×
Ad

ಪರಿಸರ, ಆರೋಗ್ಯ ತಜ್ಞರ ವಿರೋಧ ಹಿನ್ನೆಲೆ; ಹಾರಾಟಕ್ಕೂ ಮುನ್ನವೇ ನಿಂತ 'ಸ್ಯಾನಿಟೈಸರ್ ವಿಮಾನ'

Update: 2021-05-31 15:26 IST
ಫೈಲ್ ಫೋಟೊ 

ಬೆಂಗಳೂರು : ಕೊರೋನ ಸೋಂಕು ಉಲ್ಬಣಗೊಂಡಿರುವ ಕಾರಣಕ್ಕಾಗಿ ಬೆಂಗಳೂರಿನ ಎಲ್ಲೆಡೆ ವಿಮಾನದ ಮೂಲಕ ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಇದು ಪ್ರಾರಂಭಕ್ಕೂ ಮುನ್ನವೇ ನಿಂತಿದೆ.

ವಿಮಾನದ ಮೂಲಕ ಗಾಳಿಯಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ವಿಧಾನ ಸೂಕ್ತವಲ್ಲವೆಂದು ಪರಿಸರವಾದಿಗಳು, ಆರೋಗ್ಯ ತಜ್ಞರು ತೀವ್ರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಬಿಬಿಎಂಪಿಯೂ ಈ ಪ್ರಕ್ರಿಯೆ ಯನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಆರೋಗ್ಯ ತಜ್ಞ ಡಾ.ಸಿಲ್ವಿಯಾ ಕಾರ್ಪಗಮ್, ಸಾವಯವ ದ್ರಾವಣ ಎಂದ ಮಾತ್ರಕ್ಕೆ ಎಲ್ಲವೂ ಸರಿಯಿದೆ ಎಂದರ್ಥ ಅಲ್ಲ. ಯಾವುದೇ ದ್ರಾವಣ ಮೇಲಿಂದ ಚೆಲ್ಲಿದರೆ ಅದನ್ನು ಜನರು ಉಸಿರಾಟ ನಡೆಸಿದಾಗ ದೇಹ ಪ್ರವೇಶಿಸುತ್ತದೆ. ಇದರಿಂದ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಹಾಗಾಗಿ, ಇದನ್ನು ನಿಲ್ಲಿಸಿದರೆ ಒಳಿತು ಎಂದರು.

ಇನ್ನು, ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಕೋವಿಡ್ ಸಂಬಂಧ ಗಾಳಿಯಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ಕಾರ್ಯವೂ ಪರಿಸರ ಮತ್ತು ಆರೋಗ್ಯಕ್ಕೂ ಸಂಬಂಧಿಸಿದೆ. ಹಾಗಾಗಿ, ಇದನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ. ಆಯೋಜಕರಿಂದ ಸಮರ್ಪಕ ಉತ್ತರ ದೊರೆತ ಬಳಿಕ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಏರಿಯಲ್ ವರ್ಕಸ್ ಏರೋ ಎಲ್‍ಪಿಪಿ ಸಂಸ್ಥೆಯ ಸಹಯೋಗದೊಂದಿಗೆ ಕಳೆದ ಶನಿವಾರವಷ್ಟೇ ಜಕ್ಕೂರು ಏರೋಡ್ರೊಮ್‍ನಲ್ಲಿ ಕಂದಾಯ ಸಚಿವ ಆರ್.ಅಶೋಕ ಈ ಕಾರ್ಯಕ್ಕೆ ಚಾಲನೆ ನೀಡಿದ್ದರು.

ಇದೇ ಮೊದಲ ಬಾರಿಗೆ ಸಾವಯವ ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ಕಾರ್ಯವೂ ಇದಾಗಿತ್ತು. ಮೊದಲ ಹಂತದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಕೆ.ಆರ್.ಮಾರುಕಟ್ಟೆ, ಶಿವಾಜಿನಗರ, ಕಲಾಸಿಪಾಳ್ಯ ಮೊದಲಾದ ಜನದಟ್ಟಣೆಯ ಪ್ರದೇಶಗಳಲ್ಲಿ ಸಿಂಪಡಣೆ ಮಾಡಲು ಸಂಸ್ಥೆ ಸಿದ್ಧತೆ ಮಾಡಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News