ನರೇಂದ್ರ ಮೋದಿ ಸರಕಾರದ 7 ವರ್ಷಗಳು - ಒಂದು ಸಮೀಕ್ಷೆ

Update: 2021-06-01 05:29 GMT

                                                                            ► ಭಾಗ-5

ಟಿ. ಆರ್. ಭಟ್

ಏಳು ವರ್ಷಗಳ ನರೇಂದ್ರ ಮೋದಿ ಸರಕಾರದ ಮೌಲ್ಯಮಾಪನ ಮಾಡುವಾಗ ಸಾಮಾಜಿಕ ಪರಿಸ್ಥಿತಿಯ ಮೇಲೆ ಅದು ಏನು ಪ್ರಭಾವ ಬೀರಿದೆ ಎಂದು ನೋಡುವುದು ಅತ್ಯಂತ ಮಹತ್ವ ಪೂರ್ಣವಾಗುತ್ತದೆ.

ಅರ್ಥವ್ಯವಸ್ಥೆ ಹದಗೆಟ್ಟರೆ, ಸ್ಪಷ್ಟ ಯೋಜನೆಗಳ ಮೂಲಕ ಸುವ್ಯವಸ್ಥಿತಗೊಳಿಸಬಹುದು - 1991ರ ಪಿ. ವಿ. ನರಸಿಂಹರಾವ್ ಸರಕಾರ ಕೈಗೊಂಡ ಸುಧಾರಣೆ ಗಳು ಇದಕ್ಕೆ ನಮ್ಮ ಕಾಲಮಾನದಲ್ಲಿಯೇ ದೊರೆಯುವ ಉದಾಹರಣೆ. ಪ್ರಜಾತಂತ್ರ ಹಳಿತಪ್ಪಿದಾಗ, ಜನರು ಮತ್ತು ಜನಪ್ರತಿನಿಧಿಗಳು ಸೇರಿ ಸರಿಪಡಿಸಬಹುದು - ಇದಕ್ಕೆ 1975-77ರ ತುರ್ತುಪರಿಸ್ಥಿತಿಯ ಬಳಿಕ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋತು, ಹೊಸ ಸರಕಾರ ಬಂದುದು ಒಂದು ನಿದರ್ಶನ. ಆದರೆ ಒಂದು ಸಮಾಜದ ವ್ಯವಸ್ಥೆ ಅಡಿಮೇಲಾದರೆ ಮಾತ್ರ, ಅದನ್ನು ಮರುಸ್ಥಾಪಿಸುವುದು ಒಂದು ಪೀಳಿಗೆಯ ಜೀವಮಾನದಲ್ಲಿ ದುಸ್ಸಾಧ್ಯ. ನರೇಂದ್ರ ಮೋದಿಯವರ ಅಧಿಕಾರಾವಧಿಯಲ್ಲಿ ಭಾರತದ ಸಾಮಾಜಿಕ ಸ್ತರದಲ್ಲಿ ಮೂಲಭೂತ ಪಲ್ಲಟಗಳು ಸಂಭವಿಸಿವೆೆ - ಮಾತ್ರವಲ್ಲ, ಇಂದಿಗೂ ಮುಂದುವರಿಯುತ್ತಿವೆ. ಇದರ ಹಿಂದೆ ಭಾರತೀಯ ಜನತಾ ಪಕ್ಷ (ಭಾಜಪ) ಮತ್ತು ಅದರ ಮಾತೃಸಂಸ್ಥೆ ಆರೆಸ್ಸೆಸ್‌ನ ‘ಭಾರತ’ದ ಕುರಿತಾದಂತೆ ಕಲ್ಪನೆ ಅಡಗಿದೆ. ಇದನ್ನು ಅರಿತುಕೊಳ್ಳಲು ಶತಮಾನಗಳಿಂದ ರೂಢಿಯಲ್ಲಿದ್ದ ಮತ್ತು ಸ್ವಾತಂತ್ರ್ಯಾನಂತರದ ವರ್ಷಗಳಲ್ಲಿನ ‘ಭಾರತ’ದ ಕಲ್ಪನೆಯನ್ನು ಅರ್ಥೈಸಿಕೊಳ್ಳಬೇಕು.

► ಭಾರತವೆಂಬುದರ ಕಲ್ಪನೆ

ಚರಿತ್ರೆಯಲ್ಲಿ ದಾಖಲಾದ ಸುಮಾರು ಮೂರು ಸಹಸ್ರ ವರ್ಷಗಳ ಅವಧಿಯಲ್ಲಿ ಭಾರತವು ಇಂದು ನಾವು ಕಲ್ಪಿಸಿಕೊಂಡಿರುವ ರೂಪವನ್ನು ಹೊಂದಿರಲಿಲ್ಲ. ಭಾರತ ಉಪಖಂಡದ ಉದ್ದಗಲಕ್ಕೂ ನೂರಾರು ರಾಜರು ತಮ್ಮದೇ ಸಾಮ್ರಾಜ್ಯಗಳನ್ನು ಆಳುತ್ತಿದ್ದರು. ಪ್ರತಿಯೊಂದು ರಾಜ್ಯಕ್ಕೂ ತನ್ನದೇ ಸಂಸ್ಕೃತಿ ಮತ್ತು ಭಾಷೆಗಳು ಇದ್ದವು, ಅಲ್ಲಿನ ಜೀವನ ಶೈಲಿಗಳೂ ವಿಭಿನ್ನವಾಗಿದ್ದವು. ಉತ್ತರ ಭಾರತದಲ್ಲಿದ್ದ ಆರ್ಯರು ಮತ್ತು ದಕ್ಷಿಣ ಭಾರತದ ದ್ರಾವಿಡರ ಜನಸಂಸ್ಕೃತಿಗಳಲ್ಲಿಯೂ ಅಜಗಜಾಂತರವಿತ್ತು. ‘ವಸುಧೈವ ಕುಟುಂಬಕಂ’ ಎಂಬ ತತ್ವವನ್ನು ಸ್ವತಃ ಪಾಲಿಸುವಂತೆ, ಭಾರತವು ವಿಶ್ವದಲ್ಲಿಯೇ ಅತಿ ಹೆಚ್ಚು ಧರ್ಮಗಳು ನೆಲೆಸಿದ ದೇಶವಾಗಿತ್ತು: ಹಿಂದೂ, ಜೈನ, ಬೌದ್ಧ ಮತ್ತು ಸಿಖ್ ಧರ್ಮಗಳು ಇಲ್ಲಿಯೇ ಹುಟ್ಟಿದರೆ, ಕ್ರೈಸ್ತ, ಇಸ್ಲಾಂ ಮತ್ತು ಪಾರಸಿ ಧರ್ಮಗಳು ಭಾರತಕ್ಕೆ ವಲಸೆ ಬಂದವು. ಇವುಗಳಲ್ಲದೆ, ಯಾವುದೇ ಮತಧರ್ಮಗಳ ಕಟ್ಟುಪಾಡಿಗೆ ಸೇರದ ಲಕ್ಷಾಂತರ ಆದಿವಾಸಿಗಳು ಮತ್ತು ಗುಡ್ಡಗಾಡಿನ ಜನಾಂಗಗಳು, ನಾಸ್ತಿಕರು ಕೂಡಾ ನೆಲೆಸಿದ್ದ ದೇಶ ಇದು. ವಲಸೆ ಬಂದ ಅನ್ಯಧರ್ಮಗಳು ಇಲ್ಲಿನ ಭಾಷೆ ಮತ್ತು ಜೀವನಕ್ರಮಗಳನ್ನು ತಮ್ಮದಾಗಿಸಿದವು ಅಥವಾ ತಾವು ತಂದ ಭಾಷೆ ಮತ್ತು ಜೀವನ ಶೈಲಿಯನ್ನು ಇಲ್ಲಿನ ಸಂಸ್ಕೃತಿಯೊಂದಿಗೆ ಕಸಿಕಟ್ಟಿ ಬೆಳೆಸಿದವು. 18ನೇ ಶತಮಾನದ ಮಧ್ಯಭಾಗದಿಂದ ಬ್ರಿಟಿಷರ ಅಧಿಕಾರ ವಿಸ್ತರಿಸುತ್ತಾ ಬಂದಂತೆ, ಒಂದು ‘ಸಮಗ್ರ ಭಾರತ’ದ ಕಲ್ಪನೆ ಬೆಳೆಯಲು ಆರಂಭವಾಯಿತು. ಸುಮಾರು 20ನೇ ಶತಮಾನದಲ್ಲಿ ಸ್ವಾತಂತ್ರ್ಯದ ಕನಸು ಕಾಣುತ್ತಿರುವಾಗ, ಅಂದಿನ ನಾಯಕರು ಭಿನ್ನತೆಯಲ್ಲಿಯೂ ಏಕತೆಯನ್ನು ಕಂಡರು; ದೇಶವನ್ನು ಭಾವನಾತ್ಮಕವಾಗಿಯೂ ಭೌಗೋಳಿಕವಾಗಿಯೂ ಒಂದುಗೂಡಿಸಿದರು.

1947ರಲ್ಲಿ ಬ್ರಿಟಿಷರ ಆಳ್ವಿಕೆಯಿಂದ ವಿಮೋಚನೆಯಾಗುವ ಸಂದರ್ಭದಲ್ಲಿ ನೂರಾರು ಅರಸೊತ್ತಿಗೆಗಳು, ಭಾಷೆ, ಧರ್ಮ, ಜಾತಿ, ಸಂಸ್ಕೃತಿಗಳ ಆಧಾರದಲ್ಲಿ ವಿಭಜಿತವಾಗಿದ್ದ ವಿಶಾಲವಾದ ವಸಾಹತು, ಒಂದು ಸಮಗ್ರ ರಾಷ್ಟ್ರವಾಗಿ ಜನ್ಮ ತಾಳಿತು. 1950ರಲ್ಲಿ ದೇಶದ ಸಂವಿಧಾನವನ್ನು ಜಾರಿಗೊಳಿಸಿ ಭಾರತವು ಒಂದು ಸಾರ್ವಭೌಮ, ಪ್ರಜಾಸತ್ತಾತ್ಮಕ, ಧರ್ಮನಿರಪೇಕ್ಷ, ಸಮಾಜವಾದಿ ಗಣತಂತ್ರವಾಯಿತು. ಮಿಶ್ರಸಂಸ್ಕೃತಿಯನ್ನು ಗೌರವಿಸಿ, ಅದರ ಉಳಿಕೆಗೆ ಬದ್ಧರಾಗಿ ಅನೇಕ ರಾಜ್ಯಗಳನ್ನು ಒಳಗೊಂಡ ಒಕ್ಕೂಟವನ್ನು ಸ್ಥಾಪಿಸಲಾಯಿತು. ಮುಂದೆ 1956ರಲ್ಲಿ ರಾಜ್ಯಗಳ ಪುನಾರಚನೆಯಾದಾಗ ಭಾಷಾವಾರು ಪ್ರಾಂತಗಳನ್ನು ರಚಿಸಲಾಯಿತು. ‘ದೇಶಕ್ಕಿಡೀ ಒಂದೇ ಧರ್ಮ-ಒಂದೇ ಭಾಷೆ’ ಎಂಬ ಪರಿಕಲ್ಪನೆ ಸಂವಿಧಾನಕರ್ತೃಗಳಲ್ಲಿ ಇರಲಿಲ್ಲ. ಹಾಗಾಗಿ, ದೇಶವು ಧರ್ಮನಿರಪೇಕ್ಷ ವಾಯಿತು; ಕಾನೂನಿನ ಮುಂದೆ ಎಲ್ಲ ಧರ್ಮದವರು ಸಮಾನರಾದರು. ಸಂಪರ್ಕ ಮತ್ತು ಸಂವಹನಕ್ಕಾಗಿ ಇಂಗ್ಲಿಷ್ ಮತ್ತು ಹಿಂದಿಯನ್ನು ಅಧಿಕೃತ ಭಾಷೆಗಳೆಂದು ಮಾನ್ಯಮಾಡಲಾಯಿತು. ಹಿಂದಿ ರಾಷ್ಟ್ರ ಭಾಷೆಯೆಂದಾಗಲೀ, ಇಡೀ ದೇಶದಲ್ಲಿ ಅದಕ್ಕೆ ಪ್ರಾಶಸ್ತ್ಯ ಕೊಡಬೇಕೆಂದಾಗಲೀ ಸಂವಿಧಾನದಲ್ಲಿ ಇಲ್ಲ.

ಮಿಶ್ರಸಂಸ್ಕೃತಿಯ ರಕ್ಷಣೆಯ ಜೊತೆಗೆ ಸಮಾನತೆ, ಮನುಷ್ಯನ ಏಳಿಗೆಗೆ ಬೇಕಾದ ವೈಜ್ಞಾನಿಕ ಮನೋಧರ್ಮಗಳಿಗೂ ಆದ್ಯತೆ ನೀಡಲಾಯಿತು. ಸಾಮಾಜಿಕ ಸುಧಾರಕರ ಹೋರಾಟಗಳ ಪರಿಣಾಮವಾಗಿ, ಅನೇಕ ಅನಿಷ್ಟಕಾರಿ ಸಾಮಾಜಿಕ ಸಂಪ್ರದಾಯಗಳನ್ನು ಕೈಬಿಡಲಾಯಿತು. ದಾಸ್ಯದಿಂದ ವಿಮುಕ್ತವಾದ ರಾಷ್ಟ್ರದ ಪುರೋಭಿವೃದ್ಧಿಗೆ ಈ ಬದಲಾವಣೆಗಳು ಅಗತ್ಯವಾಗಿದ್ದವು. ಸಂವಿಧಾನದ ಮೌಲ್ಯ, ಅದನ್ನು ರೂಪಿಸಿದವರ ದೂರದೃಷ್ಟಿ ಮತ್ತು ಆ ಬಳಿಕ ದೇಶದ ಆಡಳಿತ ಸೂತ್ರವನ್ನು ಹಿಡಿದ ನಾಯಕರಿಂದಾಗಿ ದೇಶ ಬೆಳೆಯಿತು, ಸಾಮಾಜಿಕ ಸಮತೋಲನ ಭದ್ರವಾಗಿ ಬೇರೂರಿತು. 20ನೇ ಶತಮಾನದಲ್ಲಿ ಸ್ವಾತಂತ್ರ್ಯ ಪಡೆದ ಅನೇಕ ದೇಶಗಳಲ್ಲಿ ಪ್ರಜಾಪ್ರಭುತ್ವ ಅಸ್ಥಿರವಾಗಿ ಸರ್ವಾಧಿಕಾರಿ ಆಧಿಪತ್ಯಗಳು ತಲೆಯೆತ್ತಿದರೆ, ಭಾರತದಲ್ಲಿ ಪ್ರಜಾತಂತ್ರ ಸುಸ್ಥಿರವಾಗಿ ಬೆಳೆಯಲು ಈ ಸಾಮಾಜಿಕ ಸಮತೋಲನವು ಒಂದು ಪ್ರಧಾನ ಕಾರಣವೆನ್ನಬಹುದು. 2014ರ ತನಕ ಬೇರೆ-ಬೇರೆ ಪಕ್ಷದ ಸರಕಾರಗಳು ಅಧಿಕಾರದಲ್ಲಿದ್ದರೂ ಸಂವಿಧಾನದ ಚೌಕಟ್ಟಿನಲ್ಲಿ ದೇಶ ಮುಂದುವರಿಯಿತು. ಅದರಿಂದಾಗಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿಯೂ ಭಾರತಕ್ಕೆ ವಿಶೇಷ ಮನ್ನಣೆ ಪ್ರಾಪ್ತವಾಯಿತು.

► ಭಾರತದ ಹೊಸ ಕಲ್ಪನೆ ಮತ್ತು ಸಿದ್ಧಾಂತಗಳು

  ಸಂಘಪರಿವಾರವು ಪ್ರಚಾರಕ್ಕೆ ತಂದ ಭಾರತದ ಕಲ್ಪನೆ, ಸುಮಾರಾಗಿ 1990ರ ದಶಕದಲ್ಲಿ ರೂಪ ತಳೆಯುತ್ತಾ ಬಂತು. 1999ರಿಂದ ಐದು ವರ್ಷ ಆಳಿ, 2004ರ ಲೋಕಸಭಾ ಚುನಾವಣೆಯಲ್ಲಿ ‘ಭಾರತವು ಪ್ರಕಾಶಿಸುತ್ತಿದೆ’ ಎಂಬ ಘೋಷವಾಕ್ಯದೊಂದಿಗೆ ಪುನಃ ಕಣಕ್ಕಿಳಿದ ಭಾಜಪವನ್ನು ಯುಪಿಎ ಸೋಲಿಸಿ ಅಧಿಕಾರಕ್ಕೆ ಬಂತು. ತನ್ನ ಐದು ವರ್ಷಗಳ ಸಾಧನೆಯ ಆಧಾರದಲ್ಲಿ 2009ರಲ್ಲಿ ಮತ್ತೊಮ್ಮೆ ಯುಪಿಎ ಸರಕಾರ ಚುನಾಯಿತವಾಯಿತು. ಸತತ ಎರಡು ಬಾರಿ ಸೋಲನ್ನುಂಡ ಭಾಜಪಕ್ಕೆ ಚುನಾವಣೆಯನ್ನು ಗೆಲ್ಲಲು ಹೊಸ ನಾಯಕನ ಮತ್ತು ಹೊಸ ಘೋಷಣೆಗಳ ಅಗತ್ಯವಿತ್ತು. ಅದಾಗಲೇ 2002ರಿಂದ ಗುಜರಾತಿನ ಮುಖ್ಯಮಂತ್ರಿಯಾಗಿ ತೀವ್ರವಾದ ಟೀಕೆಗಳ ಹೊರತಾಗಿಯೂ ಪಕ್ಷದಲ್ಲಿ ಪ್ರಭಾವಿ ನಾಯಕರೆನಿಸಿದ ನರೇಂದ್ರ ಮೋದಿ ಸಂಘಪರಿವಾರಕ್ಕೆ ಆಪ್ತರಾದರು. ಅವರ ಬೆಂಬಲಕ್ಕೆ ಗುಜರಾತ್ ಮೂಲದ ವಾಣಿಜ್ಯೋದ್ಯಮಿಗಳು ಮುಂದೆ ಬಂದರು. ಭಾಜಪವು ಅವರನ್ನೇ ಮುಂದಿನ ಪ್ರಧಾನಿ ಎಂದು ಬಿಂಬಿಸಿ ಪ್ರಚಾರಕ್ಕೆ ಇಳಿಯಿತು. ಗುಜರಾತಿನಲ್ಲಿ ಆದ ‘ಅಭಿವೃದ್ಧಿ’ಯ ಹರಿಕಾರರೆಂದು ಮೋದಿಯವರನ್ನು ಹೇಳಿ, ‘‘ಭಾರತದ ಹದಗೆಟ್ಟ ಆರ್ಥಿಕತೆಯನ್ನು ಸಮರ್ಥವಾಗಿ ನಿರ್ವಹಿಸಬಲ್ಲ ದೂರದೃಷ್ಟಿಯ ನಾಯಕ, ಅವರು ಚುನಾಯಿತರಾದರೆ ಭಾರತಕ್ಕೆ ಉತ್ತಮ ಭವಿಷ್ಯವಿದೆ’’ ಎಂದೂ ಚಿತ್ರಿಸಲಾಯಿತು. ‘‘ಉತ್ತಮ ದಿನಗಳು ಬರಲಿವೆ’’ ಎಂಬುದು ಭಾಜಪದ ಹೊಸ ಘೋಷವಾಕ್ಯವಾಯಿತು.

2014ಕ್ಕೆ ಮತ್ತೆ ಅಧಿಕಾರ ಗ್ರಹಣ ಮಾಡಿದ ಭಾಜಪವು ಕಲ್ಪಿಸಿದ ‘ಭಾರತ’ ಆ ತನಕ ಪೋಷಿಸಿಕೊಂಡು ಬಂದ ಚಿತ್ರಕ್ಕಿಂತ ತೀರಾ ಭಿನ್ನವಾಗಿತ್ತು. ಆರೆಸ್ಸೆಸ್‌ನ ಗರಡಿಯಲ್ಲಿ ಪಳಗಿದ ಭಾಜಪದ ಗುರಿ ಹಿಂದೂ ಧರ್ಮಾಧಾರಿತ ‘ಏಕ್ ಭಾರತ್, ಶ್ರೇಷ್ಠ ಭಾರತ್’ (ಒಂದು ಭಾರತ, ಶ್ರೇಷ್ಠ ಭಾರತ) ಎಂಬ ಬಲಿಷ್ಠ ರಾಷ್ಟ್ರವನ್ನು ಬೆಳೆಸುವುದು.

► ಈ ಪರಿಕಲ್ಪನೆಯಲ್ಲಿ ನಾಲ್ಕು ಸಿದ್ಧಾಂತಗಳು ಒಳಗೊಂಡಿವೆ:

1. ಭಾರತವು ಮೂಲತಃ ಹಿಂದೂ ರಾಷ್ಟ್ರ-ಉಳಿದ ಮತಾವಲಂಬಿಗಳು ಆಕ್ರಮಣಕಾರರು.

2. ಭಾರತದಲ್ಲಿ ಹಿಂದೆ ಪ್ರಚಲಿತವಾಗಿದ್ದ ಆರ್ಯ ಸಂಸ್ಕೃತಿ ಸರ್ವಶ್ರೇಷ್ಠ. 3. ಭಾರತದಲ್ಲಿ ಇರಬಯಸುವವರು ಇಲ್ಲಿನ ಸಂಸ್ಕೃತಿಯನ್ನು ಅನುಸರಿಸಬೇಕು.

4. ಈ ಕಲ್ಪನೆಯ ಭಾರತ ವಿಶ್ವದಲ್ಲಿಯೇ ಬಲಿಷ್ಠವಾಗಬೇಕು.

ಈ ಕಲ್ಪನೆಯನ್ನು ಕಾರ್ಯರೂಪಕ್ಕೆ ಇಳಿಸುವಾಗ ಅನೇಕ ಸವಾಲುಗಳು ಎದುರಾದವು. ಭಾಜಪವು ಅವುಗಳನ್ನು ಹೇಗೆ ಎದುರಿಸಿತು? ಬಹುಧರ್ಮಗಳ ತವರೂರಾಗಿರುವ ಭಾರತವು ಹಿಂದೂ ರಾಷ್ಟ್ರವಾಗಬೇಕಿದ್ದರೆ ಇಲ್ಲಿನ ನಾಗರಿಕರೆಲ್ಲರೂ ಹಿಂದೂಗಳಾಗಿರಬೇಕು ಇಲ್ಲವೇ ಹಿಂದೂ ಧರ್ಮವು ಶ್ರೇಷ್ಠವೆಂದು ಒಪ್ಪಿಕೊಳ್ಳಬೇಕು. ಒಪ್ಪಿದವರು ಮಾತ್ರ ಇಲ್ಲಿ ಸಂಪೂರ್ಣ ಹಕ್ಕಿನ ನಾಗರಿಕರಾಗಬಹುದು. ಇದನ್ನು ವಿರೋಧಿಸಿದವರು ಸಮಾನ ನಾಗರಿಕ ಹಕ್ಕುಗಳಿಗೆ ಅರ್ಹರಲ್ಲ, ಎಂದು ಪ್ರತಿಪಾದಿಸಲಾಯಿತು. ಹಿಂದೂ ಧರ್ಮವು ಶ್ರೇಷ್ಠವೆಂದಾಗ ಅದರ ಭಾಗವಾಗಿದ್ದ ಸಾಮಾಜಿಕ ಸಂಪ್ರದಾಯಗಳು, ಧಾರ್ಮಿಕ ನಂಬಿಕೆಗಳು, ಪೌರಾಣಿಕ ಗ್ರಂಥಗಳು ಮತ್ತು ಜೀವನಕ್ರಮಗಳು ಅನುಸರಣೀಯವಾಗುತ್ತವೆ. ಅವುಗಳನ್ನು ಮತ್ತೆ ಊರ್ಜಿತಗೊಳಿಸಬೇಕು. ‘ರಾಜನು ಪ್ರತ್ಯಕ್ಷ ದೇವರು’ ಎಂಬ ನೀತಿಯೂ ಪ್ರಸ್ತುತವಾಗುತ್ತದೆ. ರಾಜನು ದೇವರಾಗಿರುವುದರಿಂದ ಆಡಳಿತ ಸೂತ್ರ ಹಿಡಿದವರು ಪ್ರಶ್ನಾತೀತರು ಎಂದಾಯಿತು! ಹಿಂದೂ ಧರ್ಮದ ಜ್ಞಾನಭಂಡಾರದಲ್ಲಿ ಎಲ್ಲಾ ವೈಜ್ಞಾನಿಕ ಸಿದ್ಧಾಂತಗಳು ದಾಖಲಾಗಿವೆ - ವೈಮಾನಿಕ ಶಾಸ್ತ್ರ, ಶಸ್ತ್ರ ಚಿಕಿತ್ಸೆ, ಪ್ಲಾಸ್ಟಿಕ್ ಸರ್ಜರಿ, ಅಂತರ್ಜಾಲ ಮುಂತಾದವು ಭಾರತದಲ್ಲಿ ಅನಾದಿಕಾಲದಿಂದಲೇ ಜನಪ್ರಿಯವಾಗಿದ್ದವು, ಎಂಬ ಮಾತುಗಳನ್ನೂ ಮುಂದಿಡಲಾಯಿತು.

► ಭಾಜಪವು ಹಿಡಿದ ದಾರಿ

ತನ್ನ ಕಲ್ಪನೆಯ ಈ ಭಾರತವನ್ನು ಬೆಳೆಸುವಲ್ಲಿ ಭಾಜಪ ಸರಕಾರ ತನ್ನದೇ ಮಾರ್ಗಗಳನ್ನು ರಚಿಸಿಕೊಂಡು ಮುನ್ನುಗ್ಗಿತು. 21ನೇ ಶತಮಾನದ ವಿಶ್ವದಲ್ಲಿ ತಂತ್ರಜ್ಞಾನ, ವಿಜ್ಞಾನ, ಚಿಂತನಾಶೈಲಿ, ರಾಜಕೀಯ ಮತ್ತು ಸಾಮಾಜಿಕ ರಂಗಗಳಲ್ಲಿ ಆಗುತ್ತಿರುವ ಮಹತ್ವಪೂರ್ಣ ಬದಲಾವಣೆಗಳಿಗೆ ತೀರಾ ಭಿನ್ನವಾದ ಬದಲಾವಣೆಗಳನ್ನು ಭಾರತದಲ್ಲಿ ಆಡಳಿತದಲ್ಲಿರುವ ಒಂದು ರಾಜಕೀಯ ಪಕ್ಷವು ಸಾಧಿಸುತ್ತಿರುವ ಪರಿ ಕೌತುಕಪೂರ್ಣವಾಗಿದೆ.

► ಅದು ಬಳಸಿದ ಕೆಲವು ತಂತ್ರಗಳು ಹೀಗಿವೆ:

1. ನಾಯಕ ಕೇಂದ್ರೀಕೃತ ಪ್ರಚಾರ

2. ಸಮಾಜದ ಧ್ರುವೀಕರಣ

3. ಜನರಲ್ಲಿ ಅವ್ಯಕ್ತ ಭೀತಿಯ ಸೃಷ್ಟಿ

4. ಮಧ್ಯಮವರ್ಗದ ಓಲೈಕೆ

5. ಪ್ರಚಾರದಲ್ಲಿ ಮಾಹಿತಿ ತಂತ್ರಜ್ಞಾನದ ವ್ಯಾಪಕ ಬಳಕೆ

ಚನಾಯಿತರಾದ ಬಳಿಕ ತಮ್ಮ ಹೊಸ ನಾಯಕರ ಬಗ್ಗೆ ಇದ್ದ ಕಲ್ಪನೆಗಳನ್ನು ಭದ್ರಪಡಿಸಲು ಅನೇಕ ತಂತ್ರಗಳನ್ನು ಹೆಣೆಯಲಾಯಿತು. ದೇಶಸೇವೆಗೆ ಕುಟುಂಬವನ್ನು ಬಿಟ್ಟು ತನ್ನನ್ನೇ ಮುಡುಪಿಟ್ಟವರು, ರೈಲು ನಿಲ್ದಾಣದಲ್ಲಿ ಚಾ ಮಾರುತ್ತಿದ್ದವರು, ಸಮಾಜದ ತಳವರ್ಗದಿಂದ ಸ್ವಪ್ರಯತ್ನದಿಂದಲೇ ಮುಂದೆ ಬಂದವರು- ಹೀಗೆ ಅನೇಕ ಗುಣಗಳನ್ನು ಅವರಲ್ಲಿ ಆರೋಪಿಸಲಾಯಿತು. ದೇಶಕ್ಕೆ ಅವರು ನಾಯಕರಾಗಿರುವುದು ದೇವರ ವರ ಎಂದೂ ಆಗ ಭಾಜಪದ ವರಿಷ್ಠ ನೇತಾರರಾಗಿದ್ದ ವೆಂಕಯ್ಯ ನಾಯ್ಡು ಅವರು ನರೇಂದ್ರ ಮೋದಿಯವರನ್ನು ಬಣ್ಣಿಸಿದರು. ಅವರು ‘ಹಿಂದೂ ಹೃದಯ ಸಾಮ್ರಾಟ’ನೆಂದೂ ಪ್ರಚಾರ ಮಾಡಲಾಯಿತು. ಮೋದಿ ದೇವತಾ ಮನುಷ್ಯರೆಂದಾದ ಮೇಲೆ ಅವರ ನಿರ್ಧಾರಗಳು ಪ್ರಶ್ನಾತೀತವೆನಿಸಿದವು. ನೋಟು ರದ್ದತಿ ಇರಲಿ, ಜಿಎಸ್‌ಟಿ ಇರಲಿ, ದೇಶದಾದ್ಯಂತ ಲಾಕ್‌ಡೌನ್ ಹೇರಲಿ ಅವುಗಳೆಲ್ಲ ಜನರ ಒಳಿತಿಗೆ ಎಂಬ ಭಾವನೆಯನ್ನು ಬಿತ್ತಲಾಯಿತು. ಈ ಪ್ರಚಾರದ ಮೂಲಕ ಸಮೂಹ ಸನ್ನಿಯ ಗುಣಗಳನ್ನು ಜನರಲ್ಲಿ ಪೋಷಿಸಲಾಯಿತು. ಅದರಲ್ಲಿಯೂ ಪ್ರಮುಖವಾಗಿ ಅಭಿಪ್ರಾಯ ಪಸರಿಸುವ ಮತ್ತು ಅದರ ಮೇಲೆ ಪ್ರಭಾವ ಬೀರಬಲ್ಲ ಸಾಮರ್ಥ್ಯವಿರುವ ಮಧ್ಯಮವರ್ಗವನ್ನು ಮೋಡಿ ಮಾಡಿ ಅವರ ಮೂಲಕ ಸಮಾಜದ ಎಲ್ಲೆಡೆಗೆ ತಲುಪುವ ಕ್ರಮವನ್ನು ಭಾಜಪ ಅನುಸರಿಸಿತು. ಈ ದಾರಿಯನ್ನು ಕ್ರಮಿಸುತ್ತಿದ್ದಂತೆ ಹೊಸ ಸಾಮಾಜಿಕ ಸಂವಹನ ಮಾಧ್ಯಮದ ಮೂಲಕ ಸತ್ಯ ಮತ್ತು ಮಿಥ್ಯೆಯ ಅಂತರವನ್ನು ಅಳಿಸುವ ಪ್ರಕ್ರಿಯೆ ಆರಂಭವಾಯಿತು. ಈ ತಂತ್ರದಿಂದಾಗಿ 2014ರ ಆನಂತರ ನಡೆದ ರಾಜ್ಯಗಳ ಚುನಾವಣೆಗಳಲ್ಲಿ ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಭಾಜಪ ಅಭೂತಪೂರ್ವ ಜಯವನ್ನು ಸಾಧಿಸಿತು.

Writer - ಟಿ. ಆರ್. ಭಟ್

contributor

Editor - ಟಿ. ಆರ್. ಭಟ್

contributor

Similar News