ಮದ್ರಸ ಸಿಬ್ಬಂದಿಗೆ ತುರ್ತು ಪರಿಹಾರ: ಪ್ರತ್ಯೇಕ ಸಹಾಯಧನ ಬಿಡುಗಡೆಗೆ ವಕ್ಫ್ ಸದಸ್ಯರಿಂದ ಸಿಎಂಗೆ ಮನವಿ

Update: 2021-06-08 05:13 GMT

ಬೆಂಗಳೂರು, ಜೂ.8: ರಾಜ್ಯದ ವಕ್ಫ್ ನೋಂದಾಯಿತವಲ್ಲದ ಮಸೀದಿಗಳ ಇಮಾಮ್ ಮತ್ತು ಮೌಝಿನ್ ಹಾಗೂ ಎಲ್ಲ ಮದ್ರಸಗಳ ಸಿಬ್ಬಂದಿಗೆ ಕೋವಿಡ್-19, ಲಾಕ್ಡೌನ್ ಹಿನ್ನೆಲೆಯಲ್ಲಿ ತುರ್ತು ಪರಿಹಾರಕ್ಕೆ ಪ್ರತ್ಯೇಕ ಸಹಾಯಧನ ಬಿಡುಗಡೆ ಮಾಡುವಂತೆ ರಾಜ್ಯ ವಕ್ಫ್ ಬೋರ್ಡ್ ಸದಸ್ಯರುಗಳಾದ ಮೌಲಾನಾ ಎನ್.ಕೆ.ಎಂ.ಶಾಫಿ ಸ‌ಅದಿ, ಯಾಕೂಬ್ ಯೂಸುಫ್ ಹಾಗೂ ಮೌಲಾನಾ ಅಝರ್ ಹುಸೈನ್ ಆಬಿದಿ ಮುಖ್ಯಮಂತ್ರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

 ರಾಜ್ಯದ 10,193 ನೋಂದಾಯಿತ ಹಾಗೂ 1,368 ನೊಂದಾಯಿಸದ ಒಟ್ಟು 11,561 ಮಸೀದಿಗಳ ಪೇಶ್ ಇಮಾಮಗಳು ಹಾಗೂ ಮೌಝಿನ್ ಗಳಿಗೆ ತಗಲುವ ಅಂದಾಜು ಸಹಾಯಧನದ ಮೊತ್ತ  ರೂ.693.66 ಲಕ್ಷಗಳು ಹಾಗೂ ಮದ್ರಸ ಸಿಬ್ಬಂದಿಗೆ  1,572  ನೋಂದಾಯಿಸಿದ ಹಾಗೂ 495 ನೋಂದಾಯಿಸದ ಒಟ್ಟು 2,067 ಮದ್ರಸಗಳಲ್ಲಿ‌ ಕಾರ್ಯನಿರ್ವಹಿಸುತ್ತಿರುವ ಒಟ್ಟು  5,080 ಮುಅ‌ಲ್ಲಿಮ್/ಸಿಬ್ಬಂದಿಗೆ ತಗಲುವ ಅಂದಾಜು ಸಹಾಯಧನ ಮೊತ್ತ  152.40 ಲಕ್ಷ ರೂ. ಒಟ್ಟು 846 ಲಕ್ಷ ರೂ.ನ್ನು ಮಂಜೂರು ಮಾಡುವಂತೆ ದಿನಾಂಕ 04-06-2021ರಂದು ರಾಜ್ಯ ವಕ್ಫ್ ಮಂಡಳಿಯ ಮುಖ್ಯಕಾರ್ಯ ನಿರ್ವಹಣಾಧಿಕಾರಿ (ಸಿಇಒ) ರಾಜ್ಯ ಸರಕಾರವನ್ನು ಕೋರಿಕೊಂಡಿದ್ದರು.  ಆದರೆ ಸಿಇಒರ ಕೋರಿಕೆಗೆ ಪ್ರತಿಕ್ರಿಯೆ ಎಂಬಂತೆ ಸರಕಾರವು ದಿನಾಂಕ 07-06-2021ರಲ್ಲಿ ಹೊರಡಿಸಿರುವ ಆದೇಶ (ಸಂಖ್ಯೆ MWD 51 WES )ದಲ್ಲಿ ಈಗಾಗಲೇ 2021-22 ಸಾಲಿನ ಆಯವ್ಯಯದಲ್ಲಿ ವಕ್ಫ್ ಸಂಸ್ಥೆಗಳಲ್ಲಿನ ಪೇಶ್ ಇಮಾಮ್ ಮತ್ತು ಮೌಝಿನ್ ರಿಗೆ ಸಂಭಾವನೆಗೆಂದು ಒದಗಿಸಲಾಗಿರುವ 55 ಕೋಟಿ ರೂ. ಮೊತ್ತದಿಂದಲೇ  ಕೋವಿಡ್ ಎರಡನೇ ಅಲೆಯ ತುರ್ತು ಪರಿಹಾರಧನಕ್ಕೂ ಭರಿಸುವಂತೆ ತಿಳಿಸಲಾಗಿದೆ.

 ಆಯ್ಯವ್ಯಯದಲ್ಲಿ ಒದಗಿಸಲಾಗಿರುವ ಮೊತ್ತವನ್ನೇ ತುರ್ತು ಪರಿಹಾರಕ್ಕೆ ಭರಿಸಿದರೆ ವಕ್ಫ್ ನೋಂದಾಯಿತ ಸಂಸ್ಥೆಗಳಲ್ಲಿನ ಪೇಶ್ ಇಮಾಮ್ ಮತ್ತು ಮೌಝಿನ್ ಗಳಿಗೆ ನೀಡುವ ಮಾಸಿಕ ಗೌರವಧನ ವಿತರಣೆಗೆ ತೊಡಕಾಗಲಿದೆ. ಪ್ರಸಕ್ತ ಎರಡನೇ ಅಲೆಯ ನಿರ್ಬಂಧದಿಂದಾಗಿ ನೋಂದಾಯಿತ ಸಂಸ್ಥೆಗಳ ಇಮಾಮ್ ಮತ್ತು ಮೌಝಿನ್ ಗಳಂತೆಯೇ ಅತಿಹೆಚ್ಚು ಸಂಕಷ್ಟಕ್ಕೊಳಗಾಗಿ ತುರ್ತು ಪರಿಹಾರ ಅಗತ್ಯ ಇರುವವರಾಗಿದ್ದಾರೆ ವಕ್ಫ್ ನೋಂದಾಯಿತವಲ್ಲದ ಸಂಸ್ಥೆಗಳ ಪೇಶ್ ಇಮಾಮ್,  ಮೌಝಿನ್ ಹಾಗೂ ಮದ್ರಸ ಸಿಬ್ಬಂದಿ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿರುವ ವಕ್ಫ್ ಸದಸ್ಯರು, ತುರ್ತು ಪರಿಹಾರಕ್ಕೆ ಪ್ರತ್ಯೇಕ ಸಹಾಯಧನವನ್ನು ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಕೋರಿಕೆಯಂತೆ ಒದಗಿಸಿ‌ಕೊಡಬೇಕೆಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News