ಬೆಂಗಳೂರು: ಪವರ್ ಬ್ಯಾಂಕ್ ಬಹುಕೋಟಿ ಹಗರಣ ಬಯಲು; ವಿದೇಶಿ ಪ್ರಜೆಗಳು ಸೇರಿ 11 ಮಂದಿಯ ಬಂಧನ

Update: 2021-06-12 15:01 GMT

ಬೆಂಗಳೂರು, ಜೂ.12: ವಿವಿಧ ಆನ್‍ಲೈನ್ ವೇದಿಕೆಗಳ ಮೂಲಕ ‘ಪವರ್ ಬ್ಯಾಂಕ್’ ಹೆಸರಿನಲ್ಲಿ ಲಾಭದ ಆಮಿವೊಡ್ಡಿ ಬರೋಬ್ಬರಿ 290 ಕೋಟಿಗೂ ಅಧಿಕ ಹಣ ಸಂಗ್ರಹಿಸಿ ವಂಚನೆ ಆರೋಪ ಪ್ರಕರಣ ಸಂಬಂಧ ವಿದೇಶಿ ಪ್ರಜೆಗಳು ಸೇರಿ 11 ಮಂದಿ ಆರೋಪಿಗಳನ್ನು ಸಿಐಡಿ ಬಂಧಿಸಿದೆ.

ದೂರಿನನ್ವಯ ಡಬ್ಲ್ಯುಪಿ ರಮ್ಮಿ ಕಂಪೆನಿ ನಿರ್ದೇಶಕ ಅನಸ್ ಅಹ್ಮದ್, ಇಬ್ರಾಹಿಂ ಅಮೀರ್, ಧೋನ್‍ಡುಪ್ ವಂಗ್ಯಾಲ್, ಅರೋಕಿಯಾನಾಥನ್, ರಾಮ್ ಉಜಘರ್, ಪ್ರಕಾಶ್ ವೈರಾಗಿ, ಹರೇಶ್‍ಬಾಯ್ ಗೋಬರಪಬಾಯ್, ವನಜಾರ್ ವಿಜಯ್ ಬಾಯ್, ವನಜಾರ್ ಮಮತಾ ಬೆನ್, ಪರ್ಪಿಲೆಹ್ಯುಸ್ ಸನ್ನಿ, ಜ್ಯೋತಿ ತಿವಾರಿ, ಭಗವತಿ ಪಂತ್ ಎಂಬುವರ ವಿರುದ್ಧ ವಂಚನೆ (ಐಪಿಸಿ 420) ಆರೋಪ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್‍ಐಆರ್ ದಾಖಲಾಗಿದೆ.

ಬಂಧಿತರ ಪೈಕಿ ಇಬ್ಬರು ಚೀನಿ ಪ್ರಜೆಗಳು, ಇಬ್ಬರು ಟಿಬೆಟನ್ ಪ್ರಜೆಗಳು ಹಾಗೂ ಐದು ಜನ ಕಂಪೆನಿಯ ನಿರ್ದೇಶಕರು ಸೇರಿದಂತೆ 11 ಮಂದಿ ಇದ್ದಾರೆ.

ದಿನ ಹಾಗೂ ವಾರ ಲಾಭದ ಆಮಿಷವೊಡ್ಡಿ ರಾಜ್ಯದ ಸಾವಿರಾರು ಜನರಿಂದ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಿರುವ ಆರೋಪದಡಿ 13 ಕಂಪೆನಿಗಳ ವಿರುದ್ಧ ರೇಜೋರ್‍ಪೇ ಕಂಪೆನಿಯ ಕಾನೂನು ವಿಭಾಗದ ಪ್ರತಿನಿಧಿ ಅಭಿಷೇಕ್ ಅಭಿನವ್ ಆನಂದ್ ಎಂಬವರು ಸಿಐಡಿ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದರು.

ಈ ಪ್ರಕರಣದಲ್ಲಿ ಒಟ್ಟಾರೆಯಾಗಿ ಆರೋಪಿತ ಕಂಪನಿಗಳ ಬ್ಯಾಂಕ್ ಖಾತೆಗಳಿಗೆ 290 ಕೋಟಿ ರೂ.ಗೂ ಅಧಿಕ ಮೊತ್ತದ ಒಳಹರಿವು ಕಂಡು ಬಂದಿದ್ದು, ಸೈಬರ್ ಅಪರಾಧ ವಿಭಾಗದಿಂದ ಬ್ಯಾಂಕ್ ಖಾತೆಗಳನ್ನು ಗುರುತಿಸಿ ಗಣನೀಯ ಮೊತ್ತವನ್ನು ಖಾತೆಗಳಲ್ಲಿ ಸ್ಥಗಿತಗೊಳಿಸಲಾಗಿದೆ.

ಇನ್ನು, ಕೇರಳ ಮೂಲದ ಆರೋಪಿ ಅನಸ್ ಅಹ್ಮದ್ ಎಂಬಾತನು ಈ ಹಗರಣದ ಪ್ರಮುಖ ರೂವಾರಿಯಾಗಿದ್ದು, ತೀವ್ರ ವಿಚಾರಣೆಗೊಳಪಡಿಸಲಾಗಿದೆ. ಜತೆಗೆ, ಈತನ ಪತ್ನಿಯೂ ಆಗಿರುವ ಚೀನಾ ಪ್ರಜೆ ಹು ಕ್ಸಿಯೋಲಿನ್ ಪ್ರಕರಣದಲ್ಲಿ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆ ಎಂದು ಸಿಐಡಿ ಅಧಿಕಾರಿವೊಬ್ಬರು ಮಾಹಿತಿ ನೀಡಿದ್ದಾರೆ.

'ಪವರ್ ಬ್ಯಾಂಕ್' ಬಂದ್:  ರಾಜ್ಯದಾದ್ಯಂತ ಸಾವಿರಾರು ಮಂದಿ ಪವರ್ ಬ್ಯಾಂಕ್ ಆ್ಯಪ್‍ನ ಆಯಾ ಯೋಜನೆಗಳಿಗೆ ತಕ್ಕಂತೆ 3 ಸಾವಿರದಿಂದ ಲಕ್ಷಾಂತರ ರೂಪಾಯಿವರೆಗೂ ಹೂಡಿಕೆ ಮಾಡಿದ್ದಾರೆ. ಆರ್‍ಬಿಐ ನಿಯಮದ ಕಾರಣ ನೀಡಿ ಏಕಾಏಕಿ ಆ್ಯಪ್ ಕಾರ್ಯಾಚರಣೆ ಬಂದ್ ಮಾಡಲಾಗಿದೆ.
ಸಿಐಡಿ ಸೈಬರ್ ಕ್ರೈಂ ವಿಭಾಗ ಮಾತ್ರವಲ್ಲದೇ ಬೆಂಗಳೂರು ಹಾಗೂ ರಾಜ್ಯದ ವಿವಿಧ ನಗರಗಳಲ್ಲೂ ವಂಚನೆ ಬಗ್ಗೆ ಎಫ್‍ಐಆರ್ ದಾಖಲಾಗಿವೆ.

ದೂರು ಏನು?
ಸಂಸ್ಥೆ ಹಾಗೂ ಗ್ರಾಹಕರ ನಡುವಿನ ಹಣ ವರ್ಗಾವಣೆ ಕಂಪನಿಯಾಗಿ ರೇಜೋರ್ ಪೇ ಕೆಲಸ ಮಾಡುತ್ತಿದೆ. ವಂಚನೆ ಪ್ರಕರಣದಡಿ 13 ಆರೋಪಿಗಳ ಕಂಪೆನಿಗಳು ನಮ್ಮ ಕಂಪೆನಿಯಡಿ ನೋಂದಣಿ ಮಾಡಿಕೊಂಡಿವೆ ಎಂದು ರೇಜೋರ್ ಪೇ ಕಂಪೆನಿಯ ಅಭಿಷೇಕ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪವರ್ ಬ್ಯಾಂಕ್ ಹಾಗೂ ಇತರೆ ಆನ್‍ಲೈನ್ ಆ್ಯಪ್‍ಗಳನ್ನು ಸೃಷ್ಟಿಸಿರುವ ಆರೋಪಿಗಳು, ಸಾವಿರಾರು ಗ್ರಾಹಕರಿಗೆ ವಂಚಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಪ್ರಮುಖವಾಗಿ ಅನಸ್ ಅಹ್ಮದ್‍ನನ್ನು ಮದುವೆಯಾಗಿರುವ ಕ್ಸಿಯೋಲಿನ್, ಆತನ ಮೂಲಕ ‘ಡಬ್ಲ್ಯುಪಿ ರಮ್ಮಿ’ ಕಂಪೆನಿ ತೆರೆದಿದ್ದಾಳೆ. ಅದಕ್ಕೆ ಪತಿ, ಆಕೆ ಹಾಗೂ ಇತರರು ನಿರ್ದೇಶಕರಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News