ಚೀನಾ, ಪಾಕಿಸ್ತಾನದ ಏಜೆಂಟರಂತೆ ವರ್ತಿಸುವ ಕಾಂಗ್ರೆಸ್ ಮುಖಂಡರು: ನಳಿನ್‍ ಕುಮಾರ್ ಕಟೀಲ್

Update: 2021-06-12 14:56 GMT

ಬೆಂಗಳೂರು, ಜೂ.12: ಕಾಂಗ್ರೆಸ್ ಹಿರಿಯ ನೇತಾರ ದಿಗ್ವಿಜಯ್ ಸಿಂಗ್ ಅವರು, ಕಾಂಗ್ರೆಸ್ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಜಮ್ಮು- ಕಾಶ್ಮೀರಕ್ಕೆ 370ನೇ ವಿಧಿಯಡಿ ವಿಶೇಷ ಸ್ಥಾನಮಾನ ಕೊಡುವ ಮಾತನ್ನಾಡಿದ್ದಾರೆ. ಇದು ಕಾಂಗ್ರೆಸ್ ಟೂಲ್‍ಕಿಟ್‍ನ ಇನ್ನೊಂದು ಭಾಗವಾಗಿದೆ. ಕಾಂಗ್ರೆಸ್ ಪಕ್ಷ ಮತ್ತು ಅದರ ಮುಖಂಡರು ಚೀನಾ ಹಾಗೂ ಪಾಕಿಸ್ತಾನದ ಏಜೆಂಟರಂತೆ ವರ್ತಿಸುತ್ತಿರುವುದು ಇದರಿಂದ ಸ್ಪಷ್ಟಗೊಳ್ಳುತ್ತದೆ. ಕಾಂಗ್ರೆಸ್‍ನ ಈ ದುರುದ್ದೇಶ ಫಲ ಕೊಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ದೇಶದ ಪ್ರತಿಷ್ಠೆ ಮಣ್ಣು ಪಾಲು ಮಾಡುವುದು, ಪ್ರಧಾನಿ ಘನತೆಗೆ ಧಕ್ಕೆ ತರುವ ದುರುದ್ದೇಶ ಇದರ ಹಿಂದಿದೆ. ಟೂಲ್‍ಕಿಟ್ ವಿಷಯದಲ್ಲಿ ಈಗಾಗಲೇ ಬಿಜೆಪಿ, ಕಾಂಗ್ರೆಸ್ಸಿಗರ ದುರುದ್ದೇಶವನ್ನು ಜನರ ಗಮನಕ್ಕೆ ತಂದಿದೆ. ಇದು ಟೂಲ್‍ಕಿಟ್‍ನ ಮುಂದುವರಿದ ಭಾಗವಷ್ಟೇ. ಇದು ಸರ್ವಥಾ ಖಂಡನೀಯ ಎಂದು ಅವರು ತಿಳಿಸಿದ್ದಾರೆ.

ದಿಗ್ವಿಜಯ್ ಸಿಂಗ್ ಕ್ಲಬ್ ಹೌಸ್ ಆ್ಯಪ್ ಮೂಲಕ ಸಂದರ್ಶನ ನೀಡಿದ್ದು, ಆ ಪಕ್ಷವು ಪಾಕಿಸ್ತಾನದ ಪರ ಇರುವುದು ಸ್ಪಷ್ಟಗೊಳ್ಳುತ್ತಿದೆ. ಆದುದರಿಂದ, ಕಾಂಗ್ರೆಸ್ಸಿನ ಹೆಸರನ್ನು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ಹೆಸರಿನ ಬದಲಾಗಿ ‘ಆ್ಯಂಟಿ ನ್ಯಾಷನಲ್ ಕ್ಲಬ್‍ಹೌಸ್’ ಎಂದು ಬದಲಿಸಿಕೊಳ್ಳಲಿ ಎಂದು ಅವರು ಹೇಳಿದ್ದಾರೆ.

ವಿದೇಶಿ ಮಾಧ್ಯಮ ಪ್ರತಿನಿಧಿ ಜೊತೆ ಸಂದರ್ಶನದಲ್ಲಿ ನರೇಂದ್ರ ಮೋದಿ ಅಧಿಕಾರ ಕಳೆದುಕೊಂಡರೆ ಎಂಬ ಊಹಾತ್ಮಕ ಪ್ರಶ್ನೆಗೆ ದಿಗ್ವಿಜಯ್ ಸಿಂಗ್ ಅವರು ಈ ಉತ್ತರ ನೀಡಿರುವುದು ಕಾಂಗ್ರೆಸ್‍ನ ಪಾಕ್ ಪರ- ಚೀನಾಪರ ನೀತಿಯ ಪ್ರತಿಬಿಂಬದಂತಿದೆ. ಅಲ್ಲದೆ, ಜಮ್ಮು ಕಾಶ್ಮೀರದಲ್ಲಿ ಶಾಂತಿಯುತ ವಾತಾವರಣ ಬೇಡ ಎಂಬುದರ ಪ್ರತೀಕದಂತಿದೆ ಎಂದು ಅವರು ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News