅತ್ಯಂತ ನಿಧಾನವಾಗಿ ಸಾಗುವ ಈ ವಿಚಾರಣೆಯ ಪ್ರಕ್ರಿಯೆ ಇವತ್ತಿನ ಪರಿಸ್ಥಿತಿಯಲ್ಲಂತೂ ತೀರಾ ಕ್ರೂರವಾಗಿ ಮಾರ್ಪಟ್ಟಿದೆ. 

ನಾನು ಬಿಡುಗಡೆಯಾಗಿದ್ದರೆ... 

ಇಂದಿನ ಅಸಾಮಾನ್ಯ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ಸರಕಾರ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬಹುದೇ? ನನಗೆ ಈ ಬಗ್ಗೆ ಹೆಚ್ಚು ಭರವಸೆ ಇಲ್ಲ. ಏಕೆಂದರೆ ಕಳೆದ ವರ್ಷ ಇದೇ ರೀತಿಯ ಸೋಂಕಿನ ಭಯದ ಸಂದರ್ಭದಲ್ಲೇ ಪ್ರತಿಭಟನೆಗೆ ನಿರ್ಬಂಧವಿರುವಾಗ, ಮಾಧ್ಯಮದ ಗಮನ ಸೋಂಕು ಹಾಗು ಆರ್ಥಿಕ ಹಿಂಜರಿತದ ಕಡೆ ಇರುವಾಗ ಆ ಸಂದರ್ಭವನ್ನು ಬಳಸಿಕೊಂಡು ಈ ಸರಕಾರ ಸಿಎಎ ವಿರುದ್ಧ ಮಾತಾಡಿದ ನಮ್ಮನ್ನು ಜೈಲಿಗಟ್ಟಿತ್ತು.  

ಇವತ್ತು ನಾವು ಜೈಲಿನಲ್ಲಿ ಇಲ್ಲದಿರುತ್ತಿದ್ದರೆ ಹೇಗಿರುತ್ತಿತ್ತು ಎಂದು ನಾನು ಯೋಚಿಸುತ್ತಿರುತ್ತೇನೆ. ನಾವು ಯಾರು ಏನು ಎಂದು ಅವರ ಗುರುತು ನೋಡದೆ ಅಗತ್ಯ ಇರುವವರಿಗೆ ಸಹಾಯ ಹಸ್ತ ಚಾಚುತ್ತಿದ್ದೆವು, ಅವರೊಂದಿಗೆ ನಿಲ್ಲುತ್ತಿದ್ದೆವು. ಆದರೆ ಈಗ ನಾವಿಲ್ಲಿ ಏಕಾಂಗಿಯಾಗಿಬಿಟ್ಟಿದ್ದೇವೆ - ಸೋಂಕು ಹಾಗು ಅದು ಹರಡಿರುವ ಭಯವನ್ನು ನೋಡುತ್ತಾ ಕೂತಿದ್ದೇವೆ. ನತಾಶಾ ಬದುಕಿನಲ್ಲಿ  ವೈಯಕ್ತಿಕ ದುರಂತವೂ ನಡೆದು ಹೋಗಿದೆ.  

ಕಳೆದ 14 ತಿಂಗಳಲ್ಲಿ ಅದೆಷ್ಟೋ ಜೀವ ಹೋಗಿವೆ. ಜೊತೆಗೆ ಈ ಅವಧಿಯಲ್ಲಿ ಜನರ ಮಾನಸಿಕ ಆರೋಗ್ಯದ ಮೇಲೂ ಭಾರೀ ಒತ್ತಡ ಬಿದ್ದಿದೆ ಎಂದು ಪರಿಣತರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಜನರು ರಾಜಕೀಯ ಕೈದಿಗಳು ಹಾಗು ಅವರ ಕುಟುಂಬದವರ ಬಗ್ಗೆಯೂ ಯೋಚಿಸಿದರೆ ಒಳ್ಳೆಯದಿತ್ತು.  ಕಳೆದೊಂದು ವರ್ಷದಿಂದ ತನ್ನ ಮಗಳನ್ನು ಬಿಡುಗಡೆ ಮಾಡಲು ಹೋರಾಟ ಮಾಡುತ್ತಿದ್ದ ಮಹಾವೀರ್ ನರ್ವಾಲ್ ಕೊನೆಗೆ ಕೋವಿಡ್ ಗೆ ತುತ್ತಾಗಿ ಬಿಟ್ಟರು. ಜನರು ನತಾಶಾ ಬಗ್ಗೆಯೂ ಯೋಚಿಸಬೇಕು. ತನ್ನ ತಂದೆಯ ಕೊನೆ ದಿನಗಳಲ್ಲಿ ಅವರ ಜೊತೆಗಿರಲು ಸಾಧ್ಯವಾಗದ ಆಕೆ ಈಗ ತಂದೆಯ ಅಂತಿಮ ವಿಧಿ ವಿಧಾನ ಮುಗಿಸಿ ಮೂರು ವಾರಗಳಲ್ಲಿ ಮತ್ತೆ ಜೈಲಿಗೆ ಬರಬೇಕಾಗಿದೆ. 

(ಬನೋ ಜ್ಯೋತ್ಸ್ನಾ ಲಾಹಿರಿ ಮತ್ತು ಅನಿರ್ಬನ್ ಭಟ್ಟಾಚಾರ್ಯ ಅವರಿಗೆ ಹೇಳಿದ್ದು )

ಉಮರ್ ಖಾಲಿದ್ ಸಾಮಾಜಿಕ ಕಾರ್ಯಕರ್ತ ಹಾಗು ಜೆ ಎನ್ ಯು ಮಾಜಿ ವಿದ್ಯಾರ್ಥಿ. ಸೆಪ್ಟೆಂಬರ್ 13, 2020 ರಂದು ಯುಎಪಿಎ ಕಾಯ್ದೆಯಡಿ ಅವರನ್ನು ದಿಲ್ಲಿ ಪೊಲೀಸರು ಬಂಧಿಸಿದ್ದು ಆ ಬಳಿಕ ಅವರು ತಿಹಾರ್ ಜೈಲಿನಲ್ಲಿದ್ದಾರೆ.  

ಕೃಪೆ : theprint.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News