ತಿಮಿಂಗಿಲದ ವೀರ್ಯದ ಅಂಬರ್ಗೀಸ್ ಜಪ್ತಿ, ನಾಲ್ವರ ಬಂಧನ

Update: 2021-06-09 17:54 GMT

ಬೆಂಗಳೂರು, ಜೂ. 9: ಮಾದಕ ವಸ್ತು ಮಾರಾಟ ಮತ್ತು ಸರಬರಾಜು ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಪೂರ್ವ ವಿಭಾಗದ ಪೊಲೀಸರು ಸುಮಾರು 8 ಕೋಟಿ ರೂ. ಮೌಲ್ಯದ ತಿಮಿಂಗಿಲದ ವೀರ್ಯದ ಅಂಬರ್ಗೀಸ್‍ನ್ನು ವಶಪಡಿಸಿಕೊಂಡು ನಾಲ್ವರನ್ನು ಬಂಧಿಸಿದ್ದಾರೆ.

ಮಾಗಡಿ ಮುಖ್ಯರಸ್ತೆಯ ಎಸ್.ಟಿ.ಪಾಷ (54), ಸಲೀಂ ಪಾಷ (48), ನಾಸೀರ್ ಪಾಷ (34) ಹಾಗೂ ರಫೀವುಲ್ಲಾ ಶರೀಫ್ (45) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಎಂದು ಡಿಸಿಪಿ ಡಾ. ಶರಣಪ್ಪ ಹೇಳಿದ್ದಾರೆ.

ಆರೋಪಿಗಳು ಕೆ.ಜಿ.ಹಳ್ಳಿಯ ಎಂ.ಆರ್.ಕೆ. ಟೆಂಟ್ ಹೌಸ್ ಹಿಂಭಾಗದ ಲಕ್ಷ್ಮೀಪತಿ ಗಾರ್ಡನ್‍ನ ತೆಂಗಿನ ತೋಟದ ಬಳಿ ಅಂಬರ್ಗೀಸ್ ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಕಾರ್ಯಾಚರಣೆ ಕೈಗೊಂಡ ಕೆ.ಜಿ.ಹಳ್ಳಿ ಪೊಲೀಸ್ ಇನ್ಸ್‍ಪೆಕ್ಟರ್ ಸಂತೋಷ್ ಕುಮಾರ್ ಮತ್ತು ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಂಬರ್ಗೀಸ್ ತಿಮಿಂಗಿಲದಿಂದ ಪಡೆದ ವೀರ್ಯದ ವಸ್ತುವಾಗಿದ್ದು, ಘನಮೇಳದ ವಾಸನೆಯಿಂದ ಕೂಡಿರುತ್ತದೆ. ಈ ವಸ್ತುವನ್ನು ಸುಗಂಧ ದ್ರವ್ಯ ಹಾಗೂ ಔಷಧಿ ತಯಾರಿಕೆಗೆ ಬಳಸಲಾಗುತ್ತಿದ್ದು, ಅಪಾರ ಬೇಡಿಕೆ ಹೊಂದಿದೆ ಎಂದು ಡಿಸಿಪಿ ಹೇಳಿದರು. ಅರಬ್, ಚೀನಾ ಮತ್ತು ಪಾಶ್ಚಾತ್ಯ ದೇಶಗಳಲ್ಲಿ ಅಪಾರ ಬೇಡಿಕೆ ಇರುವ ಅಂಬರ್ಗೀಸ್ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ಸುಮಾರು ಒಂದೂವರೆ ಕೋಟಿ ರೂ.ಗಳಿಗೆ ಹೆಚ್ಚಿನ ಬೆಲೆ ಇರುತ್ತದೆ ಎಂದು ಅವರು ತಿಳಿಸಿದರು.

ಆರೋಪಿಗಳು ಅಂಬರ್ಗೀಸ್‍ನ್ನು ಎಲ್ಲಿಂದ ತಂದಿದ್ದು, ಅದನ್ನು ಎಲ್ಲಿಂ ಮಾರಾಟ ಮಾಡುತ್ತಿದ್ದರು ಎಂಬ ಬಗ್ಗೆ ವಿಸ್ತೃತ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳ ವಿರುದ್ಧ ಮಾದಕ ವಸ್ತು ಮಾರಾಟ ಸರಬರಾಜು ಅಲ್ಲದೆ, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯೂ ಪ್ರಕರಣ ದಾಖಲಿಸಲಾಗಿದೆ ಎಂದರು.

ಅಲ್ಲದೆ, ಆರೋಪಿಗಳಿಂದ ಸುಮಾರು 8 ಕೋಟಿ ರೂ. ಮೌಲ್ಯದ 6 ಕೆ.ಜಿ. 700 ಗ್ರಾಂ ಅಂಬರ್ಗೀಸ್‍ನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು, ಅಪರೂಪದ ತಿಮಿಂಗಿಲದ ಅಂಬರ್ಗೀಸ್‍ನ್ನು ಶೇಖರಿಸುವುದು, ಮಾರಾಟ ಮಾಡುವುದು ಅಪರಾಧವಾಗಿದೆ. ಆರೋಪಿಗಳು ಯಾರಿಗೆ ಮಾರಾಟ ಮಾಡುತ್ತಿದ್ದರು ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಡಾ.ಶರಣಪ್ಪ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News