ಉತ್ತರಪ್ರದೇಶದಲ್ಲಿ ರಾಜಕೀಯ ಕೋಲಾಹಲ: ಪ್ರಧಾನಿ ಮೋದಿಯವರನ್ನು ಭೇಟಿಯಾದ ಆದಿತ್ಯನಾಥ್

Update: 2021-06-11 07:15 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಉತ್ತರಪ್ರದೇಶದಲ್ಲಿ ರಾಜಕೀಯ ಕೋಲಾಹಲದ ಮಧ್ಯೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದಿಲ್ಲಿಯಲ್ಲಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು. ಸಾಂಕ್ರಾಮಿಕ ರೋಗ ಕೋವಿಡ್ ಅನ್ನು ಸರಕಾರ ನಿಭಾಯಿಸಿರುವ ಕುರಿತಂತೆ ಆದಿತ್ಯನಾಥ್ ವಿರುದ್ಧ  ಪಕ್ಷದೊಳಗೆ  ಅಸಮಾಧಾನ ಹೆಚ್ಚುತ್ತಿರುವ ನಡುವೆ ಈ ಭೇಟ ನಡೆದಿದೆ.

ಪ್ರಧಾನಿ ಮೋದಿಯವರ ನಿವಾಸದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸಭೆ ನಡೆಯಿತು. ಪ್ರಧಾನಿಯೊಂದಿಗೆ ಸಭೆ ನಡೆಸಿದ  ಸ್ವಲ್ಪ ಸಮಯದ ನಂತರ ಆದಿತ್ಯನಾಥ್ ಅವರು ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಅವರ ನಿವಾಸಕ್ಕೆ ತೆರಳಿದರು.

ಗುರುವಾರ ಆದಿತ್ಯನಾಥ್ ಅವರು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ 90 ನಿಮಿಷಗಳ ಸುದೀರ್ಘ ಸಭೆ ನಡೆಸಿದ್ದರು. ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗೆ  1 ವರ್ಷಕ್ಕಿಂತ ಕಡಿಮೆ ಸಮಯ ಬಾಕಿ ಇರುವಾಗ, ಬಿಜೆಪಿ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸುವ ಕ್ರಮಗಳನ್ನು ಚುರುಕುಗೊಳಿಸಿದೆ.

ಆದಿತ್ಯನಾಥ್ ಅವರನ್ನು ಬದಲಿಸಲು ಪಕ್ಷವು ಗಮನಹರಿಸುತ್ತಿಲ್ಲ ಎಂದು ಮೂಲಗಳು ತಿಳಿಸಿವೆ, ಆದರೆ ಇತರ ಬದಲಾವಣೆಗಳಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಬಿಜೆಪಿಯ ಹಿರಿಯ ಮುಖಂಡ ಬಿ.ಎಲ್.ಸಂತೋಷ್ ಅವರು ಕೇಂದ್ರದ ಮಿಷನ್ ನೇತೃತ್ವ ವಹಿಸಿ ಉತ್ತರಪ್ರದೇಶದಲ್ಲಿ ಸಚಿವರು, ಶಾಸಕರು, ಸಂಸದರು ಹಾಗೂ  ಮುಖ್ಯಮಂತ್ರಿಗಳೊಂದಿಗಿನ ಸಭೆ ನಡೆಸಿ ಪರಿಶೀಲನೆ ನಡೆಸಿದ ವಾರದ ಬಳಿಕ ಈ ಸಭೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News