ಕೋವಿಡ್ ನಿಂದ ಅನಾಥವಾಗಿರುವ ಮಕ್ಕಳಿಗೆ ಉಚಿತ ಶಿಕ್ಷಣ, 10 ಲಕ್ಷ ರೂ. ನಗದು: ಕೇಂದ್ರ ಸರಕಾರ ಘೋಷಣೆ

Update: 2021-05-29 18:00 GMT

ಹೊಸದಿಲ್ಲಿ,ಮೇ 29: ಕೋವಿಡ್ ಸಾಂಕ್ರಾಮಿಕದಿಂದಾಗಿ ಹೆತ್ತವರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳಿಗೆ ನೆರವಾಗುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಪಿಎಂ ಕೇರ್ಸ್ ನಡಿ ಹಲವಾರು ಸೌಲಭ್ಯಗಳನ್ನು ಪ್ರಕಟಿಸಿದ್ದಾರೆ.

  
ಪ್ರತಿ ಅನಾಥ ಮಗುವಿಗೆ 18 ವರ್ಷ ಪ್ರಾಯವಾದಾಗ 10 ಲ.ರೂ.ಗಳ ನಿಧಿಯನ್ನು ಸೃಷ್ಟಿಸಲು ವಿಶೇಷವಾಗಿ ರೂಪಿಸಲಾದ ಯೋಜನೆಯ ಮೂಲಕ ಪಿಎಂ ಕೇರ್ಸ್ ಕೊಡುಗೆಯನ್ನು ನೀಡಲಿದೆ. 

ಮಕ್ಕಳ ಉನ್ನತ ಶಿಕ್ಷಣದ ಅವಧಿಯಲ್ಲಿ ಅವರ ವೈಯಕ್ತಿಕ ಅಗತ್ಯಗಳನ್ನು ಪೂರೈಸಲು ಮಾಸಿಕ ಸ್ಟೈಫಂಡ್ ನೀಡಲು ಈ ನಿಧಿಯನ್ನು ಬಳಸಲಾಗುವುದು. ಮಕ್ಕಳಿಗೆ 23 ವರ್ಷ ಪ್ರಾಯವಾದಾಗ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಬಳಕೆಗಾಗಿ ಏಕಗಂಟಿನಲ್ಲಿ 10 ಲ.ರೂ.ಗಳನ್ನು ಪಡೆಯುತ್ತಾರೆ. ಸರಕಾರವು ಇಂತಹ ಮಕ್ಕಳಿಗೆ ಉಚಿತ ಶಿಕ್ಷಣ ದೊರೆಯುವಂತೆಯೂ ನೋಡಿಕೊಳ್ಳಲಿದೆ.

ಉನ್ನತ ಶಿಕ್ಷಣಕ್ಕಾಗಿ ಶಿಕ್ಷಣ ಸಾಲವನ್ನು ಪಡೆಯಲು ಮಕ್ಕಳಿಗೆ ನೆರವು ನೀಡಲಾಗುವುದು ಮತ್ತು ಇಂತಹ ಸಾಲಗಳ ಮೇಲಿನ ಬಡ್ಡಿಯನ್ನು ಪಿಎಂ ಕೇರ್ಸ್ ಭರಿಸಲಿದೆ. ಮಕ್ಕಳಿಗೆ 18 ವರ್ಷಗಳಾಗುವವರೆಗೆ ಆಯುಷ್ಮಾನ್ ಭಾರತ ಯೋಜನೆಯಡಿ ಐದು ಲ.ರೂ.ಗಳ ಆರೋಗ್ಯ ವಿಮೆಯನ್ನು ಒದಗಿಸಲಾಗುವುದು ಮತ್ತು ಇದರ ಪ್ರೀಮಿಯಂ ಅನ್ನು ಪಿಎಂ ಕೇರ್ಸ್ ಪಾವತಿಸಲಿದೆ.

10 ವರ್ಷ ಪ್ರಾಯಕ್ಕಿಂತ ಕೆಳಗಿನ ಮಕ್ಕಳಿಗೆ ಸಮೀಪದ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರವೇಶವನ್ನು ಕಲ್ಪಿಸಲಾಗುವುದು. ಮಕ್ಕಳು ಖಾಸಗಿ ಶಾಲೆಗೆ ಸೇರಿದರೆ ಆರ್ಟಿಇ ನಿಯಮಗಳಂತೆ ಶುಲ್ಕಗಳನ್ನು ಪಿಎಂ ಕೇರ್ಸ್ ಪಾವತಿಸುತ್ತದೆ. 11ರಿಂದ 18 ವರ್ಷಗಳ ನಡುವಿನ ಮಕ್ಕಳಿಗೆ ಸೈನಿಕ ಶಾಲೆ, ನವೋದಯ ವಿದ್ಯಾಲಯಗಳಂತಹ ಕೇಂದ್ರ ಸರಕಾರದ ಯಾವುದೇ ಸನಿವಾಸ ಶಾಲೆಯಲ್ಲಿ ಪ್ರವೇಶವನ್ನು ನೀಡಲಾಗುವುದು. ಮಕ್ಕಳು ಪೋಷಕರು/ಅಜ್ಜ-ಅಜ್ಜಿ/ಬಂಧುಗಳ ರಕ್ಷಣೆಯಲ್ಲಿ ಮುಂದುವರಿಯುವುದಾದರೆ ಸಮೀಪದ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರವೇಶವನ್ನು ಕಲ್ಪಿಸಲಾಗುವುದು. ಮಕ್ಕಳು ಖಾಸಗಿ ಶಾಲೆಗೆ ಸೇರಿದರೆ ಆರ್ಟಿಇ ನಿಯಮಗಳಂತೆ ಶುಲ್ಕಗಳನ್ನು ಪಿಎಂ ಕೇರ್ಸ್ ಪಾವತಿಸುತ್ತದೆ.

ಈ ಎರಡೂ ಗುಂಪುಗಳ ಮಕ್ಕಳ ಸಮವಸ್ತ್ರ, ಪಠ್ಯಪುಸ್ತಕಗಳು ಮತ್ತು ನೋಟ್ ಬುಕ್ ಗಳ ವೆಚ್ಚವನ್ನು ಪಿಎಂ ಕೇರ್ಸ್ ಪಾವತಿಸುತ್ತದೆ.

 ಮಕ್ಕಳು ಭಾರತದಲ್ಲಿ ವೃತ್ತಿಪರ ಕೋರ್ಸ್ ಗಳು/ಉನ್ನತ ಶಿಕ್ಷಣಕ್ಕಾಗಿ ಹಾಲಿ ನಿಯಮಗಳಡಿ ಶಿಕ್ಷಣ ಸಾಲವನ್ನು ಪಡೆಯಲು ನೆರವಾಗುವ ಜೊತೆಗೆ ಇಂತಹ ಸಾಲಗಳ ಮೇಲಿನ ಬಡ್ಡಿಯನ್ನು ಪಿಎಂ ಕೇರ್ಸ್ ಪಾವತಿಸಲಿದೆ.
ಪರ್ಯಾಯವಾಗಿ ಇಂತಹ ಮಕ್ಕಳಿಗೆ ಕೇಂದ್ರ ಅಥವಾ ರಾಜ್ಯ ಸರಕಾರಗಳ ಯೋಜನೆಗಳಡಿ ಸರಕಾರಿ ನಿಯಮಗಳಂತೆ ಪದವಿ ತರಗತಿ/ವೃತ್ತಿ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನಗಳನ್ನು ನೀಡಲಾಗುವುದು. ಹಾಲಿ ನಿಯಮಗಳಡಿ ವಿದ್ಯಾರ್ಥಿ ವೇತನಕ್ಕೆ ಅರ್ಹರಲ್ಲದ ವಿದ್ಯಾರ್ಥಿಗಳಿಗೆ ಅಷ್ಟೇ ಮೊತ್ತದ ವಿದ್ಯಾರ್ಥಿ ವೇತನವನ್ನು ಪಿಎಂ ಕೇರ್ಸ್ ಪಾವತಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News