ಋಣ ಸಂದಾಯ

Update: 2021-06-08 06:55 GMT
ಸಾಂದರ್ಭಿಕ ಚಿತ್ರ

ಸಿತಾರೋಂಸೇ ಆಗೇ ಜಹಾಂ ಔರ್ ಭೀ ಹೈ. ಅಭೀ ಇಶ್ಕ್ ಕೇ ಇಮ್ತಿಹಾನ್ ಔರ್ ಭೀ ಹೈ..

ಸುಮಾರು ಹದಿನೈದು ವರ್ಷಗಳ ಹಿಂದಿನ ಮಾತು. ವೈದ್ಯ ಮಿತ್ರರೊಬ್ಬರು ನನ್ನ ಆಸ್ಪತ್ರೆಗೆ ವಯಸ್ಕ ರೋಗಿಯೊಬ್ಬರನ್ನು ಕಳುಹಿಸಿದ್ದರು. ರೋಗಿಯ ಹೆಸರು ರಾಜು. (ನಿಜ ಹೆಸರಲ್ಲ)

ರೋಗಿಯನ್ನು ಪರೀಕ್ಷಿಸಿದೆ. ಆತನ ಬಾಯಿಯ ಒಳಗೆ ಅಲ್ಲಲ್ಲಿ ಹುಣ್ಣು ಮತ್ತು ಬಿಳಿಯ ಕಲೆಗಳಿದ್ದವು. ಎಷ್ಟೋ ವರ್ಷಗಳಿಂದ ಬೆಳೆಸಿಕೊಂಡು ಬಂದಿದ್ದ ತಂಬಾಕು ಜಗಿಯುವ ಚಟದ ಫಲಿತಾಂಶವೇ ಈ ಕಲೆಗಳು ಎಂದು ನನಗೆ ತಕ್ಷಣಕ್ಕೆ ಹೊಳೆಯಿತು. ಈಗಾಗಲೇ ತಾನು ಕ್ಯಾನ್ಸರ್ ಪೀಡಿತನಾಗಿದ್ದು ಸಾವು ಸನ್ನಿಹಿತವಾಗಿದೆ.. ಎನ್ನುವ ಭೀತಿ ಆತನ ಮುಖದಲ್ಲಿ ನಿಚ್ಚಳವಾಗಿ ಎದ್ದುಕಾಣುತ್ತಿತ್ತು. 

ತಪಾಸಣೆ ಮುಗಿಸಿ ಆತನಿಗೆ ಸಮಾಧಾನ ಹೇಳಿದೆ. ಔಷಧಿಯ ಚೀಟಿಯನ್ನು ನೀಡಿ ಸೇವನೆಯ ಕ್ರಮವನ್ನು ತಿಳಿಸಿದೆ. ತಂಬಾಕು ಸೇವನೆಯ ದುಷ್ಪರಿಣಾಮವನ್ನು ಒಂದೆರಡು ಮಾತಿನಲ್ಲಿ ಸಂಕ್ಷಿಪ್ತವಾಗಿ ತಿಳಿಸಿದೆ. ನನ್ನ ಮಾತಿನ ಪರಿಣಾಮವೋ, ಸಾವಿನ ಭೀತಿಯೋ.. ಒಂದು ನಿರ್ಧಾರಕ್ಕೆ ಬಂದ ರಾಜು ತಂಬಾಕು ಸೇವನೆಯನ್ನು ಇಂದಿನಿಂದಲೇ ನಿಲ್ಲಿಸುವುದಾಗಿ ತಿಳಿಸಿ ಹೊರಟ.

ಹೊಟ್ಟೆ ಬಟ್ಟೆಗಷ್ಟೇ  ಸೀಮಿತವಾಗಿದ್ದ ರಾಜುವಿನ ಆದಾಯ ಔಷಧಿಗೆ ಸಾಲದಾಯಿತು. ಅಪ್ಪನ ಕೆಟ್ಟ ಚಟದಿಂದ ಬೇಸತ್ತಿದ್ದ ಮಕ್ಕಳಿಗೂ ಅಪ್ಪನಿಗೆ ಖರ್ಚಿಗೆ ಹಣ ಕೊಡಬೇಕೆಂದು ಅನಿಸಲಿಲ್ಲ. ಹದಿನೈದು ದಿನಗಳಿಗೊಮ್ಮೆ ಬರಲು ಹೇಳಿದರೆ ವಾರದಲ್ಲೇ ಹಾಜರಾಗುತ್ತಿದ್ದ ರಾಜು.  ಔಷಧೋಪಚಾರಕ್ಕೆ ಬೇಕಾದ ದುಡ್ಡಿನ ಕೊರತೆಯ ನಡುವೆಯೂ ರೋಗವನ್ನು ಗೆಲ್ಲಲೇಬೇಕು ಎನ್ನುವ ಛಲ ಆತನಲ್ಲಿ ಮೂಡಿದಂತಿತ್ತು.  ಇದೆಲ್ಲವನ್ನು ಗಮನಿಸಿದ ನಾನು ಪ್ರತಿಸಲ ಶುಲ್ಕ ಪಡೆಯದೆಯೇ  ವೈದ್ಯಕೀಯ ತಪಾಸಣೆ, ಔಷಧಿ -  ಸಾಂತ್ವನಗಳನ್ನು ನೀಡುತ್ತ ಬಂದೆ. ಪ್ರತಿಸಲ ಆಸ್ಪತ್ರೆಗೆ ಬಂದಾಗಲೂ ಸಕಾರಾತ್ಮಕ ಮಾತುಗಳಿಂದ ಹುರಿದುಂಬಿಸುತ್ತಲೇ ಇದ್ದೆ.  

ಜೀವನವೆನ್ನುವ ಸಮರಾಂಗಣದಲ್ಲಿ ಹೋರಾಡಲೇಬೇಕಾದ ಅನಿವಾರ್ಯತೆ ನಮ್ಮೆಲ್ಲರದು.. ವ್ಯಕ್ತಿಯು ತನ್ನ ಜೀವನವನ್ನು ನೋಡುವ ದೃಷ್ಟಿಕೋನದಲ್ಲಿ ಬದುಕು ರೂಪುಗೊಳ್ಳುತ್ತದೆ..‌ ಜೀವನವು ನಮಗೆ ಕಲಿಸುವ ಪಾಠಗಳನ್ನು ಮನನ ಮಾಡಿಕೊಂಡು ನಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು... ಎಂದೆಲ್ಲ ನಾನು ಕಂಡ ವಾಸ್ತವದ ಅನುಭವಗಳನ್ನು ಹೇಳುತ್ತ ಬಂದೆ.

ಹೆಚ್ಚೂ ಕಮ್ಮಿ ಇದೇ ರೀತಿ ಆರೇಳು ತಿಂಗಳುಗಳೇ ಉರುಳಿದವು. ರಾಜು ಆಸ್ಪತ್ರೆಗೆ ಬಂದು ಹೋಗುವುದನ್ನು ತಪ್ಪಿಸುತ್ತಿರಲಿಲ್ಲ. ಆತನ ಬಾಯಿಯ ಕಲೆಗಳು ನಿಧಾನವಾಗಿ  ಮಾಯವಾಗಿದ್ದವು. ರಾಜು  ಆರೋಗ್ಯವಂತನಾಗಿ ಕಾಣಿಸುತ್ತಿದ್ದ. ಸಾವಿನ ಭಯ ಬೇರೂರಿದ್ದ ಮುಖದಲ್ಲಿ ಲವಲವಿಕೆ ಮೂಡಿತ್ತು.

ಅದೊಂದು ದಿನ ಆಸ್ಪತ್ರೆಯಿಂದ ಮನೆಗೆ ಹೊರಟು ನಿಂತಿದ್ದೆ. ಹೊರಗೆ ಬಂದಂತೆ ಕಾರಿಡಾರಿನ ಕುರ್ಚಿಯಲ್ಲಿ ಕುಳಿತಿದ್ದ ರಾಜು ನನ್ನನ್ನು ನೋಡಿ ಎದ್ದುನಿಂತು ನಮಸ್ಕರಿಸಿ "ನಾನೀವತ್ತು ನನ್ನ ಕೆಲಸದಿಂದ ನಿವೃತ್ತಿ ಹೊಂದಿದ್ದೇನೆ. ನಾಳೆಯಿಂದ ನಾನು ಆಸ್ಪತ್ರೆಯ ಹೊರಗೆ ಇಲ್ಲಿಯೇ ಕುರ್ಚಿಯಲ್ಲಿ ಕುಳಿತುಕೊಂಡಿರ್ತೇನೆ..  ಕೆಲಸ ಇದ್ದರೆ ಹೇಳಬೇಕು ಸರ್.." ಕೈಮುಗಿದುಕೊಂಡೇ ಮಾತು ಮುಗಿಸಿದ. ಅಂತಾದ್ದೇನೂ ಕೆಲಸ ಅಂತ ಇಲ್ಲ ಅನ್ನುವ ನನ್ನ ಮಾತಿಗೆ ಪ್ರತಿಯಾಗಿ "ಕೆಲಸ ಹೇಳದಿದ್ದರೂ ನಾನು ದಿನವೂ ಬರ್ತೇನೆ" ಅಂದು ಬಿಟ್ಟ ! 

ಅಂದಿನಿಂದ ರಾಜು ಬೆಳಿಗ್ಗೆಯಿಂದ ಸಂಜೆಯವರೆಗೂ ಆಸ್ಪತ್ರೆಯ ಕುರ್ಚಿಯಲ್ಲಿ ಕುಳಿತುಕೊಳ್ಳಲು ಆರಂಭಿಸಿದ. ಶುಲ್ಕ ಪಡೆದುಕೊಳ್ಳದೆ ಚಿಕಿತ್ಸೆ ನೀಡಿರುವುದರ ಋಣ ಸಂದಾಯ ಮಾಡುವ ಹಠಕ್ಕೆ ಬಿದ್ದವನಂತಿದ್ದ ಆತ. ನಾನು ಅಸಹಾಯಕನಾಗಿದ್ದೆ. ಅವನಿಗೆ ಕೊಡಬಹುದಾದ ಕೆಲಸ  ನನ್ನಲ್ಲಿರಲಿಲ್ಲ. 

ಅದೊಂದು ದಿನ ಕಾರಿನ ಕೀ ಪಡೆದುಕೊಂಡು ಕಾರು ತೊಳೆದು ಇಟ್ಟ. ಹಣ ತೆಗೆದುಕೊಳ್ಳುವುದಾದರೆ ಮಾತ್ರ ಕಾರು ತೊಳೆಯಬಹುದು,  ಇಲ್ಲವಾದರೆ ಬೇಡ ಅಂದೆ. ಒಲ್ಲದ ಮನಸ್ಸಿನಿಂದ ರಾಜು ಒಪ್ಪಿಕೊಂಡ. 

ರಾಜು ಆಸ್ಪತ್ರೆಗೆ ಬಾರದ ದಿನವಿಲ್ಲ. ಆಸ್ಪತ್ರೆಯ ಸಿಬ್ಬಂದಿಗಳಿಗೆ ಸಹಾಯಕನಾಗಿ ಉಳಿದುಬಿಟ್ಟ. ರೋಗಿಯಾಗಿ ಬಂದಿದ್ದ ರಾಜುವನ್ನು‌‌ ಈಗ ಎಲ್ಲರೂ ರಾಜೂ ಕಾಕಾ ಎಂದೇ ಕರೆಯುತ್ತಿದ್ದರು. ಅವರು ಹೇಳಿದ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡಿಕೊಂಡಿರುತ್ತಿದ್ದ. ಕಸ ಗುಡಿಸುವುದು, ನೆಲ ಒರೆಸುವುದು, ಗಿಡಗಳಿಗೆ ನೀರು ಹಾಕುವ ಕೆಲಸಗಳನ್ನು ರಾಜೂ ಕಾಕಾ ಶೃದ್ಧೆಯಿಂದ ಮಾಡುತ್ತಲಿದ್ದ. ಆಚೀಚೆ  ನೋಡುವುದರಲ್ಲಿ ಹದಿನೈದು‌ ವರ್ಷಗಳೇ ಸಂದವು.  ರಾಜು ಪೂರ್ತಿ ವೃದ್ಧನಾಗಿದ್ದ. ಕೆಲಸಕ್ಕೆ ಬರಬೇಡ ರಾಜೂ ಕಾಕಾ ಮನೆಯಲ್ಲಿದ್ದು ಆರಾಮ ಮಾಡು ಎಂದರೂ ಕೇಳುವುದಿಲ್ಲ. "ಇಲ್ಲಿಗೆ ಬರದೆ ಮನೆಯಲ್ಲಿ ಉಳಿದು ಬಿಟ್ಟರೆ ನಾನು ಬೇಗನೆ ಸತ್ತು ಹೋಗ್ತೇನೆ. ನಿಮ್ಮೆಲ್ಲರ ಜೊತೆ ಇರದೇ ಹೋದರೆ ಹೆಚ್ಚು ದಿನ ಉಳಿಯಲಾರೆ.." ಎಂದುತ್ತರಿಸುತ್ತಾನೆ !

ದುಃಖ - ನೋವುಗಳನ್ನು, ವೃದ್ಧಾಪ್ಯದ ಸಮಸ್ಯೆಗಳನ್ನು ಮೀರಿ ಋಣ ಸಂದಾಯದ ಹಟಕ್ಕೆ ಬಿದ್ದಿದ್ದ ರಾಜುವಿನ ವ್ಯಕ್ತಿತ್ವದ ಬಗ್ಗೆ ನನಗೆ ಹೆಮ್ಮೆಯಿದೆ. ಇತರರ ನೋವು  ನಲಿವುಗಳಲ್ಲಿ ಸಹಭಾಗಿಯಾಗುವ,  ಎಲ್ಲರೊಳಗೊಂದಾಗುವ ಗುಣವಿರುವ ರಾಜುವಿನ ಬದುಕು ನನಗೆ ಆಪ್ತವೆನಿಸಿದ್ದು  ಸುಳ್ಳಲ್ಲ. 

ಪ್ರತಿದಿನವೂ ಪ್ರಾರ್ಥಿಸುವಾಗ ನಮ್ಮ ರಾಜುವನ್ನು ಚೆನ್ನಾಗಿಟ್ಟಿರಲು ದೇವರನ್ನು ಕೋರುತ್ತೇನೆ.

ಮೂಲ: ಟ್ವಿಟರ್
ಕನ್ನಡಕ್ಕೆ: ರಾಜೇಂದ್ರ ಪೈ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News