ʼನಕಲಿ ಟೂಲ್ ಕಿಟ್ʼ ವಿವಾದ: ಟ್ವಿಟ್ಟರ್ ಕಚೇರಿ ಮೇಲೆ ದಾಳಿ ʼರಾಜಕೀಯ ಪ್ರೇರಿತ'; ದಿಲ್ಲಿ ಪೊಲೀಸರಿಗೆ ಕಾಂಗ್ರೆಸ್ ಪತ್ರ

Update: 2021-05-28 13:23 GMT

ಹೊಸದಿಲ್ಲಿ : ಟೂಲ್ ಕಿಟ್ ವಿವಾದ ಕುರಿತಂತೆ ಇತ್ತೀಚೆಗೆ  ಟ್ವಿಟ್ಟರ್ ಕಚೇರಿಗೆ ದಿಲ್ಲಿ ಪೊಲೀಸರು ದಾಳಿ ನಡೆಸಿರುವ ಕುರಿತು  ಕಟುವಾಗಿ ಟೀಕಿಸಿರುವ ಕಾಂಗ್ರೆಸ್ ಇದೀಗ ದಿಲ್ಲಿ ಪೊಲೀಸರಿಗೆ ಪತ್ರ ಬರೆದು ಟ್ವಿಟ್ಟರ್ ಕಚೇರಿಗಳಿಗೆ ನಡೆದ ದಾಳಿ "ಅಕ್ರಮ ಮತ್ತು ರಾಜಕೀಯ ಪ್ರೇರಿತ"  ಹಾಗೂ  ʼಟೂಲ್ ಕಿಟ್' ಅನ್ನು ಶೇರ್ ಮಾಡಿದ ಆರೋಪ ಎದುರಿಸುತ್ತಿರುವ ಹಿರಿಯ ಬಿಜೆಪಿ ನಾಯಕರನ್ನು ಬಚಾವ್ ಮಾಡುವ ಪ್ರಯತ್ನವಾಗಿದೆ ಎಂದು ಆರೋಪಿಸಿದೆ.

ಈ ಕುರಿತು ಕಾಂಗ್ರೆಸ್ ಸಂಶೋಧನಾ ತಂಡದ ಮುಖ್ಯಸ್ಥ ರಾಜೀವ್ ಗೌಡ, ಪಕ್ಷದ ಸೋಶಿಯಲ್ ಮೀಡಿಯಾ ಟೀಮ್ ಮುಖ್ಯಸ್ಥ ರೋಹನ್ ಗುಪ್ತಾ ಹಾಗೂ ವಕೀಲ ಅಮನ್ ಪನ್ವರ್ ಅವರು ದಿಲ್ಲಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.  ನಕಲಿ ʼಕಾಂಗ್ರೆಸ್ ಟೂಲ್ ಕಿಟ್' ಅನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಬಿಜೆಪಿ ನಾಯಕರ ವಿರುದ್ಧ ಪಕ್ಷ ಮೇ 18ರಂದು ದೂರಿರುವ ಹೊರತಾಗಿಯೂ ಎಫ್‍ಐಆರ್ ದಾಖಲಿಸಲಾಗಿರಲಿಲ್ಲ ಎಂದು ಕಾಂಗ್ರೆಸ್ ಹೇಳಿದೆಯಲ್ಲದೆ ಪ್ರಕರಣದಲ್ಲಿ ಮೇ 19ರಂದು ಎಫ್‍ಐಆರ್ ದಾಖಲಿಸಿ ಛತ್ತೀಸಗಢ ಪೊಲೀಸರು ತನಿಖೆ ನಡೆಸುತ್ತಿರುವುದರಿಂದ ಈ ವಿಚಾರದಲ್ಲಿ ತನಿಖೆ ನಡೆಸಲು ದಿಲ್ಲಿ ಪೊಲೀಸರಿಗೆ ಯಾವುದೇ ಅಧಿಕಾರವಿಲ್ಲ ಎಂದು ಹೇಳಿದೆ.

ಹಲವಾರು  ಅಪೀಲುಗಳ ಹೊರತಾಗಿಯೂ ಎಫ್‍ಐಆರ್ ದಾಖಲಿಸದ ದಿಲ್ಲಿ ಪೊಲೀಸರು ಛತ್ತೀಗಢ ಪೊಲೀಸರ ತನಿಖೆಯನ್ನು ಬುಡಮೇಲುಗೊಳಿಸುವ ಉದ್ದೇಶದಿಂದ ಟ್ವಿಟ್ಟರ್ ಕಚೇರಿಗೆ ದಾಳಿ ನಡೆಸಿದ್ದಾರೆ ಎಂದು ಕಾಂಗ್ರೆಸ್ ನಾಯಕರು ತಮ್ಮ ಪತ್ರದಲ್ಲಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News