ಕಳೆದ ಒಂದು ತಿಂಗಳಿನಿಂದ ರಿಪಬ್ಲಿಕ್ ಟಿವಿಯಲ್ಲಿ ಕಾಣಿಸಿಕೊಳ್ಳದ ಅರ್ನಬ್ ಗೋಸ್ವಾಮಿ

Update: 2021-05-29 06:54 GMT

ಹೊಸದಿಲ್ಲಿ: ರಿಪಬ್ಲಿಕ್ ಟಿವಿಯ ಸ್ಥಾಪಕರೂ ಆಗಿರುವ ಟಿವಿ ನಿರೂಪಕ ಅರ್ನಬ್ ಗೋಸ್ವಾಮಿ  ತನ್ನ ಸ್ವಂತ ಟಿವಿ ಚಾನೆಲ್ ಗಳಿಂದ ಒಂದು ತಿಂಗಳಿನಿಂದ ನಿಗೂಢವಾಗಿ ಗೈರಾಗಿರುವುದಕ್ಕೆ ಟ್ವಿಟರಿಗರು ಗೊಂದಲಕ್ಕೀಡಾಗಿದ್ದು, ನೆಟ್ಟಿಗರು ‘ಅರ್ನಬ್ ಗೋಸ್ವಾಮಿ ಎಲ್ಲಿದ್ದಾರೆ?’ ಎಂದು ಕೇಳಲು ಆರಂಭಿಸಿದ್ದಾರೆ.

ರಿಪಬ್ಲಿಕ್ ಟಿವಿಯ ಚರ್ಚಾ ಕಾರ್ಯಕ್ರಮದಲ್ಲಿ ಅರ್ನಬ್ ಕೊನೆಯ ಬಾರಿ ಕಾಣಿಸಿಕೊಂಡಿದ್ದು ಎಪ್ರಿಲ್ 23ರಂದು ಅದು ಕೂಡ ಸ್ಟುಡಿಯೋದಲ್ಲಲ್ಲ, ಬದಲು ಬೇರೊಂದು ಸ್ಥಳದಿಂದ. ಪಶ್ಚಿಮ ಬಂಗಾಳ ಸೇರಿದಂತೆ ಐದು ರಾಜ್ಯಗಳ ಚುನಾವಣೆಯ ಫಲಿತಾಂಶ ಪ್ರಕಟವಾದ ಮೇ 2 ರಂದು ರಿಪಬ್ಲಿಕ್ ಟಿವಿಯಲ್ಲಿ ಸ್ವಲ್ಪ ಹೊತ್ತು ಕಾಣಿಸಿಕೊಂಡಿದ್ದರು. ಆದರೆ ಪಶ್ಚಿಮ ಬಂಗಾಳದಲ್ಲಿ ಮತ್ತೆ ಮಮತಾ ಬ್ಯಾನರ್ಜಿ ಅವರ ಪಕ್ಷವೇ ಅಧಿಕಾರಕ್ಕೆ ಬರಲಿದೆ ಹಾಗೂ ಬಿಜೆಪಿ ಸೋಲುತ್ತಿದೆ ಎಂಬುದು ಸ್ಪಷ್ಟವಾಗುತ್ತಲೇ ನಿರೂಪಕ ಆತುರದಿಂದ ನಿರ್ಗಮಿಸಿದ್ದರು. ಈ ಬೆಳವಣಿಗೆ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಸಾರ್ವಜನಿಕ ಅಪಹಾಸ್ಯದ ವಿಷಯವಾಗಿತ್ತು.

ರಿಪಬ್ಲಿಕ್ ಟಿವಿಯಲ್ಲಿ ಇಂಗ್ಲೀಷ್ ಡಿಬೇಟ್ ಶೋವನ್ನು ಅರ್ನಬ್ ಮುಂಚೂಣಿಯಲ್ಲಿ ನಿಂತು ನಡೆಸಿಕೊಡುತ್ತಿದ್ದರು. 'ರಿಪಬ್ಲಿಕ್ ಭಾರತ್' ಚಾನೆಲ್ ನಲ್ಲಿ ‘ಪೂಚ್ತಾ ಹೈ ಭಾರತ್’ ಕಾರ್ಯಕ್ರಮವನ್ನು ಪ್ರಸ್ತುತಪಡಿಸುತ್ತಿದ್ದರು.

ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಆರಂಭವಾಗಲು  ಸ್ವಲ್ಪ ಮೊದಲು, ಅವರು ತಮ್ಮ ಬಂಗಾಳಿ ಚಾನೆಲ್, ರಿಪಬ್ಲಿಕ್ ಬಾಂಗ್ಲಾವನ್ನು ಸಹ ಆರಂಭಿಸಿದ್ದರು. ಗೋಸ್ವಾಮಿ ಅವರ ಅನುಪಸ್ಥಿತಿಯಲ್ಲಿ ಈ ಶೋವನ್ನು ಅವರ ಸಹೋದ್ಯೋಗಿಗಳು ನಡೆಸಿಕೊಡುತ್ತಿದ್ದಾರೆ.

"ಅರ್ನಬ್ ಎಲ್ಲಿ? ಕಳೆದ 3-4 ತಿಂಗಳುಗಳಿಂದ ಅವರು ಟ್ರೆಂಡಿಂಗ್ ಆಗುತ್ತಿಲ್ಲ ಹಾಗೂ ಅವರ ಕುರಿತು ಮೀಮ್ಸ್ ನೋಡಿಲ್ಲ. ಜೀವನ ಬೋರ್ ಆಗಿ ಬಿಟ್ಟಿದೆ,'' ಎಂದು ಟ್ವಿಟ್ಟರಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.

"ಅರ್ನಬ್ ಎಲ್ಲಿ ಎಂದು ನನ್ನ ತಾಯಿ ಕಳೆದ ಹಲವು ದಿನಗಳಿಂದ ಕೇಳುತ್ತಿದ್ದಾರೆ. ದಯವಿಟ್ಟು ತಿಳಿಸಿ,  ನಾನು ಆ ಮಾಹಿತಿಯನ್ನು ತಾಯಿಗೆ ನೀಡುತ್ತೇನೆ,'' ಎಂದು ಇನ್ನೊಬ್ಬರು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News