​ರೈತರ ಕ್ಷಮೆ ಯಾಚಿಸಿದ ಬಿಜೆಪಿ ಮಿತ್ರಪಕ್ಷದ ಶಾಸಕ ದೇವೇಂದ್ರ ಸಿಂಗ್

Update: 2021-06-06 04:27 GMT
ದೇವೇಂದ್ರ ಸಿಂಗ್ ಬಬ್ಲಿ 

ಚಂಡೀಗಢ: ರೈತರ ಜತೆಗಿನ ಸಂಘರ್ಷದ ವೇಳೆ ರೈತರನ್ನು ನಿಂದಿಸಿ, ರೈತ ಸಮುದಾಯದ ಆಕ್ರೋಶಕ್ಕೆ ಗುರಿಯಾದ ಹಿನ್ನೆಲೆಯಲ್ಲಿ ಹರ್ಯಾಣದಲ್ಲಿ ಆಡಳಿತಾರೂಢ ಬಿಜೆಪಿ ಮೈತ್ರಿಕೂಟದ ಮಿತ್ರಪಕ್ಷವಾದ ಜೆಜೆಪಿ ಶಾಸಕ ದೇವೇಂದ್ರ ಸಿಂಗ್ ಬಬ್ಲಿ ಕ್ಷಮೆ ಯಾಚಿಸಿದ್ದಾರೆ.

ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಹರ್ಯಾಣದ ತೊಹನ ಪಟ್ಟಣದಲ್ಲಿ ರೈತರು ಪ್ರತಿಭಟನೆ ನಡೆಸಿದ ಸಂದರ್ಭ ಶಾಸಕ ಈ ಹೇಳಿಕೆ ನೀಡಿದ್ದರು. "ಈ ಘಟನೆಯಲ್ಲಿ ಪಾಲ್ಗೊಂಡವರನ್ನು ಕ್ಷಮಿಸುತ್ತೇನೆ ಹಾಗೂ ಸಾರ್ವಜನಿಕ ಪ್ರತಿನಿಧಿಯಾಗಿ ಬಳಸಬಾರದು ಪದವನ್ನು ಬಳಸಿದ್ದಕ್ಕಾಗಿ ಕ್ಷಮೆ ಯಾಚಿಸುತ್ತಿದ್ದೇನೆ. ಇದಕ್ಕೆ ನಾನು ವಿಷಾದಿಸುತ್ತೇನೆ ಹಾಗೂ ಕ್ಷಮೆ ಕೇಳುತ್ತಿದ್ದೇನೆ" ಎಂದು ಪ್ರತಿಭಟನಾನಿರತ ರೈತರ ಜತೆ ಶನಿವಾರ ಸಂಜೆ ನಡೆದ ಮಾತುಕತೆಯ ಬಳಿಕ ಅವರು ಹೇಳಿಕೆ ನೀಡಿದರು.

ರೈತಮುಖಂಡ ರಾಜೇಶ್ ಟೀಕಾಯತ್, ಶಾಸಕರ ಕ್ಷಮೆಯನ್ನು ಸ್ವೀಕರಿಸಿದ್ದು, "ಶಾಸಕರು ಕ್ಷಮೆ ಯಾಚಿಸಿರುವುದು ಒಳ್ಳೆಯ ಬೆಳವಣಿಗೆ. ಮುಂದಿನ ನಿರ್ಧಾರವನ್ನು ಕೈಗೊಳ್ಳುವ ಸಲುವಾಗಿ ರೈತರು ಶಾಸಕರ ಜತೆ ಮಾತುಕತೆ ನಡೆಸುತ್ತಿದೆ" ಎಂದು ಟೀಕಾಯತ್ ಹೇಳಿದ್ದಾರೆ.

ಕಳೆದ ಮಂಗಳವಾರ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಬಂಧಿಸಿರುವ ಮೂವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ, ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ. ಟೀಕಾಯತ್ ಹಾಗೂ ಗುರ್ನಮ್ ಸಿಂಗ್ ಚದೂನಿ ನೇತೃತ್ವದಲ್ಲಿ ರೈತರು ತೊಹನಾ ಪೊಲೀಸ್ ಠಾಣೆಗೆ ಬೃಹತ್ ಜಾಥಾ ಆರಂಭಿಸಿದ ಬೆನ್ನಲ್ಲೇ ಶಾಸಕ ದೇವೇಂದ್ರ ಸಿಂಗ್ ಕ್ಷಮೆ ಯಾಚಿಸಿದರು.

ಶಾಸಕರು ಕ್ಷಮೆ ಯಾಚಿಸದಿದ್ದರೆ ಸೋಮವಾರ ರಾಜ್ಯಾದ್ಯಂತ ಎಲ್ಲ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕುವುದಾಗಿ ರೈತರು ಎಚ್ಚರಿಕೆ ನೀಡಿದ್ದರು. ಮಂಗಳವಾರ ನಡೆದ ಪ್ರತಿಭಟನೆ ವೇಳೆ ರೈತರು ಶಾಸಕ ದೇವೇಂದ್ರ ಸಿಂಗ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆಪಾದಿಸಿ ರೈತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News