ಕೊರೋನ ವಿರುದ್ಧದ ಹೋರಾಟಕ್ಕಾಗಿ 3 ವಿಧದ ವೆಂಟಿಲೇಟರ್ ಅಭಿವೃದ್ಧಿಗೊಳಿಸಿದ ಇಸ್ರೋ

Update: 2021-06-07 18:28 GMT

ಬೆಂಗಳೂರು, ಜೂ.7: ಕೊರೋನ ಸೋಂಕಿನ ವಿರುದ್ಧದ ಹೋರಾಟಕ್ಕೆ ಪೂರಕವಾಗಿ 3 ಮಾದರಿಯ ವೆಂಟಿಲೇಟರ್ಗಳನ್ನು ಇಸ್ರೋ ಅಭಿವೃದ್ಧಿಗೊಳಿಸಿದ್ದು ಈ ತಂತ್ರಜ್ಞಾನವನ್ನು ಕೈಗಾರಿಕೆಗಳಿಗೆ ಒದಗಿಸಲು ಸಿದ್ಧ ಎಂದು ಹೇಳಿದೆ.

ಪ್ರಾಣ(ಪ್ರೋಗ್ರಾಮೇಬಲ್ ರೆಸ್ಪಿರೇಟರಿ ಅಸಿಸ್ಟೆನ್ಸ್ ಫಾರ್ ದಿನ ನೀಡಿ ಏಯ್ಡ್) ಎಂಬ ಹೆಸರಿನ ಕಡಿಮೆ ವೆಚ್ಚದ ಪೋರ್ಟೇಬಲ್ ವೆಂಟಿಲೇಟರ್ ಕೃತಕ ಹಸ್ತಚಾಲಿತ ಉಸಿರಾಟ ಘಟಕದ ಸ್ವಯಂಚಾಲಿತ ಸಂಕೋಚನ ವ್ಯವಸ್ಥೆಯನ್ನು ಹೊಂದಿದೆ. ಗಾಳಿಯ ಒತ್ತಡದ ಸೆನ್ಸರ್, ಪ್ರವಹನ ಸೆನ್ಸರ್, ಆಮ್ಲಜನಕ ಸೆನ್ಸರ್ಗಳನ್ನು ಇದು ಹೊಂದಿದೆ.

ಐಸಿಯು ಚಿಕಿತ್ಸೆಯ ಮಟ್ಟದ ವೆಂಟಿಲೇಟರ್ `ವಾಯು' (ವೆಂಟಿಲೇಷನ್ ಅಸಿಸ್ಟ್ ಯುನಿಟ್) ತೀವ್ರ ಉಸಿರಾಟದ ತೊಂದರೆಯಲ್ಲಿರುವ ರೋಗಿಗಳಿಗೆ ಉಪಯೋಗಿಸಬಹುದು. ವಾತಾವರಣದಿಂದ ಗಾಳಿಯನ್ನು ಹೀರಿಕೊಂಡು ಶುಧ್ಧೀಕರಿಸಿ ಅದನ್ನು ಸಂಕುಚಿತಗೊಳಿಸಿ ರೋಗಿಗಳಿಗೆ ಒದಗಿಸುವ ವ್ಯವಸ್ಥೆಯನ್ನು ಹೊಂದಿದೆ. ಇದನ್ನು ಅಧಿಕ ಒತ್ತಡದ ಆಮ್ಲಜನಕ ವ್ಯವಸ್ಥೆಗೆ ಜೋಡಿಸುವ ವ್ಯವಸ್ಥೆಯೂ ಇದೆ.

ಅನಿಲದ ಶಕ್ತಿಯಿಂದ ಕಾರ್ಯ ನಿರ್ವಹಿಸುವ ಸ್ವಸ್ತ(ಸ್ಪೇಸ್ ವೆಂಟಿಲೇಟರ್ ಏಯ್ಡೆಡ್ ಸಿಸ್ಟಂ ಫಾರ್ ಟ್ರೌಮಾ ಅಸಿಸ್ಟೆನ್ಸ್) ಎಂಬ ಹೆಸರಿನ ವೆಂಟಿಲೇಟರ್ ಪ್ರಥಮ ಹಂತದ ಚಿಕಿತ್ಸೆಗೆ ಸೂಕ್ತವಾಗಿದೆ ಮತ್ತು ಇದನ್ನು ಆ್ಯಂಬುಲೆನ್ಸ್ ಮುಂತಾದ ವಾಹನಗಳ ಒಳಗೆ ಜೋಡಿಸಬಹುದಾಗಿದೆ.

ಇದರ ಮೂಲ ವಿನ್ಯಾಸ ಅತ್ಯಂತ ಸರಳವಾಗಿದ್ದು ಸಾಂಕ್ರಾಮಿಕದಂತಹ ತುರ್ತು ಬಳಕೆಯ ಸಂದರ್ಭದಲ್ಲಿ ಸುಲಭವಾಗಿ ಉತ್ಪಾದಿಸಬಹುದು. ಇದು ಸಂಕುಚಿತ ಗಾಳಿ(ಕಂಪ್ರೆಸ್ಡ್ ಏರ್)ಯಿಂದ ಕಾರ್ಯನಿರ್ವಹಿಸುತ್ತಿದ್ದು ಹಸ್ತಚಾಲಿತ ಯಾಂತ್ರಿಕ ವ್ಯವಸ್ಥೆಯನ್ನು ಬಳಸಿಕೊಂಡು ವಿವಿಧ ವಾತಾಯನ ಪರಿಸ್ಥಿತಿಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ.

ಮೂರೂ ವೆಂಟಿಲೇಟರ್ಗಳ ಮೂಲಮಾದರಿಯನ್ನು ಇಸ್ರೋದ ಸಂಶೋಧನಾ ವಿಭಾಗ, ತಿರುವನಂತಪುರದಲ್ಲಿರುವ ವಿಕ್ರಮ್ ಸಾರಾಭಾೈ ಅಂತರಿಕ್ಷ ಕೇಂದ್ರದಲ್ಲಿ ರೂಪಿಸಲಾಗಿದೆ.

ವಿದ್ಯುತ್ ವ್ಯತ್ಯಯವಾದರೆ ಬ್ಯಾಟರಿಯ ಮೂಲಕ ಕಾರ್ಯನಿರ್ವಹಿಸುವಂತೆ ಮೂರೂ ಮಾದರಿಗಳನ್ನು ರೂಪಿಸಲಾಗಿದೆ. ಈ ತಂತ್ರಜ್ಞಾನವನ್ನು ಕೈಗಾರಿಕೆಗಳಿಗೆ ,ನವೋದ್ಯಮಿಗಳಿಗೆ ವರ್ಗಾಯಸಿಲು ನಿರ್ಧರಿಸಲಾಗಿದ್ದು ಆಸಕ್ತರು ಜೂನ್ 15ರೊಳಗೆ ಪ್ರತಿಕ್ರಿಯಿಸಬಹುದು.  ಇದನ್ನು ವೈದ್ಯಕೀಯ ಬಳಕೆಗಾಗಿ ಉತ್ಪಾದಿಸುವ ಮುನ್ನ ಸಂಬಂಧಿತ ಸಂಸ್ಥೆಗಳು ಭಾರತ ಸರಕಾರದಿಂದ ಅನುಮತಿ ಪಡೆಯಬೇಕಾಗಿದೆ ಎಂದು ಬೆಂಗಳೂರಿನಲ್ಲಿರುವ ಇಸ್ರೋ ಸಂಸ್ಥೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News