ಕೆಪಿಸಿಸಿ ಮಾಧ್ಯಮ ವಕ್ತಾರೆ ಭವ್ಯ ನರಸಿಂಹಮೂರ್ತಿಗೆ ಬೆದರಿಕೆ: ದುಷ್ಕರ್ಮಿಗಳ ಬಂಧನಕ್ಕೆ ಶಾಸಕಿ ಸೌಮ್ಯಾ ರೆಡ್ಡಿ ಆಗ್ರಹ

Update: 2021-06-12 16:01 GMT
ಭವ್ಯ ನರಸಿಂಹಮೂರ್ತಿ (Twitter/@Bhavyanmurthy)

ಬೆಂಗಳೂರು, ಜೂ. 12: ಕೆಪಿಸಿಸಿ ಮಾಧ್ಯಮ ವಕ್ತಾರೆ ಹಾಗೂ `ಪ್ರಿಯದರ್ಶಿನಿ' ರಾಜ್ಯ ಸಂಚಾಲಕಿ ಭವ್ಯ ನರಸಿಂಹಮೂರ್ತಿ ಅವರಿಗೆ ನಿರಂತರ ಬೆದರಿಕೆ ಕರೆಗಳು ಬರುತ್ತಿರುವ ಕುರಿತು ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಸರಕಾರಕ್ಕೆ ಮಹಿಳೆಯರ ಬಗ್ಗೆ ಪ್ರೀತಿ ಇದ್ದರೆ ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಶಾಸಕಿ ಸೌಮ್ಯಾ ರೆಡ್ಡಿ ಆಗ್ರಹಿಸಿದ್ದಾರೆ.

ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 'ರಾಜಕೀಯಕ್ಕೆ ಹೆಣ್ಣು ಮಕ್ಕಳು ಬರುವುದು ಬೇಡ ಎಂಬಂತಿದೆ. ದೇಶದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲದಂತಾಗಿದೆ. ಇತ್ತೀಚೆಗೆ ರಾಜ್ಯ, ರಾಷ್ಟ್ರ ದಲ್ಲೂ ಮಹಿಳೆಯರಿಗೆ ಸುರಕ್ಷತೆ ಇಲ್ಲ. ಅವರಿಗೆ ಬೆದರಿಕೆ ಹಾಕುವ ಮೂಲಕ ಅವರನ್ನು ಮಾನಸಿಕವಾಗಿ ಕುಗ್ಗಿಸಲಾಗುತ್ತಿದೆ' ಎಂದು ದೂರಿದರು.

"ಮಹಿಳೆಯರನ್ನ ಲಕ್ಷ್ಮಿ, ಸರಸ್ವತಿ ಎಂದು ಪೂಜೆ ಮಾಡುತ್ತೇವೆ. ಆದರೆ, ಅವರಿಗೆ ಪೂಜೆ ಮಾಡುವುದು ಬೇಡ. ಕನಿಷ್ಟ ಮರ್ಯಾದೆ ಕೊಟ್ಟರೆ ಸಾಕು. ಸಾಮಾಜಿಕ ಮಾಧ್ಯಮಗಳಲ್ಲಿ ಅವರಿಗೆ ಬೆದರಿಕೆಗಳು ನಿಂತಿಲ್ಲ. ಈ ವಿಚಾರವನ್ನು ಸರಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಬಿಜೆಪಿಯಲ್ಲೂ ಬಹಳಷ್ಟು ಮಂದಿ ಮಹಿಳೆಯರಿದ್ದಾರೆ. ಅವರಿಗೆ ಇದೇ ರೀತಿಯಲ್ಲಿ ಬೆದರಿಕೆ ಕರೆಗಳು ಬಂದರೆ ಸುಮ್ಮನೆ ಇರುತ್ತಾರೆಯೇ?" ಎಂದು ಸೌಮ್ಯಾ ರೆಡ್ಡಿ ಪ್ರಶ್ನಿಸಿದರು.

"ವಿಧಾನಸಭೆಯಲ್ಲಿಯೂ ನಾನು ಈ ಕುರಿತು ಪ್ರಶ್ನಿಸುತ್ತೇನೆ. ಕೂಡಲೇ ಬೆದರಿಕೆವೊಡ್ಡಿದ ದುಷ್ಕರ್ಮಿಗಳನ್ನು ಪತ್ತೆ ಮಾಡಬೇಕು. ಅಲ್ಲದೆ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಇಂತಹವರಿಗೆ ಶಿಕ್ಷೆ ಆಗದಿದ್ದರೆ ಪಾಠ ಕಲಿಯುವುದಿಲ್ಲ" ಎಂದ ಸೌಮ್ಯಾ ರೆಡ್ಡಿ, "ನನ್ನ ಮೇಲೆಯೆ ಹಲ್ಲೆ ನಡೆಸಿ ನನ್ನ ವಿರುದ್ಧ ಮೊಕದ್ದಮೆ ದಾಖಲಿಸಿದ್ದರು. ಆದರೆ, ಇದೀಗ ದೂರು ನೀಡಿದರೂ ಏಕೆ ಕ್ರಮ ಕೈಗೊಂಡಿಲ್ಲ. ಕೂಡಲೇ ತಪಿತಸ್ಥರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದರು.

"ನಿಮಗೆ ತಾಕತ್ತು ಇದ್ದರೆ ಎಂದು ನಾನು ಹೇಳುವುದಿಲ್ಲ. ನಿಮಗೆ ಹೆಣ್ಣು ಮಕ್ಕಳ ಮೇಲೆ ಪ್ರೀತಿ ಇದ್ದರೆ ನ್ಯಾಯ ಕೊಡಿಸಿ, ಇದರ ಹಿಂದೆ ಒಂದು ಪಕ್ಷದ ವ್ಯವಸ್ಥಿತ ಪಿತೂರಿಯಿದೆ. ಇದರ ವಿರುದ್ಧ ನಾವು ಹೋರಾಟ ಆರಂಭ ಮಾಡುತ್ತೇವೆ. ನಮ್ಮನ್ನು ಮಾನಸಿಕವಾಗಿ ಕುಗ್ಗಿಸಿದರೂ ನಾವು ಜಗ್ಗುವುದಿಲ್ಲ. ನಮ್ಮ ಹೋರಾಟ ನಿಲ್ಲದು. ವ್ಯವಸ್ಥಿತ ಪಿತೂರಿಯನ್ನ ಬಯಲಿಗೆಳೆಯುತ್ತೇವೆ'"
-ಪುಷ್ಪಾ ಅಮರನಾಥ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ

"ಜೂ.9ರಿಂದ ನನಗೆ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ. ಇಂದಿಗೂ 50 ನಂಬರ್‍ಗಳಿಂದ ಕರೆ ಬರುತ್ತಲೇ ಇವೆ. ಸಿಸಿಬಿಗೆ ದೂರು ನೀಡಿದ್ದೆ. ಆ ಬಳಿಕವೂ ಬೆದರಿಕೆ ಕರೆಗಳು ಬಂದಿವೆ. ಪೊಲೀಸರಿಗೆ ನೀವೇ ಮಾತನಾಡಿ ಎಂದು ನನ್ನ ಮೊಬೈಲ್ ಅನ್ನು ನೀಡಿದ್ದೇ. ಸಿಮ್‍ಗಳು ಬೇರೆ ರಾಜ್ಯಗಳಲ್ಲಿ ರಿಜಿಸ್ಟ್ರೇಶನ್ ಆಗಿವೆ. ಸಿಮ್ ಬೇರೆ-ಬೇರೆ ರಾಜ್ಯಗಳವು ಇರಬಹುದು. ಆದರೆ, ಅವರು ಮಾತನಾಡೋದು ಕನ್ನಡದಲ್ಲೇ. ಹೀಗಾಗಿ ಇಲ್ಲಿಯವರೇ ಈ ಕೃತ್ಯ ನಡೆಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು"
-ಭವ್ಯ ನರಸಿಂಹಮೂರ್ತಿ, ಕೆಪಿಸಿಸಿ ವಕ್ತಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News