ನಾನೇಕೆ ಜಾತಿಯ ಬಗ್ಗೆ ಮಾತನಾಡುತ್ತೇನೆ ?

Update: 2021-06-12 16:01 GMT

ಹೌದು, ನಾನು ಅಸ್ಪಶ್ಯ ಮತ್ತು ಅಮೆರಿಕದಲ್ಲಿ ಪ್ರತಿಯೊಬ್ಬ ನಿಗ್ರೋ ವ್ಯಕ್ತಿಯೂ ಅಸ್ಪಶ್ಯನೇ - ಮಾರ್ಟಿನ್ ಲೂಥರ್ ಕಿಂಗ್, ಜೂನಿಯರ್

ಭಾರತದಲ್ಲಿ ಜ್ಯೋತಿಬಾ ಫುಲೆ ಮತ್ತು ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಅಮೆರಿಕದಲ್ಲಿ ಮಾರ್ಟಿನ್ ಲೂಥರ್ ಕಿಂಗ್, ಜ್ಯೂನಿಯರ್ ಮತ್ತು ವೆಬ್ ಡು ಬೊಯಿಸ್ ಅವರು ಜಾತಿ ಮತ್ತು ಜನಾಂಗೀಯ ಹೋರಾಟಗಳ ನಡುವೆ ಸಮಾನಾಂತರ ನಿಲುವುಗಳನ್ನು ಹೊಂದಿದ್ದ ರಾಷ್ಟ್ರ ನಿರ್ಮಾತೃಗಳಾಗಿದ್ದರು. ಅಮೆರಿಕದ ವರ್ಣಭೇದ ನೀತಿ ಹಾಗೂ ಕರ್ನಾಟಕ ಮತ್ತು ಭಾರತದಾದ್ಯಂತ ಜಾತಿವಾದದ ವಿರುದ್ಧ ನಡೆಯುತ್ತಿರುವ ಆಂದೋಲನಗಳ ಬಗ್ಗೆ ನನ್ನ ಅನುಭವಗಳು ಇಲ್ಲಿವೆ.....

ನನ್ನ ಬದುಕಿನ ಮೊದಲ ಇಪ್ಪತ್ತು ವರ್ಷಗಳನ್ನು ಚಿಕಾಗೊದಲ್ಲಿ ಕಳೆದಿರುವ ನಾನು ಹಲವಾರು ರಂಗಗಳಲ್ಲಿ ವರ್ಣಭೇದ ನೀತಿಯ ಬಲಿಪಶುವಾಗಿದ್ದೆ ಮತ್ತು ನೇರ ಹಿಂಸಾತ್ಮಕ ಹಲ್ಲೆಗಳನ್ನು ಹಾಗೂ ಶಾಲಾಡಳಿತದ ತಾರತಮ್ಯವನ್ನು ಎದುರಿಸಿದ್ದೇನೆ. ನಾನಿನ್ನೂ 15 ವರ್ಷದ ಬಾಲಕನಾಗಿದ್ದಾಗಲೇ ನನ್ನ ವರ್ಣಭೇದ ವಿರೋಧಿ ಚಿಂತನೆಗಳಿಗಾಗಿ ನನ್ನನ್ನು ‘ಅಮೆರಿಕ ವಿರೋಧಿ’ ಮತ್ತು ‘ದೇಶವಿರೋಧಿ’ ಎಂದು ಕರೆಯಲಾಗುತ್ತಿತ್ತು.

ಓರ್ವ ಕಂದು ಬಣ್ಣದ ಅಮೆರಿಕದ ವ್ಯಕ್ತಿಯಾಗಿ ನನ್ನ ಅನುಭವಗಳು ನನ್ನ ಪೀಳಿಗೆಯ ಇತರ ಬಿಳಿಯೇತರ ವ್ಯಕ್ತಿಗಳ ಅನುಭವಗಳಿಗಿಂತ ಭಿನ್ನವಾಗಿರಲಿಲ್ಲ. ಮಾನವ ಘನತೆ ಮತ್ತು ಬೌದ್ಧಿಕ ಸಂವಾದಗಳ ವಾತಾವರಣವನ್ನು ಉತ್ತೇಜಿಸುವ ಯೇಲ್ ವಿಶ್ವವಿದ್ಯಾನಿಲಯದಲ್ಲಿನ ನನ್ನ ನಾಲ್ಕು ವರ್ಷಗಳು ವಿಭಿನ್ನವಾಗಿದ್ದವು ಮತ್ತು ಅಲ್ಲಿ ನಾನು ಯಾವುದೇ ತಾರತಮ್ಯವನ್ನು ಎದುರಿಸಿರಲಿಲ್ಲ.

ಕ್ಯಾಂಪಸ್ನಲ್ಲಿ ಬುದ್ಧಿವಂತ, ಆತ್ಮಸಾಕ್ಷಿಯುಳ್ಳ ಬಿಳಿಯ ವಿದ್ಯಾರ್ಥಿಗಳೊಂದಿಗೆ ನಾನು ನಡೆಸಿದ್ದ ಸಂವಾದಗಳು ಈಗಲೂ ನನ್ನ ಮನಸ್ಸಿನಲ್ಲಿ ಉಳಿದುಕೊಂಡಿವೆ. ಈ ಪೈಕಿ ಹೆಚ್ಚಿನವರು 9/11ರ ನಂತರವೂ ಮೆಕ್ಸಿಕೊ, ಮಧ್ಯ ಪ್ರಾಚ್ಯ ಮತ್ತು ದಕ್ಷಿಣ ಏಷ್ಯಾದ ಬಿಳಿಯೇತರ ವ್ಯಕ್ತಿಗಳ ಮೇಲೆ ದಾಳಿಗಳು ನಡೆಯುತ್ತಿದ್ದಾಗ, ಅವರನ್ನು ಕೊಲ್ಲುತ್ತಿದ್ದಾಗ ಮತ್ತು ಅತಿಯಾದ ಪೂರ್ವಗ್ರಹವನ್ನು ಹೊಂದಿದ್ದ ಸರಕಾರವು ದೇಶಭಕ್ತಿ ಕಾಯ್ದೆಯಡಿ ಅವರನ್ನು ಜೈಲಿಗಟ್ಟುತ್ತಿದ್ದಾಗಲೂ ಅಮೆರಿಕದಲ್ಲಿ ಸಾಂಸ್ಥಿಕ ಅಥವಾ ಇತರ ವರ್ಣಭೇದ ನೀತಿ ಇರುವುದನ್ನು ನಿರಾಕರಿಸುತ್ತಿದ್ದರು.

ದ.ಏಷ್ಯಾದ ಸಾಮಾಜಿಕ-ಆರ್ಥಿಕ ಮತ್ತು ಸಾಂಸ್ಕೃತಿಕ ಚೌಕಟ್ಟುಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದ ನನಗೆ ಅಮೆರಿಕದಲ್ಲಿ ನಾನು ಜನಾಂಗೀಯ ಭೇದಭಾವವನ್ನು ಎದುರಿಸಿದ್ದರೂ ಭಾರತದಲ್ಲಿ ಜಾತಿ ವ್ಯವಸ್ಥೆಯ ಫಲಾನುಭವಿಯಾಗಿದ್ದೇನೆ ಎಂಬ ಅರಿವು ಮೂಡತೊಡಗಿತ್ತು. ನನ್ನ ತಂದೆ-ತಾಯಿ ಇಬ್ಬರೂ ವೈದ್ಯರಾಗಿದ್ದು, ನಾನು ಹುಟ್ಟುವ ಒಂದು ದಶಕದ ಮೊದಲೇ ಭಾರತದಿಂದ ಅಮೆರಿಕಕ್ಕೆ ವಲಸೆ ಬಂದಿದ್ದರು. ಅವರ ಕುಟುಂಬಗಳಿಗೆ ತಲೆಮಾರುಗಳಿಂದಲೂ ಶಿಕ್ಷಣವನ್ನು ಪಡೆಯುವುದು ಕಷ್ಟವಾಗಿರಲಿಲ್ಲ ಮತ್ತು ಇದೇ ಕಾರಣದಿಂದ ಅವರು ವೃತ್ತಿಪರ ಶಿಕ್ಷಣವನ್ನು ಪಡೆದು ವೈದ್ಯರಾಗಿದ್ದರು.

ನಾನು ಗಮನಿಸಿದ್ದ ಎಲ್ಲ ಭಾರತೀಯ-ಅಮೆರಿಕನ್ನರು ಏಕೆ ಮೇಲ್ಜಾತಿಗಳಿಗೆ ಸೇರಿದವರೇ ಆಗಿದ್ದರು ಮತ್ತು ಪ್ರಬಲ ಜಾತಿ ಹಿನ್ನೆಲೆ ಹೊಂದಿದ್ದವರೇ ಆಗಿದ್ದರು? ದಲಿತ ಮತ್ತು ಆದಿವಾಸಿ ಹಿನ್ನೆಲೆಯ ವಿದ್ಯಾರ್ಥಿಗಳೇಕೆ ನನ್ನ ಜೊತೆ ಯೇಲ್ ವಿವಿಯಲ್ಲಿ ವ್ಯಾಸಂಗ ಮಾಡುತ್ತಿರಲಿಲ್ಲ? ಬಿಳಿಯರು ಅಮೆರಿಕದಲ್ಲಿ ವರ್ಣಭೇದ ನೀತಿ ಇರುವುದನ್ನು ನಿರಾಕರಿಸಿದ್ದಂತೆ ಮೇಲ್ವರ್ಗದ ಸಮಾಜವು ನಿರಾಕರಿಸಿದ್ದರೂ ಭಾರತದಲ್ಲಿ ಇನ್ನೂ ಜಾತಿ ತಾರತಮ್ಯ ಉಳಿದುಕೊಂಡಿದೆಯೇ ಎಂಬಿತ್ಯಾದಿ ಪ್ರಶ್ನೆಗಳು ನನ್ನನ್ನು ಕಾಡತೊಡಗಿದ್ದವು.

ಸಮಾನತೆ, ನ್ಯಾಯ ಮತ್ತು ವೈಚಾರಿಕತೆ ಇವು ಯಾವುದೇ ಸಮಾಜದ ಸೈದ್ಧಾಂತಿಕ ಬುನಾದಿಗಳಾಗಿರಬೇಕು ಎನ್ನುವುದನ್ನು ನಾನು  ಎಳೆಯನಾಗಿದ್ದಾಗಲೂ ಪ್ರತಿಪಾದಿಸಿದ್ದೆ. 2005ರಲ್ಲಿ ತಳಮಟ್ಟದ ಗುಂಪುಗಳೊಂದಿಗೆ ಸೇರಿಕೊಂಡು ಕೆಲಸ ಮಾಡಲು ನಾನು ಕರ್ನಾಟಕಕ್ಕೆ ಬಂದಿದ್ದೆ ಮತ್ತು ಇಲ್ಲಿ ರಾಜಾರೋಷವಾಗಿದ್ದ ಸಾಮಾಜಿಕ ಮತ್ತು ಜಾತಿ ಭಿನ್ನತೆಗಳನ್ನು ನೋಡಲಾರಂಭಿಸಿದ್ದೆ. ಸುಮಾರು ಒಂದು ದಶಕದಷ್ಟು ಕಾಲ ಸಮಾನ ಸಮಾಜಕ್ಕಾಗಿ ಜಾತಿವಿರೋಧಿ ಮತ್ತು ಬಹುಜನ ನಾಯಕರೊಂದಿಗೆ ಸೇರಿಕೊಂಡು ಹೋರಾಡುತ್ತ ಕರ್ನಾಟಕದ ದಲಿತ ವೇದಿಕೆಗಳಲ್ಲಿ ಸಕ್ರಿಯನಾಗಿದ್ದೆ.
ಸಾಮಾಜಿಕ-ಆರ್ಥಿಕ-ಶೈಕ್ಷಣಿಕ ಅಂಶವಾಗಿ ಜಾತಿಯ ಮಾನ್ಯತೆಯ ಕೊರತೆ ಅಥವಾ ನಿರಾಕರಣೆಯು ವ್ಯವಸ್ಥೆಯ ಮುಂದುವರಿಕೆಗೆ  ಸಮನಾಗುತ್ತದೆ. ವಿವಿಧ ಮಟ್ಟಗಳಲ್ಲಿ ಅಸಮಾನತೆಗೆ ಕಾರಣವಾಗಿರುವ 3,500 ವರ್ಷಗಳಷ್ಟು ಹಳೆಯದಾದ ಈ ಪಿಡುಗನ್ನು ನಾವು ನಿರ್ಮೂಲನಗೊಳಿಸಬೇಕಿದೆ.

ವೈದಿಕ ವರ್ಗಗಳು ಉನ್ನತ ಸ್ಥಾನದಲ್ಲಿ ಮತ್ತು ದಲಿತರು ಅತ್ಯಂತ ಕೆಳಮಟ್ಟದಲ್ಲಿರುವ ಶ್ರೇಣೀಕೃತ ಸಮಾಜದ ಆಧಾರದಲ್ಲಿ ಸೃಷ್ಟಿಸಲಾಗಿರುವ ಪಾಪಪುಣ್ಯಗಳ ಅಮಾನವೀಯ ಪರಿಕಲ್ಪನೆಗಳನ್ನು ನಾವು ಪ್ರಶ್ನಿಸಬೇಕಿದೆ ಮತ್ತು ಅವುಗಳನ್ನು ತೊಲಗಿಸಬೇಕಿದೆ. ಇಂದು ಶೇ.95ರಷ್ಟು ಮದುವೆಗಳು ಅಂತರ್ಜಾತಿ ಮತ್ತು ಅಂತರ್ಧರ್ಮೀಯವಾಗಿವೆ ಎನ್ನುವುದನ್ನು ಅಂಕಿಅಂಶಗಳು ತೋರಿಸುತ್ತಿವೆ. ಪ್ರೇಮ ವಿವಾಹಗಳು ಮತ್ತು ವ್ಯವಸ್ಥಿತ ವಿವಾಹಗಳು ಜಾತಿಗಳ ನಡುವೆ ಮತ್ತು ಧರ್ಮಗಳ ನಡುವೆ ನಡೆಯುವುದನ್ನು ನಾವು ಉತ್ತೇಜಿಸಬೇಕು. ಕುವೆಂಪು, ಪೆರಿಯಾರ್ ಮತ್ತು ರಾಮಮನೋಹರ ಲೋಹಿಯಾರಂತಹ ಪ್ರಗತಿಪರರು ಜಾತಿಯ ಹಂಗಿಲ್ಲದ ಸರಳ ಮದುವೆಗಳನ್ನು ಉತ್ತೇಜಿಸಿದ್ದರು.

ಸರೋಜಿನಿ ಮಹಿಷಿ ವರದಿಯಲ್ಲಿ ಶಿಫಾರಸು ಮಾಡಿರುವಂತೆ ಖಾಸಗಿ ಕ್ಷೇತ್ರದಲ್ಲಿ ಜಾತಿಯಾಧಾರಿತ ಮೀಸಲಾತಿಗಳಿಗಾಗಿ ನಾವು ಹೋರಾಡಬೇಕು. ಪ್ರಾದೇಶಿಕತೆ, ಜಾತಿ, ವರ್ಗ ಮತ್ತು ಲಿಂಗಗಳಿಗೆ ಅನುಗುಣವಾಗಿ ಪ್ರಾತಿನಿಧ್ಯವು ಖಾಸಗಿ ಕ್ಷೇತ್ರದಲ್ಲಿ, ವಿಶೇಷವಾಗಿ ಎ ಮತ್ತು ಬಿ ವಿಭಾಗಗಳಲ್ಲಿ ಸಿಬ್ಬಂದಿ ನೇಮಕಾತಿಗಳನ್ನು ನಿರ್ಧರಿಸಬೇಕು. ತಳಮಟ್ಟದ ಆಂದೋಲನಗಳೊಂದಿಗೂ ನಾವು ಕೈಜೋಡಿಸಬೇಕು. ಕರ್ನಾಟಕದಾದ್ಯಂತ ದೇವದಾಸಿಯರ ಹೋರಾಟ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಕೊರಗರ ಆಂದೋಲನಕ್ಕೆ ನಮ್ಮ ಬೆಂಬಲದ ಅಗತ್ಯವಿದೆ.

ದೀರ್ಘಾವಧಿಯಲ್ಲಿ ಎಲ್ಲ ಕನ್ನಡಿಗರಿಗೆ ಭೂಮಿ ಹಕ್ಕುಗಳು,ಕೃಷಿ ಸುಧಾರಣೆಗಳು ಮತ್ತು ಆರ್ಥಿಕ ಸಬಲೀಕರಣ ಇವುಗಳನ್ನು ಮುನ್ನೆಲೆಗೆ ತರಬೇಕು. ಸಾರ್ವಜನಿಕ ನಿಲುವುಗಳು ಬದಲಾಗಲು ಸಮಯ ಬೇಕಾಗಬಹುದಾದರೂ ಸಂವಿಧಾನಕ್ಕೆ ಅನುಗುಣವಾಗಿ ಬದಲಾವಣೆಗಳನ್ನು ತರಲು ನಾವು ಮುಂಚೂಣಿಯಲ್ಲಿರಬೇಕು.

ಜಾತಿವಿರೋಧಿ ಆಂದೋಲನಗಳಲ್ಲಿ ಹೋರಾಡುವವರು ಮಾತ್ರ ಅಂಬೇಡ್ಕರ್ ಮತ್ತು ಬಹುಜನ ನಾಯಕರು ನಮಗಾಗಿ ಪ್ರತಿಪಾದಿಸಿದ್ದ ‘ಭಾರತದ ಪರಿಕಲ್ಪನೆ’ಯನ್ನು ನಿಜವಾಗಿ ಎತ್ತಿ ಹಿಡಿಯುತ್ತಿದ್ದಾರೆ. ಕರ್ನಾಟಕದಲ್ಲಿ ನಮ್ಮ ಚಿಂತನೆಗಳು,ಹೆಜ್ಜೆಗಳು ಮತ್ತು ಕ್ರೋಢೀಕರಣದ ಜೊತೆಗೆ ಸಮತಾವಾದಿ ವಿಶ್ವಕ್ಕಾಗಿ ನಮ್ಮ ಜಾಗತಿಕ ಹೋರಾಟವನ್ನೂ ನಾವು ಮುಂದುವರಿಸಬೇಕಿದೆ.
*******************
ಕಳೆದ ವಾರ ಚೇತನ್ ಹಾಗು ಉಪೇಂದ್ರ ಅವರ ನಡುವೆ ಹೇಳಿಕೆಯೊಂದರ ಬಗ್ಗೆ ಪರೋಕ್ಷ ಚರ್ಚೆ ನಡೆದಿತ್ತು. ಜಾತಿ ಬಗ್ಗೆ ಮಾತಾಡಿದರೆ ಜಾತಿ ವ್ಯವಸ್ಥೆ ಬೆಳೆಯುತ್ತೆ ಎಂದು ಉಪೇಂದ್ರ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಚೇತನ್ ಭ್ರಷ್ಟಾಚಾರದ ಬಗ್ಗೆ ಮಾತಾಡದೆ ಇದ್ದರೆ ಅದು ನಿರ್ಮೂಲನೆ ಆಗುತ್ತದೆಯೇ ಎಂದು ಕೇಳಿದ್ದರು. ಆ ಬಳಿಕ ಚೇತನ್ ಬಿಡುಗಡೆ ಮಾಡಿದ ವಿಡಿಯೋ ಒಂದರಲ್ಲಿ ಬ್ರಾಹ್ಮಣರ ಅವಹೇಳನ ಮಾಡಿದ್ದಾರೆ ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ದೂರು ಸಲ್ಲಿಸಿದ್ದರು. ಸಚಿವ ಶಿವರಾಂ ಹೆಬ್ಬಾರ್ ಕೂಡ ಚೇತನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು. 

ಕೃಪೆ : Deccan Herald

Writer - ಚೇತನ್ ಅಹಿಂಸಾ

contributor

Editor - ಚೇತನ್ ಅಹಿಂಸಾ

contributor

Similar News