ಕಂದಾಚಾರಕ್ಕೆ ಮೊರೆ ಹೋದ ಅಸಹಾಯಕ ಜನ

Update: 2021-06-01 07:38 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಶತಮಾನಕ್ಕೊಮ್ಮೆ ಬಂದೆರಗಿ ಜೀವ ಹಿಂಡುವ ಸಾಂಕ್ರಾಮಿಕ ರೋಗಗಳ ಪಿಡುಗಿನಿಂದ ಮನು ಕುಲವೇ ತತ್ತರಿಸಿ ಹೋಗುತ್ತದೆ. ನೂರು ವರ್ಷದ ಹಿಂದೆ ಪ್ಲೇಗ್ ಬಂದಾಗ ಅಪಾರ ಪ್ರಮಾಣದ ಸಾವು ನೋವುಗಳು ಸಂಭವಿಸಿದ್ದವು. ಆಗ ಭಾರತದಲ್ಲಿ ಬ್ರಿಟಿಷ್ ಆಡಳಿತವಿತ್ತು. ಅದು ಹಲವಾರು ಪರಿಹಾರ ಕ್ರಮಗಳನ್ನು ಕೈಗೊಂಡಿತ್ತು.ಆದರೆ ಆಗ ವೈದ್ಯಕೀಯ ವಿಜ್ಞಾನ ಇಷ್ಟೊಂದು ಮುಂದುವರಿದಿರಲಿಲ್ಲ. ಹೀಗಾಗಿ ದಿಕ್ಕು ತಪ್ಪಿದ ಜನ ತಾತ್ಕಾಲಿಕವಾಗಿ ಊರನ್ನು ಬಿಟ್ಟು ಕಾಡಿಗೆ ಹೋಗಿ ನೆಲೆಸುತ್ತಿದ್ದರು. ಇಷ್ಟೇ ಅಲ್ಲ ಅಸಹಾಯಕ ಜನ ಪ್ಲೇಗ್ ಪಿಡುಗಿನ ನಿವಾರಣೆಗೆ ಮೂಢನಂಬಿಕೆ, ಕಂದಾಚಾರಗಳ ಮೊರೆ ಹೋಗುತ್ತಿದ್ದರು. ಆಗ ಅವರು ನಿರ್ಮಿಸಿದ ಪ್ಲೇಗ್ ಮಾರಮ್ಮನ ಗುಡಿಗಳು ನಾಡಿನ ಅಲ್ಲಲ್ಲಿ ಇನ್ನೂ ಇವೆ. ಈಗಲೂ ಆ ಪ್ಲೇಗ್ ಮಾರಮ್ಮನ ಗುಡಿಗೆ ಜನ ಹೋಗುತ್ತಾರೆ. ವರ್ಷಕ್ಕೊಮ್ಮೆ ಜಾತ್ರೆ ಮಾಡುತ್ತಾರೆ. ಇದು ಆ ಕಾಲದ ಕತೆ. ಬ್ರಿಟಿಷರು ಹೋಗಿ ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳ ನಂತರವೂ ಜನತೆಯ ಅಸಹಾಯಕತೆ ಮತ್ತು ಮನೋಭಾವ ಬದಲಾಗಿಲ್ಲ ಎಂಬುದಕ್ಕೆ ಕೋವಿಡ್ ನಂತರದ ಕೆಲ ವಿದ್ಯಮಾನಗಳು ಉದಾಹರಣೆಯಾಗಿವೆ. ಕೊರೋನ ಸೋಂಕಿನಿಂದ ಭಯಭೀತರಾದ ಜನರು ಇದರಿಂದ ಪಾರಾಗಲು ಹೋಮ, ಹವನಗಳ ಮೊರೆ ಹೋಗಿದ್ದಾರೆ. ಇದು ಸ್ವತಂತ್ರ ಭಾರತದ ಸಾರ್ವಜನಿಕ ವೈದ್ಯಕೀಯ ವ್ಯವಸ್ಥೆಯನ್ನು ನಮ್ಮ ಸರಕಾರಗಳು ಕಡೆಗಣಿಸಿರುವುದಕ್ಕೆ ಒಂದು ದೃಷ್ಟಾಂತವಾಗಿದೆ.

ಈಗ ವೈದ್ಯಕೀಯ ವಿಜ್ಞಾನ ಸಾಕಷ್ಟು ವಿಕಾಸಗೊಂಡಿದೆ. ಹೊಸ ಸಂಶೋಧನೆಗಳು ಬೆಳಕಿಗೆ ಬಂದಿವೆ. ಇದರಿಂದಾಗಿ ಮನುಷ್ಯನ ಸರಾಸರಿ ಆಯುಷ್ಯ ಕೂಡ ಹೆಚ್ಚಾಗಿದೆ ಎಂಬುದೂ ನಿಜ. ಆದರೆ ಆಧುನಿಕ ವೈದ್ಯಕೀಯ ವಿಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಅತ್ಯಂತ ಸುಸಜ್ಜಿತವಾದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬೇಕಾಗುತ್ತದೆ. ಇಲ್ಲವಾದರೆ ಅಸಹಾಯಕ ಜನರು ಕೊರೋನ ಸೋಂಕಿನಿಂದ ಕಂಗಾಲಾಗಿ ಮೌಢ್ಯಕ್ಕೆ ಶರಣಾಗುತ್ತಾರೆ. ಈ ಮೌಢ್ಯ ಎಷ್ಟು ವಿಚಿತ್ರವಾಗಿದೆಯೆಂದರೆ ಬಳ್ಳಾರಿ ಜಿಲ್ಲೆಯಲ್ಲಿ ಎರಡು ಹಳ್ಳಿಗಳ ಜನ ಅನ್ನವನ್ನು ಬೇಳೆಯೊಂದಿಗೆ ಬೇಯಿಸಿ ಮತ್ತು ಮೊಸರಿನಲ್ಲಿ ಕಲಸಿ ಟ್ರ್ಯಾಕ್ಟರ್‌ನಲ್ಲಿ ತುಂಬಿ ಊರಿನ ಸುತ್ತಲೂ ಚೆಲ್ಲಿದ್ದಾರೆ.ಇನ್ನೊಂದೆಡೆ ಚಾಮರಾಜನಗರದಲ್ಲಿ ಕೊರೋನ ಮಾರಮ್ಮನನ್ನು ಪ್ರತಿಷ್ಠಾಪಿಸಿ ಕುರಿ, ಕೋಳಿಗಳನ್ನು ಬಲಿ ಕೊಟ್ಟಿದ್ದಾರೆ. ಮತ್ತೊಂದೆಡೆ ಬೆಳಗಾವಿಯಲ್ಲಿ ಬಿಜೆಪಿ ಶಾಸಕರೊಬ್ಬರ ನೇತೃತ್ವದಲ್ಲಿ ಮನೆಗಳ ಎದುರು ಅಗ್ನಿಕುಂಡಗಳನ್ನು ಸ್ಥಾಪಿಸಿ ಪೂಜಾ ದ್ರವ್ಯಗಳೊಂದಿಗೆ ಆಹಾರ ಸಾಮಗ್ರಿಯನ್ನು ಸುಟ್ಟು ಹಾಕಲಾಗಿದೆ. ಹೋಮ ಮಾಡಿ ಊರೆಲ್ಲ ಹೊಗೆ ಎಬ್ಬಿಸಲಾಗಿದೆ. ಕೊರೋನದಂತಹ ವೈರಾಣುವಿನಿಂದ ಸಾವುಗಳು ಸಂಭವಿಸತೊಡಗಿದಾಗ ಅಮಾಯಕ ಜನಸಾಮಾನ್ಯರು ದೇವರು ಮತ್ತು ಕಂದಾಚಾರದ ಮೊರೆ ಹೋಗುವುದು ಸಹಜ. ಆದರೆ ಸಾವಿರಾರು ಜನರ ಹಸಿವು ಇಂಗಿಸಬೇಕಾದ ಅನ್ನವನ್ನು ಮಣ್ಣುಪಾಲು ಮಾಡುವುದು ಮೌಢ್ಯದ ಅತಿರೇಕ ಮತ್ತು ಅಕ್ಷಮ್ಯ ಎಂದರೆ ತಪ್ಪಲ್ಲ.

ಜನಸಾಮಾನ್ಯರ ಈ ಅಸಹಾಯಕತೆಗೆ ಕಾರಣ ನಮ್ಮನ್ನಾಳುವ ಸರಕಾರಗಳೇ ಎಂದರೆ ತಪ್ಪಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರಾದ ಸೌಮ್ಯ ಸ್ವಾಮಿನಾಥನ್ ಅವರು ಹೇಳಿದಂತೆ ರಾಷ್ಟ್ರಗಳು ವಿಜ್ಞಾನ ಆಧಾರಿತ ನಾಯಕತ್ವ ಹೊಂದಿರಬೇಕು. ಪುರಾವೆ ಆಧರಿತ ಮಾರ್ಗ ಸೂಚಿಯನ್ನು ರೂಪಿಸಬೇಕು. ವಿಜ್ಞಾನ ಮತ್ತು ತಂತ್ರಜ್ಞಾನಗಳ ಸಂಶೋಧನೆಗೆ ಉತ್ತೇಜನ ನೀಡಬೇಕು. ಆಗ ಮಾತ್ರ ಇಂತಹ ಸಾಂಕ್ರಾಮಿಕ ಕಾಯಿಲೆ ಗಳನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಆದರೆ ನಮ್ಮ ದೇಶದ ಇಂದಿನ ನಾಯಕತ್ವ ವಿಜ್ಞಾನ ಮತ್ತು ಆಧುನಿಕ ಸಂಶೋಧನೆಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿಲ್ಲ. ನಮ್ಮಲ್ಲಿ ಸಂಶೋಧನೆಗಳಿಗೆ ಸೂಕ್ತವಾದ ಪ್ರೋತ್ಸಾಹವೂ ಸಿಗುತ್ತಿಲ್ಲ. ನಮ್ಮ ಪ್ರಧಾನ ಮಂತ್ರಿ ವಿಜ್ಞಾನ ಸಮ್ಮೇಳನದಲ್ಲಿ ಮಾಡಿದ ಭಾಷಣಗಳೇ ಇದಕ್ಕೆ ಸಾಕ್ಷಿಯಾಗಿವೆ. ಬಾಬಾ ರಾಮ್‌ದೇವ್‌ರಂತಹ ವ್ಯಾಪಾರಿ ವೃತ್ತಿಯ ಅಳಲೆಕಾಯಿ ಪಂಡಿತರಿಗೆ ನೀಡಿದ ಪ್ರೋತ್ಸಾಹವನ್ನು ಆಧುನಿಕ ವೈದ್ಯಕೀಯ ಮತ್ತು ವೈಜ್ಞಾನಿಕ ಸಂಶೋಧನೆಗಳಿಗೆ ನಮ್ಮ ಸರಕಾರ ನೀಡಲಿಲ್ಲ. ಇದಷ್ಟೇ ಅಲ್ಲ ಕಳೆದ ಏಳು ದಶಕಗಳಿಂದ ಸಾವಿರಾರು ಜನರ ಆರೋಗ್ಯವನ್ನು ಕಾಪಾಡಿದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು, ಆಧುನೀಕರಣಗೊಳಿಸಲು ಸರಕಾರ ಮುಂದಾಗಲಿಲ್ಲ. ದೇಶದಲ್ಲಿ ನವ ಉದಾರೀಕರಣದ ಆರ್ಥಿಕ ನೀತಿ ಅವತರಿಸಿದ ನಂತರ ವಿಶೇಷವಾಗಿ ಕಳೆದ ಏಳು ವರ್ಷಗಳಿಂದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಸಂಪೂರ್ಣ ನಿರ್ಲಕ್ಷಿಸಲ್ಪಟ್ಟಿದೆ ಎಂಬುದು ಈ ಕೊರೋನ ಕಾಲದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಹೀಗಾಗಿ ದಾರಿ ಕಾಣದ ಅಸಹಾಯಕ ಜನರು ಕಂದಾಚಾರದ ಮೊರೆ ಹೋಗುತ್ತಾರೆ. ಸಾರ್ವಜನಿಕರ ಆತ್ಮವಿಶ್ವಾಸ ಮತ್ತು ವೈಚಾರಿಕ ಮನೋಭಾವ ಕುಗ್ಗಲು ನಮ್ಮ ವ್ಯವಸ್ಥೆಯ ಲೋಪವೇ ಕಾರಣ.

ಜನರಲ್ಲಿ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ತುಂಬಬೇಕಾದ ಜನ ಪ್ರತಿನಿಧಿಗಳೇ ಕಂದಾಚಾರದ ಮೊರೆ ಹೋದರೆ ಸಹಜವಾಗಿ ಜನರೂ ಅದೇ ದಾರಿ ಅನುಸರಿಸುತ್ತಾರೆ. ಕೊರೋನ ಮೊದಲ ಅಲೆ ಬಂದಾಗ ಪ್ರಧಾನಿ ನರೇಂದ್ರ ಮೋದಿಯವರು ಮನೆಗಳ ಎದುರು ತಟ್ಟೆ, ಲೋಟ, ಜಾಗಟೆ ಬಾರಿಸಲು, ದೀಪ ಬೆಳಗಿಸಲು ಕರೆ ನೀಡಿದರು. ಜನ ದೇಶದ ಎಲ್ಲೆಡೆ ದೀಪ ಹಚ್ಚಿ ತಟ್ಟೆ, ಲೋಟ ಬಾರಿಸಿದರು. ಈ ಸದ್ದಿಗೆ ವೈರಾಣು ಮಾಯವಾಗುತ್ತದೆ ಎಂಬ ಕಂದಾಚಾರ ಅವರ ಮೆದುಳನ್ನು ಆವರಿಸಿತ್ತು. ಹೀಗಾಗಿ ಕೊರೋನ ಎರಡನೇ ಅಲೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯವಾಗಲಿಲ್ಲ. ಇನ್ನು ಮುಂದಾದರೂ ನಮ್ಮ ಸರಕಾರ ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸಲು ಉತ್ತೇಜನ ನೀಡಲಿ. ಎಲ್ಲಕ್ಕಿಂತ ಮುಖ್ಯವಾಗಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ವಿಶೇಷ ಪ್ರಾಶಸ್ತ್ಯ ನೀಡಲಿ. ಜನತೆಯ ಆರೋಗ್ಯ ಖಾಸಗಿ ವೈದ್ಯಕೀಯ ವಲಯವನ್ನು ಹಾಗೂ ಅಳಲೆಕಾಯಿ ಪಂಡಿತರನ್ನು ಅವಲಂಬಿಸಬಾರದು. ಸರಕಾರಿ ಆಸ್ಪತ್ರೆಗಳನ್ನು ಸುಸಜ್ಜಿತಗೊಳಿಸಬೇಕು. ಇದೊಂದೇ ಇಂತಹ ಮಾರಕ ಪಿಡುಗನ್ನು ಎದುರಿಸಲು ಇರುವ ದಾರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News