ನಮ್ಮ ಆರೋಗ್ಯ ಕ್ಷೇತ್ರದತ್ತ ಒಂದು ಪಕ್ಷಿನೋಟ

Update: 2021-05-31 19:30 GMT

ಭಾರತದಲ್ಲಿ ಸರಕಾರಿ ಅಂಕಿ-ಅಂಶಗಳ ಅನ್ವಯ ಮೇ 31,2021ರಂದು ಕೋವಿಡ್ ಒಟ್ಟು ಕೇಸ್‌ಗಳು -2,80,47,534, ಆ್ಯಕ್ಟೀವ್ ಕೇಸ್‌ಗಳು- 20,26,092 ಮತ್ತು ಸಾವುಗಳು -3,29,100. ಆದರೆ ವರದಿಯಾಗದ ಎಷ್ಟು ಪ್ರಕರಣಗಳಿವೆ ಎಂಬುದಕ್ಕೆ ನಿಖರವಾದ ಮಾಹಿತಿಗಳು ಇಲ್ಲ. ಗುಜರಾತ್, ದಿಲ್ಲಿಯಲ್ಲಿ ಕೋವಿಡ್‌ನಿಂದ ಸಂಭವಿಸಿದ ಸಾವುಗಳ ಅಧಿಕೃತ ಸಂಖ್ಯೆಗಳಿಗೂ ಮತ್ತು ಸ್ಮಶಾನಗಳಲ್ಲಿನ ದಾಖಲೆಗಳಲ್ಲಿರುವ ಸಂಖ್ಯೆಗಳ ನಡುವೆ ಕೆಲವು ಸಾವಿರಗಳಷ್ಟು ವ್ಯತ್ಯಾಸಗಳಿವೆ. ಬೇರೆ ರಾಜ್ಯಗಳಲ್ಲೂ ಇದೇ ಕತೆ ಇರಬಹುದಾದ ಸಾಧ್ಯತೆಗಳೇ ಅಧಿಕ. ಇರಲಿ.

ಕಳೆದ ಸುಮಾರು ಒಂದೂವರೆ ವರ್ಷದಿಂದ ಇಡೀ ಜಗತ್ತು ಕೋವಿಡ್‌ನಿಂದ ತಲ್ಲಣಿಸಿದೆ. ಅಪಾರ ಸಂಖ್ಯೆಯ ಮಂದಿ ಮರಣಿಸಿದ್ದಾರೆ. ಅನೇಕ ಕುಟುಂಬಗಳ ಪರಿಸ್ಥಿತಿ ಅಯೋಮಯವಾಗಿದೆ. ಅಭಿವೃದ್ಧಿಶೀಲ ಮತ್ತು ಬಡ ದೇಶಗಳಂತೂ ತತ್ತರಿಸುತ್ತಿವೆ. ನಮ್ಮ ದೇಶದಲ್ಲಿ ಆಮ್ಲಜನಕ, ವೆಂಟಿಲೇಟರ್, ಬೆಡ್‌ಗಳು, ಔಷಧಿಗಳು ಇತ್ಯಾದಿಗಳ ಕೊರತೆಗಳಿಂದ ಅನೇಕ ಜನರು ಕೊನೆಯುಸಿರೆಳೆದಿದ್ದಾರೆ. ಇಂತಹ ದುರಿತ ಕಾಲದಲ್ಲೂ ಮಾನವೀಯತೆಯನ್ನು ಮರೆತು ಹಣಮಾಡುವ ಖಾಸಗಿ ಆಸ್ಪತ್ರೆಗಳು, ನಕಲಿ ಔಷಧಿಗಳನ್ನು ತಯಾರಿಸುವ ದುರುಳರು ಇತ್ಯಾದಿ ನಕಾರಾತ್ಮಕ ಸಂಗತಿಗಳು ಜರುಗುತ್ತಿವೆ. ವಿಶ್ವಾದ್ಯಂತ ಕೋವಿಡ್‌ನಿಂದ ತಲೆದೋರಿರುವ ಅನೇಕ ತೆರನಾದ ಕಷ್ಟ ಕೋಟಲೆಗಳು ಆಯಾಯ ದೇಶಗಳ ಆರೋಗ್ಯ ಕ್ಷೇತ್ರದ ಮೂಲಭೂತ ವ್ಯವಸ್ಥೆಗಳ ಮೇಲೆ ಪ್ರಖರವಾದ ಬೆಳಕನ್ನು ಚೆಲ್ಲಿವೆ.

ಕಳೆದ ವರ್ಷದ ಕೋವಿಡ್‌ನ ಮೊದಲ ಅಲೆಯಲ್ಲಿ ಯುಎಸ್‌ಎ, ಇಟಲಿ ಮುಂತಾದ ಮುಂದುವರಿದ ರಾಷ್ಟ್ರಗಳೇ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಮಟ್ಟದ ಸಾವು ನೋವುಗಳನ್ನು ಅನುಭವಿಸಿದ್ದವು. ಇಟಲಿಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ರೋಗಿಗಳ ಚಿಕಿತ್ಸೆಗಾಗಿ ಅವರಿಂದ ಹಣವನ್ನು ಪಡೆಯಲಾಗುವುದಿಲ್ಲ ಅಥವಾ ಕಡಿಮೆ ಹಣವನ್ನು ವಸೂಲು ಮಾಡಲಾಗುತ್ತದೆ. ಆದರೆ ಅಲ್ಲಿ ಚಿಕಿತ್ಸೆಯನ್ನು ಪಡೆಯಲು ಕಾಯಬೇಕು. ಕಾಯಲು ಇಚ್ಛಿಸದೆ ಇರುವವರು ಖಾಸಗಿ ಕ್ಷೇತ್ರದ ಆರೋಗ್ಯ ವಲಯದ ಸೇವೆಗಳನ್ನು ಪಡೆಯಬಹುದು. ಬೇರೆ ಐರೋಪ್ಯ ರಾಷ್ಟ್ರಗಳಿಗೆ ಹೋಲಿಸಿದರೆ, ಇಟಲಿಯಲ್ಲಿ ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರ ಸೇವಾ ಶುಲ್ಕಗಳು ತುಂಬ ಕಡಿಮೆ ಎಂದು ಹೇಳಲಾಗುತ್ತದೆ. ಅಲ್ಲಿನ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ತೆರಿಗೆಯ ಸಂಗ್ರಹದಿಂದ ಅಧಿಕ ಹಣವನ್ನು ಸಂದಾಯ ಮಾಡಲಾಗುತ್ತದೆ.

ಬಂಡವಾಳಶಾಹಿಯ ಸ್ವರ್ಗ ಎಂದೇ ಖ್ಯಾತಿ ಹೊಂದಿರುವ ಯುಎಸ್‌ಎನಲ್ಲಿ ಆಸ್ಪತ್ರೆಗಳನ್ನು ಖಾಸಗಿ ಘಟಕಗಳಂತೆ ನಡೆಸಲಾಗುತ್ತದೆ. ಪ್ರವರ್ತಕರು(ಪ್ರಮೋಟರ್ಸ್) ಹೂಡಿರುವ ಬಂಡವಾಳಕ್ಕೆ ಆರ್ಥಿಕ ಲಾಭ ಗಳಿಸುವತ್ತ ಎಲ್ಲ ಬಗೆಯ ಪ್ರಯತ್ನಗಳನ್ನು ಮಾಡಲಾಗುತ್ತದೆ. ಅಂದರೆ ಒಂದರ್ಥದಲ್ಲಿ ಅಲ್ಲಿ ಆರೋಗ್ಯವನ್ನು ಒಂದು ವ್ಯಾಪಾರಿ ಸಾಧನದಂತೆ ಬಳಸಲಾಗುತ್ತದೆ. ಹೂಡಿದ ಹಣಕ್ಕೆ ಸರಿಯಾದ ಲಾಭ ಬರದಿದ್ದರೆ, ಆಸ್ಪತ್ರೆಗಳನ್ನು ಮುಚ್ಚಲು ಮುಂದಾಗುತ್ತಾರೆ ಹೂಡಿಕೆದಾರರು. ಆರೋಗ್ಯ ಕ್ಷೇತಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಅಲ್ಲಿರುವ ಎಲ್ಲ 50 ರಾಜ್ಯಗಳೇ ನಿಭಾಯಿಸಬೇಕು. ಕೇಂದ್ರ ಸರಕಾರದ ಹಸ್ತಕ್ಷೇಪ ತುಂಬ ಕಡಿಮೆಯಿರುತ್ತದೆ. (ನಮ್ಮಲ್ಲಿ ಆರೋಗ್ಯ ರಾಜ್ಯ ಪಟ್ಟಿಯಲ್ಲಿದ್ದರೂ, ರಾಷ್ಟ್ರೀಯ ಮಟ್ಟದಲ್ಲಿ ಕೇಂದ್ರ ಸರಕಾರಕ್ಕೆ ಗುರುತರವಾದ ಜವಾಬ್ದಾರಿಗಳಿರುತ್ತವೆ. ಆದರೆ ಕೋವಿಡ್ ಸಂದರ್ಭದಲ್ಲಿ ಕಳೆದ ವರ್ಷ ಅದು ದೀರ್ಘಾವಧಿ ಸಮಯ ಲಾಕ್‌ಡೌನ್ ಘೋಷಿಸಿದಾಗ, ರಾಜ್ಯ ಸರಕಾರಗಳ ಜೊತೆ ಸಮಾಲೋಚನೆಯನ್ನು ನಡೆಸಲೇ ಇಲ್ಲ. ಆನಂತರ ದೊಡ್ಡ ಸಂಖ್ಯೆಯ ವಲಸೆ ನೌಕರರು ಪಡಬಾರದ ಪಡಿಪಾಟಲುಗಳನ್ನು ಪಟ್ಟು ತಮ್ಮ ತಮ್ಮ ಸ್ವಂತ ಸ್ಥಳಗಳಿಗೆ ಹಿಂದಿರುಗಿದಾಗ ಮತ್ತು ಪ್ರಸ್ತುತ ವ್ಯಾಕ್ಸಿನೇಶನ್ ಸಂದರ್ಭದಲ್ಲಿ ಕೂಡ ಅದು ರಾಜ್ಯ ಸರಕಾರಗಳ ಮೇಲೆ ಹೊಣೆಯನ್ನು ಹೊರೆಸಿ ಕೈತೊಳೆದುಕೊಳ್ಳುವಂತಹ ಕ್ರಮಕ್ಕೆ ಮುಂದಾಗಿದ್ದು ಢಾಳಾಗಿ ಕಂಡು ಬರುತ್ತಿದೆ).

ನಮ್ಮ ದೇಶದಲ್ಲಿ ಆರೋಗ್ಯ ಕ್ಷೇತ್ರ ಅಸ್ತವ್ಯಸ್ತವಾಗಿದೆ. ಇಂತಹ ಆತಂಕಕಾರಿ ಪರಿಸ್ಥಿತಿಯ ಹಿಂದೆ ಅನೇಕ ಕಾರಣಗಳಿವೆ. ಅನೇಕ ದಶಕಗಳಿಂದ ನಮ್ಮಲ್ಲಿ ಕೇಂದ್ರ ಸರಕಾರ ಆರೋಗ್ಯ ಕ್ಷೇತ್ರಕ್ಕೆ ನೀಡಬೇಕಾದ ಆರ್ಥಿಕ ಆದ್ಯತೆಯನ್ನು ನೀಡುತ್ತ ಬಂದಿಲ್ಲ ಎಂದರೆ ತಪ್ಪಾಗುವುದಿಲ್ಲ. ಅಲ್ಲದೆ ನಮ್ಮಲ್ಲಿ ಜನಸಂಖ್ಯೆಯ ಸಾಂದ್ರತೆಯೂ ಜಾಸ್ತಿಯಿದೆ. ಒಂದು ಮೂಲದ ಅನ್ವಯ ನಮ್ಮಲ್ಲಿ ಪ್ರಪಂಚದಲ್ಲೇ ಜಿಡಿಪಿಯ(ಒಟ್ಟಾರೆ) ಅತಿ ಕಡಿಮೆ ಪ್ರಮಾಣದ ಪಾಲು(ಸುಮಾರು ಶೇ. 1.26ರಷ್ಟು) ಸಾರ್ವಜನಿಕ ಆರೋಗ್ಯ ಕ್ಷೇತ್ರದ ಬಜೆಟ್‌ಗೆ ಸಂದಾಯವಾಗುತ್ತಿದೆ. ಯುನೈಟೆಡ್ ಕಿಂಗ್ಡಮ್, ನೆದರ್ಲ್ಯಾಂಡ್ಸ್, ನ್ಯೂಝಿಲ್ಯಾಂಡ್, ಆಸ್ಟ್ರೇಲಿಯಾದಲ್ಲಿ ಇದರ ಪ್ರಮಾಣ ಶೇ. 9ರಷ್ಟಿದೆ. ಯುಎಸ್‌ಎನಲ್ಲಿ ಇದು ಶೇ. 16ರಷ್ಟಿದೆ. ಅಭಿವೃದ್ಧಿಶೀಲ ದೇಶಗಳಲ್ಲಿ ಒಂದಾದ ಬ್ರೆಝಿಲ್‌ನಲ್ಲಿ ಈ ಸಂಖ್ಯೆ ಶೇ. 8 ರಷ್ಟಿದೆ. ನಮ್ಮ ನೆರೆದೇಶಗಳಾದ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಅವುಗಳ ಜಿಡಿಪಿಯ ಶೇ. 3ರಷ್ಟು ವಿನಿಯೋಗಿಸಲ್ಪಡುತ್ತಿದೆ.

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ವೈದ್ಯಕೀಯ ಸೌಲಭ್ಯಗಳಲ್ಲೂ ವ್ಯತ್ಯಾಸಗಳಿವೆ. ನಮ್ಮ ದೇಶದ ಜನಸಂಖ್ಯೆಯ ಶೇ. 70ರಷ್ಟು ಗ್ರಾಮೀಣ ಜನತೆ ತುಂಬ ಹೆಚ್ಚಿನ ಮಟ್ಟದಲ್ಲಿ ಸರಕಾರಿ ಆಸ್ಪತ್ರೆಗಳ ಮೇಲೆ ಅವಲಂಬಿತರಾಗಿದ್ದಾರೆ. 2019ರ ನ್ಯಾಷನಲ್ ಹೆಲ್ತ್ ಪ್ರೊಫೈಲ್ ಪ್ರಕಾರ ವೈದ್ಯ ಮತ್ತು ರೋಗಿಗಳ ನಡುವಿನ ಪ್ರಮಾಣ 1 : 10,926 ರಷ್ಟಿದೆ. ನಮ್ಮ ದೇಶದಲ್ಲಿ 2017ರಲ್ಲಿ 23,582 ಸರಕಾರಿ ಆಸ್ಪತ್ರೆಗಳ ಪೈಕಿ ಶೇ. 84 ಗ್ರಾಮೀಣ ಪ್ರದೇಶಗಳಲ್ಲಿವೆ. ಆದರೆ ಒಟ್ಟು ಸರಕಾರಿ ಬೆಡ್‌ಗಳಲ್ಲಿ ಶೇ. 39 ಮಾತ್ರ ಗ್ರಾಮೀಣ ಆಸ್ಪತ್ರೆಗಳಲ್ಲಿವೆ. ಅಲ್ಲದೆ, ಈ ಆಸ್ಪತ್ರೆಗಳಲ್ಲಿ ನವೀನ ವೈದ್ಯಕೀಯ ಉಪಕರಣಗಳಿಲ್ಲ; ನುರಿತ ವೈದ್ಯರು, ಸೂಕ್ತ ತರಬೇತಿ ಹೊಂದಿದ ನರ್ಸ್‌ಗಳು ಮತ್ತು ಪ್ಯಾರಾ ಮೆಡಿಕಲ್ ಸಿಬ್ಬಂದಿ ಸಹ ಇಲ್ಲ. ವಿಶ್ವ ಆರೋಗ್ಯ ಸಂಸ್ಥೆಯ 2016ರ ಶಿಫಾರಸಿನ ಅನ್ವಯ ಯಾವುದೇ ಒಂದು ದೇಶದಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಮತ್ತು ಸಾರ್ವತ್ರಿಕ ಆರೋಗ್ಯ ವ್ಯಾಪ್ತಿಯನ್ನು ತಲುಪಬೇಕಾದರೆ ಅಲ್ಲಿ 10,000 ಜನರಿಗೆ 44.5ರಷ್ಟು ಆರೋಗ್ಯ ಕಾರ್ಯಕರ್ತರು ಇರಬೇಕು. ಆದರೆ ನಮ್ಮಲ್ಲಿ ಇದರ ಅರ್ಧದಷ್ಟು ಸಂಖ್ಯೆ ಮಾತ್ರ ಇದೆ.

ಆರೋಗ್ಯ ಕ್ಷೇತ್ರಕ್ಕೆ ಸರಕಾರ ಕಡಿಮೆ ಖರ್ಚು ಮಾಡುತ್ತಿರುವುದರಿಂದ ಯಾವುದೇ ಆರೋಗ್ಯ ರಕ್ಷಣೆಯ ಕವಚ(ವಿಮೆ ಇತ್ಯಾದಿ) ಇಲ್ಲದ ಮಂದಿ ರೋಗ ರುಜಿನಗಳ ಚಿಕಿತ್ಸೆಗೆ ತಮ್ಮ ಸ್ವಂತ ಹಣದ ಹೆಚ್ಚಿನ ಪ್ರಮಾಣವನ್ನು ವ್ಯಯಿಸಬೇಕಾದ ಪರಿಸ್ಥಿತಿಯಿದೆಯೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೇ ತನ್ನ ವರದಿಯೊಂದರಲ್ಲಿ ತಿಳಿಸಿದೆ. ಹೀಗಾಗಿ, ಪ್ರತಿ ವರ್ಷ ನಮ್ಮ ಜನಸಂಖ್ಯೆಯ ಶೇ. 7ರಷ್ಟು ಮಂದಿ ಬಡತನಕ್ಕೆ ದೂಡಲ್ಪಡುತ್ತಿದ್ದಾರೆ. ನಮ್ಮ ಆರೋಗ್ಯ ಕ್ಷೇತ್ರದ ಇಂತಹ ಗಂಭೀರ ಪರಿಸ್ಥಿತಿಯನ್ನು ಸುಧಾರಿಸಲು ಪ್ರಭುತ್ವ ಇನ್ನು ಮುಂದೆ ಖಾಸಗಿ ವಲಯಕ್ಕೆ ಮಣೆ ಹಾಕುವುದನ್ನು ಕಡಿಮೆ ಮಾಡಬೇಕು. ಪ್ರಪಂಚದಾದ್ಯಂತ ಕೋವಿಡ್‌ನ ಬಿಕ್ಕಟ್ಟನ್ನು ನಿಯಂತ್ರಿಸುವ ಹೆಚ್ಚಿನ ಜವಾಬ್ದಾರಿ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಮೇಲೆ ಬಿದ್ದಿರುವುದು, ಖಾಸಗಿ ವಲಯದ ಜಾಸ್ತಿ ಅವಲಂಬನೆಯ ನ್ಯೂನತೆಗಳನ್ನು ಎತ್ತಿ ತೋರಿಸಿದೆ.

ನಮ್ಮ ದೇಶದ ರಾಜ್ಯಗಳಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜಕೀಯ ಹಿತಾಸಕ್ತಿಗಳೇ ಮೇಲುಗೈ ಪಡೆಯುತ್ತವೆ. ಇದರ ಬಗೆಗೆ ಜನಾಂದೋಲನಗಳು ನಿಗಾ ವಹಿಸಬೇಕು. ರಾಜಕೀಯ ನಾಯಕರು ಮತ್ತು ವೈದ್ಯಕೀಯ ಕಾಲೇಜುಗಳು/ ಆಸ್ಪತ್ರೆಗಳ ನಡುವೆ ಇರುವ ಅನೈತಿಕ ಹಾಗೂ ಶಂಕಾಸ್ಪದ ಸಂಬಂಧಗಳಿಗೆ ತಡೆಯನ್ನು ಒಡ್ಡಬೇಕು. ವೈದ್ಯಕೀಯ ಸಂಸ್ಥೆಗಳ ಸ್ಥಾಪನೆಗಾಗಿ ಸಾರ್ವಜನಿಕ ಭೂಮಿಯನ್ನು ತೀರಾ ಕಡಿಮೆ ಬೆಲೆಗೆ ಮಾರಲಾಗುತ್ತದೆ. ಹೀಗೆ ತೆರಿಗೆದಾರರ ಹಣದಲ್ಲಿ(ಪರೋಕ್ಷ) ಸ್ಥಾಪಿಸಲ್ಪಡುವ ಖಾಸಗಿ ಆಸ್ಪತ್ರೆಗಳಲ್ಲಿ ಅವರು ಭಾರೀ ಹಣವನ್ನು ತೆತ್ತು ಆರೋಗ್ಯ ರಕ್ಷಣೆಯನ್ನು ಪಡೆಯುವ ಸನ್ನಿವೇಶವಿದೆ. ಇದನ್ನು ಹತೋಟಿಗೆ ತರಬೇಕಾದರೆ, ಸಾರ್ವಜನಿಕ ಹೂಡಿಕೆಗೆ ಆದ್ಯತೆಯನ್ನು ನೀಡಬೇಕು. ಸೂಕ್ತವಾದ ನೀತಿ-ನಿಯಮಗಳು ಜಾರಿಯಾಗಬೇಕು.

ಕೋವಿಡ್ ನಮ್ಮ ಆರೋಗ್ಯ ಕ್ಷೇತ್ರವನ್ನು ನಗ್ನಗೊಳಿಸಿದೆ. ಅದರಲ್ಲಿರುವ ಹುಳುಕುಗಳು ಸಾಮಾನ್ಯ ಜನತೆಯ ಪ್ರಾಣವನ್ನು ಕಸಿಯುವ ಪಾಶಗಳಾಗಿವೆ. ಕೋವಿಡ್‌ನ ದುರ್ದಶೆಯ ಕಾಲದಲ್ಲಿ ಆರೋಗ್ಯ ವ್ಯವಸ್ಥೆಯ ನ್ಯೂನತೆಗಳಿಂದ ಸಂಭವಿಸಿರುವ ಸಾವುಗಳನ್ನು ಪ್ರಭುತ್ವದ ಕಗ್ಗೊಲೆಗಳು ಎಂದರೆ ಅತಿಶಯೋಕ್ತಿಯಾಗಲಾರದು. ಇನ್ನಾದರೂ ನಮ್ಮನ್ನಾಳುವ ಪ್ರಭುಗಳು ಎಚ್ಚೆತ್ತುಕೊಳ್ಳುವರೇ?

Writer - ಮ. ಶ್ರೀ. ಮುರಳಿ ಕೃಷ್ಣ

contributor

Editor - ಮ. ಶ್ರೀ. ಮುರಳಿ ಕೃಷ್ಣ

contributor

Similar News