ಟ್ರ್ಯಾಕ್ಟರ್ ರ‍್ಯಾಲಿ ಹಿಂಸಾಚಾರದ ಹಿಂದೆ ವ್ಯವಸ್ಥಿತ ಷಡ್ಯಂತ್ರ : ದಿಲ್ಲಿ ಪೊಲೀಸರ ಚಾರ್ಜ್ ಶೀಟ್

Update: 2021-05-28 18:49 GMT

ಹೊಸದಿಲ್ಲಿ, ಮೇ 28: ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರ ನಿಶಾನ್ ಸಾಹಿಬ್ ಮತ್ತು ಕಿಸಾನ್ ಧ್ವಜವನ್ನು ಕೆಂಪುಕೋಟೆಯಲ್ಲಿ ಅರಳಿಸುವ ಮೂಲಕ ಭಾರತಕ್ಕೆ ಮುಜುಗರ ತರಲು ಚೆನ್ನಾಗಿ ಯೋಚಿಸಿದ ಪಿತೂರಿಯಾಗಿದೆ ಎಂದು ಜನವರಿ 26ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ಆರೋಪಪಟ್ಟಿಯಲ್ಲಿ ದಿಲ್ಲಿ ಪೊಲೀಸರು ಪ್ರತಿಪಾದಿಸಿದ್ದಾರೆ. 

ನಿಶಾನ್ ಸಾಹಿಬ್ ಸಿಖ್ ಧರ್ಮೀಯರ ಗುರುದ್ವಾರದ ಮೇಲೆ ಅರಳಿಸುವ ಧಾರ್ಮಿಕ ಸಂಕೇತದ ಧ್ವಜವಾಗಿದ್ದರೆ , ಕಿಸಾನ್ ಧ್ವಜ ರೈತ ಸಂಘಟನೆಗೆ ಸಂಬಂಧಿಸಿದ್ದಾಗಿದೆ. 
ದೇಶದ ಜನರನ್ನು  ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ತೇಜೋವಧೆ ಮಾಡಿ ಮುಜುಗರ ತರುವ ಉದ್ದೇಶದಿಂದ ಹಿಂಸಾಚಾರವನ್ನು ಯೋಜಿಸಲಾಗಿದೆ. ಪ್ರಜಾಪ್ರಭುತ್ವ ದಿನದಂದು ರೈತರು ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್ ರ್ಯಾಲಿಗೆ ಸೂಚಿಸಿದ್ದ 3 ಮಾರ್ಗಗಳ ಕುರಿತು  ಪೊಲೀಸರು ಹಾಗೂ ರೈತ ಸಂಘಟನೆಗಳ ನಡುವೆ ನಡೆದ ಒಪ್ಪಂದವನ್ನು ಉಲ್ಲಂಘಿಸಲು ಸುಸಂಘಟಿತವಾಗಿ ರೂಪಿಸಿದ ಷಡ್ಯಂತ್ರ ಇದಾಗಿದೆ. ಈ ಪಿತೂರಿ 2 ಅಂಶಗಳನ್ನು ಹೊಂದಿತ್ತು. ಮೊದಲನೆಯದು ಕೆಂಪುಕೋಟೆಗೆ ತೆರಳಿ ಅದನ್ನು ಆಕ್ರಮಿಸಿಕೊಳ್ಳುವುದು, ಎರಡನೆಯದು ಕೆಂಪುಕೋಟೆಯನ್ನು ರೈತರ ಪ್ರತಿಭಟನೆಗೆ ಹೊಸ ಸ್ಥಳವನ್ನಾಗಿಸುವುದು ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ. 

ಪಂಜಾಬ್ ನಟ, ಕಾರ್ಯಕರ್ತ ದೀಪ್ ಸಿಧು ಸಹಿತ 16 ಆರೋಪಿಗಳನ್ನು ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ. ಮೇ 17ರಂದು ಆರೋಪಟ್ಟಿಯನ್ನು ತೀಸ್ಹಝಾರಿ ಕೋರ್ಟ್ಗೆ ಸಲ್ಲಿಸಲಾಗಿದೆ ಎಂದು ವರದಿಯಾಗಿದೆ. 30ರಿಂದ 40ರಷ್ಟು ಟ್ರ್ಯಾಕ್ಟರ್ ಹಾಗೂ 150 ದ್ವಿಚಕ್ರ ವಾಹನದಲ್ಲಿ ಬಂದಿದ್ದ 1,000 ಜನರು ಬಲವಂತವಾಗಿ ಕೆಂಪುಕೋಟೆಯನ್ನು ಪ್ರವೇಶಿಸಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ ಎಂದು ದಿಲ್ಲಿ ಪೊಲೀಸರ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News