ಉತ್ತರಪ್ರದೇಶ: ದನ ಸಾಗಾಟ ಮಾಡುತ್ತಿದ್ದವರ ಮೇಲೆ ದಾಳಿ; ಓರ್ವ ಮೃತ್ಯು, ಆರು ಮಂದಿಗೆ ಗಾಯ

Update: 2021-06-06 07:29 GMT

ಮಥುರಾ: ಮಾರಾಟಕ್ಕೆಂದು ದನಗಳನ್ನು ಸಾಗಾಟ ಮಾಡುತ್ತಿದ್ದವರ ಮೇಲೆ ಗ್ರಾಮಸ್ಥರು ದಾಳಿ ನಡೆಸಿದ್ದು ಮಾತ್ರವಲ್ಲದೇ, ಗುಂಡು ಹಾರಿಸಿದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಉಳಿದ ಆರು ಮಂದಿ ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಮಥುರಾದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. 

ಉತ್ತರಪ್ರದೇಶದಲ್ಲಿ ಇದುವರೆಗೆ ಗೋರಕ್ಷಕರಿಂದ ಹಲ್ಲೆಗೊಳಗಾದವರ ಪಟ್ಟಿಯಲ್ಲಿ ಮುಹಮ್ಮದ್‌ ಶೆಹ್ರಾ (೫೦) ಕೂಡಾ ಸೇರ್ಪಡೆಗೊಂಡಿದ್ದಾರೆ. ಆದರೆ ದನವನ್ನು ನಾವು ಮಾರಾಟಕ್ಕಾಗಿ ಕೊಂಡೊಯ್ದಿದ್ದೇವೆಯೇ ಹೊರತು ಕೊಲ್ಲುವ ಕಾರಣದಿಂದ ಅಲ್ಲ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಹೇಳಿಕೆ ನೀಡಿದ್ದಾಗಿ telegraphindia.com ವರದಿ ಮಾಡಿದೆ.

"ಹತ್ರಸ್‌ ನಿಂದ ನಾವು ೬ ದನಗಳನ್ನು ಖರೀದಿಸಿದ್ದೆವು. ಅದನ್ನು ಹರ್ಯಾಣದಲ್ಲಿ ಮಾರಲು ಟ್ರಕ್‌ ನಲ್ಲಿ ಕೊಂಡೊಯ್ಯುತ್ತಿದ್ದೆವು. ತುಮೌಲ ಗ್ರಾಮದ ಬಳಿ ಅವರು ನಮ್ಮ ವಾಹನವನ್ನು ತಡೆದರು. ನಮ್ಮನ್ನೆಲ್ಲ ಹೊರಗೆಳೆದು ಥಳಿಸಲು ಪ್ರಾರಂಭಿಸಿದರು. ಈ ವೇಳೆ ವ್ಯಕ್ತಿಯೋರ್ವ ಹಾರಿಸಿದ ಗುಂಡು ತಗಲಿ ಮುಹಮ್ಮದ್‌ ಶೆಹ್ರಾ ಮೃತಪಟ್ಟರು" ಎಂದು ಶೆಹ್ರಾ ಸಹವರ್ತಿಗಳು ಹೇಳಿಕೆ ನೀಡಿದ್ದಾಗಿ ವರದಿ ತಿಳಿಸಿದೆ.

ದನ ಕಳ್ಳಸಾಗಾಟ ಮಾಡುತ್ತಿದ್ದರೆಂಬ ಹಣೆಪಟ್ಟಿಯನ್ನು ಕಟ್ಟುವಲ್ಲಿ ಹಿಂದೆಮುಂದೆ ನೋಡದ ಅಲ್ಲಿನ ಇನ್‌ ಸ್ಪೆಕ್ಟರ್‌ ಪ್ರಮೋದ್‌ ಪನ್ವಾರ್‌ ಥಳಿಸಿದ ಗ್ರಾಮಸ್ಥರ ಹೇಳಿಕೆಗಳನ್ನೇ ಪುನರಾವರ್ತಿಸಿದ್ದಾರೆ ಎಂದು ವರದಿ ತಿಳಿಸಿದೆ. ಟ್ರಕ್‌ ನಲ್ಲಿದ್ದ ವ್ಯಕ್ತಿಯೇ ಜನರ ಮೇಲೆ ಗುಂಡು ಹಾರಿಸಿದ್ದ ಎಂದು ಅವರು ಹೇಳಿಕೆ ನೀಡಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳು ಈ ಆರೋಪವನ್ನು ನಿರಾಕರಿಸಿದ್ದಾರೆ.

"ಗುರುತಿಸಲಾಗದ ವ್ಯಕ್ತಿಗಳು ಮುಹಮ್ಮದ್‌ ಶೆಹ್ರಾ ಮೇಲೆ ಗುಂಡು ಹಾರಿಸಿದ್ದು ಹೌದು" ಎಂದೂ ಪ್ರಮೋದ್‌ ಹೇಳಿಕೆ ನೀಡಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ಹೇಳಿಕೆ ನೀಡಿದ್ದಾರೆ.

ಹಲವಾರು ಮಂದಿ ಗುಂಪುಗೂಡಿ ಥಳಿಸಿದ್ದರೂ, ಯಾರೊಬ್ಬರ ಗುರುತೂ ಸಿಕ್ಕಿಲ್ಲವೆಂದು ಪೊಲೀಸರು ಹೇಳಿಕೆ ನೀಡಿದ್ದಾರೆ. ಪ್ರಕರಣ ದಾಖಲಿಸುವಾಗಲೂ ʼಗುರುತಿಸಲ್ಪಡದʼ ಆರೋಪಿಗಳೆಂದೇ ನಮೂದಿಸಲಾಗಿದೆ. ಮುಹಮ್ಮದ್‌ ಶೆಹ್ರಾ ಪ್ರಕರಣದಲ್ಲಿ ಮೃತಪಟ್ಟರೆ, ಅವರ ಪುತ್ರ ಶಾರೂಖ್‌, ರಹ್ಮಾನ್‌, ಶಹಝಾದ, ಅನೀಸ್‌, ಕದೀಮ್‌ ಹಾಗೂ ಸೋನು ಎಂಬವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಮೇಲೆ ಗೋಕಳ್ಳತನದ ಕೇಸು ದಾಖಲಿಸಲಾಗಿದೆ. 12 ಮಂದಿ ʼಗುರುತಿಸಲ್ಪಡದʼ ವ್ಯಕ್ತಿಗಳ ಮೇಲೂ ಪ್ರಕರಣ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News