ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿಗೆ ಆರ್.ಪಿ.ವೆಂಕಟೇಶ್‍ಮೂರ್ತಿ ಆಯ್ಕೆ
Update: 2021-06-05 23:18 IST
ಬೆಂಗಳೂರು, ಜೂ.5: 2021ನೇ ಸಾಲಿನ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಹಾಸನದ ಆರ್.ಪಿ.ವೆಂಕಟೇಶ್‍ಮೂರ್ತಿಗೆ ಸಂದಿದೆ. ಪ್ರಶಸ್ತಿ 15 ಸಾವಿರ ರೂ. ನಗದು ಹಾಗೂ ಫಲಕವನ್ನು ಹೊಂದಿದೆ.
ಹಾಸನ ಜಿಲ್ಲೆ ಸಕಲೇಶಪುರದ ರಾಂಪುರ ಗ್ರಾಮದವರಾದ ವೆಂಕಟೇಶಮೂರ್ತಿ 1976ರಿಂದ ಪತ್ರಿಕಾರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. `ಜನತಾ ಮಾಧ್ಯಮ’ ದಿನಪತ್ರಿಕೆಯನ್ನು ನಡೆಸಿಕೊಂಡು ಬರುತ್ತಿರುವ ಅವರು, ಜೆಪಿ ಚಳವಳಿಯಿಂದ ಸ್ಪೂರ್ತಿ ಪಡೆದು ರೈತ ಚಳವಳಿಯಲ್ಲಿ ಭಾಗವಹಿಸಿ ಜನಪರ ಆಶಯಗಳನ್ನಿಟ್ಟು ಪತ್ರಿಕಾ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ.
ಕಳೆದ ವರ್ಷ ತರಂಗ ಪತ್ರಿಕೆಯ ಹಿರಿಯ ಪತ್ರಕರ್ತೆ ಡಾ.ಯು.ಬಿ. ರಾಜಲಕ್ಷ್ಮಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಕೊರೋನ ಕಾರಣದಿಂದಾಗಿ ಪ್ರಶಸ್ತಿ ವಿತರಣಾ ಸಮಾರಂಭ ನಡೆಸಲು ಸಾಧ್ಯವಾಗಿರಲಿಲ್ಲ. ಈಗ ಇಬ್ಬರು ಪತ್ರಕರ್ತರಿಗೂ ಪ್ರಶಸ್ತಿ ನೀಡಲಾಗುವುದೆಂದು ಖಾದ್ರಿ ಶಾಮಣ್ಣ ಟ್ರಸ್ಟ್ ಪ್ರಕಟನೆಯಲ್ಲಿ ತಿಳಿಸಿದೆ.