×
Ad

ಮಲ್ಲೇಶ್ವರಂ ಕ್ಷೇತ್ರದ ಅರ್ಚಕರಿಗೆ ಕೋವಿಡ್‌ ಲಸಿಕೆ: ವಿವಾದ ಸೃಷ್ಟಿ

Update: 2021-06-01 22:07 IST

ಬೆಂಗಳೂರು, ಜೂ. 1: ಕೋವಿಡ್ ಲಸಿಕೆಯನ್ನು ಖಾಸಗಿ ಆಸ್ಪತ್ರೆಯ ಮೂಲಕ ಶಾಸಕರೊಬ್ಬರು ಮಾರಾಟಕ್ಕೆ ಮುಂದಾಗಿದ್ದಾರೆಂಬ ಆಡಿಯೋ ಬಹಿರಂಗಗೊಂಡ ಬೆನ್ನಲ್ಲೆ ಇದೀಗ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಅರ್ಚಕರು ಮತ್ತು ಅವರ ಕುಟುಂಬದ ಸದಸ್ಯರಿಗೆ 'ಪತ್ಯೇಕ'ವಾಗಿ ಕೋವಿಡ್ ಫ್ರಂಟ್ ಲೈನ್ ವಾರಿಯರ್ಸ್ ಅಡಿಯಲ್ಲಿ ಲಸಿಕೆ ನೀಡುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ.

ಕೋವಿಡ್ ಸೋಂಕಿನಿಂದ ರಕ್ಷಣೆಗೆ ಲಸಿಕೆಯೇ ಮದ್ದು ಎಂಬುದು ತಜ್ಞರ ಅಭಿಮತ. ಆ ಹಿನ್ನೆಲೆಯಲ್ಲಿ ಕೋವಿಡ್ ಫ್ರೆಂಟ್ ಲೈನ್ ವಾರಿಯರ್ಸ್, ಹಿರಿಯ ನಾಗರಿಕರಿಗೆ ಆದ್ಯತೆ ಮೇಲೆ ಲಸಿಕೆ ನೀಡಲಾಗುತ್ತಿದೆ. ಆದರೆ, 18ರಿಂದ 45 ವರ್ಷದೊಳಗಿನ ವ್ಯಕ್ತಿಗಳು ಸೇರಿದಂತೆ ಇತರೆ ನಾಗರಿಕರಿಗೆ ಲಸಿಕೆ ಲಭ್ಯತೆ ಕೊರತೆ ಹಿನ್ನೆಲೆಯಲ್ಲಿ ಸದ್ಯಕ್ಕೆ ನೀಡುವುದಿಲ್ಲ. ದಾಸ್ತಾನಿರುವ ಲಸಿಕೆಯನ್ನು ಎರಡನೆ ಡೋಸ್ ನೀಡಲಾಗುತ್ತದೆ ಎಂದು ಸರಕಾರ ಸ್ಪಷ್ಟಪಡಿಸಿದೆ.

ನಾಗರಿಕ ಸಮಾಜ ಆರೋಗ್ಯ ಕಾಪಾಡಲು ಸ್ವಚ್ಛತೆ ಕಾರ್ಯನಿರ್ವಹಿಸುವ ಪೌರ ಕಾರ್ಮಿಕರನ್ನು ಕೋವಿಡ್ ಮುಂಚೂಣಿ ಯೋಧರೆಂದು ಪರಿಗಣಿಸಿದ್ದರೂ ಅವರಿಗೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಲಸಿಕೆಯನ್ನೂ ನೀಡಿಲ್ಲ. ಅದೇ ರೀತಿಯಲ್ಲಿ ರಾಜ್ಯ ಸರಕಾರವೇ ಗುರುತಿಸಿರುವ ಸರಕಾರಿ ನೌಕರರು, ಶಿಕ್ಷಕರು, ಸಾರಿಗೆ ನೌಕರರು, ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಅತ್ಯಂತ ಮುಖ್ಯವಾಗಿ ಉತ್ಪಾದನಾ ವಲಯದಲ್ಲಿನ ದೊಡ್ಡಸಂಖ್ಯೆಯ ಕಾರ್ಮಿಕರಿಗೆ ಕೋವಿಡ್ ಲಸಿಕೆಯನ್ನು ನೀಡಿಲ್ಲ. ಆದರೆ, ಅರ್ಚಕರನ್ನು 'ಮುಂಚೂಣಿ' ಯೋಧರೆಂದು ಪರಿಗಣಿಸಿ ಲಸಿಕೆ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಈ ಸಂಬಂಧ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ಹೊಣೆ ಹೊತ್ತಿರುವ ಲಾವಣ್ಯ ಬಲ್ಲಾಳ್ ಅವರು, ಟ್ವಿಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದು, ಮಲ್ಲೇಶ್ವರಂನಲ್ಲಿ ದೇವಸ್ಥಾನದ ಪೂಜಾರಿಗಳಿಗೆ ಕೋವಿಡ್ ಲಸಿಕೆ ವಿಶೇಷ ಅಭಿಯಾನ ನಡೆಸಲಾಗಿದೆ. ಇದೇ ರೀತಿಯಲ್ಲಿ ಕುರುಬ, ಗೌಡ, ಶೆಟ್ಟಿ ಸಮುದಾಯಕ್ಕೆ ಪ್ರತ್ಯೇಕ ಅಭಿಯಾನ ಮಾಡುತ್ತೀರಾ? ಎಂದು ಉಪಮುಖ್ಯಮಂತ್ರಿ ಹಾಗೂ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಡಾ.ಅಶ್ವತ್ಥ ನಾರಾಯಣ ಅವರನ್ನು ಪ್ರಶ್ನಿಸಿದ್ದಾರೆ.

ಲಸಿಕೆ ಅವಾಂತರ: ಕೋವಿಡ್ ಲಸಿಕೆ ಮೊದಲನೆ ಮತ್ತು ಎರಡನೆ ಡೋಸ್‍ಗಾಗಿ ಹಿರಿಯ ನಾಗರಿಕರು, ಕೊರೋನ ಮುಂಚೂಣಿ ಯೋಧರಾಗಿ ಪ್ರತಿನಿತ್ಯ ಪರದಾಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಸಾರ್ವಜನಿಕರು ಲಸಿಕೆಗಾಗಿ ನಿತ್ಯ ಎಡತಾಕುತ್ತಿದ್ದಾರೆ. ಆದರೆ, ಸಮರ್ಪಕ ರೀತಿಯಲ್ಲಿ ರಾಜ್ಯದಲ್ಲಿ ಲಸಿಕೆ ಲಭ್ಯವಾಗುತ್ತಿಲ್ಲ. ಕೆಲವು ಕಡೆಗಳಲ್ಲಿ ಜನರು ಹಗಲು-ರಾತ್ರಿಗಳ ಪರಿವೆ ಮರೆತು ಲಸಿಕೆಗಾಗಿ ಸರತಿ ಸಾಲಿನಲ್ಲಿಯೂ ನಿಲ್ಲುತ್ತಿರುವುದು ಸಾಮಾನ್ಯವಾಗಿದೆ.

ಈ ಮಧ್ಯೆ ಕೇಂದ್ರ ಸಾಹಿತ್ಯ ಅಕಾಡೆಮಿ ಮಾಜಿ ಕಾರ್ಯದರ್ಶಿಗಳಾದ ಅಗ್ರಹಾರ ಕೃಷ್ಣಮೂರ್ತಿ ಕೋವಿಡ್ ಎರಡನೆ ಡೋಸ್ ಲಸಿಕೆಗಾಗಿ ನಾಲ್ಕೈದು ದಿನ ಪರದಾಟ ನಡೆಸಿದ್ದು ಸುದ್ದಿಯಾಗಿತ್ತು. ಅದೇ ರೀತಿಯಲ್ಲಿ ಹಿರಿಯ ಲೇಖಕ ಬೊಳುವಾರು ಮುಹಮ್ಮದ್ ಕುಂಞಿ ಅವರು ಮಾರ್ಚ್ 12ರಂದು ಮೊದಲನೆ ಡೋಸ್ ಲಸಿಕೆ ಪಡೆದಿದ್ದು, ಎಪ್ರಿಲ್ 26ಕ್ಕೆ ಎರಡನೆ ಡೋಸ್ ಕೂಡ ಪಡೆದಿದ್ದಾರೆ. ಆದರೆ, ಅವರಿಗೆ ಮತ್ತೆ ಜೂನ್ 6ಕ್ಕೆ ಡೋಸ್ ಪಡೆದುಕೊಳ್ಳಿ ಎಂಬ ಎಸ್‍ಎಂಎಸ್ ಸಂದೇಶ ಬಂದಿರುವುದು ತೀವ್ರ ಅಚ್ಚರಿಗೆ ಕಾರಣವಾಗಿದೆ.

ಈ ನಡುವೆ ಹಿರಿಯ ನಾಗಕರಿಗೆ, ಕೋವಿಡ್ ಮುಂಚೂಣಿ ಯೋಧರಿಗೆ ಹಾಗೂ ಜನಸಾಮಾನ್ಯರಿಗೆ ಲಭ್ಯವಾಗದ ಕೋವಿಡ್ ಲಸಿಕೆ ಅರ್ಚಕರಿಗೆ ಮಾತ್ರ ಸಿಗಲು ಹೇಗೆ ಸಾಧ್ಯ? ಎಂದು ಜನರು ಸಾಮಾಜಿಕ ಜಾಲತಾಣದಲ್ಲಿ  ಪ್ರಶ್ನಿಸಿದ್ದಾರೆ. ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಮಲ್ಲೇಶ್ವರಂನ 13ನೆ ಕ್ರಾಸ್‍ನಲ್ಲಿರುವ ಗರ್ಲ್ಸ್ ಹೈಸ್ಕೂಲ್‍ನಲ್ಲಿ ಅರ್ಚಕರಿಗಾಗಿ ಕೋವಿಡ್ ಲಸಿಕೆ ವಿತರಣೆ ವ್ಯವಸ್ಥೆ ಮಾಡಲಾಗಿತ್ತು ಎಂಬ ಎಂಬ ಅಂಶ ಬೆಳಕಿಗೆ ಬಂದಿದೆ. ಮತ್ತೊಂದು ಮೂಲದ ಪ್ರಕಾರ ಸಾಫ್ಟ್ ವೇರ್ ಕಂಪೆನಿಯೊಂದರ ಮುಖ್ಯಸ್ಥರು ಮಲ್ಲೇಶ್ವರಂ ಕ್ಷೇತ್ರದಲ್ಲಿನ ಅರ್ಚಕರಿಗಾಗಿ ಕೋವಿಡ್ ಲಸಿಕೆ ಅಭಿಯಾನವನ್ನು ಆಯೋಜಿಸಿದ್ದರು ಎಂದು ತಿಳಿದುಬಂದಿದೆ.

"ನಿನ್ನೆ ಮಲ್ಲೇಶ್ವರಂ ಕ್ಷೇತ್ರದಲ್ಲಿ ಹಿರಿಯ ನಾಗರಿಕರಿಗೆ ಹಾಗೂ ಅವರನ್ನು ನೋಡಿಕೊಳ್ಳುವವರಿಗೆ ಕೊವಿಡ್ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಅರ್ಚಕರೆಲ್ಲರೂ ಬಂದು ಹಾಕಿಸಿಕೊಂಡಿದ್ದಾರೆ. ಆದರೆ, ಅರ್ಚಕರಿಗೆ ಮಾತ್ರ ಎಂದು ಯಾವುದೇ ಪ್ರತ್ಯೇಕವಾಗಿ ಕೋವಿಡ್ ಲಸಿಕೆ ವ್ಯವಸ್ಥೆ ಮಾಡರಲಿಲ್ಲ"
-ಡಾ.ಅಶ್ವತ್ಥ ನಾರಾಯಣ, ಉಪಮುಖ್ಯಮಂತ್ರಿ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News