×
Ad

ಸಣ್ಣ ಕೈಗಾರಿಕೆಗಳಿಗೆ ವಿನಾಯಿತಿ ನೀಡದಿದ್ದರೆ ಭಾರೀ ಉದ್ಯೋಗ ನಷ್ಟ: ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಸಿ.ಪ್ರಕಾಶ್

Update: 2021-06-05 22:24 IST

ಬೆಂಗಳೂರು, ಜೂ. 5: ಕೋವಿಡ್-19 ಲಾಕ್‍ಡೌನ್‍ನಿಂದ ಕೆಲಸವಿಲ್ಲದೇ ಕಂಗಾಲಾಗಿರುವ ಪೀಣ್ಯ ಕೈಗಾರಿಕಾ ಪ್ರದೇಶದ ಕಾರ್ಮಿಕರಿಗೆ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಶ್ರಮಿಕ ವರ್ಗಕ್ಕೆ ಸೋಂಕು ಬಾಧಿಸದಂತೆ ತಡೆಯುವ ಉದ್ದೇಶದಿಂದ ಪೀಣ್ಯ ಕೈಗಾರಿಕಾ ಸಂಘ, ಎಮ್.ಐ.ಎ ಮತ್ತು ಲೇಬರ್ ನೆಟ್ ಆಶ್ರಯದಲ್ಲಿ ಐದು ದಿನಗಳಲ್ಲಿ 6 ಸಾವಿರ ಜನರಿಗೆ ಲಸಿಕೆ ಅಭಿಯಾನ ನಡೆಸಲಾಗಿದೆ ಎಂದು ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಸಿ.ಪ್ರಕಾಶ್ ತಿಳಿಸಿದ್ದಾರೆ.

ಶನಿವಾರ ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋವಿಡ್ ಲಾಕ್‍ಡೌನ್‍ನಿಂದ ಸಣ್ಣ ಕೈಗಾರಿಕೆಗಳನ್ನು ಹೊರಗಿಡಬೇಕು. ಇಲ್ಲವಾದಲ್ಲಿ ದುಡಿಯುವ ಕೈಗೆಗಳಿಗೆ ಕೆಲಸ ಕೊಡುವ ಸಣ್ಣ ಕೈಗಾರಿಕೆಗಳು ಶಾಶ್ವತವಾಗಿ ನಶಿಸಿ ಹೋಗಲಿವೆ. ಜೀವ ಮತ್ತು ಜೀವನ ಎರಡೂ ಮುಖ್ಯವಾಗಿದೆ. ರಫ್ತು ಚಟುವಟಿಕೆಗಳಿಗೆ ಸರಕಾರ ಅವಕಾಶ ಮಾಡಿಕೊಟ್ಟಿದೆ. ಆದರೆ, ಶೇ.90ರಷ್ಟು ಉತ್ಪನ್ನಗಳನ್ನು ಸಣ್ಣ ಕೈಗಾರಿಕೆಗಳೇ ಉತ್ಪಾದಿಸಲಿವೆ ಎಂದು ಗಮನ ಸೆಳೆದರು.

ಲಾಕ್‍ಡೌನ್ ಇರುವುದರಿಂದ ಉತ್ಪಾದನಾ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದೆ. ಹೀಗಿರುವಾಗ ರಫ್ತು ವಲಯದಲ್ಲೂ ಯಾವುದೇ ಕೆಲಸ ಆಗುತ್ತಿಲ್ಲ. ಸರಕಾರ ತಕ್ಷಣವೇ ಸಣ್ಣ ಕೈಗಾರಿಕೆಗಳ ಆರಂಭಕ್ಕೆ ಅವಕಾಶ ಮಾಡಿಕೊಡಬೇಕೆಂದು ಅಪರ ಮುಖ್ಯ ಕಾರ್ಯದರ್ಶಿ ಮನವಿ ನೀಡಲಾಗಿದೆ. ಸೋಂಕು ಹೆಚ್ಚಾಗಿದ್ದ ಕಾರಣ ಇಲ್ಲಿಯವರೆಗೆ ಆಮ್ಲಜನಕ ಪೂರೈಕೆಗೆ ನಾವು ಸಹಕಾರ ನೀಡಿದ್ದೇವು. ಇದೀಗ ಕೈಗಾರಿಕೆಗಳ ಪಾಲಿನ ಶೇ.50ರಷ್ಟು ಆಮ್ಲಜನಕ ಬಳಕೆಗೆ ಸರಕಾರ ತಕ್ಷಣವೇ ಅನುಮತಿ ನೀಡಬೇಕು ಎಂದು ಸಿ.ಪ್ರಕಾಶ್ ಆಗ್ರಹಿಸಿದರು.

ಸಂಘದ ಹಿರಿಯ ಉಪಾಧ್ಯಕ್ಷ ಆರೀಫ್, ಗೌರವ ಕಾರ್ಯದರ್ಶಿ ಎಚ್.ಎಮ್.ಶ್ಯಾಮ್ ಚಂದ್ರನ್ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News