ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಏಳು ವರ್ಷ: ಬೆಂಗಳೂರಿನಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ

Update: 2021-05-30 16:47 GMT

ಬೆಂಗಳೂರು, ಮೇ 30: ಇಂದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಏಳು ವರ್ಷ ಪೂರೈಸಿರುವ ಹಿನ್ನೆಲೆ ಯುವ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿ, ಮೋದಿ ಸರಕಾರ ಪ್ರಚಾರಕ್ಕೆ ಸೀಮಿತವಾಗಿದೆ ಎಂದು ಆಕ್ರೋಶ ಹೊರಹಾಕಿದರು.

ರವಿವಾರ ನಗರದ ರೇಸ್‍ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನ ಮುಂಭಾಗ ಜಮಾಯಿಸಿದ ಕಾಂಗ್ರೆಸ್ ನಾಯಕರು, ದೇಶದ ಜನ ನಿರುದ್ಯೋಗ ಹಾಗೂ ಕೋವಿಡ್‍ದಿಂದ ನರಳುತ್ತಿದ್ದರೂ, ಕೇವಲ ಪ್ರಚಾರಕ್ಕಾಗಿ ಈ ಮೋದಿ ಸರಕಾರ ಸೀಮಿತವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ, ಎಸ್.ಮನೋಹರ್, ಪ್ರಧಾನಿ ನರೇಂದ್ರ ಮೋದಿ ಆಡಳಿತ ಇಂದಿಗೆ ಏಳು ವರ್ಷ ಪೂರ್ಣಗೊಳಿಸಿದೆ. ಪ್ರಧಾನಿಯಾಗಿ ನರೇಂದ್ರ ಮೋದಿ ಮೊದಲ 5 ವರ್ಷ ಘೋಷಿಸಿದ ಪ್ಯಾಕೇಜ್‍ಗಳಲ್ಲಿ ಎಷ್ಟು ಈಡೇರಿಸಿದ್ದಾರೆ ಎನ್ನುವುದು ದೇಶಕ್ಕೆ ಹಾಗೂ ವಿಶ್ವಕ್ಕೆ ತಿಳಿದಿದೆ ಎಂದು ವ್ಯಂಗ್ಯವಾಡಿದರು.

ಕೋವಿಡ್ ಎರಡನೆ ಅಲೆಯ ಮಹಾಮಾರಿ ದೇಶದೆಲ್ಲೆಡೆ ಆತಂಕ ಸೃಷ್ಟಿಸುತ್ತಿದೆ. ಚುನಾವಣೆ ಉದ್ದೇಶದಿಂದ ಕೇವಲ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳಕ್ಕೆ ಪ್ಯಾಕೇಜ್ ನೀಡಲು ಸೀಮಿತವಾಗಿಸಿರುವ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಕೋವಿಡ್ ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಈ ಹಿಂದೆ ಪ್ರಧಾನಿ ಮೋದಿ ಪ್ರತಿಯೊಬ್ಬರಿಗೂ 15 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದ್ದರು. ಆದರೆ, 15 ಪೈಸೆಯನ್ನೂ ಹಾಕಿಲ್ಲ. 50 ರೂಪಾಯಿ ಬೆಲೆಯ ಪೆಟ್ರೋಲ್ ಹಾಗೂ ಡೀಸೆಲ್ 100 ರೂಪಾಯಿಗೆ ಏರಿಸಿದ್ದಾರೆ. ಸ್ವಾತಂತ್ರ್ಯ ಬಂದ ನಂತರ ಇದೇ ಮೊದಲ ಬಾರಿಗೆ ಈ ಮೊತ್ತವನ್ನು ಇಂಧನ ಬೆಲೆ ತಲುಪಿದೆ. ಇದೇ ಮೋದಿಯ ಕೊಡುಗೆ ಎಂದು ಆಕ್ರೋಶ ಹೊರಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News