ಬೆಂಗಳೂರು: ಕೇಂದ್ರ ಸಚಿವ ಸದಾನಂದಗೌಡರಿಗೆ ಘೇರಾವ್ ಹಾಕಿದ ಕಾಂಗ್ರೆಸ್ ಕಾರ್ಯಕರ್ತರು

Update: 2021-05-30 13:04 GMT

ಬೆಂಗಳೂರು, ಮೇ 30: ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಇಲ್ಲಿನ ಹೆಬ್ಬಾಳದ ಚೋಳನಾಯಕನಹಳ್ಳಿ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ನಿರ್ಮಿಸಿರುವ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಒಳಗೊಂಡಂತೆ ಸಾರ್ವಜನಿಕರು ಬಿಜೆಪಿಗೆ ಧಿಕ್ಕಾರ ಕೂಗುವ ಮೂಲಕ ಸಚಿವರಿಗೆ ಘೇರಾವ್ ಹಾಕಿದರು.

ಇಲ್ಲಿನ ಸ್ಥಳೀಯ ಶಾಸಕ ಭೈರತಿ ಸುರೇಶ್ 70 ಲಕ್ಷ ರೂ. ಹಾಗೂ ರೋಟರಿ ಸಂಸ್ಥೆ 30 ಲಕ್ಷ ರೂ. ಹಾಗೂ ಕೆಲವು ಸಂಘ, ಸಂಸ್ಥೆಗಳ ನೆರವಿನಿಂದಾಗಿ ಇಲ್ಲಿ 100 ಹಾಸಿಗೆಗಳ ಕೋವಿಡ್ ಸೆಂಟರ್ ನ್ನು ಆರಂಭಿಸಲಾಗಿದೆ. ಈಗ ಬಿಜೆಪಿ ನಾಯಕರು ಕೋವಿಡ್ ಸೆಂಟರ್ ಗೆ ಫೋಸ್ ಕೊಡಲು ಬರುತ್ತಿದ್ದಾರೆಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರು, ಚೋಳನಾಯಕನಹಳ್ಳಿ ರಾಜೀವ್‍ಗಾಂಧಿ ಆಸ್ಪತ್ರೆಯಲ್ಲಿ ನಿರ್ಮಿಸಿರುವ ಕೋವಿಡ್ ಆರೈಕೆ ಕೇಂದ್ರಕ್ಕೆ ಬಿಬಿಎಂಪಿ ವತಿಯಿಂದ 30 ಲಕ್ಷ ರೂ.ನೀಡಲಾಗಿದೆ. ಆದರೆ, ಕಾಂಗ್ರೆಸ್ ಇದರಲ್ಲಿ ರಾಜಕೀಯ ಮಾಡಲು ಮುಂದಾಗುತ್ತಿರುವುದು ಸರಿಯಲ್ಲ. ಕೇಂದ್ರ ಸಚಿವರಿಗೆ ಘೇರಾವ್ ಮಾಡುವುದು ಸರಿಯಲ್ಲವೆಂದು ತಿರುಗೇಟು ನೀಡಿದ್ದಾರೆ.

ಈ ವೇಳೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಆಸ್ಪತ್ರೆಯ ಸಂಬಂಧಿಸಿದ ಅಧಿಕಾರಿಗಳ ಬಳಿ ಇಲ್ಲಿನ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು. ನಂತರ ಸ್ಥಳದಿಂದಲೇ ಬಿಬಿಎಂಪಿ ಮುಖ್ಯ ಆಯಕ್ತ ಗೌರವ್‍ಗುಪ್ತಗೆ ದೂರವಾಣಿ ಕರೆ ಮಾಡಿ, ಇಲ್ಲಿನ ಆಸ್ಪತ್ರೆ ಹಾಗೂ ಕೋವಿಡ್ ಆರೈಕೆ ಕೇಂದ್ರವು ರಾಜಕೀಯ ತಾಣವಾಗಬಾರದು. ಕೂಡಲೇ ಇಲ್ಲಿನ ಸಮಸ್ಯೆಗಳನ್ನು ಬಗೆ ಹರಿಸಬೇಕೆಂದು ಸೂಚಿಸಿದ್ದಾರೆ. ಇದರ ನಡುವೆಯೂ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು ಪರ-ವಿರೋಧದ ಘೋಷಣೆಗಳನ್ನು ಮುಂದುವರಿಸಿದರು.

ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಚಿವ ಸದಾನಂದ ಗೌಡ, ಕೋವಿಡ್ ಸಂದರ್ಭದಲ್ಲಿ ಯಾರೂ ರಾಜಕಾರಣ ಮಾಡುವುದು ಬೇಡ. ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸೋಣ. ಕಾಂಗ್ರೆಸ್ ಕಾರ್ಯಕರ್ತರಿಂದ ಇದನ್ನು ನಿರೀಕ್ಷಿಸಿರಲಿಲ್ಲವೆಂದು ತಿಳಿಸಿದರು.

ಈ ವೇಳೆ ಭೈರತಿ ಸುರೇಶ್ ಮಾತನಾಡಿ, ಇಲ್ಲಿನ ಆಸ್ಪತ್ರೆಯಲ್ಲಿ ಜನರ ನೆರವಿನಿಂದ ಕೋವಿಡ್ ಆರೈಕೆ ಕೇಂದ್ರವನ್ನು ತೆರೆಯಲಾಗಿದೆ. ಎಲ್ಲ ಮುಗಿದ ಮೇಲೆ ಕೇವಲ ಪರಿಶೀಲನೆಗೆ ಬಂದಿರುವ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ಮೇಲೆ ಸಾರ್ವಜನಿಕರು ತಮ್ಮ ಸಿಟ್ಟನ್ನು ವ್ಯಕ್ತಪಡಿಸಿರುವುದು ಸಹಜವಾಗಿದೆ ಎಂದು ತಿಳಿಸಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News