ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣ: ಶಂಕಿತರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಜೂ.2ಕ್ಕೆ ಮುಂದೂಡಿಕೆ

Update: 2021-05-31 17:31 GMT

ಬೆಂಗಳೂರು, ಮೇ 31: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಇಬ್ಬರು ಶಂಕಿತ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಸಿಟಿ ಸಿವಿಲ್ ಕೋರ್ಟ್ ಜೂ.2ಕ್ಕೆ ಮುಂದೂಡಿದೆ. 

ಅಶ್ಲೀಲ ಸೀಡಿ ಬೆಳಕಿಗೆ ಬಂದ ಬೆನ್ನಲ್ಲೇ ಪರಾರಿಯಾಗಿರುವ ಶಂಕಿತ ಆರೋಪಿಗಳಾದ ನರೇಶ್ ಹಾಗೂ ಶ್ರವಣ್ ನಿರೀಕ್ಷಣಾ ಜಾಮೀನು ಕೋರಿ ಮೇ. 24 ರಂದು ಸಿಟಿ ಸಿವಿಲ್ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾಯಾಲಯ, ಆಕ್ಷೇಪಣೆ ಸಲ್ಲಿಸುವಂತೆ ಸದಾಶಿವನಗರ ಠಾಣೆ ಪೊಲೀಸರಿಗೆ ನಿರ್ದೇಶನ ನೀಡಿತ್ತು. ಈ ಪ್ರಕರಣವನ್ನು ಎಸ್‍ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿರುವ ಕಾರಣದಿಂದ ಎಸ್‍ಐಟಿ ಅಧಿಕಾರಿಗಳೇ ಮೇ 29 ರಂದು ಆಕ್ಷೇಪಣೆ ಸಲ್ಲಿಸಬೇಕಿತ್ತು. ಕೊರೋನ ಹಿನ್ನೆಲೆಯಲ್ಲಿ ಕಲಾಪವನ್ನು ಮುಂದೂಡಲಾಗಿತ್ತು.

ಸೋಮವಾರ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಆಕ್ಷೇಪಣೆ ಸಲ್ಲಿಸಲು ಎರಡು ದಿನ ಕಾಲಾವಕಾಶ ನೀಡಿದೆ. ಆಕ್ಷೇಪಣೆ ಸಲ್ಲಿಸಲು ಎಸ್‍ಐಟಿ ಅಧಿಕಾರಿಗಳು ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ಅರ್ಜಿಯನ್ನು ಜೂ.2ಕ್ಕೆ ಮುಂದೂಡಿ ಸಿಟಿ ಸಿವಿಲ್ ಕೋರ್ಟ್ ಆದೇಶಿಸಿದೆ.

ರಮೇಶ್ ಜಾರಕಿಹೊಳಿ ಸಿಡಿ ಹೊರ ಬರುತ್ತಿದ್ದಂತೆ ಶಂಕಿತ ನರೇಶ್ ಮತ್ತು ಶ್ರವಣ್ ತಲೆ ಮರೆಸಿಕೊಂಡು ನಾನಾ ಕಡೆ ತಿರುಗಾಡುತ್ತಿದ್ದಾರೆ. ಈ ಷಡ್ಯಂತ್ರದಲ್ಲಿ ಇಬ್ಬರ ಪಾತ್ರ ಇರುವ ಬಗ್ಗೆ ಸಿಸಿಟಿವಿ ದೃಶ್ಯಗಳು ಹಾಗೂ ಹಲವು ಸಾಕ್ಷಗಳು ಲಭ್ಯವಾಗಿವೆ. ಹೀಗಾಗಿ ಇವರಿಗೆ ಜಾಮೀನು ನೀಡದಂತೆ ಎಸ್‍ಐಟಿ ಅಧಿಕಾರಿಗಳು ಆಕ್ಷೇಪಣೆ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News