60 ಶೇಕಡ ಲಸಿಕೆ ಅಮೆರಿಕ, ಭಾರತ, ಚೀನಾಕ್ಕೆ: ವಿಶ್ವ ಆರೋಗ್ಯ ಸಂಸ್ಥೆ

Update: 2021-06-05 16:00 GMT

ವಿಶ್ವಸಂಸ್ಥೆ (ಜಿನೀವ), ಜೂ. 5; ಈವರೆಗೆ ಜಗತ್ತಿನಾದ್ಯಂತ ವಿತರಿಸಲಾದ 200 ಕೋಟಿ ಕೋವಿಡ್-19 ಲಸಿಕಾ ಡೋಸ್ಗಳ ಪೈಕಿ ಸುಮಾರು 60 ಶೇಕಡ ಅಮೆರಿಕ, ಭಾರತ ಮತ್ತು ಚೀನಾ- ಈ ಮೂರು ದೇಶಗಳಿಗೆ ಹೋಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ರ ಹಿರಿಯ ಸಲಹೆಗಾರ ಬ್ರೂಸ್ ಐಲ್ವಾರ್ಡ್ ಹೇಳಿದ್ದಾರೆ.

‘‘ಜಗತ್ತಿನಾದ್ಯಂತ ಉತ್ಪಾದನೆಯಾಗುತ್ತಿರುವ ಕೋವಿಡ್-19 ಲಸಿಕಾ ಡೋಸ್ಗಳ ಸಂಖ್ಯೆ ಈ ವಾರ 200 ಕೋಟಿಯನ್ನು ದಾಟುವುದನ್ನು ನಾವು ನೋಡಲಿದ್ದೇವೆ. ಅವುಗಳನ್ನು 212ಕ್ಕೂ ಹೆಚ್ಚಿನ ದೇಶಗಳಲ್ಲಿ ವಿತರಿಸಲಾಗಿದೆ’’ ಎಂದು ಶುಕ್ರವಾರ ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ಕಚೇರಿ ಇರುವ ಸ್ವಿಟ್ಸರ್ಲ್ಯಾಂಡ್ ರಾಜಧಾನಿ ಜಿನೀವದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಳಿದರು.

‘‘ಈ 200 ಕೋಟಿ ಡೋಸ್ಗಳ ಪೈಕಿ 75 ಶೇಕಡಕ್ಕೂ ಅಧಿಕ ಭಾಗ ಕೇವಲ 10 ದೇಶಗಳಿಗೆ ಹೋಗಿವೆ. ಅದರಲ್ಲೂ ಮುಖ್ಯವಾಗಿ 60 ಶೇಕಡ ಚೀನಾ, ಅಮೆರಿಕ ಮತ್ತು ಭಾರತ- ಈ ಮೂರು ದೇಶಗಳಿಗೆ ಹೋಗಿವೆ’’ ಎಂದರು.

127 ದೇಶಗಳಿಗೆ ಕೋವಿಡ್-19 ಲಸಿಕೆಗಳನ್ನು ವಿತರಿಸುವಲ್ಲಿ ಹಾಗೂ ಹಲವಾರು ದೇಶಗಳು ತಮ್ಮ ಲಸಿಕಾ ಅಭಿಯಾನಗಳನ್ನು ಆರಂಭಿಸುವಂತೆ ಮಾಡುವಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ‘ಕೋವ್ಯಾಕ್ಸ್’ ಕಾರ್ಯಕ್ರಮ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಹೇಳಿದರು. ಆದರೆ, ಲಸಿಕೆಗಳನ್ನು ಪಡೆಯುವಲ್ಲಿ ಹಲವು ಸವಾಲುಗಳಿವೆ ಎಂದು ಅವರು ಹೇಳಿದರು.

ಚೀನಾ, ಅಮೆರಿಕ ಮತ್ತು ಭಾರತದಲ್ಲಿ ಬಳಸಲಾಗಿರುವ 60 ಶೇಕಡ ಲಸಿಕಾ ಡೋಸ್ಗಳು ಸ್ವದೇಶಗಳಲ್ಲೇ ಉತ್ಪಾದನೆಯಾಗಿರುವ ಲಸಿಕೆಗಳಾಗಿವೆ ಎನ್ನುವುದನ್ನು ಬ್ರೂಸ್ ಐಲ್ವಾರ್ಡ್ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News