ರಾಜಸ್ಥಾನ: ಸತ್ತಿದ್ದಾನೆ ಎಂದು ಭಾವಿಸಲಾಗಿದ್ದ ವ್ಯಕ್ತಿ ಅಂತ್ಯಸಂಸ್ಕಾರದ ಬಳಿಕ ಪ್ರತ್ಯಕ್ಷ

Update: 2021-05-27 18:02 GMT
ಸಾಂದರ್ಭಿಕ ಚಿತ್ರ

 ಜೈಪುರ,ಮೇ 27: ರಾಜಸ್ಥಾನದ ರಾಜಸಮಂದ್ ಜಿಲ್ಲೆಯ 40ರ ಹರೆಯದ ವ್ಯಕ್ತಿಯೋರ್ವ ತನ್ನ ‘ಅಂತ್ಯಸಂಸ್ಕಾರ ’ ನಡೆದ ಒಂದು ವಾರದ ಬಳಿಕ ಪ್ರತ್ಯಕ್ಷನಾಗಿದ್ದಾನೆ. ಕೊಳೆತು ಹೋಗಿದ್ದ ಶವ ಓಂಕಾರ ಲಾಲ ಗಡುಲಿಯಾನದು ಎಂದು ತಪ್ಪಾಗಿ ಗುರುತಿಸಿದ್ದ ಆತನ ಕುಟುಂಬವು ಅಂತ್ಯಸಂಸ್ಕಾರವನ್ನು ನಡೆಸಿತ್ತು. 

ಮದ್ಯವ್ಯಸನಿಯಾಗಿದ್ದ ಗಡುಲಿಯಾ ಮೇ 11ರಂದು ತನ್ನ ಕುಟುಂಬ ಸದಸ್ಯರಿಗೆ ತಿಳಿಸದೆ ಉದಯಪುರಕ್ಕೆ ತೆರಳಿದ್ದ. ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಯಿಂದಾಗಿ ಆತನನ್ನು ಅಲ್ಲಿಯ ಸರಕಾರಿ ಆರ್ಕೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೋನ ವೈರಸ್ ಲಾಕ್ಡೌನ್ ಬಳಿಕ ಗಡುಲಿಯಾನ ಕುಟುಂಬ ಆತನ ಸೋದರನೊಂದಿಗೆ ವಾಸವಿದೆ.

ಅದೇ ದಿನ ಮೋಹಿ ನಿವಾಸಿ ಗೋವರ್ಧನ ಪ್ರಜಾಪತ್ ಎಂಬಾತನನ್ನು ಕೆಲವು ಜನಪ್ರತಿನಿಧಿಗಳು ವ್ಯವಸ್ಥೆ ಮಾಡಿದ್ದ ಆ್ಯಂಬುಲನ್ಸ್ನಲ್ಲಿ ತಂದು ಅದೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ಸಂದರ್ಭ ಆತ ಕೊನೆಯುಸಿರೆಳೆದಿದ್ದ. ಶವವು ವಾರಸುದರರಿಲ್ಲದೆ ಶವಾಗಾರದಲ್ಲಿ ಮೂರು ದಿನಗಳ ಕಾಲ ಬಿದ್ದುಕೊಂಡಿತ್ತು. ಆಸ್ಪತ್ರೆಯು ನೀಡಿದ ಮಾಹಿತಿಯ ಮೇರೆಗೆ ಕಂಕ್ರೋಲಿ ಪೊಲೀಸರು ಅನಾಥ ಶವದ ಚಿತ್ರಗಳನ್ನು ಪ್ರಚುರಪಡಿಸಿದ್ದರು. ಗಡುಲಿಯಾನ ಕುಟುಂಬ ಸದಸ್ಯರು ಮೇ 15ರಂದು ಶವಾಗಾರಕ್ಕೆ ತೆರಳಿ ಇದು ಆತನದೇ ಶವ ಎಂದು ಗುರುತಿಸಿದ್ದರು. 

ಶವದ ಬಲಗೈ ಮೇಲಿದ್ದ ಕಲೆ ಮತ್ತು ನೋಟ ಅವರು ಶವವನ್ನು ತಪ್ಪಾಗಿ ಗುರುತಿಸುವಂತೆ ಮಾಡಿತ್ತು. ಪೊಲೀಸರು ಮರಣೋತ್ತರ ಪರೀಕ್ಷೆ ಮತ್ತು ಡಿಎನ್ಎ ಪರೀಕ್ಷೆ ನಡೆಸದೆ ಶವವನ್ನು ಗಡುಲಿಯಾನ ಕುಟುಂಬಕ್ಕೆ ಹಸ್ತಾಂತರಿಸಿದ್ದರು ಮತ್ತು ಅದೇ ದಿನ ಅಂತ್ಯಸಂಸ್ಕಾರ ನಡೆದಿತ್ತು.
 
ಮೇ 23ರಂದು ಗಡುಲಿಯಾ ಮನೆಗೆ ಮರಳಿದಾಗ ತಾನು ಸತ್ತಿದ್ದೇನೆ ಎಂದು ಮನೆಯವರು ನಂಬಿದ್ದನ್ನು ತಿಳಿದು ಆಘಾತಗೊಂಡಿದ್ದ.ನಪೊಲೀಸರು ತನಿಖೆ ನಡೆಸಿದ ಬಳಿಕ ಅನಾಥ ಶವ ಪ್ರಜಾಪತ್ ನದಾಗಿತ್ತು ಎಂಬ ಅಂಶ ಬಹಿರಂಗಗೊಂಡಿತ್ತು. ನರ್ಸಿಂಗ್ ಮತ್ತು ಶವಾಗಾರದ ಸಿಬ್ಬಂದಿಗಳ ಬೇಜವಾಬ್ದಾರಿ ಈ ಘಟನೆಗೆ ಕಾರಣವಾಗಿತ್ತು ಎಂದು ಆಸ್ಪತ್ರೆಯ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News