ಬ್ರಾಹ್ಮಣ ಅಭಿವೃದ್ದಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು

Update: 2021-06-07 19:09 GMT
ಸಚ್ಚಿದಾನಂದ ಮೂರ್ತಿ

ಬೆಂಗಳೂರು, ಜೂ.8: ನಟ ಚೇತನ್ ಅವರ ವಿರುದ್ಧ ದೂರು ನೀಡಲು ಸರಕಾರಿ ಸಂಸ್ಥೆಯ ಹೆಸರು ಮತ್ತು ಸರಕಾರಿ ಮುದ್ರೆ/ಲಾಂಛನವನ್ನು  ದುರುಪಯೋಗಪಡಿಸಿದ್ದಾರೆಂದು ಆರೋಪಿಸಿ ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿ ಅಧ್ಯಕ್ಷ ಹೆಚ್ ಎಸ್.ಸಚ್ಚಿದಾನಂದ ಮೂರ್ತಿ ವಿರುದ್ಧ ದೂರು ಸಲ್ಲಿಕೆಯಾಗಿದೆ.

ಸರಕಾರಿ ಮುದ್ರೆ/ಲಾಂಛನ ದುರುಪಯೋಗಪಡಿಸಿ ಕ್ರಿಮಿನಲ್ ಅಪರಾಧ ಮಾಡಿದ್ದಾರೆ ಎಂದು ಕಾವ್ಯ ಅಚ್ಯುತ್ ಎಂಬವರು ಸಚ್ಚಿದಾನಂದ ಮೂರ್ತಿ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

''ನಟ ಚೇತನ್ ಅವರ ವಿರುದ್ಧ ಬ್ರಾಹ್ಮಣರನ್ನು ಎತ್ತಿಕಟ್ಟಿ ಅಶಾಂತಿ ಸೃಷ್ಟಿಸಲು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿ ಅಧ್ಯಕ್ಷ ಹೆಚ್.ಎಸ್ ಸಚ್ಚಿದಾನಂದ ಮೂರ್ತಿ ಎಂಬವರು ಯತ್ನ ನಡೆಸುತ್ತಿದ್ದಾರೆ. ಇದಕ್ಕಾಗಿ ಸರಕಾರಿ ಸಂಸ್ಥೆಯ ಹೆಸರು ಮತ್ತು ಸರಕಾರಿ ಮುದ್ರೆ/ಲಾಂಛನವನ್ನು ದುರುಪಯೋಗಪಡಿಸಿಕೊಂಡು ಕ್ರಿಮಿನಲ್ ಅಪರಾಧ ಮಾಡಿದ್ದಾರೆ'' ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಬ್ರಾಹ್ಮಣ ಅಭಿವೃದ್ದಿ ಮಂಡಳಿಯು ಬ್ರಾಹ್ಮಣರ ಹಿಂದುಳಿದ ವರ್ಗಗಳ ಅಭಿವೃದ್ದಿಗಾಗಿ ಮೀಸಲಾಗಿರುವ ಸರಕಾರಿ ಸಂಸ್ಥೆಯಾಗಿದೆ. ಬಡ, ಹಿಂದುಳಿದ ಬ್ರಾಹ್ಮಣರ ಏಳಿಗೆಗಾಗಿ ಯೋಜನೆಗಳನ್ನು ರೂಪಿಸುವುದು ಮತ್ತು ಜಾರಿ ಮಾಡುವುದಷ್ಟೇ ಬ್ರಾಹ್ಮಣ ಅಭಿವೃದ್ದಿ ಮಂಡಳಿಯ ಕೆಲಸವಾಗಿರುತ್ತದೆ. ಬಡ, ಹಿಂದುಳಿದ ಬ್ರಾಹ್ಮಣರ ಅಭಿವೃದ್ದಿಯ ನಿಟ್ಟಿನಲ್ಲಿ ಕೆಲಸ ಮಾಡದ ಮಂಡಳಿ ಅಧ್ಯಕ್ಷರು, ಸರಕಾರಿ ದಾಖಲೆ/ಮುದ್ರೆ/ ಲಾಂಛನ ಮತ್ತು ಕರ್ನಾಟಕ ಸರ್ಕಾರ ಎಂಬ ಹೆಸರನ್ನು ದುರುಪಯೋಗಪಡಿಸಿಕೊಂಡು ನಟ ಚೇತನ್ ವಿರುದ್ದ ದೂರು ನೀಡುವ ಮೂಲಕ ಕ್ರಿಮಿನಲ್ ಅಪರಾಧ ಮಾಡಿದ್ದಾರೆ. 

ಆದ್ದರಿಂದ ಬಸವ ಅನುಯಾಯಿ ಆಗಿರುವ ಶರಣ ಚೇತನ್ ಅಹಿಂಸಾ ವಿರುದ್ಧ ಸರಕಾರಿ ದಾಖಲೆಯನ್ನು ದುರುಪಯೋಗಪಡಿಸಿಕೊಂಡು ಬ್ರಾಹ್ಮಣರನ್ನು ಎತ್ತಿಕಟ್ಟುವ, ಸಮುದಾಯಗಳ ಮಧ್ಯೆ ಅಶಾಂತಿ‌ ಸೃಷ್ಟಿಸುವ ಮತ್ತು ಸರಕಾರಿ ಲಾಂಛನ ದುರುಪಯೋಗ ಪಡಿಸಿಕೊಂಡಿರುವ ಹೆಚ್.ಎಸ್ ಸಚ್ಚಿದಾನಂದ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News