ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಿಲ್ಲ: ಕೇಂದ್ರ ಸಚಿವ ಸದಾನಂದಗೌಡ

Update: 2021-06-12 14:31 GMT

ಬೆಂಗಳೂರು, ಜೂ.12: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಈಗಾಗಲೇ ರಾಜ್ಯದ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆ ನೀಡಿದ್ದಾರೆ. ಆದುದರಿಂದ, ಯಾರೊಬ್ಬರೂ ಈ ಊಹಾಪೋಹಗಳಿಗೆ ಕಿವಿಗೊಡುವ ಅಗತ್ಯವಿಲ್ಲ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.

ಶನಿವಾರ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಶಂಕರ ಮಠ ವಾರ್ಡಿನ ಕುರುಬರಹಳ್ಳಿಯಲ್ಲಿರುವ ಶ್ರೀ ಸಿದ್ದಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಮಂಜುನಾಥ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕೋವಿಡ್-19 ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿರುವ ಕ್ಷೇತ್ರದ ನಾಗರಿಕರಿಗೆ ಉಚಿತ ತರಕಾರಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

ಕೋವಿಡ್ ಸಂಕಷ್ಟದ ಪರಿಸ್ಥಿತಿಯನ್ನು ಯಶಸ್ವಿಯಾಗಿ ಎದುರಿಸುವುದಷ್ಟೇ ನಮ್ಮ ಮುಂದಿರುವ ಸವಾಲು. ರೆಮ್‍ಡಿಸಿವಿರ್ ಚುಚ್ಚುಮದ್ದನ್ನು ಮುಕ್ತ ಮಾರುಕಟ್ಟೆ ಮಾಡಿದ್ದು, ಉತ್ಪಾದನೆ ಹತ್ತು ಪಟ್ಟು ಅಧಿಕ ಮಾಡಲಾಗಿದೆ. ಮೊದಲು ತಿಂಗಳಿಗೆ 23 ಲಕ್ಷ ವಯಲ್ಸ್ ಸಿದ್ಧವಾಗುತ್ತಿತ್ತು. ಈಗ 1 ಕೋಟಿ 19 ಲಕ್ಷ ವಯಲ್ಸ್ ಉತ್ಪಾದನೆ ಮಾಡುತ್ತಿದ್ದೇವೆ. ವಿಶೇಷವಾಗಿ ಈಗ ಇದರ ಉಪಯೋಗ ಕಡಿಮೆಯಾದರೂ ಕರ್ನಾಟಕಕ್ಕೆ 14 ಲಕ್ಷ 75 ಸಾವಿರ ಇಂಜೆಕ್ಷನ್ ಕೇಂದ್ರದಿಂದ ಹಂಚಿಕೆ ನೀಡಲಾಗಿದೆ ಎಂದು ಅವರು ಹೇಳಿದರು.

ಆದರೆ, ರಾಜ್ಯ ಸರಕಾರ 9 ಲಕ್ಷ 25 ಸಾವಿರ ವಯಲ್ಸ್ ಮಾತ್ರ ಕೇಂದ್ರದಿಂದ ಪಡೆದಿದ್ದು, ಇನ್ನೂ ಉಳಿದ ದಾಸ್ತಾನು ಅನ್ನು ಆದಷ್ಟು ಬೇಗ ಕೇಂದ್ರದಿಂದ ಪಡೆದುಕೊಂಡು, ಮುಂಜಾಗೃತಾ ಕ್ರಮವಾಗಿ ಸ್ಟಾಕ್ ಇಟ್ಟುಕೊಳ್ಳಲು ರಾಜ್ಯದ ಆರೋಗ್ಯ ಮಂತ್ರಿಗಳು ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸದಾನಂದಗೌಡ ಹೇಳಿದರು.

ಬ್ಲಾಕ್ ಫಂಗಸ್ ಬಗ್ಗೆ ಉಪ ಮುಖ್ಯಮಂತ್ರಿ ಅಶ್ವಥ ನಾರಾಯಣ ಹಾಗೂ ಆರೋಗ್ಯ ಮಂತ್ರಿ ಸುಧಾಕರ್ ಬಳಿ ಕೇಳಿದಾಗ ರಾಜ್ಯದಲ್ಲಿ 2000 ಕೇಸ್ ಇರುವುದು ತಿಳಿದು ಬಂದಿದೆ. ಇನ್ನೂ ನಿಖರವಾಗಿ ಮಾಹಿತಿ ಕಲೆ ಹಾಕಲು ಸೂಚಿಸಲಾಗಿದ್ದು, ಬ್ಲಾಕ್ ಫಂಗಸ್ ನಿಯಂತ್ರಣಕ್ಕೆ 40,470 ವಯಲ್ಸ್ ಚಚ್ಚು ಮದ್ದುಗಳನ್ನು ಗಳನ್ನು ಕೇಂದ್ರದಿಂದ ನೀಡಿದ್ದು, ನಿನ್ನೆ 15 ಸಾವಿರ ಚುಚ್ಚುಮದ್ದುಗಳಿಗೆ ಆದೇಶ ಮಾಡಲಾಗಿದೆ. ಯಾವುದೇ ರೀತಿ ಔಷಧ ಕೊರತೆ ಆಗದ ರೀತಿ ಕೇಂದ್ರ ಸರಕಾರದಿಂದ ಬ್ಲಾಕ್ ಫಂಗಸ್ ಸೇರಿದಂತೆ ಎಲ್ಲದಕ್ಕೂ ನೆರವು ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಅವೀನ್ ಆರಾಧ್ಯ ನೇತೃತ್ವದ ಶ್ರೀ ಮಂಜುನಾಥ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಉಚಿತ ತರಕಾರಿ ವಿತರಣೆ ಕಾರ್ಯಕ್ರಮ ಒಂದು ವಿನೂತನ ಕಾರ್ಯಕ್ರಮವಾಗಿದೆ. ಈವರೆಗೆ ಕ್ಷೇತ್ರದ ಶಾಸಕರು ಹಾಗೂ ಅಬಕಾರಿ ಸಚಿವ ಕೆ.ಗೋಪಾಲಯ್ಯ, ಸಂಘ ಸಂಸ್ಥೆಗಳು ಹಾಗೂ ಪಕ್ಷದ ವತಿಯಿಂದ ಆಹಾರದ ಕಿಟ್ ವಿತರಣೆ ಮಾಡಲಾಗುತ್ತಿತ್ತು. ಈಗ ಮಂಜುನಾಥ ಟ್ರಸ್ಟ್ ನವರೂ ರೈತರ ನೆರವಿಗೆ ಧಾವಿಸಿ ಅವರು ಬೆಳೆದ ತರಕಾರಿಗಳನ್ನು ಒಳ್ಳೆಯ ದರ ನೀಡಿ ತಂದು ಇಲ್ಲಿನ ನಾಗರಿಕರಿಗೆ ಉಚಿತವಾಗಿ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ಸದಾನಂದಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

ಅಬಕಾರಿ ಸಚಿವ ಕೆ.ಗೋಪಾಲಯ್ಯ ಮಾತನಾಡಿ, ಶಂಕರಮಠ ವಾರ್ಡ್‍ನಲ್ಲಿ ಇಂದು ಉಚಿತ ತರಕಾರಿ ವಿತರಣೆ ಕಾರ್ಯಕ್ರಮ ಆಯೋಜನೆ ಮಾಡಿರುವ ಶ್ರೀ ಮಂಜುನಾಥ ಟ್ರಸ್ಟ್ ಅಧ್ಯಕ್ಷ ಅವೀನ್ ಆರಾಧ್ಯ ಮತ್ತು ಅವರ ತಂಡ ನೆರೆಯ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ರೈತರಿಂದ ನೇರವಾಗಿ ಮೂಲ ಬೆಲೆ ಕೊಟ್ಟು ಖರೀದಿಸಿ ತಂದು ವಾರ್ಡ್ ನಲ್ಲಿರುವ ಸುಮಾರು 5000 ಕ್ಕಿಂತ ಹೆಚ್ಚಿನ ಮನೆಗಳಿಗೆ ತೆರಳಿ ನೀಡುತ್ತಿದ್ದು, ಈ ತರಕಾರಿ ಕಿಟ್ 4 ರಿಂದ 5 ಕೆಜಿ ತೂಕವಿದ್ದು, ಎಲ್ಲ ತಾಜಾ ತರಕಾರಿ ಪ್ಯಾಕ್ ಮಾಡಿ ಮನೆ ಮನೆಗೆ ತೆರಳಿ ನೀಡುತ್ತಿದ್ದಾರೆ ಎಂದರು.

ಕಳೆದ ವರ್ಷ ಇದೇ ರೀತಿ ತರಕಾರಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಇದಲ್ಲದೆ ಬೃಹತ್ ಆರೋಗ್ಯ ಶಿಬಿರ, ಜನ ಔಷಧಿ ಕೇಂದ್ರದ ವತಿಯಿಂದ ಉಚಿತ ಔಷಧಿ ವಿತರಣೆ ಸೇರಿದಂತೆ ಹತ್ತು ಹಲವು ಸಾಮಾಜಿಕ ಕಳಕಳಿ ಹೊಂದಿರುವ ಕೆಲಸ ಮಾಡುತ್ತಿರುವ ಈ ಸಂಸ್ಥೆ ಇಂದು ವಿನೂತನವಾದ ಕಾರ್ಯ ಮಾಡುತ್ತಿದೆ ಎಂದು ಗೋಪಾಲಯ್ಯ ಹೇಳಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಮಂಡಲ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಬಿಬಿಎಂಪಿ ಮಾಜಿ ಉಪ ಮಹಾಪೌರ ಎಸ್.ಹರೀಶ್, ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ನಾರಾಯಣ ಗೌಡ, ಉಪಾಧ್ಯಕ್ಷ ಎನ್.ಜಯರಾಂ, ಉತ್ತರ ಜಿಲ್ಲೆಯ ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಬಿ.ಎಂ.ಶ್ರೀನಿವಾಸ್, ಶ್ರೀ ಮಂಜುನಾಥ ಟ್ರಸ್ಟ್  ಅಧ್ಯಕ್ಷ ಅವೀನ್ ಆರಾಧ್ಯ, ಮುಖಂಡರಾದ ರುದ್ರಮುನಿ, ವಿಜಯ ಕುಮಾರ್, ಪ್ರಭಾಕರ್, ಬೋರೇಗೌಡ, ಸತೀಶ್ ಶೆಟ್ಟಿ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News